ಪ್ರತಿಭಟಿಸುವವರು ಈಗೆಲ್ಲಿ ಅಡಗಿದ್ದಾರೆ?

Update: 2017-08-17 18:33 GMT

ಮಾನ್ಯರೆ,

ಈ ಹಿಂದೆ ಭಾರತದಲ್ಲಿ ಯಾವುದೇ ದುರಂತ ಹಾಗೂ ರೈಲು ಅಪಘಾತವಾದಾಗ ಸಂಬಂಧಪಟ್ಟ ಸಚಿವರು ನೈತಿಕ ಹೊಣೆ ಹೊತ್ತು ತನ್ನಸ್ಥಾನಕ್ಕೆ ರಾಜೀನಾಮೆ ಕೊಟ್ಟು, ತನ್ನ ಬೇಜವಾಬ್ದಾರಿಗೆ ಬೆಲೆ ಕಟ್ಟುತ್ತಿದ್ದರು. ಯಾಕೆಂದರೆ, ತನ್ನದಲ್ಲದ ತಪ್ಪಾದರೂ, ತನ್ನ ಮೇಲೆ ಜನರು ಇರಿಸಿದಂತಹ ವಿಶ್ವಾಸಕ್ಕೆ ಧಕ್ಕೆಯಾಗದಂತೆ ತನ್ನ ಸ್ಥಾನದಿಂದ ನಿರ್ಗಮಿಸಲು ಒಂದು ನಿಮಿಷವೂ ಕಾಯುತ್ತಿರಲಿಲ್ಲ. ಕಲ್ಲು ಹೃದಯದ ರಾಜಕಾರಣಿಯಾದಲ್ಲಿ, ಆತ ಪದತ್ಯಾಗ ಮಾಡದೆ ಇದ್ದ ಪಕ್ಷದಲ್ಲಿ, ವಿರೋಧ ಪಕ್ಷಗಳು ಆತನ ರಾಜೀನಾಮೆಗೆ ಪಟ್ಟು ಹಿಡಿದು ಆತ ನಿರ್ಗಮಿಸುವ ತನಕ ಬೆನ್ನು ಹಿಡಿದಂತಹ ಅದೆಷ್ಟೋ ಉದಾಹರಣೆಗಳು ಭಾರತದ ಇತಿಹಾಸದಲ್ಲಿದೆ.

ಆದರೆ ಇತ್ತೀಚಿನ ರಾಜಕಾರಣಿಗಳು, ಇನ್ನಿಲ್ಲದ ಪ್ರಯತ್ನ ಮತ್ತು ಹಣ ಸುರಿದು ಪಡೆದಂತಹ ಸಚಿವ ಸ್ಥಾನವನ್ನು ತನ್ನ ಸ್ಥಾನಕ್ಕೆ ಸಂಬಂಧಿಸಿ ಯಾವುದೇ ದುರಂತ ನಡೆದರೂ ತನ್ನ ಪದವಿಗೆ ರಾಜೀನಾಮೆ ಕೊಡದೆ ದುರಂತಗಳಿಗೆ ಸಂಬಂಧಪಡದ ಕಾರಣ ಕೊಟ್ಟು ನುಣುಚಿಕೊಳ್ಳ್ಳುತ್ತಾರೆ. ಇದಕ್ಕೆ ಇತ್ತೀಚಿನ ಉದಾಹರಣೆ, ಉತ್ತರ ಪ್ರದೇಶದ ಗೋರಖ್‌ಪುರದ ಆಸ್ಪತ್ರೆಯಲ್ಲಿ ನಡೆದಂತಹ ಮಾರಣಹೋಮ! ಸ್ಥಾನಕ್ಕೆ ಅಂಟಿ, ಕದಲದೆ ಮತ್ತು ನೈತಿಕತೆ ತೋರದೆ ಇರುವಾಗ, ಎಚ್ಚರಿಸುವ ವಿರೋಧ ಪಕ್ಷಗಳು ನಮ್ಮ ಭಾರತದಲ್ಲಿ ಕಾಣೆಯಾಗಿರುವುದು ಅಥವಾ ಬಲಗುಂದಿರುವುದು, ದುರಂತಗಳು ನಿರಂತರವಾಗಿರಲು ಮುಖ್ಯ ಕಾರಣ ಎಂಬಂತಿದೆ! ಇದಲ್ಲದೆ ಭಾರತದ ಕೆಲವು ಸಂಘಟನೆಗಳು, ದೂರದ ನಮ್ಮ ಶತ್ರು ರಾಷ್ಟ್ರಗಳಲ್ಲಿ ಬಾಂಬು ಹಾಕಿ ನರಮೇಧ ಮಾಡಿದಾಗ ಬೀದಿಗಿಳಿದು ಪ್ರತಿಭಟನೆ ಮಾಡಿದವರು, ತಮ್ಮ ರಾಷ್ಟ್ರದಲ್ಲೇ ಆಮ್ಲಜನಕ ಪೂರೈಕೆಯ ಕೊರತೆಯಿಂದಾಗಿ ಮುಗ್ಧ ಮಕ್ಕಳ ಮಾರಣಹೋಮವಾದಾಗ ಪ್ರತಿಭಟಿಸದೆ, ಕಾರಣಕರ್ತರಾದ ಆಡಳಿತಕ್ಕೆ ಪರೋಕ್ಷ ಬೆಂಬಲ ನೀಡಿರುವುದು ಆಶ್ಚರ್ಯಕರ!
ಇಂತಹ ಏಕ ಮುಖ ವಿರೋಧ ಮುಂದುವರಿದಲ್ಲಿ, ಆಡಳಿತದಿಂದಾಗುವ ಬೇಜವಾಬ್ದಾರಿಗಳಿಂದ, ಹಿಂದೆ ಕಾಣದಂತಹ ಕೇಳದಂತಹ ಎಂತೆಂತಹ ದುರಂತಗಳು ಭಾರತ ಕಾಣಲಿರುವುದೋ?

Writer - ಖಾದರ್ ಕೆನರಾ, ಪುತ್ತೂರು

contributor

Editor - ಖಾದರ್ ಕೆನರಾ, ಪುತ್ತೂರು

contributor

Similar News