​ಕೊಡಗಿನಲ್ಲಿ ಮಹಾತ್ಮಾ ಗಾಂಧಿ ಪ್ರಭಾವ

Update: 2017-08-14 18:07 GMT

ಮಹಾತ್ಮಾ ಗಾಂಧಿ ಕೊಡಗಿಗೆ ಬಂದಾಗ ಕೊಡಗಿನ ಗೌರಮ್ಮ ನಡೆಸಿದ ಉಪವಾಸ ಅತ್ಯಂತ ಪ್ರಮುಖ ಘಟನೆ. ಆಗ ಗೌರಮ್ಮ ಇನ್ನು 21ರ ಯುವತಿ. ಸುಂಟಿಕೊಪ್ಪ ಬಳಿಯ ಗುಂಡು ಗುಟ್ಟಿಯ ಎಸ್ಟೇಟ್‌ನಲ್ಲಿ ಅವರ ಪತಿ ಬಿ.ಟಿ.ಗೋಪಾಲಕೃಷ್ಣ ರೈಟರಾ ಗಿದ್ದರು. ಆ ಎಸ್ಟೇಟ್ ಮಾಲಕ ಮಂಜುನಾಥಯ್ಯ ಅವರ ಮನೆಗೆ ಗಾಂಧೀಜಿ ಬಂದು ಉಳಿದಿದ್ದರು.

ಭೂಕಂಪ ನಿಧಿ ಸಂಗ್ರಹಕ್ಕೆ ಬಂದಿದ್ದ ಬಾಪೂಜಿ ಶ್ರೀಮಂತರ ಮನೆಯಲ್ಲಿ ಉಳಿದುಕೊಂಡಿದ್ದು, ಗೌರಮ್ಮನಲ್ಲಿ ತಳಮಳ ಉಂಟು ಮಾಡಿತ್ತು. ಗಾಂಧೀಜಿ ತಮ್ಮ ಮನೆಗೂ ಬರಬೇಕು ಎಂದು ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಈ ವಿಷಯ ತಿಳಿದ ಗಾಂಧೀಜಿ ತುಂಬ ನೊಂದುಕೊಂಡು ಗೌರಮ್ಮನ ಮನೆಗೂ ಬಂದರು. ತಮ್ಮ ಕೈಯಾರೆ ಕಿತ್ತಳೆ ಹಣ್ಣು ತಿನ್ನಿಸಿ ಗೌರಮ್ಮನ ಉಪವಾಸ ಅಂತ್ಯಗೊಳಿಸಿದರು.

ಗಾಂಧೀಜಿ ಪ್ರಭಾವಕ್ಕೆ ಒಳಗಾಗಿದ್ದ ಗೌರಮ್ಮ ಖಾದಿಧಾರಿಯಾ ಗಿದ್ದರು. ಗಾಂಧೀಜಿ ತಮ್ಮ ಮನೆಗೆ ಬಂದಾಗ ಮಾಂಗಲ್ಯ ಬಿಟ್ಟು ಉಳಿದ ಎಲ್ಲಾ ಆಭರಣಗಳನ್ನು ಗಾಂಧೀಜಿಗೆ ಸಮರ್ಪಿಸಿದರು. ಜೊತೆಗೆ ಜೀವನದಲ್ಲಿ ಇನ್ನೆಂದೂ ಆಭರಣಗಳನ್ನು ಮಾಡಿಸಿಕೊಳ್ಳು ವುದಿಲ್ಲ ಎಂದು ಪ್ರಮಾಣ ಮಾಡಿದರು, ನಂತರ ಅದೇ ರೀತಿ ನಡೆದುಕೊಂಡರು. ಆಭರಣವನ್ನು ತಮಗೆ ಕೊಡಲು ಬಂದ ಗೌರಮ್ಮನನ್ನು, ‘‘ಹೀಗೆ ಆಭರಣ ಕೊಡಬೇಕು ಎನ್ನುವುದು ಸ್ವಬುದ್ಧಿಯೋ ಹೇಗೆ’’ ಎಂದು ಗಾಂಧೀಜಿ ಪ್ರಶ್ನಿಸಿದರು.

