ಆ ಕಾಲ ಚಂದವೋ, ಈ ಕಾಲ ಚಂದವೋ..?

Update: 2017-08-14 18:14 GMT

ನಮ್ಮ ಕಾಲದಲ್ಲಿ ಹೀಗೆ ಆ ಕೋಮು, ಈ ಕೋಮು ಎಂಬ ಭಾವನೆಯೇ ಇರಲಿಲ್ಲ. ಎಲ್ಲಾ ಕಡೆಯೂ ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದೆವು. ಬ್ರಿಟಿಷರು ಉತ್ತಮ ಆಡಳಿತವನ್ನೇ ನೀಡುತ್ತಿದ್ದರು. ಆದರೆ ತಮ್ಮ ನೆಲೆ ಭದ್ರಗೊಳಿಸುವ ಸಲುವಾಗಿ ಅವರು ಹಿಂದೂ-ಮುಸ್ಲಿಂ ಅಂತ ವಿಭಜಿಸಲು ಹವಣಿಸಿದರು. ಅದರ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ.

ಹೀಗೆ ತನ್ನ ನೆನಪಿನ ಅಗಾಧ ಶಕ್ತಿಯನ್ನು ಹೊರ ಚೆಲ್ಲಿದವರು ಮೂಲತ: ಬಂದರ್-ಕುದ್ರೋಳಿ ನಿವಾಸಿ ಎಂ. ಮುಹಮ್ಮದ್ ಯಾನೆ ಮೊಮ್ಮದಾಕ. 88ರ ಹರೆಯದಲ್ಲೂ ಅವರು ಒಂದಿಷ್ಟೂ ಅಳುಕಿಲ್ಲದೆ ‘ಅಂದಿನ ಮತ್ತು ಇಂದಿನ ಭಾರತ’ದ ಬಗ್ಗೆ ಮೆಲುಕು ಹಾಕಿದರು.
ಶೌತಕ್ ಅಲಿ, ಮುಹಮ್ಮದಲಿ ಜಿನ್ನಾ, ಮೋತಿಲಾಲ್, ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ಮಹಾತ್ಮಾ ಗಾಂಧಿ, ಅಂಬೇಡ್ಕರ್ ಮಾತ್ರವಲ್ಲದೆ ಹಿಟ್ಲರ್ ಬಗ್ಗೆಯೂ ಈ ಇಳಿ ವಯಸ್ಸಿನಲ್ಲಿ ತನ್ನ ನೆನಪಿನ ಬುತ್ತಿಯಿಂದ ಒಂದೊಂದಾಗಿ ಹೊರಗೆ ಡಹಿದ ಮುಹಮ್ಮದ್ (ಮೊಮ್ಮದಾಕ) ಸ್ವಾತಂತ್ರ ಹೋರಾಟಗಾರರಿಗೊಂದು ಬದ್ಧತೆ ಇತ್ತು. ಸ್ಪಷ್ಟ ಗುರಿ ಇತ್ತು. ಆದರೆ, ಈಗಿನವರಿಗೆ ಅದಿಲ್ಲ. ನಾವು ಆಡಳಿತಕ್ಕೆ ಬಂದರೆ ಚೆನ್ನಾಗಿ ಆಡಳಿತ ನೀಡುತ್ತೇವೆ ಎನ್ನುತ್ತಾ ಅಧಿಕಾರಕ್ಕೇರುತ್ತಾರೆಯೇ ವಿನ: ಆ ಮಾತನ್ನು ಪಾಲಿಸುತ್ತಿಲ್ಲ ಎಂದು ವಿಷಾದಿಸಿದರು.

