ಉಡುಪಿಗೆ ಗಾಂಧೀಜಿ ಭೇಟಿಯ ಜಾಡನ್ನು ಅರಸುತ್ತಾ...

Update: 2017-08-14 18:27 GMT

ಮಹಾತ್ಮಾ ಗಾಂಧಿ ಅವರು ಭಾರತ ಸ್ವಾತಂತ್ರ ಹೋರಾಟದ ನೇತೃತ್ವ ವಹಿಸಿಕೊಂಡು ದೇಶಾದ್ಯಂತ ಜನರನ್ನು ಹೋರಾಟಕ್ಕೆ ಸಜ್ಜುಗೊಳಿಸಲು ನಡೆಸಿದ ಪ್ರವಾಸದ ನಡುವೆ ಒಟ್ಟು ಮೂರು ಬಾರಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದರು. 1920ರ ಆಗಸ್ಟ್ ನಲ್ಲಿ ಒಮ್ಮೆ, 1927ರ ಅಕ್ಟೋಬರ್‌ನಲ್ಲಿ ಹಾಗೂ 1934ರ ಫೆಬ್ರವರಿ ತಿಂಗಳಲ್ಲಿ. ಇವುಗಳಲ್ಲಿ ಅವರು ಉಡುಪಿಗೆ ಬಂದಿದ್ದು ಒಂದೇ ಒಂದು ಸಲ ಅದು 1934ರ ಫೆ.25 ರವಿವಾರದಂದು. 1927ರಲ್ಲಿ ಗಾಂಧೀಜಿ ಉಡುಪಿಗೆ ಬರುವ ಯೋಜನೆಯನ್ನು ಹಾಕಿ ಕೊಂಡಿದ್ದರೂ, ಮಂಗಳೂರಿಗೆ ಆಗಮಿಸಿದಾಗ, ಬ್ರಿಟಿಷ್ ವೈಸರಾಯ್‌ರಿಂದ ತುರ್ತು ಕರೆ ಬಂದ ನಿಮಿತ್ತ ಉಡುಪಿ ಪ್ರವಾಸವನ್ನು ಮೊಟಕುಗೊಳಿಸಿ ಅವರು ಮುಂಬೈ ಮೂಲಕ ದಿಲ್ಲಿಗೆ ವಾಪಸಾಗಿದ್ದರು ಎಂದು ಅಂದಿನ ಪತ್ರಿಕೆಗಳ ವರದಿ ಹಾಗೂ ಈಗ ಲಭ್ಯವಿರುವ ದಾಖಲೆಗಳ ಮೂಲಕ ತಿಳಿದುಬರುತ್ತದೆ ಎಂದು ಉಡುಪಿ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಮುಖ್ಯಸ್ಥ, ಈ ಕುರಿತು ಸಂಶೋಧನೆ ನಡೆಸಿರುವ ಡಾ.ವಿನೀತ್ ರಾವ್ ಹೇಳುತ್ತಾರೆ.

1920ರಲ್ಲಿ ತಾವು ಕೈಗೊಂಡ ಅಸಹಕಾರ ಚಳವಳಿ ಹಾಗೂ ಖಿಲಾಫತ್ ಚಳವಳಿ ಕುರಿತು ಜನಜಾಗೃತಿಗಾಗಿ ಕೈಗೊಂಡ ಪ್ರವಾಸ ಸಂದರ್ಭದಲ್ಲಿ ಅವರು ಮಂಗಳೂರಿಗೆ ಆಗಮಿಸಿದ್ದರು. 1927ರಲ್ಲಿ ಖಾದಿ ಪ್ರಚಾರ, ಹಿಂದಿ ಭಾಷಾ ಪ್ರಚಾರ, ಸ್ಥಳೀಯ ಭಾಷೆಯ ಮಹತ್ವದ ಪ್ರಸರಣ, ಕೋಮುಸಾಮರಸ್ಯ ಹಾಗೂ ಅಸ್ಪಶ್ಯತಾ ನಿವಾರಣೆ ಅವರ ಪ್ರವಾಸದ ಮುಖ್ಯ ಉದ್ದೇಶವಾಗಿತ್ತು. ಆದರೆ ತುರ್ತು ಕರೆಯಿಂದಾಗಿ ಅದು ಅರ್ಧಕ್ಕೆ ಮೊಟಕುಗೊಂಡಿತ್ತು.

