ಗಾಂಧೀಜಿಯನ್ನು ಕಾಣುವ ಭಾಗ್ಯ ಪುತ್ತೂರಿಗೂ ಲಭಿಸಿದ್ದು ಇತಿಹಾಸ

Update: 2017-08-14 18:43 GMT

ಗಾಂಧೀಜಿ ಅವರನ್ನು ಕಾಣುವ ಭಾಗ್ಯ ಪುತ್ತೂರಿಗೂ ಲಭಿಸಿದ್ದು ಇತಿಹಾಸದ ನೆನಪುಗಳಲ್ಲೊಂದು. ಗಾಂಧೀಜಿ ಅವರು 1934 ಫೆ 24ರಂದು ಪುತ್ತೂರಿಗೆ ಬಂದಿದ್ದರು. ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡ ಕಾಲವಾಗಿದ್ದ 1934ರಲ್ಲಿ ಮಹಾತ್ಮ ಗಾಂಧೀಜಿ ಪುತ್ತೂರಿಗೆ ಭೇಟಿ ನೀಡಿದ್ದು, ಗಾಂಧೀಜಿ ಭೇಟಿಯಿಂದ ಪುತ್ತೂರಿನಲ್ಲಿ ಹಲವು ಪರಿವರ್ತನೆಗಳಾಗಿತ್ತು ಎಂಬುದನ್ನು ಇಲ್ಲಿನ ಹಿರಿಯರು ಹೇಳುತ್ತಾರೆ.

1934 ರ ಫೆಬ್ರವರಿ 24 ರಂದು ಮಡಿಕೇರಿಯಿಂದ ಸುಳ್ಯ ದಾರಿಯಾಗಿ ಮಹಾತ್ಮ ಗಾಂಧೀಜಿ ಪುತ್ತೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಗಾಂಧಿವಾದಿಗಳಾಗಿದ್ದ ಡಾ. ಶಿವರಾಮ ಕಾರಂತ, ಡಾ.ಸುಂದರರಾವ್, ಎಂ. ಸದಾಶಿವ ರಾವ್ ಅವರು ಗಾಂಧೀಜಿಯನ್ನು ಪುತ್ತೂರಿನಲ್ಲಿ ಸ್ವಾಗತಿಸಿದ್ದರು.

ಮಹಾತ್ಮ ಗಾಂಧೀಜಿ ಅವರು ಅಸ್ಪಶ್ಯತಾ ನಿವಾರಣೆ, ದಲಿತೋದ್ಧಾರ ಹಾಗೂ ಬಿಹಾರದ ಭೂಕಂಪ ಸಂತ್ರಸ್ತರ ಸಹಾಯಕ್ಕಾಗಿ ಕೈಗೊಂಡ ಯಾತ್ರೆ ಹಳ್ಳಿ-ಹಳ್ಳಿಗೂ ಕಾಲಿಟ್ಟಿತ್ತು. ಕ್ವಿಟ್ ಇಂಡಿಯಾದಂತೆ ಅದೊಂದು ಸ್ವಾತಂತ್ರ್ಯಕೋಸ್ಕರ ಹಮ್ಮಿಕೊಂಡ ಚಳವಳಿಯಾಗಿತ್ತು. ಈ ಯಾತ್ರೆಯಲ್ಲಿ ಮಹಾತ್ಮ ಗಾಂಧೀಜಿ ಅವರು ಮಡಿಕೇರಿಯಿಂದ ಸುಳ್ಯದ ಮೂಲಕ ಪುತ್ತೂರಿಗೆ ಆಗಮಿಸಿ ಬಳಿಕ ಮಂಗಳೂರಿಗೆ ತೆರಳಿದ್ದರು.

ಪುತ್ತೂರಿಗೆ ಆಗಮಿಸಿದ್ದ ಗಾಂಧೀಜಿ ಇಲ್ಲಿನ ಕೋರ್ಟು ರಸ್ತೆಯಲ್ಲಿರುವ ಡಾ. ಸುಂದರ್ ರಾವ್ ಅವರ ಮನೆಗೆ ತೆರಳಿ ಅಲ್ಲಿ ಸರಳ ಉಪಾಹಾರ ಸೇವಿಸಿ ಸ್ವಲ್ಪವಿಶ್ರಾಂತಿ ಪಡೆದು ಬಳಿಕ ನಗರದ ಹೊರ ಪ್ರದೇಶದಲ್ಲಿರುವ ರಾಗಿದಕುಮೇರಿ ದಲಿತ ಕಾಲನಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲನೆ ಮಾಡಿದ್ದರು. ರಾಗಿದ ಕುಮೇರು ಕಾಲನಿಯ ದಲಿತರು ಆ ಸಂದರ್ಭದಲ್ಲಿ ಕುಡಿಯಲು ಇಲ್ಲಿನ ತೋಡಿನ ನೀರನ್ನು ಬಳಸುತ್ತಿದ್ದರಂತೆ. ಇದನ್ನು ಅರಿತ ಗಾಂಧೀಜಿ ಅವರಿಗೊಂದು ಬಾವಿಯನ್ನು ತೋಡಿಸುವಂತೆ ತನ್ನ ಸಂಗಾತಿಗಳಿಗೆ ತಿಳಿಸಿದ್ದರು. ಅದರಂತೆ ಇಲ್ಲೊಂದು ಬಾವಿ ನಿರ್ಮಿಸಲಾಗಿತ್ತು. ಈ ಬಾವಿ ಈಗಲೂ ಇಲ್ಲಿದೆ. ಅಲ್ಲದೆ ಕಾಲನಿ ಮಕ್ಕಳಿಗೆ ಕಲಿಯಲು ಅವಕಾಶವಾಗುವಂತೆ ಶಾಲೆಯನ್ನು ಪ್ರಾರಂಭಿಸುವಂತೆ ಸೂಚನೆ ನೀಡಿದ್ದರು. ಅದರಂತೆ ರಾಗಿದಕುಮೇರು ಶಾಲೆಯನ್ನು ಆರಂಭಿಸಲಾಯಿತು ಎಂದು ಹಿರಿಯರಾದ ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ಹೇಳುತ್ತಾರೆ.

