ಭಾರತದ ಅಥ್ಲೀಟ್‌ಗಳಿಂದ ಮತ್ತೊಮ್ಮೆ ನಿರಾಶಾದಾಯಕ ಪ್ರದರ್ಶನ

Update: 2017-08-14 18:31 GMT

ಲಂಡನ್, ಆ.14: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಥ್ಲೀಟ್‌ಗಳು ಮತ್ತೊಮ್ಮೆ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ದೇವಿಂದರ್ ಸಿಂಗ್ ಕಾಂಗ್ ಜಾವೆಲಿನ್ ಎಸೆತದಲ್ಲಿ ಫೈನಲ್‌ಗೆ ತಲುಪಿರುವುದು ಹಾಗೂ ಗೋವಿಂದನ್ ಲಕ್ಷ್ಮಣನ್ 5000 ಮೀ. ಓಟದಲ್ಲಿ ತೋರಿದ ವೈಯಕ್ತಿಕ ಶ್ರೇಷ್ಠ ಪ್ರಯತ್ನವು ಭಾರತ ಟೂರ್ನಿಯಲ್ಲಿ ಸಾಧಿಸಿದ ಗಮನಾರ್ಹ ಪ್ರದರ್ಶನವಾಗಿದೆ. ಮಹಿಳೆಯರ 200 ಮೀ. ಓಟದಲ್ಲಿ ಹರಿಯಾಣದ ಓಟಗಾರ್ತಿ ನಿರ್ಮಲಾ ಶೆರೊನ್ ಸೆಮಿಫೈನಲ್‌ಗೆ ತಲುಪುವ ಮೂಲಕ ಸಾಧಾರಣ ಪ್ರದರ್ಶನ ನೀಡಿದರು. ಆದರೆ ಆ.4 ರಿಂದ 13ರ ತನಕ ನಡೆದ ಮೆಗಾ ಸ್ಪರ್ಧೆಯಲ್ಲಿ 25 ಸದಸ್ಯರನ್ನು ಒಳಗೊಂಡ ಭಾರತ ತಂಡ ಒಂದೂ ಪದಕ ಗೆಲ್ಲದೇ ನಿರಾಸೆಗೊಳಿಸಿತು. ಪದಕದ ಭರವಸೆಯೊಂದಿಗೆ ಟೂರ್ನಿಗೆ ಪ್ರವೇಶಿಸಿದ್ದ ಯುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಭಾರೀ ನಿರಾಸೆಗೊಳಿಸಿದರು. ಜೂನಿಯರ್ ಮಟ್ಟದ ಜಾವೆಲಿನ್ ಸ್ಪರ್ಧೆಯಲ್ಲಿ ವಿಶ್ವದಾಖಲೆ ನಿರ್ಮಿಸಿದ್ದ 19ರ ಹರೆಯದ ಚೋಪ್ರಾ ಜಾಗತಿಕ ಟೂರ್ನಿಯಲ್ಲಿ ಫೈನಲ್‌ಗೆ ಅರ್ಹತೆ ಪಡೆಯಲು ಬೇಕಾದ 83 ಮೀ. ದೂರ ಜಾವೆಲಿನ್ ಎಸೆಯಲು ವಿಫಲರಾದರು.

ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ಭಾರತದ ಇನ್ನೋರ್ವ ಸ್ಪರ್ಧಿ ಕಾಂಗ್ ಅರ್ಹತಾ ಸುತ್ತಿನ ಮೂರನೆ ಹಾಗೂ ಅಂತಿಮ ಯತ್ನದಲ್ಲಿ 84.22 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿದ ಭಾರತದ ಮೊದಲ ಅಥ್ಲೀಟ್ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ಆದರೆ ಫೈನಲ್‌ನಲ್ಲಿ ಭಾಗವಹಿಸಿದ್ದ 13 ಸ್ಪರ್ಧಿಗಳ ಪೈಕಿ ಕಾಂಗ್ 12ನೆ ಸ್ಥಾನ ಪಡೆದರು. ಪುರುಷರ 5000 ಮೀ. ಓಟದಲ್ಲಿ ಲಕ್ಷ್ಮಣನ್ ಜೀವನಶ್ರೇಷ್ಠ 3:35.69 ಸೆಕೆಂಡ್‌ನಲ್ಲಿ ಗುರಿ ತಲುಪಿ ಗಮನ ಸೆಳೆದರು. ಅರ್ಹತಾ ಸುತ್ತಿನಲ್ಲಿ 15ನೆ ಸ್ಥಾನ ಪಡೆದಿದ್ದರು. ಮಹಿಳೆಯರ 400 ಮೀ. ಓಟದಲ್ಲಿ ಸೆಮಿಫೈನಲ್‌ಗೆ ತಲುಪಿದ್ದ ನಿರ್ಮಲಾ 53.07 ಸೆಕೆಂಡ್‌ನಲ್ಲಿ ಗುರಿ ತಲುಪಿ 22ನೆ ಸ್ಥಾನ ಪಡೆಯಲಷ್ಟೇ ಶಕ್ತರಾದರು.