‘ಆಕೆಯ ಸ್ವಬುದ್ಧಿಯಿಂದಲೇ ಒಡವೆ ಕೊಡಲು ಮುಂದೆ ಬಂದಿದ್ದಾಳೆ ನಾನು ಹ್ಞೂಂ’ ಅಂದೆ ಎಂದು ಆಕೆಯ ಪತಿ ಹೇಳಿದರು. ಸರಳವಾದ ಮಿತ ಜೀವನ ಎಂದಿಗೂ ಒಳ್ಳೆಯದು ಎಂದು ಗಾಂಧೀಜಿ ಗೌರಮ್ಮನ ಮನೆಯಿಂದ ಹೊರಗೆ ಹೋಗುವಾಗ ಕಣ್ಣು, ಹೃದಯ ತುಂಬಿಕೊಂಡಿದ್ದರು. ಗೌರಮ್ಮನಿಗೆ ದುಃಖ ತಡೆಯಲಾಗಲಿಲ್ಲ.

ಈ ಸನ್ನಿವೇಶವನ್ನು ಗಾಂಧೀಜಿ 1934ರ ಮಾರ್ಚ್ 2ರ ಹರಿಜನ ಸಂಚಿಕೆಯಲ್ಲಿ ವರ್ಣಿಸಿದ್ದಾರೆ. ಕನ್ನಡದ ಪ್ರತಿಭಾವಂತ ಕಥೆಗಾರ್ತಿ ಯೂ ಆಗಿದ್ದ ಕೊಡಗಿನ ಗೌರಮ್ಮ ಗಾಂಧೀಜಿ ಗುಂಡು ಗುಟ್ಟಿಗೆ ಬಂದಾಗ ಬಳಸಿದ್ದ ಮೈಸೂರು ಸ್ಯಾಂಡಲ್ ಸೋಪನ್ನು ತಮ್ಮ ಜೀವಿತದ ಕೊನೆ ಘಳಿಗೆವರೆಗೂ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಅದು ಈಗಲೂ ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಸಂಗ್ರಾಹಾಲಯದಲ್ಲಿದೆ. ಗಾಂಧೀಜಿ ಗುಂಡುಗುಟ್ಟಿಗೆ ಬಂದಿದ್ದಾಗ ಕನ್ನಡದಲ್ಲಿ ವೆ.ಕ. ಗಾಂಧಿ ಎಂದೇ ಸಹಿ ಮಾಡುತ್ತಿದ್ದರು. ನೂರಾರು ಜನರು ಅವರಿಂದ ಸಹಿ ಪಡೆದು ಕೊಂಡರು. ಇದನ್ನು ಕಂಡು ಮಂಜುನಾಥಯ್ಯ ಅವರು ತಮ್ಮ ಹಿರಿಯ ಮಗ ಮೋಹನನ ಹೆಸರನ್ನು ಮೋಕ ಎಂದೇ ಬದಲಾಯಿಸಿ ಬಿಟ್ಟರು.

ರಾಜ್ಯದ ಬಹುತೇಕ ಎಲ್ಲ ನಗರ ಪಟ್ಟಣಗಳಲ್ಲಿ ಗಾಂಧಿ ಮೈದಾನ, ಗಾಂಧಿ ರಸ್ತೆ, ಗಾಂಧಿ ಪ್ರತಿಮೆ ಇರುವುದು ಮಾಮೂಲು. ಆದರೆ ಪೊನ್ನಂಪೇಟೆಯಲ್ಲಿ ‘ಗಾಂಧಿ ಗದ್ದೆ’ ಇದೆ. 1934ರ ಜನವರಿ 14 ರಂದು ಗಾಂಧೀಜಿ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ತಂಗಿದ್ದರು, ಅಲ್ಲಿಂದ ಅವರು ಹುದಿಕೇರಿಗೂ ಹೋಗಿದ್ದರು. ಪೊನ್ನಂಪೇಟೆಯಲ್ಲಿ ಗದ್ದೆ ದಂಡೆಯ ಮೇಲೆ ನಿಂತು ಭಾಷಣ ಮಾಡಿದ್ದರು. ಆ ಕಾರಣಕ್ಕಾಗಿ ಈ ಗದ್ದೆಯನ್ನು ‘ಗಾಂಧಿ ಗದ್ದೆ’ ಎಂದು ಕರೆಯುತ್ತಾರೆ. ಪೊನ್ನಂಪೇಟೆಯ ಕೊಡವ ಸಮಾಜದ ಅಧ್ಯಕ್ಷ ಚಪ್ಪುಡೀರ ಎಂ. ಪೊನ್ನಪ್ಪ ಅವರ ಸ್ವಾಧೀನದಲ್ಲಿರುವ ಈ ಗದ್ದೆಯಲ್ಲಿ ಬಹುತೇಕ ವರ್ಷಗಳ ಕಾಲ ಆಗಸ್ಟ್ 15 ರಂದೇ ಗದ್ದೆ ನಾಟಿ ಮಾಡಲಾಗುತ್ತಿತ್ತು. ಅಂದು ನಾಟಿ ಮಾಡಿದ ಎಲ್ಲಾ ಕೆಲಸಗಾರರಿಗೂ ಸಿಹಿ ಹಂಚಲಾಗುತ್ತಿತ್ತು.