ಆದರೆ 1934ರ ಫೆ.24ರ ಶನಿವಾರದಂದು ಮಡಿಕೇರಿಯಿಂದ ಸಂಪಾಜೆ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಿದ ಅವರು, ಅಂದು ರಾತ್ರಿ ಮಂಗಳೂರಿನಲ್ಲಿ ವಾಸ್ತವ್ಯ ಮಾಡಿದ್ದು, ಮರುದಿನ ಉಡುಪಿಗೆ ಆಗಮಿಸಿದ್ದರು. ಉಡುಪಿಗೆ ಅಪರಾಹ್ನ 3:30ಕ್ಕೆ ಆಗಮಿಸಿದ್ದ ಅವರು ಅಜ್ಜರಕಾಡಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ ಬಳಿಕ ಬ್ರಹ್ಮಾವರ ಮಾರ್ಗವಾಗಿ ಕುಂದಾಪುರ ತಲುಪಿ ಅಲ್ಲಿ ರಾತ್ರಿ ದೊಂದಿ ಬೆಳಕಿನಲ್ಲಿ ಸಭೆ ನಡೆಸಿ ರಾತ್ರಿ ಅಲ್ಲೇ ಉಳಕೊಂಡಿದ್ದ ಅವರು ಫೆ.26ರ ಸೋಮವಾರ, ವೌನವ್ರತದಾರಿಯಾಗಿ ಕುಂದಾಪುರದ ‘ಶಾಂತಿನಿಕೇತನ’ ಎಂಬ ಮನೆಯಲ್ಲಿ ಉಳಕೊಂಡಿದ್ದರು. ಫೆ.27ರ ಬೆಳಗ್ಗೆ ಕುಂದಾಪುರ ದಿಂದ ‘ದಯಾವತಿ’ ಎಂಬ ಸ್ಟೀಮರ್‌ನಲ್ಲಿ ಉತ್ತರ ಕನ್ನಡಕ್ಕೆ ಪ್ರಯಾಣ ಬೆಳೆಸಿದ್ದರು.

ಮಹಾತ್ಮಾ ಗಾಂಧಿ ಅವರು 1934ರ ಫೆ.25ರಂದು ಉಡುಪಿಗೆ ಆಗಮಿಸಲು ಉದ್ಯಾವರ ಹೊಳೆಯಲ್ಲಿ ಜಂಗಲ್‌ನಿಂದ ಇಳಿಯುತ್ತಿರುವುದು. ಮಂಗಳೂರು-ಉಡುಪಿ-ಕುಂದಾಪುರ ಭೇಟಿಯ ಸಮಯದಲ್ಲಿ ಆಗ ನದಿಗಳನ್ನು ದಾಟಲು ಹಲವು ದೋಣಿಗಳನ್ನು ಇಟ್ಟು ಹಲಗೆಗಳ ಮೂಲಕ ಜೋಡಿಸಿ ಜಂಗಲ್ ನಿರ್ಮಿಸಲಾಗುತ್ತಿತ್ತು. ಇದರಲ್ಲಿ ಗಾಂಧಿ ಬಳಗ ಹಾಗೂ ಅವರು ಪ್ರಯಾಣಿಸುತ್ತಿದ್ದ ಕಾರು ಒಂದು ದಡದಿಂದ ಇನ್ನೊಂದು ದಡಕ್ಕೆ ತಲುಪುತ್ತಿತ್ತು.

