×
Ad

ಆ.22 ರಂದು ರಾಷ್ಟ್ರಾದ್ಯಂತ ಬ್ಯಾಂಕ್ ನೌಕರರ ಮುಷ್ಕರ

Update: 2017-08-17 19:14 IST

ಬೆಂಗಳೂರು, ಆ.17: ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ ಮತ್ತು ಖಾಸಗೀಕರಣ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆ.22 ರಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ವತಿಯಿಂದ ದೇಶದಾದ್ಯಂತ ಬ್ಯಾಂಕ್ ನೌಕರರ ಮುಷ್ಕರ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಂನ ರಾಜ್ಯ ಸಂಚಾಲಕ ವಸಂತ ರೈ, ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲೀನ ಮಾಡಲಾಗುತ್ತದೆ ಎಂದು ಬ್ಯಾಂಕಿಂಗ್ ಕ್ಷೇತ್ರವನ್ನು ನಾಶ ಮಾಡುವ ವ್ಯವಸ್ಥಿತವಾದ ಹುನ್ನಾರ ಮಾಡಲಾಗುತ್ತಿದೆ. ಅಲ್ಲದೆ, ಬ್ಯಾಂಕ್‌ಗಳನ್ನು ಖಾಸಗೀಕರಣದ ಮೂಲಕ ಮುಚ್ಚಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ರಾಷ್ಟ್ರದ ವಿವಿಧ ಬ್ಯಾಂಕ್‌ಗಳಲ್ಲಿ ಸೇವಾ ಶುಲ್ಕದ ಹೆಸರಿನಲ್ಲಿ ಸಾರ್ವಜನಿಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಕೂಡಲೇ ಆರ್‌ಬಿಐ ಸ್ಪಷ್ಟನೆ ನೀಡಬೇಕು ಹಾಗೂ ಎಲ್ಲ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕು. ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರ ಹಣಕ್ಕೆ ಬಡ್ಡಿ ಕಡಿತ ಮಾಡಲು ಮುಂದಾಗಿರುವುದನ್ನು ಈ ಮುಷ್ಕರದ ಮೂಲಕ ಖಂಡಿಸುತ್ತೇವೆ ಎಂದು ಹೇಳಿದರು.

 ದೇಶದಲ್ಲಿನ ಬಹುತೇಕ ಬ್ಯಾಂಕ್‌ಗಳಿಂದ ಸಾಮಾನ್ಯ ಜನರಿಗೆ ಸಿಗಬೇಕಾದ ಸಾಲ ಸೌಲಭ್ಯಗಳು ಉಳ್ಳವರು ದೋಚಿಕೊಳ್ಳುತ್ತಿದ್ದಾರೆ. ಅಂಬಾನಿ, ಅದಾನಿ, ವಿಜಯ ಮಲ್ಯರಂತಹ ದೊಡ್ಡ ದೊಡ್ಡವರು ಕೋಟ್ಯಂತರ ಸಾಲ ಪಡೆದು ಮರು ಪಾವತಿ ಮಾಡುತ್ತಿಲ್ಲ. ಹೀಗಾಗಿ ಸಾಮಾನ್ಯರು ಸಾಲದಿಂದ ವಂಚಿತರಾಗುತ್ತಿದ್ದಾರೆ. ಭಾರತದಲ್ಲಿ 2 ಲಕ್ಷಕ್ಕಿಂತ ಸಾಲ ಪಡೆದವರ ಸಂಖ್ಯೆ ಕೇವಲ ಶೇ.7 ರಷ್ಟು ಮಾತ್ರ. ಆದರೆ, 10-20 ಕೋಟಿ ರೂ.ಗಳಿಗೂ ಅಧಿಕ ಸಾಲ ಪಡೆದವರ ಸಂಖ್ಯೆ ಶೇ.36 ರಷ್ಟಿದೆ. ಆದುದರಿಂದ ಕೋಟ್ಯಂತರ ಸಾಲ ಪಡೆದವರಿಂದ ಕೂಡಲೇ ಸಾಲ ವಸೂಲಿ ಮಾಡಬೇಕು ಹಾಗೂ 500 ಕೋಟಿ ರೂ.ಗಳಿಗೂ ಅಧಿಕ ಸಂಪತ್ತು ಹೊಂದಿರುವವರ ಹೆಸರುಗಳ ಪಟ್ಟಿ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಸುಸ್ತಿ ಸಾಲ ವಸೂಲಿಗಾಗಿ ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಎಫ್‌ಆರ್‌ಡಿಐ ಮಸೂದೆಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂದರು. ದೇಶದಾದ್ಯಂತ ಆ.22 ರಂದು ನಡೆಯುತ್ತಿರುವ ಮುಷ್ಕರದಲ್ಲಿ 12 ಲಕ್ಷಕ್ಕೂ ಅಧಿಕ ನೌಕರರು ಭಾಗವಹಿಸಲಿದ್ದಾರೆ. ಮುಂದುವರಿದ ಭಾಗವಾಗಿ ಸೆ.15 ರಂದು ದಿಲ್ಲಿ ಚಲೋ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News