ಶಾಲಾ ಬಾಲಕಿ ಜೆಲು ಸೇರಿದ್ದು!

Update: 2017-08-14 18:21 GMT

ಲೀಲಾಬಾಯಿ ಫಕೀರಪ್ಪ ಇಂಗಳಕಿ! ಮುಂಡಗೋಡು ಗ್ರಾಮದ ಹೆಮ್ಮೆ ಈಕೆ. ದೇಶದ ಸ್ವಾತಂತ್ರಕ್ಕಾಗಿ ತನ್ನ 15ನೆ ವರ್ಷದಲ್ಲಿ ಜೈಲಿಗೆ ಹೋದ ಖ್ಯಾತಿಯನ್ನು ತಮ್ಮದಾಗಿಸಿಕೊಂಡವರು. ಸದ್ಯಕ್ಕೆ ಮುಂಡಗೋಡ ಪಟ್ಟಣದ ನಂದೀಶ್ವರ ನಗರದಲ್ಲಿ ವಾಸಿಸುತ್ತಿದ್ದಾರೆ. ಧಾರವಾಡ ಜಿಲ್ಲೆಯ ಗದಗ ತಾಲೂಕಿನ ಕದಡಿ ಗ್ರಾಮದ ಯಮನಪ್ಪ ಹಾಗೂ ಚಂದವ್ವ ಕದಡಿ ದಂಪತಿಯ ಪುತ್ರಿ ಈಕೆ. 6-2-1927 ರಲ್ಲಿ ಹುಟ್ಟಿದರು. ಗದಗ ಜಿಲ್ಲೆಯ ಕದಡಿ ಯವರಾದ ಇವರು ಶಾಲಾ ಕಲಿಯು ತ್ತಿದ್ದ ವೇಳೆಯೇ ಸ್ವಾತಂತ್ರದ ಕನಸನ್ನು ಕಾಣುತ್ತಿದ್ದರು. ಹುಬ್ಬಳ್ಳಿ ಕೆ.ಎಂ.ಸಿ. ಹತ್ತಿರವಿರುವ ಆಶ್ರಮ ಶಾಲೆಯಲ್ಲಿ ತಮ್ಮ ಏಳನೆ ತರಗತಿಯಲ್ಲಿ ಕಲಿಯುತ್ತಿದ್ದ ವೇಳೆಯಲ್ಲಿ ಸ್ವಾಂತಂತ್ರ ಹೋರಾಟಕ್ಕೆ ಇಳಿದವರು. ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ ಹಳ್ಳಿಕೇರಿ ಗುದ್ಲೇಪ್ಪ, ಮಹದೇವ ಮೈಲಾರಿ, ಕಲ್ಗೂದರಿ, ಸ್ವಾತಂತ್ರ ಹೋರಾಟಕ್ಕಿಳಿಯಲು ಸ್ಫೂರ್ತಿಯಾದರು.

1942 ರ ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಿದ ಆಶ್ರಮ ಶಾಲೆಯ 15 ಹೆಣ್ಣುಮಕ್ಕಳ(ಲೀಲಾಬಾಯಿ ಸಹಿತ)ನ್ನು ಬ್ರಿಟಿಷರು ಬಂಧಿಸಿ, ಹುಬ್ಬಳ್ಳಿಯಲ್ಲಿ 4-5 ದಿನ ಹಾಗೂ ಧಾರವಾಡದಲ್ಲಿ 8-10 ದಿನ ಪೊಲೀಸ್ ಠಾಣೆಯಲ್ಲಿ ಇಟ್ಟು ನಂತರ ಬೆಳಗಾಂವ ಹಿಂಡಲಾಗ ಜೈಲಿಗೆ ಕಳುಹಿಸಿದರು. ಸುಮಾರು 3 ತಿಂಗಳ ಹಿಂಡಲಾಗ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ನಂತರ ಇವರನ್ನು ಬಿಡುಗಡೆ ಮಾಡಲಾಯಿತು. ಆಗ ಲೀಲಾಬಾಯಿಯವರಿಗೆ ಕೇವಲ 15 ವರ್ಷ. ಬಿಡುಗಡೆ ಹೊಂದಿದ ನಂತರ ತಮ್ಮ ಮೆಟ್ರಿಕ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು

