ಸೆ.3 ರಂದು ಉಮೀದ್ ರೇಸ್ 10 ಕೆ ಓಟ
ಬೆಂಗಳೂರು, ಆ.17: ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉಚಿತ ಶಾಲಾ ಸಮವಸ್ತ್ರ ಒದಗಿಸಿಕೊಡುವ ನಿಟ್ಟಿನಲ್ಲಿ ರಾಜಸ್ಥಾನ್ ಕಾಸ್ಮೋ ಫೌಂಡೇಷನ್ ಟ್ರಸ್ಟ್ ‘ಉಮೀದ್ ರೇಸ್ 10 ಕೆ’ ಎಂಬ ಓಟವನ್ನು ಸೆ.3 ರಂದು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಓಟದ ಪೂರ್ವಭಾವಿಯಾಗಿ ಟೀಶರ್ಟ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಟೀಶರ್ಟ್ ಬಿಡುಗಡೆ ಮಾಡಿ ಮಾತನಾಡಿದ ಚಿತ್ರ ನಟ ವಿಜಯ್ ರಾಘವೇಂದ್ರ, ರಾಜ್ಯದ ಹಲವು ಸರಕಾರಿ ಶಾಲೆಗಳಿಗೆ ಸಮಯಕ್ಕೆ ಸರಿಯಾದ ಸಮವಸ್ತ್ರ ಸರಬರಾಜು ಆಗುವುದಿಲ್ಲ. ಅಲ್ಲದೆ, ಹಲವು ಅನುದಾನಿತ ಶಾಲೆಗಳಲ್ಲಿ ಸಮವಸ್ತ್ರ ಖರೀದಿಸಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಬಡ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಅಂತಹ ಮಕ್ಕಳಿಗೆ ಉಚಿತವಾದ ಸಮವಸ್ತ್ರ ನೀಡಿ, ಗೌರವಯುತವಾಗಿ ಶಿಕ್ಷಣ ಪಡೆಯಲು ಸಹಕಾರಿಯಾಗುವುದು ಅತ್ಯುತ್ತಮ ಕೆಲಸವಾಗಿದೆ. ಹೀಗಾಗಿ, ನಾನು ಈ ಓಟಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಟ್ರಸ್ಟ್‌ನ ಅಧ್ಯಕ್ಷ ರಂಜಿತ್ ಸೋಲಂಕಿ ಮಾತನಾಡಿ, ಓಟದಲ್ಲಿ ವಿವಿಧ ಭಾಗಗಳಿಂದ 5 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ. ಈ ಓಟದಲ್ಲಿ ಭಾಗವಹಿಸಲು 750 ರೂ.ಗಳು ಶುಲ್ಕ ಪಾವತಿಸಬೇಕು. ಭಾಗವಹಿಸುವವರಿಗೆ ಟೀಶರ್ಟ್, ಕ್ಯಾಪ್ ಹಾಗೂ ಓಟದ ನಂತರ ಬಹುಮಾನ ನೀಡಲಾಗುತ್ತದೆ ಎಂದರು.
15 ವರ್ಷದ ವೆುೀಲ್ಪಟ್ಟವರು 10 ಕಿ.ಮೀ, 10 ಹಾಗೂ 15 ವರ್ಷ ಮೇಲ್ಪಟ್ಟವರು 5 ಕಿ.ಮೀ(ಮಜಾ ರನ್) ಹಾಗೂ ಓಡುತ್ತಾ, ನಡೆಯುತ್ತಾ ಸಾಗಬಹುದಾದ ಮೂರು ಕಿ.ಮೀ.ಓಟದಲ್ಲಿ 10 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದಾಗಿದೆ ಎಂದು ಅವರು ಹೇಳಿದರು. ಓಟಕ್ಕೆ ನಟ ಶಿವರಾಜ್‌ಕುಮಾರ್, ನಟಿ ಕಾವ್ಯಾಶೆಟ್ಟಿ ಚಾಲನೆ ನೀಡಲಿದ್ದು, ಸಚಿವ ಪ್ರಿಯಾಂಕ ಖರ್ಗೆ, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಭಾಗವಹಿಸಲಿದ್ದಾರೆ ಎಂದರು.