×
Ad

ಎಚ್.ವೈ.ಮೇಟಿ ರಾಸಲೀಲೆ ಪ್ರಕರಣಕ್ಕೆ ಮರುಜೀವ

Update: 2017-08-17 22:04 IST

ಬೆಂಗಳೂರು, ಆ.17: ಮಾಜಿ ಸಚಿವ ಎಚ್.ವೈ.ಮೇಟಿ ರಾಸಲೀಲೆ ಪ್ರಕರಣಕ್ಕೆ ಮರು ಜೀವ ಸಿಕ್ಕಿದ್ದು, ಸಂತ್ರಸ್ತ ಮಹಿಳೆ ವಿಜಯಲಕ್ಷ್ಮಿ ತನಗೆ ಜೀವ ಬೆದರಿಕೆಯಿದ್ದು ರಕ್ಷಣೆ ಒದಗಿಸುವಂತೆ ಕೋರಿ ರಾಜ್ಯ ಸರಕಾರದ ಮೊರೆ ಹೋಗಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ಗರ್ಗ್‌ಗೆ ದೂರು ಸಲ್ಲಿಸಿದ ವಿಜಯಲಕ್ಷ್ಮಿ, ಎಚ್.ವೈ.ಮೇಟಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದು, ಅವರ ಬೆಂಬಲಿಗರ ಮೂಲಕ ಅಕ್ರಮವಾಗಿ ಬಂಧನದಲ್ಲಿರಿಸಿದ್ದರು ಎಂದು ಆರೋಪಿಸಿದ್ದಾರೆ.

ಬಾಗಲಕೋಟೆಯ ಸರಕಾರಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ನನ್ನ ಮೇಲೆ ಅವರ ಮನೆಯಲ್ಲೆ ನಾಲ್ಕು ಬಾರಿ ಅತ್ಯಾಚಾರ ಮಾಡಿದ್ದಾರೆ. ಅಲ್ಲದೆ, ಈ ವಿಷಯ ಬಹಿರಂಗಪಡಿಸಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದರು ಎಂದು ವಿಜಯಲಕ್ಷ್ಮಿ ದೂರಿದ್ದಾರೆ.
2016ರ ಡಿ.11ರಂದು ಮಾಧ್ಯಮದಲ್ಲಿ ನನ್ನ ವಿಡಿಯೋ ಪ್ರಸಾರವಾಯಿತು. ಅದಾದ ನಂತರ ಮೇಟಿಯವರ ಬೆಂಬಲಿಗರು ನನ್ನನ್ನು ತಮ್ಮ ವಶದಲ್ಲಿಟ್ಟುಕೊಂಡು ಜೀವ ಬೆದರಿಕೆ, ಕುಟುಂಬದವರ ಜೀವಕ್ಕೆ ಹಾನಿಯ ಬಗ್ಗೆ ಬೆದರಿಕೆ ಹಾಕಿದರು. ಡಿ.14ರಂದು ರಾತ್ರಿ ನನ್ನನ್ನು ಅವರ ಸಂಬಂಧಿಕರ ತೋಟಕ್ಕೆ ರಾತ್ರಿ ಕರೆದುಕೊಂಡು ಮೂರು ದಿನಗಳ ಕಾಲ ಅಲ್ಲಿಟ್ಟುಕೊಂಡಿದ್ದರು ಎಂದು ಅವರು ಆರೋಪಿಸಿದ್ದಾರೆ.

ಮೇಟಿಯವರ ಮಗ ಬರೆದು ತಂದ ದೂರಿನ ವರದಿಯನ್ನು ನನಗೆ ಕೊಟ್ಟು, ಇದೇ ರೀತಿ ನನ್ನ ಕಡೆಯಿಂದ ಬರೆಯಿಸಿ ಡಿ.17ರ ರಾತ್ರಿ ದೂರು ಕೊಡಿಸಿದರು. ಆನಂತರ, 2017ನೆ ಸಾಲಿನ ಜನವರಿ 8ರಂದು ದೇವನಾಳ್ ತೋಟದಿಂದ ಕರೆದುಕೊಂಡು ಬಿಜಾಪುರದ ಕೀರ್ತಿ ನಗರಕ್ಕೆ ಕರೆದುಕೊಂಡು ಹೋದರು ಎಂದು ವಿಜಯಲಕ್ಷ್ಮಿ ತಿಳಿಸಿದ್ದಾರೆ.

