ಜೆಡಿಎಸ್ ಅಧಿಕಾರಕ್ಕೆ ಬಂದರೆ ಸರಕಾರದ ಹಗರಣ ಬಯಲು: ಎಚ್‌ಡಿಕೆ
ಬೆಂಗಳೂರು, ಆ.17: ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ನಡೆದಿರುವ ಹಗರಣಗಳನ್ನೆಲ್ಲ ಬಯಲುಗೊಳಿಸುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕಚೇರಿ(ಜೆ.ಪಿ.ಭವನ)ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಜಂತಕಲ್ ಗಣಿ ಪ್ರಕರಣವನ್ನು ಮುಂದಿಟ್ಟುಕೊಂಡು ಜಗ್ಗಾಡುತ್ತಿದ್ದಾರೆ. ನಮ್ಮ ಸರಕಾರ ಬರಲಿ ಆಗ ನೋಡಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ದಿಲ್ಲಿಯಲ್ಲಿ ಕುಳಿತುಕೊಂಡು ಮೂರ್ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಜೆಡಿಎಸ್ ಅಸ್ತಿತ್ವವಿದೆ ಎಂದು ನಮ್ಮ ಪಕ್ಷದ ಬಗ್ಗೆ ದುರಂಹಕಾರದ ಮಾತುಗಳನ್ನಾಡಿ ದ್ದಾರೆ. ಅವರ ಈ ಮಾತನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿರುತ್ತದೆ ಎಂಬುದನ್ನು ತೋರಿಸುತ್ತೇನೆ. ಹಣದ ಬಲದ ಮೇಲೆ ಚುನಾವಣೆ ಗೆಲ್ಲಬಹುದೆಂಬ ದುರಂಹಕಾರ ಮುಖ್ಯಮಂತ್ರಿಗೆ ಬಂದಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.
ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ನಮ್ಮ ಅಭಿವೃದ್ಧಿಗೆ ಜನ ಮತ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ಚುನಾವಣೆ ಗೆಲ್ಲಲು ನೂರು ಕೋಟಿ ರೂ.ಖರ್ಚು ಮಾಡಿರುವುದು ನನಗೂ ಗೊತ್ತಿದೆ. ಮುಂದಿನ ಚುನಾವಣೆಯಲ್ಲಿ ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ತೋರಿಸಲಿ ಎಂದು ಅವರು ಸವಾಲು ಹಾಕಿದರು.
ಸಿದ್ದರಾಮಯ್ಯ ಅವರಿಂದಲೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಮುಕ್ತವಾಗುತ್ತದೆ. ಒಂದು ಪಕ್ಷವನ್ನ ಕಟ್ಟಲು ಆಗದವರು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಜನರೆ ಪಾಠ ಕಲಿಸುತ್ತಾರೆ. ನಾನು ಬಹಳ ಮೃದು ಸ್ವಭಾವದವನು ಎಂದು ತಿಳಿದುಕೊಂಡಿದ್ದಾರೆ. ಆದರೆ, ಇನ್ನು ಮುಂದೆ ಈ ಸರಕಾರದ ಸ್ವೇಚ್ಛಾಚಾರ, ಹಣದ ಲೂಟಿ ವಿರುದ್ಧ ಮೃದು ಧೋರಣೆ ತಾಳುವುದಿಲ್ಲ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಬೆಂಗಳೂರು ನಗರದ ಅಭಿವೃದ್ಧಿ ಮಾಡಿದ್ದೇವೆ ಎಂದು ಸರಕಾರ ಪುಟಗಟ್ಟಲೆ ಜಾಹೀರಾತು ನೀಡುತ್ತಾ ಬಂದಿದ್ದಾರೆ. ಬೆಂಗಳೂರು ಹಣೆಬರಹ ಏನು ಎಂದು ಮಳೆ ಬಂದ ಮೇಲೆ ಗೊತ್ತಾಗಿದೆ. ಬೆಂಗಳೂರು ನಗರದ ಜನ ಚುನಾವಣೆ ಬರಲಿ ಎಂದು ಕಾಯುತ್ತಿದ್ದಾರೆ. ಚುನಾವಣೆಯಲ್ಲಿ ಬೆಂಗಳೂರು ಜನ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.