1934ರಲ್ಲಿ ತನ್ನ ಪ್ರವಾಸವನ್ನು ಗಾಂಧೀಜಿ ‘ಹರಿಜನ ಪ್ರವಾಸ’ ಎಂದು ಕರೆದುಕೊಂಡಿದ್ದರು. ಅಸ್ಪಶ್ಯತಾ ನಿವಾರಣೆ, ದಲಿತಕೇರಿಗಳಿಗೆ ಭೇಟಿ ಅವರ ಪ್ರವಾಸದ ಮುಖ್ಯ ಉದ್ದೇಶಗಳಾಗಿದ್ದವು. ಈ ನಡುವೆ ಬಿಹಾರ ದಲ್ಲಿ ಭಾರೀ ಭೂಕಂಪ ಸಂಭವಿಸಿ ಅಪಾರ ಸಾವು-ನೋವುಗಳಾದ ಕಾರಣ, ಭೂಕಂಪ ಸಂತ್ರಸ್ತರಿಗೆ ನಿಧಿ ಸಂಗ್ರಹವನ್ನೂ ಈ ಪ್ರವಾಸದಲ್ಲಿ ಅವರು ಕೈಗೊಂಡರು. ದಲಿತರಿಗೆ ಪ್ರವೇಶ ನಿರಾಕರಿಸಿ, ಅಸ್ಪಶ್ಯತಾ ಆಚರಣೆಗೆ ಉತ್ತೇಜನ ನೀಡುತ್ತಿದ್ದ ದೇವಸ್ಥಾನಗಳಿಗೆ ಭೇಟಿ ನೀಡದಿರುವ ತನ್ನ ಸಂಕಲ್ಪದಂತೆ ಗಾಂಧೀಜಿ ಉಡುಪಿಯಲ್ಲಿ ರಥಬೀದಿ ಸಮೀಪದಿಂದಲೇ ಹಾದು ಹೋದರೂ ಕೃಷ್ಣ ಮಠಕ್ಕೆ ಭೇಟಿ ನೀಡಲಿಲ್ಲ. ‘ಇದೆಯೋ ನಿಮ್ಮೂರಿನ ಕೃಷ್ಣ ಮಠ’ ಎಂದು ಗಾಂಧೀಜಿ, ಮಠದ ಎದುರಿನಿಂದ ಹಾದುಹೋಗುವಾಗ ತನ್ನ ಸಮೀಪದಲ್ಲಿ ನಡೆಯುತ್ತಿದ್ದ ಅಂದು ತಾಲೂಕು ಬೋರ್ಡ್ ಅಧ್ಯಕ್ಷರಾಗಿದ್ದು, ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿದ್ದ ಹಾಜಿ ಅಬ್ದುಲ್ಲಾರ ಬಳಿ ಕೇಳಿದಾಗ ಅವರು ವೌನವಾಗಿ ತಲೆಯಲ್ಲಾಡಿಸಿದರು ಎಂದು ಅಂದಿನ ಪತ್ರಿಕಾ ವರದಿಗಳನ್ನು ಉಲ್ಲೇಖಿಸಿ ವಿನೀತ್ ರಾವ್ ಹೇಳುತ್ತಾರೆ. ಅಲ್ಲದೇ ಅಜ್ಜರಕಾಡಿನ ತನ್ನ ಭಾಷಣದಲ್ಲೂ ಅವರು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ದಲಿತರಿಗೆ (ಅವರು ಕರೆಯುತ್ತಿದ್ದುದು ಹರಿಜನರೆಂದು) ಪ್ರವೇಶವಿಲ್ಲದ ಸಂಗತಿ ತನಗೆ ಗೊತ್ತಿದೆ ಎಂದು ನುಡಿದ ಗಾಂಧೀಜಿ, ನಾವೆಲ್ಲರೂ ದೇವರ ಮಕ್ಕಳು. ಮೇಲುಕೀಳೆಂಬ ಭಾವನೆಯನ್ನು ಕಿತ್ತೊಗೆಯಬೇಕು. ಅಸ್ಪೃಶ್ಯತಾ ನಿವಾರಣೆ ಹಾಗೂ ಹರಿಜನೋದ್ಧಾರ ಕಾರ್ಯದಲ್ಲಿ ಎಲ್ಲರೂ ಸಹಕರಿಸಿ ಆತ್ಮಶುದ್ಧಿ ಮಾಡಿಕೊಳ್ಳಬೇಕು. ಹರಿಜನರು ದೇವಸ್ಥಾನ ಪ್ರವೇಶಿಸುವಂತೆ ಮಾಡುವುದು ನನ್ನ ಕಾರ್ಯಕ್ರಮದ ಒಂದು ಭಾಗವಾಗಿದೆ. ಈ ವಿಷಯದಲ್ಲಿ ಅಖಿಲ ಕರ್ನಾಟಕಕ್ಕೆ ಉಡುಪಿ ಮಾದರಿಯಾಗಲು, ಆದರ್ಶಪ್ರಾಯವಾಗಲು ಎಲ್ಲರೂ ಪ್ರಯತ್ನಿಸಬೇಕು ಎಂದು ಉಡುಪಿಯ ಜನತೆಗೆ ಕರೆ ನೀಡಿದ್ದರು ಎಂದು ಅಂದಿನ ‘ರಾಷ್ಟ್ರಬಂಧು’ ಪತ್ರಿಕೆ ವರದಿ ಮಾಡಿತ್ತು.

