2 ದಿನದಲ್ಲಿ 2 ಲಕ್ಷ ಜನ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಸೇವನೆ: ಮೇಯರ್ ಪದ್ಮಾವತಿ
ಬೆಂಗಳೂರು, ಆ.18: ಇಂದಿರಾ ಕ್ಯಾಂಟೀನ್ ಆರಂಭವಾದ ಎರಡೇ ದಿನದಲ್ಲಿ ನಗರದ 101 ಕ್ಯಾಂಟೀನ್‌ಗಳಲ್ಲಿ ಬಡವರು, ಕೂಲಿ-ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಸುಮಾರು 2 ಲಕ್ಷ 53 ಸಾವಿರ ಜನ ಊಟ, ಉಪಾಹಾರ ಸೇವಿಸಿದ್ದಾರೆ ಎಂದು ವೆುೀಯರ್ ಜಿ.ಪದ್ಮಾವತಿ ತಿಳಿಸಿದ್ದಾರೆ.
ಶುಕ್ರವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿರುವ ಇಂದಿರಾ ಕ್ಯಾಂಟೀನ್‌ನಲ್ಲಿ 200 ರಿಂದ 300 ಜನರಿಗೆ ಊಟ, ಉಪಾಹಾರ ನೀಡಲು ನಿಗದಿಪಡಿಸಲಾಗಿತ್ತು. ಆದರೆ, 700-800 ಜನರು ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಹೆಚ್ಚೆಂದರೆ 500 ಜನರಿಗೆ ಮಾತ್ರ ಊಟ, ಉಪಾಹಾರ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಗರದಲ್ಲಿ ಒಟ್ಟಾರೆಯಾಗಿ 18 ಅಡುಗೆ ಮನೆ ಪೈಕಿ ಈ ವಾರ ಮೂರು ಹಾಗೂ ಮುಂದಿನ ವಾರದಲ್ಲಿ ಮೂರು ಅಡುಗೆ ಮನೆಗಳು ಸಂಪೂರ್ಣವಾಗಿ ಸಿದ್ಧವಾಗಲಿವೆ. ಹಾಗೂ ಮುಂದಿನ ಒಂದು ತಿಂಗಳೊಳಗೆ ಎಲ್ಲ 18 ಅಡುಗೆ ಮನೆಗಳು ಸಿದ್ಧವಾಗಲಿವೆ ಎಂದು ವೆುೀಯರ್ ಪದ್ಮಾವತಿ ವಿವರಿಸಿದರು.
15 ದಿನ ಸಮಯ ಕೊಡಿ: ಇಂದಿರಾ ಕ್ಯಾಂಟೀನ್ ವಿನೂತನ ಯೋಜನೆಯಾಗಿರುವುದರಿಂದ ಸಾರ್ವಜನಿಕರಿಂದ ವ್ಯಕ್ತವಾಗುವ ಪ್ರತಿಕ್ರಿಯೆ, ಸಲಹೆಗಳನ್ನು ನೋಡಿಕೊಂಡು ಮತ್ತಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತದೆ. ಈಗ ಕ್ಯಾಂಟೀನ್‌ನಲ್ಲಿ ಒದಗಿಸುತ್ತಿರುವ ಆಹಾರಗಳಲ್ಲಿ ಯಾವ ಪದಾರ್ಥಕ್ಕೆ ಹೆಚ್ಚಿನ ಬೇಡಿಕೆಯಿದೆ. ಎಷ್ಟು ಪ್ರಮಾಣದಲ್ಲಿ ಪೂರೈಸಬೇಕಾಗುತ್ತದೆ ಎಂಬುದನ್ನು ನೋಡಲಾಗುತ್ತಿದೆ. ಮುಂದಿನ ವಾರದೊಳಗಾಗಿ 101 ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸುವ ಕಿಚನ್‌ಗಳು ಸಹ ಸಿದ್ಧಗೊಂಡಿರುತ್ತವೆ. 15 ದಿನದ ನಂತರ ಯಾವುದೇ ದೂರುಗಳು ಇಲ್ಲದೇ ಯೋಜನೆ ನಿರ್ವಹಿಸಲಾಗುತ್ತದೆ ಎಂದು ವಿವರಿಸಿದರು.
ಅನುದಾನದ ಕೊರತೆ ಇಲ್ಲ: ಇಂದಿರಾ ಕ್ಯಾಂಟೀನ್‌ಗೆ ಅಗತ್ಯ ಅನುದಾನ ಲಭ್ಯವಿದೆ. ಒಟ್ಟು 115 ಕೋಟಿ ರೂ.ಗಳ ವೆಚ್ಚವಾಗುತ್ತದೆ. ಆದರೆ 200 ಕೋಟಿ ರೂ.ಗಳನ್ನು ಸರ್ಕಾರ ನಗರೋತ್ಥಾನದ ಮೂಲಕ ಒದಗಿಸಿದೆ. ಯೋಜನೆ ಗುತ್ತಿಗೆ ಪಡೆದವರಿಗೆ ಎಲ್ಲ ಸೌಕರ್ಯಗಳನ್ನು ಒದಗಿಸುತ್ತಿರುವುದರಿಂದ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗುವುದಿಲ್ಲ ಎಂದು ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.