ದಾಂಪತ್ಯ: 1947ರಲ್ಲಿ ಭಾರತದ ಏರ್‌ಫೋರ್ಸ್‌ನ ಉದ್ಯೋಗಿಯಾಗಿರುವ ಕುಂದಗೋಳ ತಾಲೂಕಿನ ಇಂಗಳಕಿ ಗ್ರಾಮದ ಫಕೀರಪ್ಪ ಇಂಗಳಕಿ ಜತೆ ಬಳಿಕ ಮದುವೆಯಾಯಿತು. ಮದುವೆ ನಂತರ ಪತಿ ಜತೆ ದಿಲ್ಲಿ, ಕಾನಪೂರ ಮುಂತಾದ ಕಡೆ ವಾಸ ಮಾಡಬೇಕಾಯಿತು. ಇವರ ಓರ್ವ ಪುತ್ರಿ ಮಲೇಶ್ಯಾದಲ್ಲಿದ್ದರೆ, ಮಗ ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತರಾಗಿ ಮನೆಯಲ್ಲಿದ್ದಾರೆ.

ಪತಿ ಫಕೀರಪ್ಪಇಂಗಳಕಿ ಏರ್‌ಫೋರ್ಸ್‌ನಿಂದ ನಿವೃತ್ತಿ ಹೊಂದಿದ ನಂತರ 1975ರಲ್ಲಿ ಮುಂಡಗೋಡ ತಾಲೂಕಿನ ಬಾಚಣಿಕಿ ಗ್ರಾಮದಲ್ಲಿ ಬಂದು ಇಲ್ಲಿಯ ನಿವಾಸಿಗಳಾಗಿದ್ದರು. ಬಾಚಣಿಕೆ ಗ್ರಾಮದಲ್ಲಿ ತಮ್ಮ ಸ್ವಂತ ದುಡಿಮೆಯಿಂದ ತೆಗೆದುಕೊಂಡ ಹೊಲಗದ್ದೆಯಲ್ಲಿ ಕೃಷಿ ಮಾಡುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. 1983 ರಲ್ಲಿ ಇವರು ಮೃತಪಟ್ಟರು.

ಲೀಲಾವತಿ ಅವರು ಸ್ವಾತಂತ್ರಕ್ಕಾಗಿ ಜೈಲಿಗೆ ಹೋಗಿ ಬಂದನಂತರ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಸನ್ಮಾನಿಸಲಾಗಿತ್ತು. ‘‘ಜೈಲಿನಲ್ಲಿದ್ದಾಗ ಮಣಿಬೇನ್ ಪಟೇಲ್, ಉತ್ತರಭಾರತದ ಸಹರಾಬಾಯಿ, ಮೃದಲಾ ನಮ್ಮ ಶೆಲ್ಲಿನ ಪಕ್ಕದಲ್ಲಿಯೇ ಇದ್ದರು, ನಮ್ಮ ಜತೆ ಮಾತನಾಡುತ್ತಿದ್ದರು’’ ಎಂದು ಇವರು ನೆನಪಿಸಿಕೊಳ್ಳುತ್ತಾರೆ. ಹಾಗೆಯೇ ವೀರನಗೌಡ ಪಾಟೀಲ ನಾಗಮ್ಮ ಪಾಟೀಲ ಮಾಗಡಿ ಇವರ ಪರಿಚಯವೂ ಜೈಲಿನಲ್ಲೇ ಆಯಿತು.

Writer - -ನಝೀರ್ ಮುಂಡಗೋಡ

contributor

Editor - -ನಝೀರ್ ಮುಂಡಗೋಡ

contributor

Similar News