×
Ad

ಶಾಸಕ ಎಸ್.ಟಿ.ಸೋಮಶೇಖರ್ ನಿಂದ ಸರಕಾರಿ ಭೂಮಿ ಕಬಳಿಕೆ: ಆರೋಪ

Update: 2017-08-17 19:38 IST

ಬೆಂಗಳೂರು, ಆ.17: ನಗರದ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ 100 ಕೋಟಿ ರೂ. ವೌಲ್ಯದ ಸರಕಾರಿ ಭೂಮಿ ಕಬಳಿಕೆ ಮಾಡಿದ್ದಾರೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ವಸತಿ ಮಹಾಮಂಡಲಕ್ಕೆ ಎಸ್.ಟಿ. ಸೋಮಶೇಖರ್ ಕಾನೂನು ಬಾಹಿರವಾಗಿ ಅಧ್ಯಕ್ಷರಾಗಿದ್ದಾರೆ. ತಮ್ಮ ಹಿಂಬಾಲಕರ ಮೂಲಕ ನಕಲಿ ಗೃಹ ನಿರ್ಮಾಣ ಸಹಕಾರ ಸಂಘಗಳನ್ನು ಸ್ಥಾಪಿಸಿ ಸಾವಿರಾರು ಬೆಂಬಲಿಗರನ್ನು ಸದಸ್ಯರನ್ನಾಗಿ ಮಾಡಿ, ಕಾರ್ಯಚಟುವಟಿಕೆ ನಡೆಸಿ ಅವ್ಯವಹಾರ ನಡೆಸಿದ್ದಾರೆ ಎಂದು ಆಪಾದಿಸಿದರು.

ತಾವರೆಕೆರೆ ಹೋಬಳಿಯ ಚುಂಚನಕಟ್ಟೆ ಗ್ರಾಮದಲ್ಲಿ 2006ರಲ್ಲಿ ವಸತಿ ಮಹಾಮಂಡಲ ವತಿಯಿಂದ 1 ಮತ್ತು 2ನೆ ಹಂತದಲ್ಲಿ 2,480 ನಿವೇಶನಗಳನ್ನು ಹಂಚುವುದಾಗಿ ಘೋಷಣೆ ಮಾಡಿ 2014ರೊಳಗಾಗಿ ಬಡಾವಣೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದರು. ಬಿಎಂಆರ್‌ಡಿಎ ಅನುಮತಿ ಮತ್ತು ನಕ್ಷೆ ಮಂಜೂರಾತಿ ಪಡೆದುಕೊಳ್ಳದೆ ಕಾನೂನು ಬಾಹಿರವಾಗಿ ಬಡಾವಣೆ ನಿರ್ಮಿಸಿದ್ದಾರೆ ಎಂದು ದೂರಿದರು.

180 ಎಕರೆ ಪೈಕಿ ಶೇ.95ರಷ್ಟು ಸರಕಾರಿ ಜಮೀನಾಗಿದೆ. ಸರಕಾರಿ ಜಮೀನುಗಳಿಗೆ ಉಳುಮೆದಾರರ ಹೆಸರಿನಲ್ಲಿ ಅನುಮಾನಾಸ್ಪದವಾಗಿ ಮ್ಯುಟೇಷನ್ ನೋಂದಣಿಗಳನ್ನು ತಯಾರಿಸಲಾಗಿದೆ. ಉಳುಮೆಗಾರರಿಂದ 15 ಲಕ್ಷ ರೂ. ಬೆಲೆಗೆ ಜಮೀನು ಪಡೆದು ಅದೇ ಜಮೀನನ್ನು ವಸತಿ ಮಹಾಮಂಡಲಕ್ಕೆ 85 ರಿಂದ 90 ಲಕ್ಷಕ್ಕೆ ಮಾರಾಟ ಮಾಡಿಸುವ ಮೂಲಕ 135 ಕೋಟಿಯಷ್ಟು ಲಾಭ ಪಡೆದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ರಮೇಶ್ ದಾಖಲೆ ಬಿಡುಗಡೆ ಮಾಡಿದರು.

180 ಎಕರೆ ಜತೆಗೆ ಗೋಮಾಳ, ಗುಂಡುತೋಪು, ಸರಕಾರಿ ಹಳ್ಳ, ಸ್ಮಶಾನ, ರಾಜಕಾಲುವೆ, ಕೆರೆ, ಕಲ್ಲು, ಗುಡ್ಡ ಸೇರಿ 100 ಕೋಟಿ ಬೆಲೆಬಾಳುವ 80 ಎಕರೆಯಷ್ಟು ಸರಕಾರಿ ಜಮೀನನ್ನು ಕಬಳಿಸಲಾಗಿದ್ದು, ಈ ಸಂಬಂಧ ನ್ಯಾಯಾಂಗ ತನಿಖೆ ನಡೆಸಬೇಕು. ಇಲ್ಲವೆ ಸಿಬಿಐಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ವಸತಿ ಮಹಾಮಂಡಲದ ಅಧ್ಯಕ್ಷರಾದ ಎಸ್.ಟಿ.ಸೋಮಶೇಖರ್, ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ, ತಿಬ್ಬೇಗೌಡ, ಲಕ್ಷಣ್ ಮತ್ತಿತರರ ವಿರುದ್ಧ ಜಾರಿ ನಿರ್ದೇಶನಾಲಯಗೆ ದೂರು ಸಲ್ಲಿಸಲಾಗಿದೆಯಲ್ಲದೆ, ಎಸಿಎಂಎಂ ನ್ಯಾಯಾಲಯದಲ್ಲೂ ಕೂಡ ಪ್ರಕರಣ ದಾಖಲಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News