×
Ad

ಬರ ಪರಿಸ್ಥಿತಿ: ಹೆಚ್ಚಿನ ನೆರವು ನೀಡಲು ಕೇಂದ್ರಕ್ಕೆ ಮುಖ್ಯಮಂತ್ರಿ ಮನವಿ

Update: 2017-08-17 20:28 IST

ಬೆಂಗಳೂರು, ಆ.17: ಕರ್ನಾಟಕ ರಾಜ್ಯ ಸತತ ನಾಲ್ಕೈದು ವರ್ಷಗಳಿಂದ ಬರ ಪರಿಸ್ಥಿತಿ ಇದ್ದು, ಇದರ ನಿರ್ವಹಣೆಗೆ ಕೇಂದ್ರ ಸರಕಾರ ಹೆಚ್ಚಿನ ಅನುದಾನ ನೀಡುವ ಮೂಲಕ ರಾಜ್ಯದ ನೆರವಿಗೆ ಧಾವಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.

ಗುರುವಾರ ಹೊಸದಿಲ್ಲಿಯಲ್ಲಿ ರಾಜ್ಯ ಸರಕಾರದ ಹೊಸದಿಲ್ಲಿ ವಿಶೇಷ ಪ್ರತಿನಿಧಿ ನಾಡಗೌಡ, ಸಿಎಂ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದ ರಾಜ್, ಸಿಎಂ ಕಾರ್ಯದರ್ಶಿ ಅತೀಕ್ ಅಹ್ಮದ್ ಅವರೊಂದಿಗೆ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಅನ್ಯಾಯ: ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್‌ಡಿಆರ್‌ಎಫ್)ಯಡಿ 5 ವರ್ಷಗಳ ಅವಧಿಗೆ ಕರ್ನಾಟಕಕ್ಕೆ 1,527 ಕೋಟಿ ರೂ.ಗಳನ್ನು ನೀಡಲಾಗಿದೆ. ಆದರೆ, ಬರ ಸ್ಥಿತಿ ಎದುರಿಸುತ್ತಿರುವ ಮಹಾರಾಷ್ಟ್ರಕ್ಕೆ 8,195 ಕೋಟಿ ರೂ., ಗುಜರಾತ್‌ಗೆ- 3,894 ಕೋಟಿ ರೂ., ತಮಿಳುನಾಡಿಗೆ-3,751ಕೋಟಿ, ಆಂಧ್ರಕ್ಕೆ-2,430ಕೋಟಿ ರೂ., ಹಾಗೂ ರಾಜಸ್ಥಾನಕ್ಕೆ-2,153 ಕೋಟಿ ರೂ.ಅನುದಾನ ನೀಡಲಾಗಿದೆ.

ಆಂಧ್ರಕ್ಕೆ ಕರ್ನಾಟಕ ರಾಜ್ಯಕ್ಕಿಂತ ಹೆಚ್ಚಿನ ಅನುದಾನ ನೀಡಲಾಗಿದೆ. ಆದರೆ, ಮಹಾರಾಷ್ಟ್ರಕ್ಕಿಂತ ಭೀಕರ ಸ್ವರೂಪದ ಬರ ಪರಿಸ್ಥಿತಿ ಕರ್ನಾಟಕ ರಾಜ್ಯದಲ್ಲಿದ್ದರೂ ಕೇಂದ್ರ ಸರಕಾರ ರಾಜ್ಯಕ್ಕೆ ಹೆಚ್ಚಿನ ನೆರವು ನೀಡದೆ ಅನ್ಯಾಯ ಮಾಡಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಆಕ್ಷೇಪ: ಬರ ಪೀಡಿತ ಪ್ರದೇಶಗಳ ಘೋಷಣೆ ಸಂಬಂಧ ಕೇಂದ್ರ ಸರಕಾರ ಎನ್‌ಡಿಆರ್‌ಎಫ್‌ನ ನಿಯಮಾವಳಿಗಳನ್ನು ಬದಲಾವಣೆ ಮಾಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಕರ್ನಾಟಕದಲ್ಲಿ 16ವರ್ಷದಲ್ಲಿ 13ವರ್ಷ ಬರ ಪರಿಸ್ಥಿತಿಯನ್ನೇ ಎದುರಿಸಿದ್ದೇವೆ.

2005-2010ರಲ್ಲಿ ನೆರೆ ಹಾವಳಿಯಿಂದ ಬೆಳೆ ನಷ್ಟ ಆಗಿದೆ. ಉಳಿದಂತೆ 2001ರಿಂದ ಈವರೆಗೂ ಬರವಿದ್ದು, ಬೆಳೆ ಹಾನಿಯಾಗಿವೆ. ಬೆಳೆ ನಷ್ಟವಾಗಿದೆ. ಪ್ರಕೃತಿ ವಿಕೋಪ ಮತ್ತು ಬರ ನಿರ್ವಹಣೆಗೆ ವೈಜ್ಞಾನಿಕ ಪರಿಹಾರ ಸಿಕ್ಕಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದಿನ ನಿಯಮಾವಳಿಗಳ ಅನ್ವಯ ರಾಜ್ಯದಲ್ಲಿನ 176 ತಾಲೂಕುಗಳ ಪೈಕಿ 164 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿತ್ತು. ಆದರೆ, ಕೇಂದ್ರ ಹೊಸ ನಿಯಮಗಳನ್ವಯ 30 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲು ಸಾಧ್ಯವಿಲ್ಲ.

ಶೇ.50ರಷ್ಟು ಬೆಳೆ ನಷ್ಟ, ಶೇ.50ಕ್ಕಿಂತಲೂ ಕಡಿಮೆ ಬಿತ್ತನೆ ಆಗಿರಬೇಕು. ತೇವಾಂಶ ಶೇ.25ಕ್ಕಿಂತ ಕಡಿಮೆ ಇರಬೇಕೆಂಬ ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ. ಈ ನಿಯಮಾವಳಿಗಳನ್ನು ಅನುಸರಿಸಿದರೆ ಬಹಳ ಕಷ್ಟ. ಹೀಗಾಗಿ ನಿಯಮಾವಳಿಗಳನ್ನು ಬದಲಾವಣೆ ಮಾಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News