ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಸಬರ್‌ಬನ್ ರೈಲಿಗೆ ಕೇಂದ್ರ ಸಚಿವ ಸುರೇಶ್ ಪ್ರಭು ಚಾಲನೆ
ಬೆಂಗಳೂರು, ಆ.18: ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಸಬರ್‌ಬನ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಶುಕ್ರವಾರ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ ಸಬರ್‌ಬನ್ ರೈಲಿನ ಜೊತೆಗೆ ಒಟ್ಟು ರಾಜ್ಯದ ವಿವಿಧ ರೈಲ್ವೆ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಿದರು.
ವೈಟ್‌ಫೀಲ್ಡ್ ಪ್ರದೇಶದಲ್ಲಿ ಸಂಚಾರ ದಟ್ಟಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ 12 ಕೀ.ಮೀ ವಿಸ್ತೀರ್ಣದ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ಮಾರ್ಗಕ್ಕೆ ಹಸಿರು ನಿಶಾನೆ ತೋರಿದರಲ್ಲದೆ, 24 ನಿಮಿಷಕ್ಕೆ 12 ಕಿ.ಮೀ. ತಲುಪುವ ವ್ಯವಸ್ಥಿತ ಮಾರ್ಗ ಇದಾಗಿದೆ. ಅಲ್ಲದೆ, ಒಟ್ಟು 8 ಬೋಗಿಗಳಿದ್ದು, ಏಕಕಾಲದಲ್ಲೇ 2,412 ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿದೆ. ಒಟ್ಟು 804 ಆಸನಗಳನ್ನು ಹೊಂದಿರುವ ಈ ರೈಲಿನಲ್ಲಿ ಸುರಕ್ಷತಾ ದೃಷ್ಟಿಯಿಂದ ಸುಧಾರಿತ ಬ್ರೇಕಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಇದಲ್ಲದೆ, ರಾಯಭಾಗ್ ರೈಲ್ವೆ ನಿಲ್ದಾಣದ ವಿಸ್ತರಣೆ, ಗದಗ ರೈಲ್ವೆ ನಿಲ್ದಾಣ ಪ್ಲಾಟ್‌ಫಾರಂ ನಿರ್ಮಾಣ, ತಿನ್ನೈ ಘಾಟ್, ವಾಸ್ಕೋ ಲೈನ್ ಡಬ್ಲಿಂಗ್, ವಾಡಿ ಬೈಪಾಸ್ ಯೋಜನೆ ಸೇರಿ 19 ಯೋಜನೆಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಸಬರ್‌ಬನ್ ರೈಲು ಸಂಪೂರ್ಣ ಮಾಡಬೇಕಾದರೆ, 10 ಸಾವಿರ ಕೋಟಿ ರೂ.ಅಗತ್ಯವಿದೆ. ಅದಕ್ಕಾಗಿ ಪ್ರತ್ಯೇಕ ಲೇನ್ ಹಾಕಬೇಕಾಗುತ್ತದೆ. ಸುರೇಶ್ ಪ್ರಭು ಮಂತ್ರಿಗಳಾದ ನಂತರ ರಾಜ್ಯದಲ್ಲಿ ಉತ್ತಮ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಅನಂತಕುಮಾರ್, ಸಂಸದ ಪಿ.ಸಿ.ಮೋಹನ್, ಮೇಯರ್ ಜಿ.ಪದ್ಮಾವತಿ, ಶಾಸಕರಾದ ಭೈರತಿ ಬಸವರಾಜು, ಎಸ್.ರಘು ಉಪಸ್ಥಿತರಿದ್ದರು.