ಕಲ್ಲು ಎತ್ತಿಹಾಕಿ ಯುವಕನ ಕೊಲೆ
Update: 2017-08-17 20:09 IST
ಬೆಂಗಳೂರು, ಆ.17: ರಸ್ತೆಬದಿಯಲ್ಲಿ ಮಲಗಿದ ಯುವಕನೋರ್ವನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಇಲ್ಲಿನ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಜಾಲದ ಪಶುಪತಿ ಕೊಲೆಯಾದ ವ್ಯಕ್ತಿ ಎಂದು ಪೊಲೀಸರು ಗುರುತಿಸಿದ್ದಾರೆ. ಗಾರೆ ಕೆಲಸ ಮಾಡುತ್ತಿದ್ದ ಈತ ತನ್ನ ತಂದೆಯ ಜೊತೆ ಚಿಕ್ಕಜಾಲದಲ್ಲಿ ನೆಲೆಸಿದ್ದಾನೆ ಎನ್ನಲಾಗಿದೆ.
ಬುಧವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ತನ್ನ ತಂದೆಯೊಂದಿಗೆ ಜಗಳ ಮಾಡಿ, ಮನೆಯಿಂದ ಹೊರ ಹೋಗಿ ರಸ್ತೆ ಬದಿ ಮಲಗಿದ್ದಾನೆ. ಮಧ್ಯರಾತ್ರಿ ಅಪರಿಚಿತರು ಪಶುಪತಿ ಅವರ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ, ನಂತರ ದೇಹಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಜಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.