ಈ ಪ್ರವಾಸದ ಸಂದರ್ಭದಲ್ಲಿ ಅವರು ಕರಾವಳಿಯಲ್ಲಿ ಎಲ್ಲೂ ದೇವಸ್ಥಾನಗಳಿಗೆ ಭೇಟಿ ನೀಡಿದ ಉಲ್ಲೇಖಗಳಿಲ್ಲ. ಆದರೆ ಉತ್ತರ ಕನ್ನಡ ಪ್ರವಾಸದ ಸಂದರ್ಭದಲ್ಲಿ ಅವರು ಸಿದ್ಧಾಪುರದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಊರಿನ ದಲಿತರೊಂದಿಗೆ ಪ್ರವೇಶಿಸಿದರೆಂದು, ಇದಕ್ಕೆ ಊರಿನ ಹಿರಿಯರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಅವರನ್ನು ಆಹ್ವಾನಿಸಿತ್ತೆಂದು ದಾಖಲೆಗಳು ತಿಳಿಸುತ್ತವೆ ಎಂದು ಡಾ.ರಾವ್ ತಿಳಿಸಿದರು.

ಗಾಂಧಿ ಉಡುಪಿಗೆ ಮೊದಲ ಬಾರಿ ಆಗಮಿಸಿದಾಗ ಅವರನ್ನು ಅಂದಿನ ತಾಲೂಕು ಬೋರ್ಡಿನ ಅಧ್ಯಕ್ಷರಾಗಿದ್ದ ಹಾಜಿ ಅಬ್ದುಲ್ಲಾರ ನೇತೃತ್ವದಲ್ಲಿ ಸ್ವಾಗತಿಸಲಾಗಿತ್ತು. ಗಾಂಧಿ ಮಾತನಾಡಿದ ಸಭೆಯ ಅಧ್ಯಕ್ಷತೆಯನ್ನು ಹಾಜಿ ಅಬ್ದುಲ್ಲಾ ಅವರು ವಹಿಸಿದ್ದರು. ಚಿತ್ರದಲ್ಲಿ ಮುಂದೆ ಇರುವುದು ಹಾಜಿ ಅಬ್ದುಲ್ಲಾ.

1934ರ ಪ್ರವಾಸವನ್ನು ಅವರು ಪ್ರಾರಂಭಿಸಿದ್ದು ಫೆ.24ರ ಮುಂಜಾನೆ ಸಂಪಾಜೆಯಿಂದ. ಅಲ್ಲಿ ಅವರನ್ನು ಸ್ವಾಗತಿಸಲು ಸುಮಾರು 200 ಮಂದಿ ಸೇರಿದ್ದರು. ಮುಂದೆ ಸುಳ್ಯದಲ್ಲಿ ಒಂದು ಸಾವಿರ ಮಂದಿ ಅವರ ಸ್ವಾಗತಕ್ಕೆ ನೆರೆದಿದ್ದರು. ಬೆಳಗ್ಗೆ 9ಗಂಟೆಗೆ ಪುತ್ತೂರಿಗೆ ಆಗಮಿಸಿದ್ದು ಅಲ್ಲಿ 500 ಮಂದಿ ಮಹಿಳೆಯರು ಸೇರಿದಂತೆ 5000 ಮಂದಿಯ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಅಲ್ಲಿ ಅವರು ಭೂಕಂಪ ನಿರ್ವಸಿತರಿಗೆ ನಿಧಿಯನ್ನು ಸಂಗ್ರಹಿಸಿದ್ದಲ್ಲದೇ, ಅಸ್ಪೃಶ್ಯತಾ ನಿವಾರಣೆ- ಪಾನ ನಿರೋಧಕ್ಕೆ ಕರೆ ಕೊಟ್ಟಿದ್ದರು.