5ನೆ ತರಗತಿ ಕಲಿತ ಮೊಮ್ಮದಾಕ ತನ್ನ 12ನೆ ವಯಸ್ಸಿನಲ್ಲಿ ಬಂದರ್‌ನಲ್ಲಿ ಕಾರ್ಮಿಕರಾಗಿ ಬದುಕು ಕಟ್ಟಿಕೊಂಡರು. ಬಳಿಕ ಹಮಾಲಿ ಕಾರ್ಮಿಕರ ‘ಮೂಪ’ ನಾಯಕನಾಗಿ ಬದುಕು ಸಾಗಿಸತೊಡಗಿದರು. ತನ್ನ 65 ವರ್ಷ ವಯಸ್ಸಿನವರೆಗೂ ದುಡಿಯತೊಡಗಿದರು.
ಆವಾಗ ಈಗಿನಂತೆ ಟೀವಿ, ಮೊಬೈಲ್ ಇರಲಿಲ್ಲ. ನಮಗೆಲ್ಲಾ ದೇಶ-ವಿದೇಶದ ಸುದ್ದಿ ತಿಳಿಯಬೇಕಾದರೆ ಬಂದರ್‌ನ ಬಾಂಬೆ ಲಕ್ಕಿ ಹೊಟೇಲ್‌ಗೆ ಹೋಗುತ್ತಿದ್ದೆವು. ಅಲ್ಲಿ ಜೋರಾಗಿ ರೇಡಿಯೊ ಧ್ವನಿ ಕೇಳಿಸುತ್ತಿತ್ತು. ನಾವು ಅಲ್ಲಿಂದಲೇ ಎಲ್ಲಾ ವಿಚಾರ ತಿಳಿದುಕೊಳ್ಳತ್ತಿದ್ದೆವು. ಇಂಡಿಯಾ-ಪಾಕಿಸ್ತಾನ ವಿಭಜನೆಯ ಸಂಗತಿಯಂತೂ ನಮ್ಮನ್ನು ಅಭದ್ರತೆಯತ್ತ ನೂಕಿತ್ತು. ಆ ನೋವು ಈಗಲೂ ಮರೆಯಲು ಸಾಧ್ಯವಾಗುತ್ತಿಲ್ಲ.

 ಗಾಂಧಿ ಹತ್ಯೆಯ ಸಂದರ್ಭ ಬಿಹಾರದಲ್ಲಿ ಕೋಮುಗಲಭೆಯಾಗಿತ್ತು. ಹಲವು ಮುಸ್ಲಿಮರು ಕೊಲ್ಲಲ್ಪಟ್ಟರು. ಆ ಗಲಭೆ ಮುಂದಿನ ದಿನಗಳಲ್ಲಿ ವೃದ್ಧಿಸುತ್ತಾ ಹೋಯಿತಲ್ಲದೆ, ಕಡಿಮೆಯಾಗಲಿಲ್ಲ. ಸಾಲದ್ದಕ್ಕೆ ಸರ್ವಾಧಿಕಾರಿ ಹಿಟ್ಲರ್‌ನ ಹೆಸರನ್ನು ಕೆಲವರು ಉಚ್ಚರಿಸಿ ನಮ್ಮನ್ನೆಲ್ಲಾ ಭಯದ ಕಡಲಲ್ಲಿ ತೇಲಿಸುತ್ತಿದ್ದರು. ಅಂದರೆ ಹಿಟ್ಲರ್ ಬಾಂಬ್ ಹಾಕುತ್ತಾನೆ ಎಂದು ಹೇಳಿ ಹೆದರಿಸುತ್ತಿದ್ದರು. ಏನೂ ಅರಿಯದ ನಾವು ಮನೆಯ ಸುತ್ತಮುತ್ತ ಗೋಣಿಚೀಲದಲ್ಲಿ ಹೊಯಿಗೆ ತುಂಬಿಸಿ ಸಾವಿನ ದವಡೆಯಿಂದ ಪಾರಾಗಲು ಶ್ರಮಿಸುತ್ತಿದ್ದೆವು. ರೇಡಿಯೋ ಕೇಳಿ, ಪತ್ರಿಕೆ ಓದಿ ಲೋಕಜ್ಞಾನವನ್ನು ಸ್ವಲ್ಪ ಅರಿತುಕೊಂಡ ಬಳಿಕ ಇಂತಹ ಹೆದರಿಕೆ, ಭಯದ ವಾತಾವರಣದಿಂದ ದೂರ ಸರಿಯತೊಡಗಿದೆವು.

