‘ಏಸೂರು ಕೊಟ್ಟರೂ ಈಸೂರು ಬಿಡೆವು’

Update: 2017-08-14 17:49 GMT

ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರ್ನಾಟಕದ ಕೊಡುಗೆ ಅಪಾರವಾದುದು. ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಹಲವರು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟರು. ಮನೆಮಠ ಕಳೆದುಕೊಂಡರು. 71ನೆ ಸ್ವಾತಂತ್ರ್ಯೋತ್ಸವ ದ ಈ ಸಂದರ್ಭದಲ್ಲಿ ಇತಿಹಾಸದ ಪುಟ ತಿರುವಿ ಹಾಕಿದಾಗ ಹಲವು ರೋಚಕ ಘಟನೆಗಳು ಕಣ್ಮುಂದೆ ಸುಳಿಯುತ್ತವೆ.

ಇದರಲ್ಲಿ ‘ಪ್ರಪ್ರಥಮ ಸ್ವಾತಂತ್ರ್ಯ ಗ್ರಾಮ’ ಎಂದು ಘೋಷಣೆ ಮಾಡಿಕೊಳ್ಳುವ ಮೂಲಕ ಸ್ವಾತಂತ್ರ್ಯ ಹೋರಾಟ ದ ಇತಿಹಾಸದಲ್ಲಿ ಸದಾ ಹಚ್ಚ ಹಸಿರಾಗಿ ಉಳಿಯುವ ಗ್ರಾಮ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಈಸೂರು ಗ್ರಾಮದ್ದು. ಈ ಗ್ರಾಮಸ್ಥರು ಜೀವದ ಹಂಗು ತೊರೆದು ಬ್ರಿಟಿಷರ ವಿರುದ್ಧ ನಡೆಸಿದ ಕೆಚ್ಚೆದೆಯ ಹೋರಾಟವು ಇಂದಿಗೂ ಜನಮಾನಸದ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಎಂತಹವರಲ್ಲಿಯೂ ದೇಶಾಭಿಮಾನದ ಕಿಡಿ ಹೊತ್ತಿಸುತ್ತದೆ.

ಮಹಾತ್ಮಾಗಾಂಧಿಜೀ ಕರೆಗೆ ಓಗೊಟ್ಟ ಗ್ರಾಮಸ್ಥರು ಬ್ರಿಟಿಷರ ವಿರುದ್ಧ ದಂಗೆಯೆದ್ದರು. ಗ್ರಾಮಸ್ಥರ ಆಕ್ರೋಶದ ಕೆನ್ನಾಲಿಗೆಗೆ ಬ್ರಿಟಿಷರು ಅಕ್ಷರಶಃ ನಿದ್ದೆಗೆಡುವುದರ ಜೊತೆಗೆ ತತ್ತರಿಸಿ ಹೋಗುವಂತಾಯಿತು. ಈಸೂರು ಗ್ರಾಮಸ್ಥರ ಅಂದಿನ ಹೋರಾಟ ಇಡೀ ದೇಶದ ಗಮನ ಸೆಳೆಯಿತು. ವ್ಯಾಪಕ ಬೆಂಬಲ ವ್ಯಕ್ತವಾಯಿತು. ಇತರೆಡೆಯೂ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸ್ಫೂರ್ತಿಯಾಯಿತು.

ಈಸೂರು ದಂಗೆ!: 1942ರಲ್ಲಿ ಮಹಾತ್ಮಾಗಾಂಧೀಜಿಯ ವರು ‘ಚಲೇಜಾವ್ ಚಳವಳಿ’ಗೆ (ಬ್ರಿಟಿಷರೇ ಭಾರತ ಬಿಟ್ಟು ತೊಲಗಿ) ಕರೆ ನೀಡಿದ್ದರು. ಈ ಚಳವಳಿಯು ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಅದರಲ್ಲಿಯೂ ಪುಟ್ಟ ಗ್ರಾಮ ಈಸೂರಿ ನಲ್ಲಿ ಗಾಂಧೀಜಿ ಕರೆಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗ್ರಾಮದ ಜನತೆ ಗಂಡು, ಹೆಣ್ಣು ಎಂಬ ಬೇದವಿಲ್ಲದೇ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಧುಮುಕಿದರು.

ಬ್ರಿಟಿಷರಿಗೆ ಕಂದಾಯ ನೀಡದಿರಲು ಗ್ರಾಮಸ್ಥರು ಒಕ್ಕೊರಲ ನಿರ್ಧಾರ ಕೈಗೊಂಡರು. ಯಾವುದೇ ಕಾರಣಕ್ಕೂ ಬ್ರಿಟಿಷ್ ಅಧಿಕಾರಿ, ಪೊಲೀಸರು ಗ್ರಾಮಕ್ಕೆ ಕಾಲಿಡದಂತೆ ಠರಾವು ಹೊರಡಿಸಿದರು. ಈಸೂರನ್ನು ಸ್ವತಂತ್ರ ಗ್ರಾಮ ಎಂದು ಘೋಷಿಸಲಾಯಿತು. ಈ ಗ್ರಾಮಕ್ಕೆ ಪ್ರತ್ಯೇಕ ಸರಕಾರವನ್ನು ರಚಿಸಲಾಯಿತು. ಊರಿನ ಬಾಲಕ ಜಯಣ್ಣನ ನೇತೃತ್ವದಲ್ಲಿ ಸರಕಾರ ಕೂಡ ರಚನೆ ಮಾಡಿದರು.

ಘೋಷಣೆ: ‘ಏಸೂರ ಕೊಟ್ಟರೂ ಈಸೂರು ಬಿಡೆವು’ ಎಂಬ ಘೋಷಣೆ ಗ್ರಾಮದಲ್ಲಿ ಮುಗಿಲು ಮುಟ್ಟಿತ್ತು. ಯಾವುದೇ ನಾಯಕತ್ವವಿಲ್ಲದೇ, ಸಾಮೂಹಿಕ ನಾಯಕತ್ವದಲ್ಲಿ ಸ್ವಯಂ ಪ್ರೇರಿತರಾಗಿ ಬ್ರಿಟಿಷರ ವಿರುದ್ಧ ಗ್ರಾಮಸ್ಥರು ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿಸಿದರು. 1942ರ ಸೆಪ್ಟಂಬರ್ 26 ರಂದು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಮೇಲೆ ಪ್ರತ್ಯೇಕ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯ ಗ್ರಾಮ ಎಂದು ಘೋಷಣೆ ಮಾಡಿಕೊಂಡರು.

ಗ್ರಾಮದ 12 ವರ್ಷದ ಮಲ್ಲಪ್ಪ ಅವರನ್ನು ಸರ್ವಾಧಿಕಾರಿ ಯಾಗಿ ಹಾಗೂ 10 ವರ್ಷದ ಜಯಪ್ಪ ಅವರನ್ನು ಅಮಲ್ದಾ ರರನ್ನಾಗಿ ಬ್ರಿಟಿಷರು ಆಯ್ಕೆ ಮಾಡಿದರು. ಆದರೆ ಸ್ವತಂತ್ರ ಸರಕಾರ ರಚಿಸಿಕೊಂಡಿದ್ದ ಗ್ರಾಮಸ್ಥರು ಅಧಿಕಾರಿಗಳಿಗೆ ಖಾದಿ ಟೋಪಿ ಧರಿಸುವಂತೆ ಆಜ್ಞೆ ಮಾಡುತ್ತಾರೆ. ಇನ್‌ಸ್ಪೆೆಕ್ಟರ್ ಹಾಗೂ ಅಮಲ್ದಾರ್‌ರವರು ಗ್ರಾಮಸ್ಥರನ್ನು ಕೆಣಕುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಗ್ರಾಮಸ್ಥರ ಮೇಲೆ ಲಾಠಿ ಚಾರ್ಜ್ ನಡೆಸುತ್ತಾರೆ. ಗುಂಡು ಹಾರಿಸುತ್ತಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಇಸ್ಪೆಪೆಕ್ಟರ್ ಹಾಗೂ ಅಮಲ್ದಾರ ರನ್ನು ಕೊಲೆ ಮಾಡುತ್ತಾರೆ.

ದೌರ್ಜನ್ಯ: ಈಸೂರು ಗ್ರಾಮಸ್ಥರ ಮೇಲೆ ಬ್ರಿಟಿಷರು ದೌರ್ಜನ್ಯ ನಡೆಸುತ್ತಾರೆ. ಈಸೂರಿನ ಸಾಹುಕಾರ ಬಸವಣ್ಣಪ್ಪ ಕುಟುಂಬ ಸ್ವಾತಂತ್ರ್ಯ ಹೋರಾಟಕ್ಕೆ ಸಾಕಷ್ಟು ಸಹಕರಿಸುತ್ತಿತ್ತು. ಇದರಿಂದ ವ್ಯಗ್ರಗೊಂಡಿದ್ದ ಬ್ರಿಟಿಷರು ಅವರ ಮನೆಗೆ ಬೆಂಕಿ ಹಚ್ಚುತ್ತಾರೆ. ಈ ಬೆಂಕಿಯು ಸುಮಾರು ಒಂದು ವಾರಗಳ ಕಾಲ ಉರಿಯಿತು ಎಂದು ಗ್ರಾಮಸ್ಥರು ಹೇಳುತ್ತಾರೆ. ಹಾಗೆಯೇ ಗ್ರಾಮಸ್ಥರ ಹೋರಾಟದ ಕಿಚ್ಚು ನಂದಿಸಲು, ಊರಿನ ಅನೇಕ ಮನೆಗಳಿಗೆ ಬ್ರಿಟಿಷರು ಬೆಂಕಿ ಹಚ್ಚಿದರು. ಮಹಿಳೆಯರ ಮಾನಭಂಗ ನಡೆಸಿದರು. ನಗನಾಣ್ಯ, ಸರಕು-ಸರಂಜಾಮು ಗಳನ್ನು ಲೂಟಿ ಮಾಡುತ್ತಾರೆ.

