×
Ad

ಏಣಗಿ ಬಾಳಪ್ಪ ನಿಧನಕ್ಕೆ ಸಿಎಂ ಸಂತಾಪ

Update: 2017-08-18 19:19 IST

ಬೆಂಗಳೂರು, ಆ. 18: ಕನ್ನಡ ರಂಗಭೂಮಿಯ ದಂತಕತೆ ಶತಾಯುಷಿ ಡಾ.ಏಣಗಿ ಬಾಳಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಹಾಗೂ ಗೋಕಾಕ್ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಏಣಗಿ ಬಾಳಪ್ಪ ಸಾಂಪ್ರದಾಯಿಕತೆಯ ಸೊಗಡನ್ನು ಕಾಯ್ದುಕೊಳ್ಳಬೇಕೆಂಬ ನಿಲುವಿಗೆ ಬದ್ಧರಾಗಿದ್ದರು. ಬಸವೇಶ್ವರರ ನಾಟಕದಲ್ಲಿ ಬಸವೇಶ್ವರರ ಪಾತ್ರ ವಹಿಸುವಾಗ ಭಾವುಕತೆಗೆ ಒಳಗಾಗುತ್ತಿದ್ದ ಏಣಗಿ ಬಾಳಪ್ಪ ಅವರು ತಮ್ಮ ಕಲಾ ಕೌಶಲ್ಯದಿಂದ ನೋಡುಗರನ್ನು ಬೆಕ್ಕಸ ಬೆರಗಾಗಿಸುತ್ತಿದ್ದರು. ಅಂತೆಯೇ, ಸ್ತ್ರೀ ಪಾತ್ರವನ್ನು ವಹಿಸುವಾಗ ಪುರುಷರು ಅಚ್ಚರಿಪಡುವಷ್ಟು ಹಾಗೂ ಮಹಿಳೆಯರು ಅಸೂಯೆಪಡುವಷ್ಟು ನುಲಿದು ಮೂಕವಿಸ್ಮಿತಗೊಳಿಸುತ್ತಿದ್ದರು. ಏಣಗಿ ಬಾಳಪ್ಪಪಡೆದ ಪ್ರಶಸ್ತಿ-ಪುರಸ್ಕಾರಗಳು ಹಾಗೂ ಬಿರುದು-ಬಾವಲಿಗಳು ಅವರ ಸಾಧನೆಯ ಕ್ಷ-ಕಿರಣದ ಒಂದು ಭಾಗವಷ್ಟೇ. ಒಟ್ಟಾರೆ ವೃತ್ತಿಪರ ರಂಗಭೂಮಿಯಲ್ಲಿ ಏಣಗಿ ಬಾಳಪ್ಪ ಸಾಧನೆ ಹಿಮಾಲಯದಷ್ಟು ಎಂಬುದು ಮಾತ್ರ ಅತಿಶಯೋಕ್ತಿಯಲ್ಲ.

ಕನ್ನಡ ರಂಗಭೂಮಿಯನ್ನು ಉಳಿಸಿ-ಬೆಳೆಸಲು ರಂಗಗೀತೆಗಳ ಸಂಗ್ರಹ ಹಾಗೂ ರಂಗ ಸಂಗೀತ ಶಾಲೆ ಸ್ಥಾಪಿಸಬೇಕೆಂಬ ಏಣಗಿ ಬಾಳಪ್ಪಅವರ ಕನಸು ಕನಸಾಗಿಯೇ ಉಳಿದಿದೆ. ಮುಂದಿನ ದಿನಗಳಲ್ಲಿ ಅವರ ಈ ಕನಸನ್ನು ಸಾಕಾರಗೊಳಿಸುವಲ್ಲಿ ನಮ್ಮ ಸರಕಾರ ಪ್ರಯತ್ನಿಸಲಿದೆ.

ತಮ್ಮ ಮೇರು ಸಾಧನೆಯಿಂದ ಬಾಳಪ್ಪ ಅವರು ನಮ್ಮೆಲ್ಲರ ಮನದಲ್ಲಿ ನೂರ್ಕಾಲ ಬಾಳುತ್ತಾರೆ. ಏಣಗಿ ಬಾಳಪ್ಪಅವರ ಆತ್ಮಕ್ಕೆ ಶಾಂತಿ ಲಭಿಸಲಿ. ಬಾಳಪ್ಪಅಗಲಿಕೆಯಿಂದ ಉಂಟಾದ ದುಃಖ ಮತ್ತು ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ವರ್ಗಕ್ಕೆ ಕರುಣಿಸಲಿ ಎಂದು ಸಿದ್ದರಾಮಯ್ಯ ಪ್ರಾರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News