ಆಳುವವರು ಅಶ್ಫಖುಲ್ಲಾರನ್ನು ಮರೆತಿದ್ದಾರೆ

Update: 2017-08-14 18:12 GMT

ಆಗಸ್ಟ್ ತಿಂಗಳು ಬರುತ್ತಿದ್ದಂತೆಯೇ ಸ್ವಾತಂತ್ರ ಯೋಧರನ್ನು ಸ್ಮರಿಸಲು ದೇಶಭಕ್ತಿಯ ಸುಧೆಯಲ್ಲಿ ಮಿಂದೇಳಲು ಹಾಗೂ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಲು ಸುಸಂದರ್ಭವಾಗಿದೆ. ಆದರೆ ಉತ್ತರಪ್ರದೇಶದ ಶಹ ಜಾನ್‌ಪುರ ಜಿಲ್ಲೆಯ ಸಣ್ಣ ಗ್ರಾಮವಾದ ಅಶ್ಫಾಖ್ ನಗರದ ನಿವಾಸಿಗಳು ಮಾತ್ರ ಸ್ವಾತಂತ್ರ ಹೋರಾಟದ ಸ್ಮರಣೆಗೆ ಆಗಸ್ಟ್ ತಿಂಗಳೇ ಯಾಕೆ ಬೇಕು ಎಂದು ಪ್ರಶ್ನಿಸುತ್ತಾರೆ.
ಇವರೆಲ್ಲಾ ಖ್ಯಾತ ಸ್ವಾತಂತ್ರ ಹೋರಾಟಗಾರ ಅಶ್ಫಕ್‌ಖುಲ್ಲಾಖಾನ್ ಹುಟ್ಟೂರಿನ ನಿವಾಸಿಗಳಾಗಿ ದ್ದಾರೆ. ದೇಶದ ಉಳಿದೆಡೆಯಂತೆ ಈ ಗ್ರಾಮ ಕೂಡಾ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲು ಸಜ್ಜಾಗಿದೆ. ಕೇವಲ ಆಗಸ್ಟ್ 15ರಂದು ಮಾತ್ರವಲ್ಲ ವರ್ಷವಿಡೀ ನಮ್ಮ ಸ್ವಾತಂತ್ರ ಹೋರಾಟಗಾರರು ಸ್ಮರಿಸಬೇಕಾಗಿದೆ ಎಂದು ಅಶ್ಫಖುಲ್ಲಾ ಅವರ ಕುಟುಂಬಿಕರು ಹೇಳುತ್ತಾರೆ.

‘‘ಅಧಿಕಾರದಲ್ಲಿರುವವರು ವಿಶೇಷ ಸಂದರ್ಭಗಳಲ್ಲಿ ಮಾತ್ರವೇ ಎಚ್ಚರಗೊಳ್ಳು ವುದನ್ನು ನೋಡಿ ವಿಚಿತ್ರವೆನಿಸುತ್ತದೆ. ದೇಶಕ್ಕಕಾಗಿ ತಮ್ಮ ಪ್ರಾಣಗಳನ್ನು ತೆತ್ತವರಿಗೆ ಅವರು ಎಷ್ಟರ ಮಟ್ಟಿಗೆ ಗೌರವ ನೀಡುತ್ತಿದ್ದಾರೆಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ’’ ಎಂದು ಅಶ್ಫಾಖುಲ್ಲಾ ಖಾನ್ ಅವರ ಮೊಮ್ಮಗ ಶಹಬಾದುಲ್ಲಾ ಹೇಳುತ್ತಾರೆ.