ಸಾಹಿತಿ ಡಾ. ಶಿವರಾಮ ಕಾರಂತ ಅವರನ್ನು ತಿಳಿದಿದ್ದ ಗಾಂಧೀಜಿ, ಅದೇ ಪರಿಚಯದೊಂದಿಗೆ ಡಾ.ಶಿವರಾಮ ಕಾರಂತರ ಬಾವ, ಡಾ.ಸುಂದರ ರಾವ್ ಅವರ ಮನೆಗೆ ವಿಶ್ರಾಂತಿಗೆ ಬಂದಿದ್ದರು ಎನ್ನುತ್ತಾರೆ.

ಆ ಸಂದರ್ಭದಲ್ಲಿ ಸಹೋದರ ಪ್ರಸಿದ್ಧ ನ್ಯಾಯವಾದಿ ಎಂ. ಸದಾಶಿವ ರಾವ್ ಕೂಡ ಗಾಂಧೀಜಿ ಅವರನ್ನು ಸ್ವಾಗತಿಸಿದ ತಂಡದಲ್ಲಿದ್ದರಂತೆ. ಡಾ. ಸುಂದರ್ ರಾವ್ ಅವರ ಮನೆಯಲ್ಲಿ ರಾಗಿಮುದ್ದೆ, ಮಜ್ಜಿಗೆ ಮಾತ್ರ ಗಾಂಧೀಜಿ ಸೇವಿಸಿದ್ದರಂತೆ. ಕಾಲನಿ, ಗಾಂಧಿಕಟ್ಟೆಗೆ ಭೇಟಿ ನೀಡಿ, ಆನಂತರ ಪುನಃ ಮನೆಗೆ ಮರಳಿ ಗಾಂಧೀಜಿ ವಿಶ್ರಮಿಸಿದ್ದರು. ಡಾ. ಸುಂದರ್ ರಾವ್ ಅವರ ಮನೆಯೊಳಗೆ ಸಣ್ಣ ಹಾಲ್‌ನ ಬೆಂಚ್‌ನಲ್ಲಿ ಕುಳಿತು, ಮರದ ಟೇಬಲ್ ಮೇಲೆ ವಿರಮಿಸಿದ್ದರಂತೆ. ಬಳಿಕ ಶಿವರಾಮ ಕಾರಂತ, ಡಾ.ಸುಂದರರಾವ್, ಸದಾಶಿವ ರಾವ್ ಮೊದಲಾದವರ ಜತೆ ಹತ್ತಿರದಲ್ಲಿ ಇರುವ ದಲಿತ ಕಾಲನಿ ಬಗ್ಗೆ ಕೇಳಿ ತಿಳಿದುಕೊಂಡಿದ್ದರು. ಆನಂತರ ರಾಗಿದಕುಮೇರು ಕಾಲನಿಗೆ ತೆರಳಿ ಅಲ್ಲಿನ ಜನರ ಕ್ಷೇಮ ವಿಚಾರಿಸಿದ್ದರು. ಈ ಕಾಲನಿ ಬಗ್ಗೆ ನಿರ್ಲಕ್ಷ ತೋರದೆ, ಎಲ್ಲಾ ಸೌಲಭ್ಯ ಕಲ್ಪಿಸುವಂತೆ ಅವರು ತಿಳಿಸಿದ್ದರು.

ಅಲ್ಲಿಂದ ಬಂದ ಗಾಂಧೀಜಿ ಈಗಿನ ಗಾಂಧಿಕಟ್ಟೆ ಬಳಿ ಬಂದು ಕೆಲ ಕಾಲ ಧ್ಯಾನ ಮಾಡಿದ್ದರು. 4,000 ಜನರನ್ನು ಉದ್ದೇಶಿಸಿ ಅಲ್ಲಿ ಭಾಷಣ ಮಾಡಿದ್ದರು. ಅದರ ನೆನಪಿಗಾಗಿ ಗಾಂಧಿಕಟ್ಟೆಯೊಂದನ್ನು ಗಾಂಧಿ ಕಟ್ಟೆ ಸಮಿತಿಯವರು ನಿರ್ಮಿಸಿದ್ದು ಪ್ರತೀ ವರ್ಷ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಾಂಧಿ ಜಯಂತಿಯ ಸಂದರ್ಭದಲ್ಲಿ ಗಾಂಧಿ ಕಟ್ಟೆಯಲ್ಲಿ ನಿರ್ಮಿಸಲಾದ ಗಾಂಧೀಜಿ ಪ್ರತಿಮೆಗೆ ಮಾರ್ಲಾಪಣೆ ಮಾಡಲಾಗುತ್ತದೆ.

Writer - -ಶಂಸುದ್ದೀನ್ ಪುತ್ತೂರು

contributor

Editor - -ಶಂಸುದ್ದೀನ್ ಪುತ್ತೂರು

contributor

Similar News