ಹೊಸ ವಸತಿ ಶಾಲೆಗಳಿಗೆ ‘ಇಂದಿರಾ’ ಹೆಸರು: ಸಿದ್ದರಾಮಯ್ಯ

Update: 2017-08-17 14:55 GMT

ಹೊಸದಿಲ್ಲಿ, ಆ.17: ರಾಜ್ಯದಲ್ಲಿನ ವಸತಿ ಶಾಲೆಗಳಿಗೆ ಇಟ್ಟಿರುವ ಮೊರಾರ್ಜಿ ದೇಸಾಯಿ ಹೆಸರು ಬದಲಾವಣೆ ಮಾಡುವ ಉದ್ದೇಶವಿಲ್ಲ. ಹೊಸದಾಗಿ ಆರಂಭಿಸುವ ವಸತಿ ಶಾಲೆಗಳಿಗೆ ಇಂದಿರಾ ಗಾಂಧಿ ಅವರು ಹೆಸರಿಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಗುರುವಾರ ಹೊಸದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ವಸತಿ ಶಾಲೆಗಳಿಗೆ ಮೊರಾರ್ಜಿ ದೇಸಾಯಿ ಅವರ ಹೆಸರು ನಾಮಕರಣ ಮಾಡಿದ್ದು ಯಾರು ಎಂದು ಯಡಿಯೂರಪ್ಪನವರಿಗೆ ಗೊತ್ತೇ ಎಂದು ಖಾರವಾಗಿ ಪ್ರಶ್ನಿಸಿದರು.

 ನಾನೇ ಮಾಡಿದ್ದು: ತಾನು 1994-95ರಲ್ಲಿ ಹಣಕಾಸು ಮಂತ್ರಿಯಾಗಿದ್ದಾಗ ವಸತಿ ಶಾಲೆಗಳನ್ನು ಆರಂಭಿಸಿ, ಆ ಶಾಲೆಗಳಿಗೆ ಮೊರಾರ್ಜಿ ದೇಸಾಯಿ ಅವರ ಹೆಸರು ನಾಮಕರಣ ಮಾಡಿದ್ದು ನಾನೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ 125 ವಸತಿ ಶಾಲೆ ಆರಂಭಿಸುತ್ತಿದ್ದೇವೆ. ಅದೇ ರೀತಿ ಇಂದಿರಾ ಗಾಂಧಿ ಅವರ ನೂರನೇ ವರ್ಷದ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ನೂರು ವಸತಿ ಶಾಲೆಗಳಿಗೆ ಚಾಲನೆ ನೀಡುತ್ತಿದ್ದೇವೆ. ಅರಸು ಅವರ ಹೆಸರಿನಲ್ಲೂ ಶಾಲೆಗಳನ್ನು ಆರಂಭಿಸಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.

ರಾಜ್ಯದ ಯಾವುದೇ ಕೆರೆಯನ್ನು ಡಿ-ನೋಟಿಫೈ ಮಾಡಿಲ್ಲ. ಆ ರೀತಿಯ ಯಾವುದೇ ರೀತಿಯ ಪ್ರಸ್ತಾವನೆಯೂ ಸರಕಾರದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಬಸ್ ನಿಲ್ದಾಣ, ಮನೆಗಳು ಸೇರಿ ವಿವಿಧ ಕಟ್ಟಡಗಳು ನಿರ್ಮಾಣಗೊಂಡು ಮೂಲ ಸ್ವರೂಪ ಕಳೆದುಕೊಂಡಿರುವ ಕೆರೆಗಳನ್ನು ಡಿ-ನೋಟಿಫೈ ಕುರಿತು ಸಂಪುಟ ಸಭೆಯಲ್ಲಿ ಒಮ್ಮೆ ಸಾಂದರ್ಭಿಕ ಚರ್ಚೆ ನಡಯಿತೇ ಹೊರತು ಯಾವುದೇ ಪ್ರಸ್ತಾವನೆ ಇಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News