ಲಂಕಾ ವಿರುದ್ಧ ಟೆಸ್ಟ್‌ ಸರಣಿ: ಭಾರತದ ಆಟಗಾರರ ಸಾಧನೆ

Update: 2017-08-15 18:45 GMT

ಹೊಸದಿಲ್ಲಿ, ಆ.15: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಅಂತರದಿಂದ ಜಯ ಸಾಧಿಸಿರುವ ಭಾರತ ಐತಿಹಾಸಿಕ ಸಾಧನೆ ಮಾಡಿತ್ತು. ವಿದೇಶಿ ನೆಲದಲ್ಲಿ ಮೊದಲ ಬಾರಿ ಕ್ಲೀನ್‌ಸ್ವೀಪ್ ಸಾಧಿಸಿದ್ದ ಭಾರತ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಸತತ 8ನೆ ಟೆಸ್ಟ್ ಸರಣಿಯನ್ನು ಜಯಿಸಿತ್ತು. ಸರಣಿಯಲ್ಲಿ ಆಟಗಾರರ ಸಾಧನೆಯ ಹಿನ್ನೋಟ ಇಲ್ಲಿದೆ...

►ಶಿಖರ್ ಧವನ್(3 ಟೆಸ್ಟ್, 359 ರನ್, 2 ಶತಕ): ಮೊದಲ ಟೆಸ್ಟ್‌ನಲ್ಲಿ ಲಭಿಸಿದ ಜೀವದಾನ ಲಾಭ ಪಡೆದಿದ್ದ ಧವನ್ ಜೀವನಶ್ರೇಷ್ಠ 190 ರನ್ ಗಳಿಸಿದ್ದರು. 3ನೆ ಟೆಸ್ಟ್ ನಲ್ಲಿ 119 ರನ್ ಗಳಿಸಿದ್ದರು. ಸರಣಿಯಲ್ಲಿ ಗರಿಷ್ಠ ಸ್ಕೋರ್ ಗಳಿಸಿರುವ ಧವನ್ ಆರಂಭಿಕ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

►ಚೇತೇಶ್ವರ ಪೂಜಾರ(3 ಟೆಸ್ಟ್, 309 ರನ್, 2 ಶತಕ): 2017ರಲ್ಲೂ ತನ್ನ ಶ್ರೇಷ್ಠ ಫಾರ್ಮ್ ಕಾಯ್ದುಕೊಂಡಿರುವ ಪೂಜಾರ ಸರಣಿಯ ಮೊದಲೆರಡು ಟೆಸ್ಟ್‌ಗಳಲ್ಲಿ ಶತಕ ದಾಖಲಿಸಿದ್ದರು. ಮೊದಲ ಟೆಸ್ಟ್‌ನಲ್ಲಿ 153 ರನ್ ಗಳಿಸಿದ್ದ ಪೂಜಾರ 2ನೆ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆಯೊಂದಿಗೆ ನಿರ್ಣಾಯಕ ಜೊತೆಯಾಟ ನಡೆಸಿದ್ದರು.

►ಹಾರ್ದಿಕ್ ಪಾಂಡ್ಯ(3 ಟೆಸ್ಟ್, 178 ರನ್, 1 ಶತಕ, 1 ಅರ್ಧಶತಕ, 4 ವಿಕೆಟ್): ಟೆಸ್ಟ್‌ನಲ್ಲಿ ಆಡಿರುವ ತನ್ನ ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಹಾಗೂ 3ನೆ ಇನಿಂಗ್ ್ಸನಲ್ಲಿ ಮಿಂಚಿನ ಶತಕದ ದಾಖಲೆ ಬರೆದಿದ್ದ ಪಾಂಡ್ಯ ಭಾರತದ ಹೊಸ ಆಲ್‌ರೌಂಡರ್ ಆಗಿ ಹೊರಹೊಮ್ಮಿದ್ದಾರೆ. ರವೀಂದ್ರ ಜಡೇಜ(2 ಟೆಸ್ಟ್, 13 ವಿಕೆಟ್, 85 ರನ್): ಟೆಸ್ಟ್‌ನಲ್ಲಿ ವೇಗವಾಗಿ 150 ವಿಕೆಟ್ ಪೂರೈಸಿದ ಮೊದಲ ಎಡಗೈ ಸ್ಪಿನ್ನರ್ ಎನಿಸಿಕೊಂಡಿದ್ದ ಜಡೇಜ 2ನೆ ಟೆಸ್ಟ್ ನ 2ನೆ ಇನಿಂಗ್ಸ್‌ನಲ್ಲಿ 5 ವಿಕೆಟ್ ಗೊಂಚಲು ಕಬಳಿಸಿ ತಂಡಕ್ಕೆ ಸರಣಿ ಜಯ ತಂದುಕೊಟ್ಟಿದ್ದರು. ಅದೇ ಪಂದ್ಯದಲ್ಲಿ ಒಟ್ಟು 7 ವಿಕೆಟ್,ಅಜೇಯ 70 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಮೊದಲ ಟೆಸ್ಟ್‌ನಲ್ಲಿ 6 ವಿಕೆಟ್ ಪಡೆದಿದ್ದ ಜಡೇಜ ಐಸಿಸಿಯಿಂದ 1 ಪಂದ್ಯ ನಿಷೇಧಕ್ಕೊಳಗಾದ ಕಾರಣ 3ನೆ ಟೆಸ್ಟ್ ನಲ್ಲಿ ಆಡಲಿಲ್ಲ.