ಉರ್ದು ಕವಿಯೂ ಆಗಿರುವ ಸ್ವಾತಂತ್ರ ಹೋರಾಟಗಾರ ಅಶ್ಫಖುಲ್ಲಾ ಖಾನ್ ಅವರನ್ನು ಕಾಕೋರಿ ಪ್ರಕರಣದಲ್ಲಿ ಶಾಮೀಲಾದ ಆರೋಪದಲ್ಲಿ 1927ರ ಡಿಸೆಂಬರ್‌ನಲ್ಲಿ ರಾಮ್ ಬಿಸ್ಮಿಲ್ಲಾ ಹಾಗೂ ಇತರರೊಂದಿಗೆ ಗಲ್ಲಿಗೇರಿಸ ಲಾಯಿತು. ಆಗ ತಾನೇ ಪದವಿ ಶಿಕ್ಷಣವನ್ನು ಪೂರ್ತಿಗೊಳಿಸಿದ್ದ ಶಹಬದುಲ್ಲಾ ಅವರಿಗೆ ಅಶ್ಫಕ್‌ಖುಲ್ಲಾ ದೇಶಕ್ಕಾಗಿ ಮಾಡಿದ ತ್ಯಾಗ ವ್ಯರ್ಥವಾಗಿದೆಯೆಂದು ಭಾವಿಸುತ್ತಾರೆ. ಆಗಸ್ಟ್ 15 ಹಾಗೂ ಅಶ್ಫಖುಲ್ಲಾರ ಬಲಿದಾನ ದಿನವನ್ನು ಹೊರತುಪಡಿಸಿ, ಅವರನ್ನು ಸ್ಮರಿಸಲು ಇತರರಿಗೆ ಸಮಯವಿರುವುದಿಲ್ಲವೆಂದು ಬೇಸರ ವ್ಯಕ್ತಪಡಿಸುತ್ತಾರೆ. ಸರಕಾರ ಕೂಡಾ ಅಶ್ಫಖುಲ್ಲಾರನ್ನು ಸ್ಮರಿಸುವ ವಿಷಯದಲ್ಲಿ ನಿರ್ಲಕ್ಷದ ಧೋರಣೆಯನ್ನು ಅನುಸರಿಸುತ್ತಿದೆಯೆಂದು ಶಹಬದುಲ್ಲಾ ನೋವಿನಿಂದ ಹೇಳುತ್ತಾರೆ.
ಅವರ ಸಹೋದರ ಅಶ್ಫಖುಲ್ಲಾ (ಹುತಾತ್ಮ ಸ್ವಾತಂತ್ರ ಹೋರಾಟಗಾರನ ನೆನಪಿಗಾಗಿ ಅದೇ ಹೆಸರಿನ್ನಿಡಲಾ ಗಿದೆ) ಕೂಡಾ 90 ವರ್ಷಗಳ ಆನಂತರವೂ ತನ್ನ ಕುಟಂಬಕ್ಕೆ ಭರವಸೆಯ ಹೊರತಾಗಿ ಬೇರೇನೂ ದೊರೆತಿಲ್ಲವೆಂದು ಹೇಳುತ್ತಾರೆ. ‘‘ತೀರಾ ಇತ್ತೀಚೆಗೆ ಹಿರಿಯ ಬಿಜೆಪಿ ನಾಯಕ ರಾಜ್‌ನಾಥ್‌ಸಿಂಗ್ ಅವರು ಅಶ್ಫಖು ಲ್ಲಾ ಅವರ ಸಮಾಧಿಗೆ ಭೇಟಿ ನೀಡಿ, ಸರಕಾರದ ನೆರವ ನ್ನು ದೊರಕಿಸಿಕೊಡುವ ಭರವಸೆ ನೀಡಿದ್ದರು. ಆದರೆ ಇದಾಗಿ ಆರು ತಿಂಗಳು ಕಳೆದರೂ, ಏನೂ ಆಗಿಲ್ಲ’’ ಎಂದವರು ಬೇಸರ ವ್ಯಕ್ತಪಡಿಸುತ್ತಾರೆ.
‘‘ಅಶ್ಫಖುಲ್ಲಾರನ್ನು ಗಲ್ಲಿಗೇರಿಸಿದ ಬಳಿಕ ಬ್ರಿಟಿಶ್ ಸರಕಾರವು ಕುಟುಂಬದ ಎಲ್ಲಾ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಂಡಿತು ಹಾಗೂ ನಮ್ಮ ಕುಟುಂಬವನ್ನು ಸಾಯಬಿಟ್ಟಿತು. ಆದರೆ ನಮ್ಮ ಅಜ್ಜಿ ಶ್ರೀಮಂತ ಹಿನ್ನೆಲೆಯಿಂದ ಬಂದವರಾಗಿ ದ್ದರಿಂದ ನಾವು ಬದುಕುಳಿದೆವು ಎಂದು ಶಹಬದುಲ್ಲಾ ಹೇಳುತ್ತಾರೆ.


