ಮೆಡಿಕಲ್ ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿಯನ್ನು ಮತ್ತಷ್ಟು ವಿಸ್ತಾರಗೊಳಿಸಿ

Update: 2017-08-18 18:33 GMT

ಮಾನ್ಯರೆ,

ಭಾರತ ದೇಶ ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡಿದೆ. ಆದರೆ ಇನ್ನೂ ನಮ್ಮ ದೇಶದಲ್ಲಿ ಶೇ. 70ರಷ್ಟು ಔಷಧಿಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ. ಅಲ್ಲದೆ ನಮ್ಮ ದೇಶದಲ್ಲಿ ಆಸ್ಪತ್ರೆಗಳಲ್ಲಿ ಉಪಯೋಗಿಸುವ ಶೇ. 90ರಷ್ಟು ಯಂತ್ರೋಪಕರಣಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ ಇಲ್ಲವೇ ವಿದೇಶಗಳಿಂದ ತಂದು ಮಾರಾಟ ಮಾಡುವ ಖಾಸಗಿ ಕಂಪೆನಿಗಳ ಮೂಲಕ ಖರೀದಿಸುತ್ತೇವೆ. ಔಷಧಿಗಳ ತಯಾರಿಕೆಯ ಕ್ಷೇತ್ರದಲ್ಲಿ ನಮ್ಮ ದೇಶ ಇನ್ನ್ನೂ ಸ್ವಾವಲಂಬಿಯಾಗಿಲ್ಲ. ಇನ್ನು ಯಂತ್ರೋಪಕರಣಗಳ ತಯಾರಿಕೆಯ ಕ್ಷೇತ್ರದಲ್ಲಂತೂ ನಾವು ಬಹಳ ಹಿಂದೆ ಇದ್ದೇವೆ.

ವಿದೇಶಗಳಿಂದ ಆಮದು ಮಾಡಿಕೊಳ್ಳುವ ಯಂತ್ರೋಪಕರಣಗಳು ಬಹಳ ದುಬಾರಿಯಾಗಿರುತ್ತವೆ. ಅದರ ಬದಲಿಗೆ ನಮ್ಮದೇ ತಂತ್ರಜ್ಞಾನವನ್ನು ಬಳಸಿ ನಾವೇ ತಯಾರಿಸಿದರೆ ಅದರ ದರವು ಕಡಿಮೆಯಾಗುತ್ತದೆ. ಇದರಿಂದ ರೋಗಿಗಳಿಗೆ ಅನುಕೂಲವಾಗುತ್ತದೆ. ನಮ್ಮ ದೇಶದಲ್ಲಿ ಮೆಡಿಕಲ್ ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿ ಕೋರ್ಸ್‌ಗಳು ಇದ್ದು ಇಲ್ಲಿ ಪದವಿ ಪಡೆದಂತಹ ಬಹಳಷ್ಟು ಮಂದಿ ಹೆಚ್ಚಿನ ಹಣದ ಆಸೆಗಾಗಿ ವಿದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಮತ್ತಷ್ಟು ಕ್ರಮಗಳನ್ನು ಕೈಗೊಂಡು ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿಗೆ ಈ ಕೋರ್ಸ್‌ಗಳನ್ನು ಓದಲು ಬೇಕಾದಂತಹ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಮತ್ತು ನಮ್ಮ ದೇಶದಲ್ಲಿಯೇ ಔಷಧಿ ತಯಾರಿಕೆ ಮತ್ತು ಯಂತ್ರೋಪಕರಣಗಳ ತಯಾರಿಕಾ ವಿಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕು. ವಿಶೇಷವಾಗಿ ನಮ್ಮ ದೇಶದಲ್ಲಿ ಔಷಧಿಗಳ ತಯಾರಿಕೆಯ ಕೊರತೆಯಿಂದ ಇದರ ದರಗಳು ದುಬಾರಿಯಾಗಿವೆ. ಬಡವರ ಪಾಲಿಗಂತೂ ಆರೋಗ್ಯ ಕ್ಷೇತ್ರ ಅತ್ಯಂತ ದುಬಾರಿಯಾಗಿದೆ. ಸರಕಾರದ ಅಧೀನದಲ್ಲಿರುವ ಅನೇಕ ಔಷಧಿ ತಯಾರಿಕಾ ಘಟಕಗಳು ಕ್ರಿಯಾಶೀಲವಾಗಿಲ್ಲ ಮತ್ತು ಅವುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದಕ್ಕೆ ಆಡಳಿತಾತ್ಮಕವಾದಂತಹ ಕಾರಣಗಳೂ ಇರಬಹುದು. ಇದೊಂದು ಗಂಭೀರವಾದಂತಹ ವಿಚಾರವಾಗಿರುವುದರಿಂದ ಸರಕಾರಗಳು ಕೂಡಲೇ ಇದರ ಕಡೆ ಗಮನ ಹರಿಸಬೇಕು. ಹಾಗಲ್ಲದೆ ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ’ ಎನ್ನುವಂತೆ ಜನಸಾಮಾನ್ಯರಿಗೆ ಅನುಕೂಲವಲ್ಲದ ಸಂಗತಿಗಳ ವೈಭವೀಕರಿಸಿರುವುದರಿಂದ ಮತ್ತು ಹೆಚ್ಚು ಹೆಚ್ಚು ಬಂಡವಾಳವನ್ನು ಆ ಕ್ಷೇತ್ರಗಳಿಗೆ ಹಾಕುವುದರಿಂದ ಜನಸಾಮಾನ್ಯರ ಬದುಕೇನು ಹಸನಾಗುವುದಿಲ್ಲ.

Similar News