ಜೀವಂತ ಸಾಕ್ಷಿ: ಈಸೂರು ಗ್ರಾಮದ ಹಿರಿಯಜ್ಜ, ಸುಮಾರು 115 ವರ್ಷ ವಯೋಮಾನದ ಹೋರಾಟಗಾರ ಹುಚ್ರಾಯಪ್ಪರವರು ಅಂದು ನಡೆದ ಹೋರಾಟವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾರೆ. ಸ್ವಾತಂತ್ರ್ಯ ಹೋರಾಟದ ದಿನಾಂಕ, ಇಸವಿ ಸಹಿತ ಪ್ರತೀ ಘಟನೆಗಳನ್ನೂ ಬಿಡಿಸಿಡುತ್ತಾ ಹೋಗುತ್ತಾರೆ.

ಒಟ್ಟಾರೆ ಈಸೂರು ಹೋರಾಟವು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟದಲ್ಲಿ ಸದಾ ಕಾಲ ಅಚ್ಚಳಿಯದೆ ಉಳಿಯುವಂತಹದ್ದು. ಅಂದಿನ ಈಸೂರು ಹೋರಾಟಗಾರರ ಶೌರ್ಯ, ಸಾಹಸಕ್ಕೆ ಹ್ಯಾಟ್ಸಾಪ್ ಹೇಳಲೇಬೇಕು.

11 ಮಂದಿಗೆ ಮರಣ ದಂಡನೆ


ಈ  ಘಟನೆಯಿಂದ ಕೆರಳಿದ ಬ್ರಿಟಿಷ್ ಸರಕಾರ 500 ಸೈನಿಕರನ್ನು ಕರೆಯಿಸಿ ಈಸೂರು ಹೋರಾಟ ಗಾರರನ್ನು ಬಂಧಿಸಲು ಮುಂದಾಗುತ್ತದೆ. ಹೋರಾಟದಲ್ಲಿ ಭಾಗಿಯಾಗಿದ್ದ ಹಲವು ಹೋರಾಟಗಾರರ ಮೇಲೆ ಮೊಕದ್ದಮೆ ದಾಖಲಿಸಿ ಬಂಧನಕ್ಕೊಳಪಡಿಸಿತ್ತದೆ. ಘಟನೆಗೆ ಸಂಬಂಧಿ ಸಿದಂತೆ ಒಟ್ಟು 22 ಮಂದಿಗೆ ಜೀವಾವಧಿ ಶಿಕ್ಷೆ, 11 ಮಂದಿಗೆ ಗಲ್ಲು ಶಿಕ್ಷೆ ಎಂದು ಕೋರ್ಟ್ ಆದೇಶಿಸುತ್ತದೆ. ಈ ಆದೇಶದ ವಿರುದ್ಧ ಬೆಂಗಳೂರಿನ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುತ್ತದೆ. ಅಲ್ಲಿ ಆರು ಮಂದಿಗೆ ಗಲ್ಲು, ಉಳಿದವರಿಗೆ ಜೀವಾವಧಿ ಶಿಕ್ಷೆ ಘೋಷಿಸಲಾಗುತ್ತದೆ. 1943ರ ಮಾ. 8 ರಂದು ಗ್ರಾಮದ ಗುರಪ್ಪ, ಜೀನಳ್ಳಿ ಮಲ್ಲಪ್ಪ, ಮಾರ್ಚ್ 9 ರಂದು ಸೂರ್ಯ ನಾರಾಯಣ ಚಾರ್, ಬಡಕಳ್ಳಿ ಹಾಲಪ್ಪ ಹಾಗೂ ಮಾ. 10 ರಂದು ಗೌಡ್ರು ಶಂಕರಪ್ಪ ಅವರನ್ನು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗುತ್ತದೆ.

Writer - ಬಿ.ರೇಣುಕೇಶ್

contributor

Editor - ಬಿ.ರೇಣುಕೇಶ್

contributor

Similar News