ಅಶ್ಫಖುಲ್ಲಾ ನೆನಪಿಗಾಗಿ ಹುತಾತ್ಮ ಸಮಾಧಿ ಯನ್ನು ತಾನು ನಿರ್ಮಿಸುವುದಾಗಿ ಸರಕಾರವು ಪ್ರಾರಂಭದಲ್ಲಿ ಹೇಳಿಕೊಂಡಿತ್ತು. ಆದರೆ ಅದು ಕೂಡಾ ಪೊಳ್ಳು ಭರವಸೆಯಾಗಿ ಬಿಟ್ಟಿತು. ‘‘ಅಶ್ಫಖುಲ್ಲಾ ಸಮಾಧಿಯನ್ನು ಕೊನೆಗೆ ಅವರ ಕುಟುಂಬವು ನಿರ್ಮಿಸಿತು. ಆಗ ಸರಕಾರದಿಂದ ಯಾವುದೇ ಬೆಂಬಲ ದೊರೆಯಲಿಲ್ಲ’’ ಎಂದವರು ತಿಳಿಸಿದರು.
ಶಹಬದುಲ್ಲಾ ತಂದೆ 1981ರಲ್ಲಿ ಮೃತಪಟ್ಟ ಬಳಿಕ, ಅವರಿಗೆ ದೊರೆಯುತ್ತಿದ್ದ ಸ್ವಾತಂತ್ರ ಹೋರಾಟಗಾರರ ಪಿಂಚಣಿ ಕೂಡಾ ನಿಂತಿತು. ಆ ಕಾಲದಲ್ಲಿ ನನ್ನ ತಂದೆ 100 ರೂ. ಪಿಂಚಣಿ ಪಡೆಯುತ್ತಿದ್ದರು. ಸರಕಾರವು ನನ್ನ ತಾಯಿಯ ಹೆಸರಿಗೆ ಪಿಂಚಣಿಯನ್ನು ವರ್ಗಾಯಿಸಲಿಲ್ಲ. ಇಲ್ಲಿ ಹಣ ಮುಖ್ಯವಲ್ಲ. ಆದರೆ ಸ್ವಾತಂತ್ರ ಹೋರಾ ಟಗಾರನ ಪಿಂಚಣಿಯನ್ನು ಪಡೆಯು ವುದು ಹೆಮ್ಮೆಯ ವಿಷಯವಾಗಿದೆ. ನಾವು 36 ವರ್ಷಗಳಿಂದಲೂ ಪಿಂಚಣಿಗಾಗಿ ಕಾಯುತ್ತಿದ್ದೇವೆ. ಆದರೆ ಪಿಂಚಣಿ ವರ್ಗಾವಣೆಯು ಇನೂ್ನ ಆಗಿಲ್ಲ’’ ಎಂದವರು ಹೇಳುತ್ತಾರೆ.
ಶಹಜಾನ್‌ಪುರದಲ್ಲಿ ನಿರ್ಲಕ್ಷಿಸಲ್ಪಟ್ಟ ಸ್ಥಿತಿಯಲ್ಲಿರುವ ಅಶ್ಫಖುಲ್ಲಾ ಅವರ ಸಮಾಧಿಯನ್ನು 70ನೆ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ, ಸುಂದರೀಕರಿ ಸಬೇಕಾಗಿದೆ ಎಂದು ಶಹಬದುಲ್ಲಾ ಆಗ್ರಹಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News