×
Ad

ಮೋದಿ ಪ್ರಜಾಪ್ರಭುತ್ವದ ಪ್ರತಿನಿಧಿಯಲ್ಲ:ಮಲ್ಲಿಕಾರ್ಜುನ ಖರ್ಗೆ

Update: 2017-08-16 23:51 IST

ಬೆಂಗಳೂರು, ಆ.16: ದೇಶದ ಬಲಿಷ್ಠ ಸಂವಿಧಾನದಿಂದಾಗಿ ಪ್ರಜಾಪ್ರಭುತ್ವ ಉಳಿದಿದೆ. ಪ್ರಧಾನಿ ನರೇಂದ್ರ ಮೋದಿ ಒಬ್ಬ ಹಿಟ್ಲರ್, ಪ್ರಜಾಪ್ರಭುತ್ವದ ಪ್ರತಿನಿಧಿಯಲ್ಲ. ಅವರ ಎದುರು ಸಂಸದರು ಮಾತನಾಡುವಂತಿಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ

ಬುಧವಾರ ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಸಾರ್ಥಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ. ಮಾಧ್ಯಮಗಳು ಹಾಗೂ ಅಧಿಕಾರಿಗಳನ್ನು ನಿಯಂತ್ರಣದಲ್ಲಿಡಲಾಗುತ್ತಿದೆ ಎಂದರು.

70 ವರ್ಷಗಳಲ್ಲಿ ಏನು ಮಾಡಿದ್ದೀರಾ ಎಂದು ನಮ್ಮನ್ನು ಪದೇ ಪದೇ ನರೇಂದ್ರ ಮೋದಿ ಕೇಳುತ್ತಾರೆ. ನಾವು 70 ವರ್ಷಗಳಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡದೆ ಇದ್ದಿದ್ದರೆ, ಮೋದಿ ಪ್ರಧಾನಿಯಾಗುತ್ತಿರಲಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು.

ನರೇಂದ್ರಮೋದಿ ಬಾಯಿಯಲ್ಲಿ ಜವಾಹರ್‌ಲಾಲ್ ನೆಹರು, ಲಾಲ್‌ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿಯವರ ಹೆಸರುಗಳೇ ಬರುವುದಿಲ್ಲ. ಕೇವಲ ಆರೆಸೆಸ್ಸ್ ಮುಖಂಡರ ಹೆಸರುಗಳು ಮಾತ್ರ ಬರುತ್ತವೆ. ರಾಜಕೀಯ ಉದ್ದೇಶಕ್ಕಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರನ್ನು ಮಾತ್ರ ಉಲ್ಲೇಖಿಸುತ್ತಾರೆ ಎಂದು ಅವರು ಟೀಕಿಸಿದರು.

ಸಂಘಪರಿವಾರದ ಕಾರ್ಯಕರ್ತರು ಗೋ ರಕ್ಷಣೆಯ ಹೆಸರಿನಲ್ಲಿ ಅಲ್ಪಸಂಖ್ಯಾತರು, ಬಡವರು, ದಲಿತರ ಮೇಲೆ ಗುಂಪು ದಾಳಿಗಳನ್ನು ನಡೆಸುತ್ತಿದ್ದಾರೆ. ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ, ಗುಜರಾತ್‌ನ ಪ್ರವಾಹ ಸಂತ್ರಸ್ಥರನ್ನು ಭೇಟಿ ಮಾಡಲು ಹೋದರೆ ಬಿಜೆಪಿಯ ಗೂಂಡಾಗಳು ಕಲ್ಲಿನ ದಾಳಿ ನಡೆಸುತ್ತಾರೆ. ಎಸ್‌ಪಿಜಿ, ಝಡ್ ಪ್ಲಸ್ ಶ್ರೇಣಿಯ ಭದ್ರತೆ ಇರುವವರ ಪರಿಸ್ಥಿತಿಯೇ ಹೀಗಾದರೆ, ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಅವರು ಪ್ರಶ್ನಿಸಿದರು.

ರಾಜ್ಯಸಭೆ ಚುನಾವಣೆಯಲ್ಲಿ ಅಹ್ಮದ್‌ಪಟೇಲ್‌ರನ್ನು ಸೋಲಿಸಲು ಮೋದಿಯ ಸೂಚನೆಯಂತೆ ಕೇಂದ್ರ ಸರಕಾರದ ಐದು ಜನ ಸಚಿವರು ಚುನಾವಣಾ ಆಯೋಗದ ಕಚೇರಿ ಎದುರು ಹಠ ಹಿಡಿದು ಕೂರುತ್ತಾರೆ. ಭಾರತ ಹಾಗೂ ಭೂತಾನ್ ಗಡಿಯಲ್ಲಿ ಚೀನಾ ಸೈನ್ಯ ಬಂದು ನೆಲೆಯೂರಿದೆ. ಈ ಸಚಿವರು ತಮ್ಮ ಶಕ್ತಿ ಸಾಮರ್ಥ್ಯವನ್ನು ಆ ಸಮಸ್ಯೆ ಬಗೆಹರಿಸಲು ವಿನಿಯೋಗಿಸಬೇಕಿತ್ತು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುವ ಕೇಂದ್ರ ಸರಕಾರ, ಕೈಗಾರಿಕೋದ್ಯಮಿಗಳ ಸಾವಿರಾರು ಕೋಟಿ ರೂ.ಸಾಲವನ್ನು ಮನ್ನಾ ಮಾಡಿದೆ. ಅವರಿಗೆ ಬಡವರು, ರೈತರು ಕಾಣುತ್ತಿಲ್ಲ. ಜನಸಾಮಾನ್ಯರ ವಿರೋಧಿಯಾಗಿರುವ ಈ ಕೇಂದ್ರ ಸರಕಾರವನ್ನು ಕಿತ್ತೊಗೆಯಬೇಕಿದೆ ಎಂದು ುಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.

ಕಳೆದ ಮೂರು ವರ್ಷಗಳಲ್ಲಿ ಮೋದಿ ನೇತೃತ್ವದ ಸರಕಾರ ಏನು ಮಾಡಿಲ್ಲ. ಹಳೆ ಯೋಜನೆಗಳಿಗೆ ಹೊಸ ಹೆಸರುಗಳನ್ನಿಟ್ಟು ನಮ್ಮದು ಎಂದು ಬಿಂಬಿಸಿಕೊಳ್ಳುತ್ತಿದೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎನ್ನುತ್ತಾರೆ. ಆದರೆ, ಬಿಜೆಪಿ ಹಾಗೂ ಆರೆಸೆಸ್ಸ್‌ನವರ ವಿಕಾಸವಾಗಿದೆಯೆ ಹೊರತು, ದೇಶದ ಬಡವರು, ಸಾಮಾನ್ಯ ಜನರ ವಿಕಾಸವಾಗಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News