ಮರಡೋನಾರೊಂದಿಗೆ ಆಡಲಿರುವ ಗಂಗುಲಿ

Update: 2017-08-17 18:46 GMT

ಕೋಲ್ಕತಾ, ಆ.16: ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಅಕ್ಟೋಬರ್ 2 ರಂದು ಕೋಲ್ಕತಾದಲ್ಲಿ ನಡೆಯಲಿರುವ ‘ಏಕತೆಗಾಗಿ ಪಂದ್ಯ’(ಮ್ಯಾಚ್ ಫಾರ್ ಯುನಿಟಿ)ದಲ್ಲಿ 1986ರ ಫಿಫಾ ವಿಶ್ವಕಪ್ ವಿಜೇತ ತಂಡದ ನಾಯಕ ಡಿಯಾಗೊ ಮರಡೋನಾರೊಂದಿಗೆ ಆಡಲಿದ್ದಾರೆ.

 ಪ್ರದರ್ಶನ ಫುಟ್ಬಾಲ್ ಪಂದ್ಯದಲ್ಲಿ ಮಾಜಿ ಎಡಗೈ ಬ್ಯಾಟ್ಸ್ ಮನ್ ಗಂಗುಲಿ ಮಾತ್ರವಲ್ಲ, ಭಾರತದ ಮಾಜಿ ಹಾಕಿ ನಾಯಕ ಧನರಾಜ್ ಪಿಳ್ಳೆ, ಬಂಗಾಳದ ಖ್ಯಾತ ನಟ ಅಬಿರ್ ಚಟರ್ಜಿ ಹಾಗೂ ಕ್ರಿಕೆಟಿಗರಾದ ಮನೋಜ್ ತಿವಾರಿ ಹಾಗೂ ದೀಪ್ ದಾಸ್ ಗುಪ್ತಾ, ಭಾರತದ ಮಾಜಿ ಫುಟ್ಬಾಲ್ ಆಟಗಾರರಾದ ಪ್ರಸೂನ್ ಬ್ಯಾನರ್ಜಿ, ಕಾರ್ಲ್‌ಟನ್ ಚಾಪ್ಮನ್ ಹಾಗೂ ದೀಪೆಂದು ಬಿಸ್ವಾಸ್ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

 ಫುಟ್ಬಾಲ್ ಪ್ರದರ್ಶನ ಪಂದ್ಯ ಬರಾಸತ್‌ನ ಆದಿತ್ಯ ಕ್ರೀಡಾ ಶಾಲೆಯ ಮೈದಾನದಲ್ಲಿ ನಡೆಯಲಿದ್ದು, ಅರ್ಜೆಂಟೀನದ ಫುಟ್ಬಾಲ್ ದಂತಕತೆ ಮರಡೋನಾ ಅ.2 ಅಥವಾ 4 ರಂದು ನಗರಕ್ಕೆ ಆಗಮಿಸಲಿದ್ದಾರೆ. ‘‘ಮೊದಲ 30 ನಿಮಿಷಗಳ ಆಟ ಕೊನೆಗೊಂಡ ಬಳಿಕ ಇತರ ಕ್ಷೇತ್ರದ ಸ್ಟಾರ್‌ಗಳನ್ನು ಕಣಕ್ಕೆ ಇಳಿಸಲಾಗುವುದು. ಮರಡೋನಾರೊಂದಿಗೆ ಪ್ರತಿಯೊಬ್ಬರಿಗೆ ಆಡಲು ಅವಕಾಶ ನೀಡಲಾಗುವುದು’’ ಎಂದು ಮರಡೋನಾರ ಭಾರತ ಪ್ರವಾಸದ ಹೊಣೆಹೊತ್ತಿರುವ ಕಂಪೆನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News