 ಆವಾಗ ಬ್ರಿಟಿಷ್ ಪೊಲೀಸರ ಬೂಟುಗಾಲಿನ ಸಪ್ಪಳ ಕೇಳಿಸಿದೊಡನೆ ಯಾರೂ ರಸ್ತೆಯಲ್ಲಿ ಕಾಣಿಸುತ್ತಿರಲಿಲ್ಲ. ಎಲ್ಲರೂ ಅವರವರ ಪಾಡಿಗೆ ಮನೆಯಲ್ಲಿರುತ್ತಿದ್ದರು. ಅಪರಾಧವೂ ಕಡಿಮೆ ಇತ್ತು. ಈಗ ಎಲ್ಲ ಕಾನೂನು ಇದೆ, ಶಿಕ್ಷೆಯೂ ಇದೆ. ಆದರೆ, ಹೆದರಿಕೆ ಇಲ್ಲ. ಅಪರಾಧಗಳು ಹೆಚ್ಚುತ್ತಿವೆೆ. ಮನುಷ್ಯತ್ವ ನಾಶವಾಗುತ್ತಿದೆ. ಆವಾಗ ಆಹಾರ ಸಾಮಗ್ರಿಗಳ ಬೆಲೆಯಲ್ಲಿ ಇಳಿಕೆಯಿತ್ತು. ಈಗ ಎಲ್ಲದಕ್ಕೂ ವಿಪರೀತ ಹಣ. ಹಣಕ್ಕೆ ಬೆಲೆಯೇ ಇಲ್ಲ ಎಂಬಂತಾಗಿದೆ.

ಈಗಿನ ಆಡಳಿತಕ್ಕೂ ಆಗಿನ ಆಡಳಿತಕ್ಕೂ ಅಜಗಜಾಂತರವಿದೆ. ಬ್ರಿಟಿಷ್ ಸರಕಾರವು ಪರಕೀಯರ ಸರಕಾರ ಎಂಬ ಭಾವನೆ ಇತ್ತೇ ವಿನ: ಅದು ಕೆಟ್ಟ ಸರಕಾರವಾಗಿರಲಿಲ್ಲ. ಆದರೆ, ಈಗ ಹಾಗಲ್ಲ. ಎಲ್ಲದರಲ್ಲೂ ಸ್ವಾರ್ಥ ಎದ್ದು ಕಾಣುತ್ತಿದೆ. ಬಡವರ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಇದನ್ನೆಲ್ಲಾ ಈ ಕಣ್ಣಿನಿಂದ ನೋಡಬೇಕಲ್ಲಾ ಎಂಬ ಬೇಸರವಿದೆ.

ಹಿಂದೆ ಬಡವರ ಆಹಾರ ಅವಲಕ್ಕಿ, ಗೆಣಸು, ತಿಳಿಗಂಜಿ. ಅದನ್ನು ತಿಂದೇ ನೆಮ್ಮದಿಯಿಂದ ನಿದ್ದೆ ಮಾಡಬಹು ದಿತ್ತು. ಈಗ ಬಿರಿಯಾನಿ ತಿಂದರೆ ಹೊಟ್ಟೆ ತುಂಬೀತೇ ವಿನಃ ನೆಮ್ಮದಿಯ ನಿದ್ದೆ ಬಾರದು. ಯಾವ ಕ್ಷಣ, ಏನಾಗುತ್ತದೆ ಎಂದು ಹೇಳಲಿಕ್ಕೆ ಆಗದ ಆತಂಕದಲ್ಲಿ ನಾವಿದ್ದೇವೆ. ಹಿಂದೆ 7 ರೂಪಾಯಿಗೆ 1 ಪವನ್ ಚಿನ್ನ ಸಿಗುತ್ತಿತ್ತು. ಆದರೂ ಯಾರಿಗೂ ಹೆಚ್ಚಿನ ಚಿನ್ನಾಭರಣ ಬೇಡ. ಅಲ್ಲಾಹು ಕೊಟ್ಟಷ್ಟು ಎಂಬಂತೆ ಬದುಕು ಸಾಗಿಸುತ್ತಿದ್ದೆವು. ಈಗ ಹಾಗಲ್ಲ, ಚಿನ್ನಕ್ಕೆ ಸಾವಿರಾರು ರೂಪಾಯಿಯಾದರೂ ಅದನ್ನು ಕೊಂಡುಕೊಳ್ಳಲು ಸಾಧ್ಯವಾಗದಿದ್ದರೂ ಸರಿ, ಹೇಗಾದರೂ ಮಾಡಿ ಅದನ್ನೆಲ್ಲಾ ದಕ್ಕಿಸಿಕೊಳ್ಳಬೇಕು ಎಂಬ ಆಸೆ ಹೆಚ್ಚುತ್ತಿದೆ ಎಂದರು.