ದ್ಯುತಿ ಚಂದ್(ಮಹಿಳೆಯರ 100 ಮೀ.ಓಟ), ಮುಹಮ್ಮದ್ ಅನಾಸ್(ಪುರುಷರ 400 ಮೀ.) ಹಾಗೂ ಸಿದ್ಧಾಂತ್ ತಿಂಗಳಾಯ(ಪುರುಷರ 110ಮೀ. ಹರ್ಡಲ್ಸ್) ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು.

ಮಹಿಳೆಯರ 4x400 ಮೀ. ರಿಲೇ ತಂಡ ಮೊದಲ ಸುತ್ತಿನ ಹೀಟ್ಸ್‌ನಲ್ಲಿ ಲೇನ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅನರ್ಹಗೊಂಡರೆ, ಪುರುಷರ ರಿಲೇ ತಂಡ ಒಟ್ಟು 10ನೆ ಸ್ಥಾನ ಪಡೆಯಿತು. ಪುರುಷರ 20 ಕಿ.ಮೀ. ರೇಸ್‌ವಾಕ್‌ನಲ್ಲಿ ಕೆ.ಟಿ ಇರ್ಫಾನ್ 23ನೆ ಸ್ಥಾನ ಪಡೆದಿದ್ದರು. ದೇವೇಂದರ್ ಸಿಂಗ್(1:25.47) ಹಾಗೂ ಕೆ.ಗಣಪತಿ(1:28.32) ಕ್ರಮವಾಗಿ 50ನೆ ಹಾಗೂ 54ನೆ ಸ್ಥಾನ ಪಡೆದರು. ಮಹಿಳೆಯರ 20 ಕಿ.ಮೀ. ರೇಸ್‌ವಾಕ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಖುಶ್ಬೀರ್ ಕೌರ್ 42ನೆ ಸ್ಥಾನ ಪಡೆದಿದ್ದರು.

ಫೀಲ್ಡ್ ಸ್ಪರ್ಧೆಗಳಲ್ಲಿ ಅನು ರಾಣಿ ಮಹಿಳೆಯರ ಜಾವೆಲಿನ್ ಎಸೆತದಲ್ಲಿ 20ನೆ ಸ್ಥಾನ(59.93 ಮೀ.ದೂರ ಎಸೆತ) ಪಡೆದರು. ಹೆಪ್ಟಾಥ್ಲಾನ್‌ನಲ್ಲಿ ಸ್ವಪ್ನಾ ಬರ್ಮನ್ 26ನೆ ಸ್ಥಾನ ಪಡೆದರೆ, ಟಿ.ಗೋಪಿ ಹಾಗೂ ಮೋನಿಕಾ ಅಂಥಾರೆ ಪುರುಷರ ಹಾಗೂ ಮಹಿಳೆಯರ ಮ್ಯಾರಥಾನ್‌ನಲ್ಲಿ ಕ್ರಮವಾಗಿ 28ನೆ ಹಾಗೂ 64ನೆ ಸ್ಥಾನ ಪಡೆದರು.

ಭಾರತ 1983ರ ಬಳಿಕ ನಡೆದಿರುವ ಎಲ್ಲ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದೆ. 2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಕೇರಳದ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಲಾಂಗ್‌ಜಂಪ್‌ನಲ್ಲಿ ಕಂಚು ಜಯಿಸಿದ್ದರು. ಇದು ಭಾರತಕ್ಕೆ ಈತನಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಲಭಿಸಿರುವ ಏಕೈಕ ಪದಕ.

ಜಾಗತಿಕ ಅಥ್ಲೆಟಿಕ್ಸ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿರುವುದು ಭಾರತದ ಈವರೆಗಿನ ಸಾಧನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News