ಕಬಕ-ಕಲ್ಲಡ್ಕ- ಪಾಣೆಮಂಗಳೂರು- ಬಂಟ್ವಾಳ-ಅರ್ಕುಳ- ಅಡ್ಯಾರುಗಳಲ್ಲಿ ನಿಂತು ನೆರೆದ ಜನರೊಂದಿಗೆ ಕುಶಲಸಂಭಾಷಣೆ ನಡೆಸಿ ಗಾಂಧೀಜಿ 2:30ಕ್ಕೆ ಮಂಗಳೂರಿಗೆ ಆಗಮಿಸಿದ್ದರು. ಮೊದಲು ಜ್ಞಾನೋದಯ ಸಮಾಜದಲ್ಲಿ ಸಭೆ. ಅಲ್ಲಿ ಜೋಗಮ್ಮ ತಿಂಗಳಾಯ ಎಂಬವರು ಬೆಳ್ಳಿಯ ಚರಕವನ್ನು ನೀಡಿದ್ದರು. ಅಲ್ಲಿಯೂ ಜನರಿಂದ ನಿಧಿಸಂಗ್ರಹಿಸಿದ ಗಾಂಧಿ, ರಾತ್ರಿ ಆರ್.ಎಸ್. ನಗರ್‌ಕರ್ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಮರುದಿನ ರವಿವಾರ ಬೆಳಗ್ಗೆ ಮಂಗಳೂರಿನ ಹರಿಜನ ಕೇರಿ-ದಲಿತ ಕಾಲನಿಗೆ ಭೇಟಿ, ಅಲ್ಲಿಂದ ಕೆನರಾ ಹೈಸ್ಕೂಲ್‌ಗೆ ಭೇಟಿ, ನಂತರ ಕಾರ್ನಾಡ್ ಸದಾಶಿವರಾಯರ ಮನೆಗೆ ತೆರಳಿ ಅವರ ತಾಯಿಯ ಯೋಗಕ್ಷೇಮ ವಿಚಾರಣೆ.

ಈ ಪ್ರವಾಸದ ಸಂದರ್ಭದಲ್ಲಿ 65 ವರ್ಷ ಪ್ರಾಯದವರಾಗಿದ್ದ ಗಾಂಧೀಜಿ ಅವರ ಪಾದರಸದಂಥ ಚಟುವಟಿಕೆ ನೋಡಿ ಜಿಲ್ಲೆಯ ಜನ ದಂಗಾಗುವಂತಾಯಿತು. ಮಂಗಳೂರಿನಿಂದ ಹೊರಟು ಗುರುಪುರ, ಬಜಪೆ, ಎಕ್ಕಾರು, ಕಟೀಲು, ಕಿನ್ನಿಗೋಳಿ ಮಾರ್ಗವಾಗಿ ಮುಲ್ಕಿಗೆ ಆಗಮನ. ಅಪರಾಹ್ನ 2:30ಕ್ಕೆ ಅವರು ಕಾಪು ತಲುಪಿ, ಅಲ್ಲಿ ಸ್ವಾಗತಕ್ಕೆ ನೆರೆದ ಜನರ ಪೈಕಿ ಡಾ.ಬೇಕಲ್ ಎಂಬವರ ಪುತ್ರಿ ಪುಟ್ಟ ಬಾಲೆ ಶ್ರೀದೇವಿ ಮಾವಿನಹಣ್ಣು ನೀಡಿದಾಗ, ಗಾಂಧೀಜಿ ಬದಲಿಯಾಗಿ ಹೂವಿನ ಮಾಲೆಯೊಂದನ್ನು ಆಕೆಗೆ ತೊಡಿಸಿದರು. ಕಾಪು ಜನತೆಯ ಪರವಾಗಿ ಕಾರ್ನಾಡ್ ಕೃಷ್ಣರಾವ್ ಗಾಂಧೀಜಿಗೆ 100ರೂ. ಅರ್ಪಿಸಿದರು.