ರಿವಾರ್ಡ್ ಸಂಸ್ಥೆ 12 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಚೆಫ್‌ಟೇಕ್ ಸಂಸ್ಥೆ 17 ವಿಧಾನಸಭಾ ಕ್ಷೇತ್ರಗಳಿಗೆ ಗುತ್ತಿಗೆ ನೀಡಿದ್ದು, ಅಡುಗೆ ಪೂರೈಕೆ ಮಾಡಲಿವೆ. ಪ್ರತಿದಿನ ಊಟ ಹಾಗೂ ಉಪಾಹಾರಕ್ಕೆ 57 ರೂ.ಗಳು ಪಾವತಿ ಮಾಡಲಾಗುತ್ತಿದೆ. ಆಹಾರ ಗುಣಮಟ್ಟ ಕಾಪಾಡುವ ಸಲುವಾಗಿ ಎಲ್ಲ ಕ್ಯಾಂಟೀನ್‌ಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಮಂಜುನಾಥ ಪ್ರಸಾದ್ ಹೇಳಿದರು.
ವಿಶೇಷ ಆಯುಕ್ತ ಮಂಜುನಾಥ ರಾಜನ್ ಮಾತನಾಡಿ, ಊಟ, ಉಪಾಹಾರವನ್ನು 250 ರಿಂದ 500 ಜನರಿಗೆ ನೀಡಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಊಟ ಮತ್ತು ಉಪಾಹಾರಕ್ಕೆ 25 ರೂ.ಗಳು ಪಾವತಿ ಮಾಡಿದರೆ ಸರಕಾರ 32 ಪಾವತಿ ಮಾಡುತ್ತಿದೆ ಎಂದು ತಿಳಿಸಿದರು.
ಕ್ಯಾಂಟೀನ್‌ನ ಒಳಭಾಗದಲ್ಲಿ ಎರಡು ಮತ್ತು ಹೊರಭಾಗದಲ್ಲಿ ನಾಲ್ಕು ಕ್ಯಾಮರಾ ಸೇರಿ ಪ್ರತಿ ಕ್ಯಾಂಟೀನ್‌ಗೆ ಒಟ್ಟು 6 ಕ್ಯಾಮರಾಗಳನ್ನು ಅಳವಡಿಸಲು ಬಿಬಿಎಂಪಿ ತೀರ್ಮಾನಿಸಿದೆ. ಕೆಲವು ಕಡೆಗಳಲ್ಲಿ ದುಬಾರಿಯಾದರೂ ಮೋಷನ್ ಸೆನ್ಸಾರ್ ಅಂದರೆ ಯಾವುದಾದರು ವ್ಯಕ್ತಿಯ ಚಲನವಲನವಿದ್ದರೆ ಮಾತ್ರವೇ ಗ್ರಹಿಸುವ ಅತ್ಯಾಧುನಿಕ ಕ್ಯಾಮರಾಗಳನ್ನು ಅಳವಡಿಸುವ ಚಿಂತನೆಯಿದ್ದು, ಇಷ್ಟರಲ್ಲಿಯೇ ಕ್ಯಾಮರಾಗಳನ್ನು ಅಳವಡಿಸುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದು ಅವರು ತಿಳಿಸಿದರು.
ಪ್ಯಾಲೇಸ್ ಗ್ರೌಂಡ್‌ನಲ್ಲಿ ಇಂದಿರಾ ಕ್ಯಾಂಟೀನ್‌ಗೆ ಆಹಾರ ತಯಾರಿಸುವ ಸಲುವಾಗಿ ವಿಶೇಷ ಗುತ್ತಿಗೆಗೆ ಅವಕಾಶ ನೀಡಲಾಗಿದೆ. ಟೆಂಡರ್‌ನ ನಿಯಮಗಳ ಅನ್ವಯ ಊಟ ಪೂರೈಕೆ ಮಾಡಲಾಗುತ್ತಿದೆ. ನೋಡಲ್ ಅಧಿಕಾರಿಗಳು ಗುಣಮಟ್ಟದ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಒಂದು ವೇಳೆ ಗುಣಮಟ್ಟದ ಕಾಪಾಡಲಿಲ್ಲ ಎಂದು ಸಾಬೀತಾರದರೆ ಗುತ್ತಿಗೆಯನ್ನು ರದ್ದು ಮಾಡುತ್ತೇವೆ
-ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