ಯಾವುದೇ ಸವಾಲು ಎದುರಿಸಲು ಭಾರತ ಸಮರ್ಥವಾಗಿದೆ: ಪ್ರಧಾನಿ

Update: 2017-08-15 12:48 GMT

ಹೊಸದಿಲ್ಲಿ,ಆ.15: ಡೋಕ್ಲಾಮ್‌ನಲ್ಲಿ ಚೀನಾದೊಂದಿಗಿನ ಗಡಿ ಬಿಕ್ಕಟ್ಟಿನ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಸಮುದ್ರ ಅಥವಾ ಭೂಪ್ರದೇಶದ ಗಡಿಯಾಗಿರಲಿ, ಯಾವುದೇ ರೀತಿಯ ಭದ್ರತಾ ಸವಾಲನ್ನೆದುರಿಸಲು ಭಾರತವು ಸಮರ್ಥವಾಗಿದೆ ಎಂದು ಇಂದಿಲ್ಲಿ ಪುನರುಚ್ಚರಿಸಿದರು.

ದೇಶದ ಭದ್ರತೆಯು ತನ್ನ ಸರಕಾರದ ಆದ್ಯತೆಯಾಗಿದೆ ಮತ್ತು ಗಡಿಗಳ ರಕ್ಷಣೆಗಾಗಿ ಯೋಧರನ್ನು ನಿಯೋಜಿಸಲಾಗಿದೆ ಎಂದು ಚೀನಾ ಅಥವಾ ಡೋಕ್ಲಾಮ್ ಬಿಕ್ಕಟ್ಟನ್ನು ಹೆಸರಿಸದೆ ಅವರು ಹೇಳಿದರು. ಮಂಗಳವಾರ ಇಲ್ಲಿಯ ಐತಿಹಾಸಿಕ ಕೆಂಪುಕೋಟೆಯಿಂದ ಸ್ವಾತಂತ್ರೋತ್ಸವ ಭಾಷಣ ಮಾಡಿದ ಮೋದಿ, ಕಳೆದ ವರ್ಷ ಪಾಕ್ ಆಕ್ರಮಿತ ಕಾಶ್ಮೀರದಲ್ಲಿಯ ಭಯೋತ್ಪಾದಕರ ಶಿಬಿರಗಳ ಮೇಲೆ ನಡೆಸಿದ್ದ ಸರ್ಜಿಕಲ್ ದಾಳಿಗಳನ್ನು ಪ್ರಸ್ತಾಪಿಸಿ, ಭಾರತದ ಸಶಸ್ತ್ರ ಪಡೆಗಳ ತಾಕತ್ತು ಈಗ ಇಡೀ ವಿಶ್ವಕ್ಕೆ ಗೊತ್ತಾಗಿದೆ ಎಂದರು.

ನಮ್ಮ ದೇಶದ ಭದ್ರತೆ ನಮ್ಮ ಆದ್ಯತೆಯಾಗಿದೆ ಎನ್ನುವುದು ಸ್ಪಷ್ಟವಿದೆ. ಆಂತರಿಕ ಭದ್ರತೆಯು ನಮ್ಮ ಆದ್ಯತೆಯಾಗಿದೆ. ಸಮುದ್ರವಾಗಲಿ ಅಥವಾ ಭೂ ಗಡಿಯಾಗಿರಲಿ, ಸೈಬರ್ ಅಥವಾ ಬಾಹ್ಯಾಕಾಶವಾಗಿರಲಿ.....ಯಾವುದೇ ಭದ್ರತಾ ಸವಾಲನ್ನು ಎದುರಿಸಲು ಭಾರತವು ಸಮರ್ಥವಾಗಿದೆ ಎಂದು ಅವರು ಹೇಳಿದರು.

ನಮ್ಮ ಸಶಸ್ತ್ರ ಪಡೆಗಳು ಅಗತ್ಯವಿದ್ದಾಗಲೆಲ್ಲ ತಮ್ಮ ಸಾಮರ್ಥ್ಯ ಮತ್ತು ಎದೆಗಾರಿಕೆಯನ್ನು ಮೆರೆದಿವೆ. ನಮ್ಮ ಯುದ್ಧಹೀರೊಗಳೆಂದೂ ತ್ಯಾಗದಿಂದ ಹಿಂಜರಿದಿಲ್ಲ ಎಂದು ಪ್ರಶಂಸಿಸಿದ ಮೋದಿ, ಎಡಪಂಥೀಯ ಉಗ್ರವಾದ, ಭಯೋತ್ಪಾದನೆ, ನುಸುಳುವಿಕೆ ಅಥವಾ ದೇಶದೊಳಗೆ ತೊಂದರೆಗಳನ್ನು ಸೃಷ್ಟಿಸುವ ದುಷ್ಟಶಕ್ತಿಗಳು.....ಹೀಗೆ ದೇಶವು ಎದುರಿಸುತ್ತಿರುವ ಯಾವುದೇ ಸವಾಲುಗಳನ್ನು ಎದುರಿಸಲು ಸಮವಸ್ತ್ರದಲ್ಲಿಯ ಸಿಬ್ಬಂದಿಗಳು ಸದಾ ಸನ್ನದ್ಧರಾಗಿದ್ದಾರೆ ಎಂದರು.