ಜ.30ರಂದು ಸಿಐಡಿ ತನಿಖೆಗೆ ಕರೆಸಿದರು. ಆದರೆ, ಜ.29ರಂದು ರಾತ್ರಿ ಸಿಐಡಿಯವರು ಕೊಟ್ಟ ಪ್ರಶ್ನೆ ಪತ್ರಿಕೆಯನ್ನು ಮೇಟಿಯವರ ಬೆಂಬಲಿಗರು ಡ್ರೈವಿನ್ ಲಾಡ್ಜ್‌ಗೆ 9.30ಕ್ಕೆ ತೆಗೆದುಕೊಂಡು ಬಂದರು. ತಾವೇ ಖುದ್ದಾಗಿ ಕುಳಿತು ಉತ್ತರವನ್ನ ಬರೆಸಿಕೊಂಡು ತೆಗೆದುಕೊಂಡು ಹೋದರು. ಬೆಳಗ್ಗೆ 10.30ಕ್ಕೆ ಸಿಐಡಿ ಕಚೇರಿಗೆ ವರದಿಯನ್ನು ಕೊಡಲು ಅಧಿಕಾರಿಗಳನ್ನು ಭೇಟಿ ಮಾಡಿದೆ. ಆದರೆ, ನನ್ನ ಹಾಗೂ ಮೇಟಿಯವರ ಸಂಬಂಧದ ಬಗ್ಗೆ ಅಲ್ಲಿ ಚರ್ಚೆಯೆ ನಡೆದಿಲ್ಲ ಎಂದು ವಿಜಯಲಕ್ಷ್ಮಿ ಆರೋಪಿಸಿದ್ದಾರೆ.

ಮೇ 23 ಅಥವಾ 24ರಂದು ಮೇಟಿಗೆ ಕ್ಲೀನ್‌ಚಿಟ್ ಸಿಕ್ಕ ನಂತರ 7 ತಿಂಗಳ ಅಜ್ಞಾತವಾಸ ಮುಗಿಸಿಕೊಂಡು ಬಾಗಲಕೋಟೆಗೆ ಬಂದೆ. ಆನಂತರ ಒಂದೂವರೆ ತಿಂಗಳು ಮನೆಯಲ್ಲಿದ್ದು ಜು.17ಕ್ಕೆ ನನ್ನ ಆಸ್ಪತ್ರೆಯ ಕೆಲಸಕ್ಕೆ ಸೇರಿದೆ. ಜೀವನ ನಿರ್ವಹಣೆಗಾಗಿ ಕೆಲಸ ಮಾಡಬೇಕು. ಆದರೆ, ನನ್ನ ಹಾಗೂ ನನ್ನ ಕುಟುಂಬಕ್ಕೆ ಜೀವಭಯದ ತೊಂದರೆ ಇರುವುದರಿಂದ ನನಗೆ ರಕ್ಷಣೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಮುಂದೆ ನನ್ನ ಹಾಗೂ ನನ್ನ ಕುಟುಂಬದವರ ಜೀವಕ್ಕೆ ತೊಂದರೆಯಾದರೆ ಅದಕ್ಕೆ ಎಚ್.ವೈ.ಮೇಟಿ ಹಾಗೂ ಅವರ ಕುಟುಂಬದವರು, ಬೆಂಬಲಿಗರೆ ಕಾರಣರಾಗುತ್ತಾರೆ. ಈ ಹಿನ್ನೆಲೆಯಲ್ಲಿ ನಮಗೆ ಸೂಕ್ತ ಭದ್ರತೆ ನೀಡಬೇಕು ಹಾಗೂ ಮೇಟಿ ಮೇಲಿನ ಆರೋಪಗಳಿಗೆ ಕಾನೂನು ಅನ್ವಯ ಕ್ರಮ ಕೈಗೊಳ್ಳಬೇಕೆಂದು ವಿಜಯಲಕ್ಷ್ಮಿ ಕೋರಿದ್ದಾರೆ.

ಬಿಜೆಪಿ ಮುಖಂಡರ ಸಾಥ್

ವಿಧಾನಸೌಧದಲ್ಲಿರುವ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಚೇರಿಗೆ ವಿಜಯಲಕ್ಷ್ಮಿಯನ್ನು ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಚಿ.ನಾ.ರಾಮು, ಬೆಂಗಳೂರು ನಗರದ ಅಧ್ಯಕ್ಷ ಕೋದಂಡರಾಮ ಕರೆ ತಂದಿದ್ದರು.

ನನ್ನ ಹಾಗೂ ನನ್ನ ಕುಟುಂಬದವರಿಗೆ ಜೀವ ಬೆದರಿಕೆ ಇರುವುದರಿಂದ ನಾನು ಬಾಗಲಕೋಟೆಯಿಂದ ಬೆಂಗಳೂರಿಗೆ ಬಂದಿದ್ದೇನೆ. ಜೀವಬೆದರಿಕೆ, ಅತ್ಯಾಚಾರ, ಅಜ್ಞಾತವಾಸ ಎಲ್ಲವನ್ನು ಅನುಭವಿಸಿದ್ದೇನೆ. ನಾನು ನೀಡಿರುವ ದೂರಿಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ನನಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗಬೇಕು. ರಾಜಶೇಖರ ಮುಲಾಲಿ ಹಾಗೂ ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ನನಗೆ ಪರಿಚಯವಿಲ್ಲ. ನನಗೂ ಅವರಿಗೂ ಯಾವುದೆ ಸಂಬಂಧವಿಲ್ಲ.

-ವಿಜಯಲಕ್ಷ್ಮಿ, ದೂರುದಾರ ಮಹಿಳೆ

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News