ಗುರುನಾನಕ್ ಭವನದ ವಿವಾದ ಸುಖಾಂತ್ಯ: ರಾಷ್ಟ್ರೀಯ ನಾಟಕ ಶಾಲೆಗೆ ಗುರುನಾನಕ್ ಭವನ ಉಚಿತ

Update: 2017-08-17 17:25 GMT

ಬೆಂಗಳೂರು, ಆ.17: ಗುರುನಾನಕ್ ಭವನವು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧೀನಕ್ಕೆ ಒಳಪಡಲಿದ್ದು, ರಾಷ್ಟ್ರೀಯ ನಾಟಕ ಶಾಲೆಗೆ ಉಚಿತವಾಗಿ ಬಳಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.

  ಬುಧವಾರ ಕ್ರೀಡಾ ಇಲಾಖೆಯ ಅಧಿಕಾರಿಗಳು ಗುರುನಾನಕ್ ಭನವಕ್ಕೆ ತೆರಳಿ ರಾಷ್ಟ್ರೀಯ ನಾಟಕ ಶಾಲೆಯ ಪರಿಕರಗಳನ್ನು ಬೀದಿಗೆ ಎಸೆದ ಪ್ರಕರಣ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ನೇತೃತ್ವದಲ್ಲಿ ಹಿರಿಯ ರಂಗಕರ್ಮಿ ಹಾಗೂ ಕ್ರೀಡಾ ಇಲಾಖೆ ಅಧಿಕಾರಗಳನ್ನೊಳಗೊಂಡ ಸಭೆಯಲ್ಲಿ ವಿವಾದವನ್ನು ಬಗೆ ಹರಿಸಲಾಗಿದೆ.

ಈ ಕುರಿತು ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ನಿರ್ದೇಶಕ ಬಸವಲಿಂಗಯ್ಯ ಮಾತನಾಡಿ, ಅಧಿಕಾರಿಗಳ ಬೇಜವಾಬ್ದಾರಿ ತನದಿಂದಾಗಿ ರಾಷ್ಟ್ರೀಯ ನಾಟಕ ಶಾಲೆಯ ಪರಿಕರಗಳನ್ನು ಹೊರಗೆ ಎಸೆಯಲಾಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಸಚಿವ ಮಧ್ವರಾಜ್ ಭರವಸೆ ನೀಡಿದರು ಎಂದು ತಿಳಿಸಿದರು.

 ಗುರುನಾನಕ್ ಭವನದಿಂದ ಹೊರಗೆ ಎಸೆಯಲಾಗಿದ್ದ ಕಲಾ ಪರಿಕರಗಳನ್ನು ಒಳಗೆ ಇಡುವಂತೆ ಅಧಿಕಾರಿಗಳಿಗೆ ಸಚಿವ ಪ್ರಮೋದ್ ಮಧ್ವರಾಜ್ ಸೂಚಿಸಿದ್ದಾರೆ. ಹಾಗೂ ಗುರುನಾನಕ್ ಭವನವನ್ನು ವರ್ಷದ ಎಲ್ಲ ದಿನಗಳಲ್ಲೂ ಉಚಿತವಾಗಿ ಬಳಸಿಕೊಳ್ಳಲು ಅನುಮತಿ ನೀಡಿದ್ದಾರೆ ಎಂದು ಅವರು ಹೇಳಿದರು.

 ಸಭೆಯಲ್ಲಿ ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷ ಮರುಳ ಸಿದ್ದಪ್ಪ, ನಾಟಕ ಅಕಾಡೆಮಿಯ ಅಧ್ಯಕ್ಷ ಜೆ.ಲೋಕೇಶ್, ಯುವ ನಿರ್ದೇಶಕ ತಾಯಿ ಲೋಕೇಶ್ ಹಾಗೂ ಕ್ರೀಡಾ ಇಲಾಖೆಯ ನಿರ್ದೇಶಕ ಅನುಪಮ್ ಅಗರವಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News