►ಆರ್.ಅಶ್ವಿನ್(3 ಟೆಸ್ಟ್, 17 ವಿಕೆಟ್, 132 ರನ್): ಬೌಲಿಂಗ್‌ನಲ್ಲಿ ಮಿಂಚಿದ್ದ ಚೆನ್ನೈ ಬೌಲರ್ ಅಶ್ವಿನ್ ಬ್ಯಾಟಿಂಗ್‌ನಲ್ಲೂ ತನ್ನ ಶಕ್ತಿ ಪ್ರದರ್ಶಿಸಿದ್ದರು. ಮೊದಲ ಟೆಸ್ಟ್ ನಲ್ಲಿ 47 ರನ್ ಗಳಿಸಿದ್ದ ಅಶ್ವಿನ್ 2ನೆ ಟೆಸ್ಟ್‌ನಲ್ಲಿ 51, 3ನೆ ಟೆಸ್ಟ್‌ನಲ್ಲಿ 31 ರನ್ ಗಳಿಸಿದ್ದರು.

►ಅಜಿಂಕ್ಯ ರಹಾನೆ(3 ಟೆಸ್ಟ್, 229 ರನ್, 1 ಶತಕ, 1 ಅರ್ಧಶತಕ): ಎರಡನೆ ಟೆಸ್ಟ್‌ನಲ್ಲಿ 132 ರನ್ ಗಳಿಸಿದ್ದ ರಹಾನೆ 4ನೆ ವಿಕೆಟ್‌ಗೆ ಪೂಜಾರ ಜೊತೆಗೂಡಿ 217 ರನ್ ಸೇರಿಸಿ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದ್ದರು.

►ಮುಹಮ್ಮದ್ ಶಮಿ(3 ಟೆಸ್ಟ್, 10 ವಿಕೆಟ್): ವೇಗ ಹಾಗೂ ನಿಖರವಾಗಿ ಬೌಲಿಂಗ್ ಮಾಡಿದ್ದ ಶಮಿ ನಾಯಕ ವಿರಾಟ್ ಕೊಹ್ಲಿ ಶ್ಲಾಘನೆಗೆ ಒಳಗಾಗಿದ್ದರು. ಶ್ರೀಲಂಕಾದ ಅಗ್ರ ಸರದಿ ದಾಂಡಿಗರಿಗೆ ಸಿಂಹಸ್ವಪ್ನರಾಗಿದ್ದ ಶಮಿ ಭಾರತಕ್ಕೆ ಆರಂಭದಲ್ಲೇ ಮೇಲುಗೈ ಒದಗಿಸಿದ್ದರು.

►ವೃದ್ಧಿಮಾನ್ ಸಹಾ(3 ಟೆಸ್ಟ್, 99 ರನ್): ಸಹಾ ವಿಕೆಟ್‌ಕೀಪಿಂಗ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಸರಣಿಯಲ್ಲಿ ಒಂದು ಬಾರಿ ಅರ್ಧಶತಕ ಬಾರಿಸಿದ್ದ ಸಹಾ ಬಾಲಂಗೋಚಿಗಳ ಜೊತೆಗೂಡಿ ಭಾರತ 2ನೆ ಟೆಸ್ಟ್‌ನಲ್ಲಿ 9ಕ್ಕೆ 622 ರನ್ ಗಳಿಸಲು ನೆರವಾಗಿದ್ದರು. 2ನೆ ಟೆಸ್ಟ್‌ನ 2ನೆ ಇನಿಂಗ್ಸ್‌ನ 116.5 ಓವರ್‌ಗಳಲ್ಲಿ ಒಂದೂ ಬೈ ನೀಡದೇ ಗಮನಸೆಳೆದಿದ್ದರು.

►ಕೆ.ಎಲ್. ರಾಹುಲ್(2 ಟೆಸ್ಟ್, 142 ರನ್, 2 ಅರ್ಧಶತಕ):ಸತತ 6ನೆ ಬಾರಿ 50 ರನ್ ಗಳಿಸಿದ ಭಾರತದ ಮೊದಲ ಆರಂಭಿಕ ಆಟಗಾರನೆಂಬ ಹೆಗ್ಗಳಿಕೆಯೊಂದಿಗೆ ಭಾರತ ತಂಡಕ್ಕೆ ವಾಪಸಾಗಿದ್ದ ರಾಹುಲ್ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಮಾರ್ಚ್ ನಂತರ ಮೊದಲ ಬಾರಿ ಟೆಸ್ಟ್ ಪಂದ್ಯ ಆಡಿದ್ದ ಅವರು ಸರಣಿಯ 2ನೆ ಟೆಸ್ಟ್‌ನಲ್ಲಿ 57 ರನ್ ಗಳಿಸಿದ್ದರು. 3ನೆ ಟೆಸ್ಟ್‌ನಲ್ಲಿ 85 ರನ್ ಗಳಿಸಿದ್ದ ಅವರು 2 ಇನಿಂಗ್ಸ್‌ಗಳಲ್ಲಿ 2 ಅರ್ಧಶತಕ ಬಾರಿಸಿದ್ದರು.

►ವಿರಾಟ್ ಕೊಹ್ಲಿ(3 ಟೆಸ್ಟ್, 161 ರನ್, 1 ಶತಕ): ಮೊದಲ ಟೆಸ್ಟ್‌ನ 2ನೆ ಇನಿಂಗ್ಸ್‌ನಲ್ಲಿ 103 ರನ್ ಗಳಿಸಿದ್ದ ನಾಯಕ ಕೊಹ್ಲಿ ಸರಣಿಯಲ್ಲಿ ತನ್ನ ಚಾಣಾಕ್ಷ ನಾಯಕತ್ವದಿಂದ ಶ್ರೀಲಂಕಾ ಆಟಗಾರರಿಗೆ ಸವಾಲಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News