×
Ad

ಪಿಎಫ್‌ಐ ನಿಷೇಧಿಸದಿದ್ದರೆ ಮುಂದಿನ ಘಟನೆಗಳಿಗೆ ನಾವು ಹೊಣೆಯಲ್ಲ: ರಾಜ್ಯ ಬಿಜೆಪಿ ಯುವ ಮೋರ್ಚಾ ಎಚ್ಚರಿಕೆ

Update: 2017-08-17 20:52 IST

 ಬೆಂಗಳೂರು, ಆ.17: ರಾಜ್ಯ ಸರಕಾರ ಕೂಡಲೇ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಬೇಕು. ಇಲ್ಲದಿದ್ದರೆ ಹಿಂದೂ ಸಂಘಟನೆಗಳು ಒಟ್ಟುಗೂಡಿ ಮಂಗಳೂರು ಚಲೋ ಅಭಿಯಾನವನ್ನು ಹಮ್ಮಿಕೊಳ್ಳಲಿದೆ. ಈ ವೇಳೆ ಸಂಭವಿಸುವ ಘಟನೆಗಳಿಗೆ ಸರಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಭೀಮ ಶಂಕರ್ ಎಚ್ಚರಿಕೆ ನೀಡಿದ್ದಾರೆ.

 ಸಂಘಪರಿವಾರದ ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಕೆಎಫ್‌ಡಿ ಸಂಘಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಿಷೇಧಿತ ಸಿಮಿ ಸಂಘಟನೆಯ ಸದಸ್ಯರೇ ಕೆಎಫ್‌ಡಿ, ಪಿಎಫ್‌ಐ ಸೇರಿದಂತೆ ಬೇರೆ ಸಂಘಟನೆಯ ಹೆಸರಿನಲ್ಲಿ ರಾಜ್ಯದಲ್ಲಿ ಕಾರ್ಯನಿರತರಾಗಿದ್ದು, ರಾಜ್ಯದಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಹತ್ಯೆಯಲ್ಲಿ ನಿರತರಾಗಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರಕ್ಕೆ ಅರಿವಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿದೆ ಎಂದು ಅವರು ಆರೋಪಿಸಿದರು.

 ಮಂಗಳೂರಿನ ಶರತ್ ಮಡಿವಾಳರ ಕೊಲೆ ಪ್ರಕರಣದಲ್ಲಿ ಕೆಎಫ್‌ಡಿ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿಯೂ ಕೆಎಫ್‌ಡಿ ಸಂಘಟನೆಯಿಂದ ಆರೆಸ್ಸೆಸ್ ಕಾರ್ಯಕರ್ತರ ಜೀವಕ್ಕೆ ಅಪಾಯವಿದೆ. ಹೀಗಾಗಿ ಕೆಎಫ್‌ಡಿ ಸಂಘಟನೆಯನ್ನು ನಿಷೇಧಿಸುವ ಮೂಲಕ ದಕ್ಷಿಣ ಕನ್ನಡದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್‌ಕುಮಾರ್, ರಾಜ್ಯ ಉಪಾಧ್ಯಕ್ಷರಾದ ಚಂದ್ರಶೇಖರ್, ರಾಜ್ಯ ಕಾರ್ಯದರ್ಶಿ ಹರೀಶ್ ಗೌಡ ಹಾಗೂ ಮುಖಂಡರಾದ ಹರ್ಷವರ್ಧನ್, ನವೀನ್, ನಿಶ್ಚಿತಾ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News