ಭೀತಿವಾದ ಅಥವಾ ಭಯೋತ್ಪಾದಕರ ಕುರಿತು ಮೃದು ನಿಲುವು ತಳೆಯುವ ಪ್ರಶ್ನೆಯೇ ಇಲ್ಲ ಎಂದ ಅವರು, ದೇಶವನ್ನು ಈ ಪಿಡುಗಿನಿಂದ ಮುಕ್ತಗೊಳಿಸಲು ಸರಕಾರವು ದೃಢ ರ್ಧಾರವನ್ನು ಮಾಡಿದೆ ಎಂದರು. ಸರಕಾರವು ಭಯೋತ್ಪಾದಕರಿಗೆ ದೇಶದ ಮುಖ್ಯವಾಹಿನಿಯನ್ನು ಸೇರಲು ಅವಕಾಶವನ್ನು ನೀಡಿದೆ ಎಂದು ಇದೇ ವೇಳೆ ಅವರು ತಿಳಿಸಿದರು.

ಭೀತಿವಾದದ ವಿರುದ್ಧ ತನ್ನ ಹೋರಾಟದಲ್ಲಿ ಭಾರತ ಏಕಾಂಗಿಯಾಗಿಲ್ಲ. ಇತರ ಹಲವಾರು ರಾಷ್ಟ್ರಗಳು ನಮಗೆ ಸಕ್ರಿಯ ನೆರವನ್ನು ನೀಡುತ್ತಿವೆ. ಹವಾಲಾ ವಹಿವಾಟು ನಡೆದರೆ ನಮಗೆ ಜಗತ್ತು ಮಾಹಿತಿ ನೀಡುತ್ತಿದೆ, ಅದು ಭಯೋತ್ಪಾದಕರ ಚಲನವಲನಗಳ ವಿವರವನ್ನು ನಮಗೆ ನೀಡುತ್ತಿದೆ ಎಂದ ಅವರು, ಈ ಎಲ್ಲ ರಾಷ್ಟ್ರಗಳಿಗೆ ನಾವು ಆಭಾರಿಗಳಾಗಿದ್ದೇವೆ. ಒಟ್ಟಾರೆ ಶಾಂತಿ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳಲು ಈ ಸಹಕಾರವು ನಮಗೆ ನೆರವಾಗುತ್ತಿದೆ ಎಂದರು.

ಭದ್ರತಾ ಪಡೆಗಳ ಪ್ರಯತ್ನಗಳಿಂದಾಗಿ, ವಿಶೇಷವಾಗಿ ನಕ್ಸಲ್ ಪ್ರಾಬಲ್ಯದ ಪ್ರದೇಶ ಗಳಲ್ಲಿ ಬಹಳಷ್ಟು ಯುವಜನರು ಶರಣಾಗಿದ್ದಾರೆ ಮತ್ತು ಮುಖ್ಯವಾಹಿನಿಗೆ ಮರಳುವ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಮೋದಿ ನುಡಿದರು.

ದೇಶಕ್ಕೆ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿರುವ ಭದ್ರತಾ ಸಿಬ್ಬಂದಿಗಳ ಮಾಹಿತಿಗಳನ್ನೊದಗಿಸಲು ವೆಬ್‌ಸೈಟ್‌ವೊಂದನ್ನು ಆರಂಭಿಸಲಾಗುತ್ತಿದೆ ಎಂದ ಅವರು, ಕಳೆದ 30-40 ವರ್ಷಗಳಿಂದಲೂ ‘ಸಮಾನ ದರ್ಜೆ ಸಮಾನ ಪಿಂಂಚಣಿ’ ವಿಷಯವು ನನೆಗುದಿಯಲ್ಲಿತ್ತು ಮತ್ತು ತನ್ನ ಸರಕಾರವು ಅದನ್ನು ಇತ್ಯರ್ಥಗೊಳಿಸಿದೆ. ಸರಕಾರವು ಸಶಸ್ತ್ರ ಪಡೆಗಳ ಬೇಡಿಕೆಗಳನ್ನು ಈಡೇರಿಸಿದಾಗ, ಅವರ ಬಯಕೆಗಳಿಗೆ ಕಿವಿಯಾದಾಗ ದೇಶಕ್ಕಾಗಿ ತ್ಯಾಗ ಮಾಡುವ ಅವರ ನಿರ್ಧಾರವು ಇನ್ನಷ್ಟು ಬಲಗೊಳ್ಳುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News