×
Ad

ಆ.20ರಿಂದ ವಚನ ಸಾಹಿತ್ಯ, ಸಾಂಸ್ಕೃತಿಕ ಸಮ್ಮೇಳನ

Update: 2017-08-17 19:08 IST

ಬೆಂಗಳೂರು, ಆ.17: ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನಿಂದ 5 ನೆ ಅಖಿಲ ಭಾರತ ಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನವನ್ನು ಆ.20 ಮತ್ತು 21 ರಂದು ನೆಲಮಂಗಲದ ಜಯದೇವ ಆಸ್ಪತ್ರೆ ರಸ್ತೆಯಲ್ಲಿರುವ ಜಯದೇವ ವೀರಶೈವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ತಿನ ಅಧ್ಯಕ್ಷ ಎನ್.ತಿಮ್ಮಪ್ಪ, ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಆ.20 ರಂದು ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಧ್ವಜಾರೋಹಣ ಮಾಡಿದ ನಂತರ ಬಸವಣ್ಣದೇವರ ಮಠದಿಂದ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರನ್ನು ಸಭಾ ಮಂಟಪಕ್ಕೆ ಕರೆ ತರಲಾಗುತ್ತದೆ ಎಂದು ಹೇಳಿದರು.

ಸಮ್ಮೇಳನವನ್ನು ಬೆಲ್ಲದಾಳ ಬಸವಯೋಗಾಶ್ರಮದ ಸಿದ್ಧರಾಮ ಶರಣರು ಉದ್ಘಾಟಿಸಲಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್, ಮಾಜಿ ಶಾಸಕ ಇ.ಕೃಷ್ಣಪ್ಪ, ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಮಾರುತಿ ಅವರ ‘ವಚನ ದೀಪ್ತಿ’ ಕವನ ಸಂಕಲನ ಬಿಡುಗಡೆ ಮಾಡಲಾಗುತ್ತದೆ ಎಂದರು.

ಸಮ್ಮೇಳನದಲ್ಲಿ ಮಹಿಳಾ ವಚನ ಚಿಂತನಗೋಷ್ಠಿ, ಸ್ವರಚಿತ ವಚನ ವಾಚನ ಗೋಷ್ಠಿ, ವಚನ ಚಿಂತನಗೋಷ್ಠಿ, ಹೊರನಾಡ ಕನ್ನಡಿಗರ ವಚನ ಚಿಂತನಗೋಷ್ಠಿ ಸೇರಿದಂತೆ ವಿವಿಧ ಗೋಷ್ಠಿಗಳು ನಡೆಯಲಿವೆ. ಆ.21 ರಂದು ಸಮಾರೋಪ ಸಮಾರಂಭ ಹಮ್ಮಿಕೊಂಡಿದ್ದು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ಮಾಜಿ ಮುಖ್ಯಮಂತ್ರಿ ವೀರಪ್ಪಮೊಯಿಲಿ, ಯಡಿಯೂರಪ್ಪ, ಸಚಿವರಾದ ಉಮಾಶ್ರೀ, ಕೃಷ್ಣಭೈರೇಗೌಡ ಸೇರಿ ಇನ್ನಿತರರು ಭಾಗವಹಿಸಲಿದ್ದಾರೆ. ಇದೇ ವೇಳೆ ಸಾಲುಮರದ ನಿಂಗಣ್ಣಗೆ ಸಪರಿಸರ ಸಂರಕ್ಷಕರ ಪ್ರಶಸ್ತಿ, ಶಿವಮೂರ್ತಿ ಮುರುಘಾ ಶರಣರಿಗೆ ‘ಶರಣ ಸಂಸ್ಕೃತಿ ಪ್ರಶಸ್ತಿ’, ಡಾ.ಬಸವಲಿಂಗ ಪಟ್ಟದೇವರಿಗೆ ‘ವಚನಶ್ರೀ-2017 ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News