ನಕಲಿ ಗೋರಕ್ಷಕರಿದ್ದಾರೆ ಎಚ್ಚರ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-08-14 16:28 GMT

ಬೆಂಗಳೂರು, ಆ.14: ಗೋ ರಕ್ಷಕರೆಂದು ಹೇಳುವವರು ಯಾರು ಸಗಣಿ ಎತ್ತಿಲ್ಲ. ಸಗಣಿ ಎತ್ತುವವರೇ ನಿಜವಾದ ಗೋರಕ್ಷಕರು. ಗೋ ರಕ್ಷಣೆ ಹೆಸರಿನಲ್ಲಿ ನಾಟಕವಾಡುತ್ತಿರುವವರಿಂದ ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾನು ಸಗಣಿ ಬಾಚಿದ್ದೀನಿ. ಹಾಲು ಉತ್ಪಾದಕರಿಗೆ ಸರಕಾರದಿಂದ ಒಂದು ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದು ಗೋ ರಕ್ಷಣೆಯಲ್ಲವೇ. ಕೇವಲ ಬಾಯಿಯಲ್ಲಿ ಗೋ ರಕ್ಷಕ ಎಂದು ಹೇಳಿದರೆ ಗೋ ರಕ್ಷಣೆ ಆಗುವುದಿಲ್ಲ. ಇಂತಹವರು ಯಾರು ಸಗಣಿ ಎತ್ತುವುದಿಲ್ಲ. ಸಗಣಿ ಎತ್ತುವ ನಿಜವಾದ ಗೋರಕ್ಷಕರು ಇಂತಹ ನಕಲಿ ಗೋರಕ್ಷಕರಿಂದ ಎಚ್ಚರದಿಂದ ಇರಬೇಕು ಎಂದು ತಿಳಿಸಿದರು.

ಮೌಢ್ಯ ಮತ್ತು ಕಂದಾಚಾರಗಳ ಆಚರಣೆಯಿಂದ ನಮ್ಮನ್ನು ನಾವೇ ಶೋಷಣೆ ಮಾಡಿಕೊಳ್ಳುತ್ತಿದ್ದೇವೆ. ಶೋಷಣೆ ರಹಿತರಾಗಲು ಮೌಢ್ಯತೆಯಿಂದ ಹೊರ ಬಂದು ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು. ಗೊಲ್ಲರಲ್ಲಿರುವ ಕಾಡುಗೊಲ್ಲ ಊರುಗೊಲ್ಲ ಎಂಬ ಭೇದ ಭಾವಗಳನ್ನು ಬಿಟ್ಟು ಒಂದಾಗಬೇಕು ಎಂದು ತಿಳಿಸಿದರು.

34 ಹಿಂದುಳಿದ ಜಾತಿಗಳಿಗೆ ಜಾಗ
ಮೂವತ್ನಾಲ್ಕು ಹಿಂದುಳಿದ ಜಾತಿಗಳ ಶ್ರೇಯೋಭಿವೃದ್ಧಿಗೆ ರಾಜಧಾನಿಯಲ್ಲಿ ಒಂದೇ ಕಡೆ ಜಾಗ ನೀಡಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.


ಜಾತಿ ಸಮೀಕ್ಷೆ ವರದಿ ಕೈ ಸೇರಿದ ಬಳಿಕ ತೀರ್ಮಾನ

ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಶಿಫಾರಸು ಮಾಡುವಂತೆ ಕುರುಬ, ಮಡಿವಾಳ, ಬೆಸ್ತರು, ಸವಿತ ಸಮಾಜ, ಉಪ್ಪಾರ ಹಾಗೂ ನೀವು(ಯಾದವ) ಸೇರಿ ಮನವಿ ಸಲ್ಲಿಸಲಾಗಿದೆ. ಈ ಎಲ್ಲ ಜಾತಿಗಳನ್ನು ಎಸ್‌ಟಿಗೆ ಸೇರಿಸಲು ಸಾಧ್ಯವಾಗುವುದಿಲ್ಲ. ಜಾತಿ ಸಮೀಕ್ಷೆ ವರದಿ ಕೈ ಸೇರಿದ ನಂತರ ಈ ಜಾತಿಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಗಳನ್ನು ಅರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಯಾದವ ಸಂಘದ ಅಧ್ಯಕ್ಷ ಬಿ.ಎಸ್.ಲಕ್ಷ್ಮೀದೇವಿ ಯಾದವ್ ಮಾತನಾಡಿ, ರಾಜ್ಯದ 23 ವಿಧಾನ ಸಭಾ ಕ್ಷೇತ್ರಗಳಲ್ಲಿ ಯಾದವರೇ ನಿರ್ಣಾಯಕರು. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ ಆರು ಕ್ಷೇತ್ರಗಳಲ್ಲಿ ಆದರೂ ಯಾದವ ಜನಾಂಗದ ಅಭ್ಯರ್ಥಿಗಳಿಗೆ ಟಿಕೇಟ್ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ. ವಿ.ಪ್ರಸಾದ್, ಬಿಎಂಟಿಸಿ ಅಧ್ಯಕ್ಷ ನಾಗರಾಜ್‌ಯಾದವ್ ಸೇರಿದಂತೆ ಇತರರು ಇದ್ದರು.

ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರನ್ನು ಗೆಲ್ಲಿಸಲು ಕೃಷ್ಣ ಪರಮಾತ್ಮನಲ್ಲಿದ್ದ ಪಾಂಡವರ ಕುರಿತ ಪಕ್ಷಪಾತಿಯಂತೆ ನಾನು ಅಹಿಂದ ಪರ ಸ್ವಲ್ಪ ಪಕ್ಷಪಾತಿ.

-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News