ಸಭೆಯಲ್ಲಿ ತನ್ನ ಬಿಹಾರ ಭೂಕಂಪ ಪೀಡಿತರ ನೆರವಿಗೆ ನಿಧಿ ಸಂಗ್ರಹಕ್ಕೆ ಕಾಣಿಕೆ ನೀಡಲು ತಾಯಿಯೊಂದಿಗೆ ಬಂದ ಮಗುವಿನೊಂದಿಗೆ ಗಾಂಧಿ ಉಭಯಕುಶಲೋಪರಿ ಮಾತನಾಡುತ್ತಿರುವುದು.

ಗಾಂಧೀಜಿ ಉದ್ಯಾವರ ಹೊಳೆಯನ್ನು ಜಂಗಲ್‌ನಲ್ಲಿ ದಾಟಿ ಉಡುಪಿಗೆ 3:30ಕ್ಕೆ ಆಗಮಿಸಿದ್ದರು. ಮೊದಲು ಕಾಡಬೆಟ್ಟು ಶ್ರೀನಿವಾಸ ಪೈ ಅವರ ಖಾದಿ ಭಂಡಾರ ಉದ್ಘಾಟಿಸಿದರು. ಅಲ್ಲಿಂದ ಅಜ್ಜರಕಾಡು ಮೈದಾನಕ್ಕೆ ಆಗಮಿಸಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ ದರು. ಅಲ್ಲಿ ದಲಿತ ಬಾಲಕ- ಬಾಲಕಿಯರು ಅವರಿಗೆ ಮಾಲಾರ್ಪಣೆ ಮಾಡಿದರು. ಹಾಜಿ ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು.

ಸಭೆಯ ಬಳಿಕ ಸಮೀಪದಲ್ಲೇ ಇದ್ದ ಯು.ರಾಮರಾವ್ ಮನೆಯಲ್ಲಿ ಉಪಾಹಾರ ಸೇವಿಸಿ ಅಲ್ಲಿಂದ ಕುಂದಾಪುರಕ್ಕೆ ಪ್ರಯಾಣಿಸಿದರು. ಕಲ್ಯಾಣಪುರದಿಂದ ಜಂಗಲ್‌ನಲ್ಲಿ ಸ್ವರ್ಣ ನದಿ ಹಾಗೂ ಮಡಿಸಾಲು ಹೊಳೆ ದಾಟಿದ ಅವರು ಬ್ರಹ್ಮಾವರದಲ್ಲಿ ಸ್ವಾಗತಕ್ಕೆ ಕಾದಿದ್ದ ಜನರಿಂದ ನಿಧಿಯನ್ನು ಸ್ವೀಕರಿಸಿ ಸಾಲಿಗ್ರಾಮ-ಕೋಟ ಮಾರ್ಗವಾಗಿ ರಾತ್ರಿ 8:00 ಗಂಟೆಗೆ ಕುಂದಾಪುರ ತಲುಪಿದ್ದರು. ದೊಂದಿ ಬೆಳಕಿನಲ್ಲೇ 80ವರ್ಷ ಪ್ರಾಯದ ಸಾಹುಕಾರ್ ಮಂಜಯ್ಯ ಶೇರಿಗಾರ್ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಅದೇ ದಿನ ರಾತ್ರಿ ಹಾಗೂ ಮರುದಿನ ವೌನವ್ರತವನ್ನು ಆಚರಿಸಿ ಫೆ.27ರ ಮಂಗಳವಾರ ಉತ್ತರ ಕನ್ನಡಕ್ಕೆ ತೆರಳಿದರು.

(ಚಿತ್ರ ಸೌಜನ್ಯ ಮತ್ತು ಮಾಹಿತಿ: ಉಡುಪಿ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಡಾ.ವಿನೀತ್ ರಾವ್.)

Writer - ಬಿ.ಬಿ. ಶೆಟ್ಟಿಗಾರ್

contributor

Editor - ಬಿ.ಬಿ. ಶೆಟ್ಟಿಗಾರ್

contributor

Similar News