ಆರೆಸೆಸ್ಸ್ ಪ್ರಚಾರಕನ ಹತ್ಯೆಗೆ ಬಿಜೆಪಿ ಸಂಚು: ಆರೋಪ

Update: 2017-08-17 17:16 GMT

ಬೆಂಗಳೂರು, ಆ. 17: ಕೆರೆ, ರಾಜಕಾಲುವೆ, ಸರಕಾರಿ ಭೂಮಿ ಒತ್ತುವರಿ ವಿರುದ್ಧ ಹೋರಾಟದಲ್ಲಿ ತೊಡಗಿರುವ ಹಾಗೂ ನಲವತ್ತು ವರ್ಷಗಳಿಂದ ಸಂಘ ಪರಿವಾರದ ವಿಚಾರಧಾರೆಗಳ ಪ್ರಚಾರ ನಡೆಸುತ್ತಿದ್ದ ಮಾಜಿ ಪ್ರಚಾರಕ ಹನುಮೇಗೌಡ ಎಂಬವರನ್ನು ಹತ್ಯೆಗೆ ಬಿಜೆಪಿ ಮುಖಂಡರೇ ಸಂಚು ರೂಪಿಸಿರುವ ಆತಂಕಕಾರಿ ಅಂಶ ಬಯಲಾಗಿದೆ.

ಸರಕಾರಿ ಆಸ್ತಿ ರಕ್ಷಣೆಗೆ ಮುಂದಾಗಿರುವ ಕಾಮಾಕ್ಷಿಪಾಳ್ಯ ನಿವಾಸಿ, ಆರೆಸೆಸ್ಸ್ ಮಾಜಿ ಪ್ರಚಾರಕ ಹನುಮೇಗೌಡ ಅವರಿಗೆ ಪೊಲೀಸ್ ರಕ್ಷಣೆ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ, ರಾಜ್ಯ ಮಾನವ ಹಕ್ಕುಗಳ ಆಯೋಗ ನಿರ್ದೇಶನ ನೀಡಿ ಒಂದೂವರೆ ವರ್ಷ ಕಳೆದರೂ ಈವರೆಗೂ ಅವರಿಗೆ ಪೊಲೀಸ್ ರಕ್ಷಣೆ ಒದಗಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

 ಹನುಮೇಗೌಡರಿಗೆ ಪೊಲೀಸ್ ರಕ್ಷಣೆ ಒದಗಿಸಲು ‘ಸಕಾರಣವಿಲ್ಲ’ ಎಂದು ಪೊಲೀಸರು ಹಿಂಬರಹ ನೀಡಿದ್ದಾರೆ. ಒಂದು ವೇಳೆ ‘ಪೊಲೀಸ್ ರಕ್ಷಣೆ ಅಗತ್ಯವಿದ್ದರೆ ಹಣ ಪಾವತಿಸಿ ರಕ್ಷಣೆ ಪಡೆದುಕೊಳ್ಳಿ’ ಎಂದರೆ ಸರಕಾರಿ ಆಸ್ತಿ ರಕ್ಷಣೆ ಮಾಡುವ ಸಾರ್ವಜನಿಕರ ಜೀವಗಳಿಗೆ ಬೆಲೆ ಇಲ್ಲವೇ ಎಂದು ಹನುಮೇಗೌಡ ಪ್ರಶ್ನಿಸಿದ್ದಾರೆ.

ಬೆಂ.ಉತ್ತರ ತಾಲೂಕು ಯಲಹಂಕ ಹೋಬಳಿ ಆವಲಹಳ್ಳಿಯ ಗ್ರಾಮ ಒತ್ತುವರಿ ಮುಕ್ತ ಗ್ರಾಮ ಆಗಬೇಕೆಂದು ಹನುಮೇಗೌಡ ಹೋರಾಟ ನಡೆಸುತ್ತಿದ್ದಾರೆ. ಸುಮಾರು 150 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸರಕಾರಿ ಆಸ್ತಿಯನ್ನು ರಕ್ಷಣೆ ಮಾಡಿದ್ದಾರೆ. ಆದರೂ, ಪೊಲೀಸ್ ಇಲಾಖೆ ಸರಕಾರಿ ಆಸ್ತಿ ರಕ್ಷಣೆ ಮಾಡಿದ ಹನುಮೇಗೌಡ ಅವರಿಗೆ ರಕ್ಷಣೆ ನೀಡಲು ಮುಂದಾಗಿರಲಿಲ್ಲ.

ಇದೀಗ, ರಾಜ್ಯ ಮಾನವ ಹಕ್ಕುಗಳ ಆಯೋಗವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ನಗರ ಪೊಲೀಸ್ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಬಳಿಕ ಪೊಲೀಸ್ ಇಲಾಖೆಯು ಹನುಮೇಗೌಡಗೆ ರಕ್ಷಣೆ ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.


‘ಸರಕಾರಿ ಭೂಮಿ ಒತ್ತುವರಿಯಲ್ಲಿ ತೊಡಗಿದ ಬಿಜೆಪಿ ಮುಖಂಡರ ವಿರುದ್ಧ ಹೋರಾಟ ಮಾಡುವ ತನಗೆ ಜೀವ ಬೆದರಿಕೆ ಇದೆ. ರಕ್ಷಣೆ ಕಲ್ಪಿಸಲು ರಾಜ್ಯ ಮಾನವ ಹಕ್ಕುಗಳ ಆಯೋಗ ನಿರ್ದೇಶನ ನೀಡಿದರೂ ಪೊಲೀಸ್ ಭದ್ರತೆ ಒದಗಿಸಿಲ್ಲ. ಪೊಲೀಸ್ ರಕ್ಷಣೆಗೆ ಹಣ ಪಾವತಿಸಬೇಕೆಂದರೆ ಸಾರ್ವಜನಿಕರು ಎಲ್ಲಿಗೆ ಹೋಗಬೇಕು’

-ಹನುಮೇಗೌಡ ಮಾಜಿ ಆರೆಸೆಸ್ಸ್ ಪ್ರಚಾರಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News