ಮೋಡ ಬಿತ್ತನೆ: ಕೃಷಿ ವಿವಿಯಲ್ಲಿ ರಾಡಾರ್ ಸ್ಥಾಪನೆ
ಬೆಂಗಳೂರು, ಆ.18: ಮೋಡ ಬಿತ್ತನೆಯ ಸಿದ್ಧತೆಗಳ ಹಿನ್ನೆಲೆಯಲ್ಲಿ ಬಹು ನಿರೀಕ್ಷಿತ ರಾಡಾರ್ ಬೆಂಗಳೂರಿನ ಕೃಷಿ ವಿಶ್ವ ವಿದ್ಯಾನಿಲಯದ ಆವರಣಕ್ಕೆ ಬಂದಿದ್ದು, ಈ ರಾಡಾರ್‌ನ ಸ್ಥಾಪನೆಯ ಕೆಲಸ ಭರದಿಂದ ಸಾಗಿದೆ.
ಶುಕ್ರವಾರ ಈ ರಾಡಾರ್ ಸ್ಥಾಪಿಸಲು ಸೂಕ್ತವಾದ ಪರಿಕರಗಳನ್ನು ಜೋಡಿಸಿ ಮತ್ತು ಹೊಂದಿಸಿಕೊಳ್ಳುವ ಕೆಲಸ ಸಾಗಿದ್ದು, ನಾಳೆ ಸಂಜೆಯೊಳಗಾಗಿ ಕೃಷಿ ವಿಶ್ವ ವಿದ್ಯಾನಿಲಯದ ಆಡಳಿತ ಕಟ್ಟಡ ನಾಯಕ್ ಭವನದ 100 ಅಡಿ ಎತ್ತರದ ಮೇಲೆ ಸಿದ್ಧಪಡಿಸಲಾಗಿರುವ ಪ್ಲಾಟ್‌ಫಾರಂ ಮೇಲೆ ರಾಡಾರ್ ಸ್ಥಾಪಿಸಲಾಗುವುದು. ಅದಕ್ಕಾಗಿ ಸಿದ್ಧಗೊಂಡಿರುವ ಪ್ಲಾಟ್‌ಫಾರಂ ಮತ್ತು ನಿಯಂತ್ರಣ ಕೊಠಡಿಯಲ್ಲಿ ಪರಿಕರ ಜೋಡಣೆ ಕೆಲಸ ಈಗ ತಾನೇ ನಡೆಯುತ್ತಿದೆ.
ವಿಮಾನ ಪ್ರಯಾಣಕ್ಕೆ ಮತ್ತು ವಿಮಾನದ ಮೂಲಕ ಮೋಡ ಬಿತ್ತನೆಗೆ ಬೇಕಾದ ರಾಡಾರ್ ಚಿತ್ರಗಳನ್ನು ಆಧರಿಸಿದ್ದ ವಿಎಚ್‌ಎಫ್ ಸಂಪರ್ಕ ವಾಹಕದ ಮೂಲಕ ಮೋಡ ಬಿತ್ತನೆ ವಾಹನದ ಮೂಲಕ ಪೈಲೆಟ್‌ಗೆ ಸಂಕೇತಗಳನ್ನು ರವಾನಿಸಲಾಗುವ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಜ್ಜಾಗಿದೆ ಎಂದು ತಿಳಿಸಿದೆ.