ಬಿಬಿಎಂಪಿ ಮೈತ್ರಿ ಅಂತ್ಯ?: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಯಾವುದೇ ಅಧಿಕಾರವಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಎಲ್ಲ ಅಧಿಕಾರ ಸಚಿವ ಕೆ.ಜೆ.ಜಾರ್ಜ್ ಕೈಯಲ್ಲಿದೆ. ಹೈ ಪವರ್ ಕಮಿಟಿ ಮಾಡಿಕೊಂಡು ಸಾವಿರಾರು ಕೋಟಿ ಹಣ ಲೂಟಿ ಹೊಡೆಯಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಇಂತಹವರಿಗೆ ನಾವು ಬೆಂಬಲ ನೀಡಬೇಕೇ? ಬಿಬಿಎಂಪಿಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವ ಕುರಿತು ಶೀಘ್ರವೇ ನಿರ್ಧಾರ ತೆಗೆದುಕೊಳ್ಳುತ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯನ್ನು ಅಂತ್ಯಗೊಳಿಸುವ ಕುರಿತು ಅವರು ಮುನ್ಸೂಚನೆ ನೀಡಿದರು.
ರಾಜ್ಯ ಸರಕಾರದಲ್ಲಿ ಒಂದೇ ಒಂದು ಭ್ರಷ್ಟಾಚಾರ ನಡೆದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆಯುವಲ್ಲಿ ಕಾಂಗ್ರೆಸ್ ಶಾಸಕರು, ಸಚಿವರು ತಲ್ಲೀನರಾಗಿದ್ದಾರೆ. ಅರ್ಕಾವತಿ ಡಿನೋಟಿಫಿಕೆಷನ್ ಹಗರಣ ಮುಚ್ಚಿಹಾಕಲು ನ್ಯಾ.ಕೆಂಪಣ್ಣ ಆಯೋಗ ರಚನೆ ಮಾಡಲಾಗಿದೆ. ಅದಕ್ಕಿಂತ ದೊಡ್ಡ ಹಗರಣ ಮುಖ್ಯಮಂತ್ರಿಗೆ ಬೇಕಾ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ವಾಂಗೀಬಾತ್-ಮನ್ ಕೀ ಬಾತ್ ಅಂತ ಮಾತನಾಡುತ್ತಾರೆ. ಮಳೆ ಬಂದು ಬೆಂಗಳೂರಿನಲ್ಲಿ ಜನಸಾಮಾನ್ಯರು ಪರದಾಡುತ್ತಿದ್ದರೆ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ಬಿಸಿಬೇಳೆ ಬಾತ್ ತಿನ್ನುವಲ್ಲಿ ತಲ್ಲೀನರಾಗಿದ್ದರು ಎಂದು ಅವರು ಕಿಡಿಗಾರಿದರು.
ಯುದ್ಧಕ್ಕೆ ತಯಾರಾಗುತ್ತೇನೆನನ್ನ ಆರೋಗ್ಯ ಸುಧಾರಿಸಿದೆ. ವಾಸಿಯಾಗದ ಆರೋಗ್ಯ ಸಮಸ್ಯೆಯಿಂದ ನಾನು ಬಳಲುತ್ತಿಲ್ಲ. ಕಫ ಮತ್ತು ಕೆಮ್ಮಿನಿಂದ ಮಾತ್ರ ಬಳಲುತ್ತಿದ್ದೆ. ಒಂದು ವಾರದಲ್ಲಿ ಯುದ್ಧಕ್ಕೆ ತಯಾರಾಗುತ್ತೇನೆ. ಉತ್ತರ ಕರ್ನಾಟಕ ಭಾಗದಲ್ಲಿ 35 ರಿಂದ 40 ಸ್ಥಾನ ಗೆಲ್ಲುವುದು ನಮ್ಮ ಗುರಿ. ಹೀಗಾಗಿ ಉತ್ತರ ಕರ್ನಾಟಕ ಭಾಗದ ಪ್ರವಾಸಕ್ಕೆ ತಯಾರಾಗುತ್ತಿದ್ದೇನೆ.
-ಎಚ್.ಡಿ.ಕುಮಾರಸ್ವಾಮಿ,