ಪೊನ್ನಂಪೇಟೆ ರಾಮಕೃಷ್ಣ ಆಶ್ರಮದಲ್ಲಿ ಉಳಿದಿದ್ದ ಗಾಂಧೀಜಿ ಮತ್ತು ಅವರ ಪರಿವಾರವನ್ನು ನೋಡಿಕೊಂಡಿದ್ದ ಶಾಂಭವಿ ಅಪ್ಪಣ್ಣಮ್ಮಯ್ಯ ಅವರನ್ನು ತಮ್ಮ ಕಾರಿನಲ್ಲಿಯೇ ಕುಳ್ಳಿರಿಸಿಕೊಂಡು ಗಾಂಧೀಜಿ ಹುದಿಕೇರಿ ಸಭೆಗೆ ಕರೆದುಕೊಂಡು ಹೋಗಿದ್ದರು. ಗಾಂಧಿ ಪ್ರಭಾವಕ್ಕೆ ಒಳಗಾಗಿದ್ದ ಮಲ್ಲೆಂಗಡ ಪಿ ಚೆಂಗಪ್ಪ ಅವರ ಕತೆ ಇನ್ನು ಕುತೂಹಲಕಾರಿ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ವೀರಾಜಪೇಟೆ ಸುಬೇದಾರ್ ಕೊೀರ್ಟಿನಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಯಿತು.

ನ್ಯಾಯಾಧೀಶರು ಶಿಕ್ಷೆ ವಿಧಿಸಿದ ತಕ್ಷಣ ಕಟಕಟೆಯಿಂದ ಚಂಗನೆ ಹಾರಿದ ಚೆಂಗಪ್ಪ ನ್ಯಾಯಾಧೀಶರನ್ನು ನ್ಯಾಯಾಧೀಶರ ಪೀಠದಿಂದ ಇಳಿಸಿ ತಾವು ಪೀಠದ ಮೇಲೆ ಕುಳಿತು ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಡುತ್ತಿರುವ ದೇಶ ಪ್ರೇಮಿಗಳಿಗೆ ಅಪ ಮಾನ ಮಾಡಿದ್ದಕ್ಕಾಗಿ ನ್ಯಾಯಾ ಧೀಶರಿಗೆ 7 ವರ್ಷದ ಕಠಿಣ ಸಜೆ ಮತ್ತು 600 ರೂ. ದಂಡ ವಿಧಿಸಲಾಗಿದೆ ಎಂದು ತೀರ್ಪು ನೀಡಿದ್ದರು. ಈ ಅಪರಾಧಕ್ಕಾಗಿ ಚೆಂಗಪ್ಪ ಅವರಿಗೆ ಮತ್ತಷ್ಟು ಶಿಕ್ಷೆಯಾಯಿತು. ಆದರೆ ಸ್ವಾತಂತ್ರ್ಯ ಹೋರಾಟದ ಅವರ ಕಿಚ್ಚು ಆರಲಿಲ್ಲ. ಇದಕ್ಕೆ ಕಾರಣ ಗಾಂಧೀಜಿ ಪ್ರಭಾವ.

Writer - -ಲಕ್ಷ್ಮೀಶ್

contributor

Editor - -ಲಕ್ಷ್ಮೀಶ್

contributor

Similar News