ಗಾಂಧೀಜಿ ಮಂಗಳೂರಿಗೆ ಬಂದುದನ್ನು ನೆನಪಿಸಿದ ಮೊಮ್ಮದಾಕ, ಆವಾಗ ನಾನು ಸಣ್ಣವ. ಗಾಂಧೀಜಿ ಮಂಗಳೂರಿಗೆ ಬಂದ ಬಗ್ಗೆ ನನ್ನ ತಂದೆ-ತಾಯಿ ಹೇಳಿದ್ದು ನೆನಪಿದೆ. ಆದರೆ ಯಾಕಂತ ಗೊತ್ತಿರಲಿಲ್ಲ. ರೇಡಿಯೋ ಕೇಳತೊಡಗಿದ ಬಳಿಕ ಗಾಂಧೀಜಿ ಬಗ್ಗೆ ನನಗೆ ಗೌರವ ಹೆಚ್ಚಾಗತಡೊಗಿತು ಎಂದರಲ್ಲದೆ, ನಾನು ನನ್ನ ತಂದೆಯನ್ನೇ ಹೆಚ್ಚಾಗಿ ಹಿಂಬಾಲಿಸುತ್ತಿದ್ದೆ. ಅತ್ತಿತ್ತ ಹೋಗುವಾಗಲೆಲ್ಲಾ ಜೊತೆಯಾಗಿ ಹೋಗುತ್ತಿದ್ದೆವು. ಅಬ್ಬ-ಮಕ್ಕ (ತಂದೆ-ಮಕ್ಕಳು) ಅಂದರೆ ಹೀಗಿರಬೇಕು ಎಂದು ಎಲ್ಲರೂ ನಮ್ಮನ್ನು ‘ಅಬ್ಬ-ಮಕ್ಕ’ ಎಂದೇ ಗುರುತಿಸುತ್ತಿದ್ದುದನ್ನೂ ನೆನಪಿಸಿದರು.

ಬ್ಯಾರಿ, ತುಳು, ಉರ್ದು, ಕನ್ನಡವನ್ನು ಚೆನ್ನಾಗಿ ಬಲ್ಲ ಮೊಮ್ಮದಾಕ ಇಂಗ್ಲಿಷ್ ಭಾಷೆಯಲ್ಲೂ ಸ್ವಲ್ಪ ಹಿಡಿತ ಸಾಧಿಸಿದ್ದಾರೆ. 14 ವರ್ಷಗಳ ಹಿಂದೆಯೇ ಪತ್ನಿಯನ್ನು ಅಗಲಿರುವ ಮುಹಮ್ಮದ್ ಯಾನೆ ಮೊಮ್ಮದಾಕ 5 ಹೆಣ್ಣು ಮತ್ತು 3 ಗಂಡು ಮಕ್ಕಳಲ್ಲದೆ 35 ಮೊಮ್ಮಕ್ಕಳು, 22 ಮರಿ ಮೊಮ್ಮಕ್ಕಳನ್ನೂ ಹೊಂದಿದ್ದಾರೆ. ‘ವಾರ್ತಾಭಾರತಿ’ಯ ನಿತ್ಯ ಓದುಗರಾಗಿರುವ (ಕನ್ನಡಕದ ಸಹಾಯವಿಲ್ಲದೆ) ಮುಹಮ್ಮದ್ ಸದ್ಯ ತನ್ನ ಹಿರಿಯ ಪುತ್ರ ಅಲಿ ಹಸನ್ ಅವರ ತಲಪಾಡಿ ಸಮೀಪದ ಕೆ.ಸಿ.ರೋಡ್‌ನಲ್ಲಿರುವ ಮನೆಯಲ್ಲಿ ವಾಸವಾಗಿದ್ದಾರೆ.

Writer - -ಹಂಝ ಮಲಾರ್್

contributor

Editor - -ಹಂಝ ಮಲಾರ್್

contributor

Similar News