ಮೈಸೂರು-ಬೆಂಗಳೂರು-ಚೆನ್ನೈ ಹೈಸ್ಪೀಡ್ ರೈಲು ಆರಂಭಿಸಲು ಕೇಂದ್ರ ಸ್ಪಂದನೆ

Update: 2017-08-17 15:05 GMT

ಬೆಂಗಳೂರು, ಆ.17: ಮೈಸೂರು-ಬೆಂಗಳೂರು-ಚನ್ನೈ ನಡುವೆ ಹೈಸ್ಪೀಡ್ ರೈಲು ಆರಂಭಿಸಬೇಕೆಂದು ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಮನವಿಗೆ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಧಿಕಾರಿಗಳಿಂದ ಪ್ರಸ್ತಾವನೆ ಬಂದರೆ ಮಂಜೂರಾತಿ ನೀಡುವುದು ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಭರವಸೆ ನೀಡಿದ್ದಾರೆ.

ಹೊಸದಿಲ್ಲಿಯಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಭೇಟಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಸಲ್ಲಿಸಿದರು. ಮೈಸೂರು ರೈಲ್ವೆ ನಿಲ್ದಾಣವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ವಿಸ್ತರಣೆ ಮಾಡಬೇಕೆಂದು ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ತಿಳಿದು ಬಂದಿದೆ.

ಹುಬ್ಬಳ್ಳಿ-ಅಂಕೋಲ: 1998ರಲ್ಲಿ ಆರಂಭವಾದ ಹುಬ್ಬಳ್ಳಿ-ಅಂಕೋಲ ರೈಲ್ವೆ ಯೋಜನೆ ಕಾಮಗಾರಿ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ದೊರೆಯದೆ ನನೆಗುದಿಗೆ ಬಿದ್ದಿದೆ. ಈಗ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಕೂಡಲೇ ಅನುಮತಿ ನೀಡಿ ನಿರ್ಮಾಣ ಕಾಮಗಾರಿಯನ್ನು ಆರಂಭಿಸಬೇಕೆಂದು ಸಿಎಂ ಆಗ್ರಹಿಸಿದ್ದಾರೆ.

ಬೆಂಗಳೂರು-ಮೈಸೂರು-ಬೆಂಗಳೂರಿಗೆ ಉಪನಗರ ಜನರ ಅನುಕೂಲಕ್ಕಾಗಿ ಹೆಚ್ಚುವರಿ ರೈಲು ಒದಗಿಸಬೇಕು. ಬೆಂಗಳೂರಿನ ಕಂಟೋನ್ಮೆಂಟ್‌ನಿಂದ ವೈಟ್‌ಫೀಲ್ಡ್‌ಗೆ (19.8ಕಿ.ಮೀ.) ಮೂರನೆ ಲೈನ್ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕೋರಲಾಗಿದೆ.

ಬೆಂಗಳೂರು ನಗರದ ಕಂಟೋನ್ಮೆಂಟ್, ಯಶವಂತಪುರ ಹಾಗೂ ಯಲಹಂಕ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಬೇಕು. ರಾಜ್ಯದ 72 ರೈಲ್ವೆ ನಿಲ್ದಾಣಗಳನ್ನು ರೂಪ್‌ಟಾಪ್ ಸೋಲಾರ್ ಪ್ಲಾಟ್ ಅಳವಡಿಸುವ ಕಾರ್ಯ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಲಾಗಿದೆ.

ಮಂಗಳೂರಿನಲ್ಲಿ 25 ಕಿ.ಮೀ ರೈಲ್ವೆ ಮಾರ್ಗವನ್ನು ದಕ್ಷಿಣ ರೈಲ್ವೆಯಿಂದ ಸೌತ್ ವೆಸ್ಟಡ್ ರೈಲ್ವೆ ಮಾರ್ಗದ ವರೆಗೆ ವರ್ಗಾಯಿಸಬೇಕು. ಬೆಂಗಳೂರು ಹಾಗೂ ಹುಬ್ಬಳ್ಳಿ ರೈಲ್ವೆ ಯಾತ್ರಿ ನಿವಾಸ್ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಯಾದಗಿರಿ ಬೋಗಿ ಕಾರ್ಖಾನೆ ಉದ್ಘಾಟಿಸಲು ದಿನಾಂಕ ನಿಗದಿಪಡಿಸಬೇಕು ಎಂದು ಸಿಎಂ ಮನವಿಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News