ಗ್ರೀಕ್ ಪುರಾಣಗಳಲ್ಲಿ ಕ್ಯಾನ್ಸರ್

Update: 2017-08-19 12:27 GMT

ಮಾನವನ ದೇಹದ ಜೀವ ಕೋಶಗಳು (cells) ಒಂದಕ್ಕೊಂದು ನಿರ್ದಿಷ್ಟ ಮಾದರಿಯಲ್ಲಿ ಬಿಗಿಯಾಗಿ ಅಂಟಿಕೊಂಡು ಅಂಗಾಂಶವಾಗುತ್ತದೆ  (tissue). ಅದೇ ರೀತಿ ಅಂಗಾಂಶವು ಅಂಗಾಂಗಗಳಾಗಿ (organ), ಅಂಗಾಂಗಗಳು ಅಂಗ ವ್ಯವಸ್ಥೆಯಾಗಿ (organ systems) ರಚಿತವಾಗುತ್ತದೆ. ಅಂಡಾಶಯದ  (ovary and testis) ಹೊರತುಪಡಿಸಿ ಬಾಕಿ ಎಲ್ಲ ಅಂಗಾಂಗಗಳ ಪ್ರತಿಯೊಂದು ಜೀವ ಕೋಶವು ದೇಹದ ಆರೋಗ್ಯ ಕಾಪಾಡುವಷ್ಟರ ಮಟ್ಟಿಗೆ ಮಾತ್ರ ಪ್ರತೀ ನಿತ್ಯ ದೇಹದ ಸತ್ವ, ಕಿಣ್ವಗಳನ್ನು ಮತ್ತು ಹಾರ್ಮೋನುಗಳನ್ನು ಬಳಸಿಕೊಂಡು ಬೆಳೆದು, ನಂತರ ವಿಭಜನೆಗೊಂಡು ಒಂದು ಜೀವಕೋಶ ಎರಡಾಗಿ ಗುಣಿಸುತ್ತದೆ. ಆದರೆ ಜೀವ ಕೋಶಗಳು ದೇಹದ ಅಗತ್ಯಕ್ಕಿಂತ ಹೆಚ್ಚಾಗಿ ಸ್ವಪ್ರೇರಿತವಾಗಿ ದೇಹದ ಆವಶ್ಯಕತೆಗಳನ್ನು ಲೆಕ್ಕಿಸದೆ ದೇಹದ ಸತ್ವವನ್ನು ಉಪಯೋಗಿಸಿಕೊಂಡೇ ಗುಣಿಸಲು ಶುರುವಾಗಿ, ಗುಣಿತ ಜೀವಕೋಶಗಳು ಒಂದಕ್ಕೊಂದು ಸಡಿಲವಾಗಿ ಅಂಟಿಕೊಂಡು, ಬಹುತೇಕವಾಗಿ ಯಾವುದೇ ಮಾದರಿಯನ್ನು ಹೊಂದದೆ ಅಥವಾ ಒಂದು ಅಂಗಾಂಶದಲ್ಲಿ ಪರಕೀಯ ಅಂಗಾಂಶಗಳ ರೂಪವನ್ನು ಪಡೆದು ಜೀವಾಂಗದ ವಾಸ್ತು ಶಿಲ್ಪವನ್ನೇ ವಿರೂಪಗೊಳಿಸುವಂತೆ ಗಡ್ಡೆಯಾಗಿ ಬೆಳೆಯುತ್ತದೆ. ಆ ಗಡ್ಡೆಗಳು ಬೆಳಯುತ್ತ ಅಂಗಾಂಗಗಳ ಮೇಲೆ ಒತ್ತಡದ ಪರಿಣಾಮ ಬೀರುವುದು, ಮೂಲ ಅಂಗಾಂಗವನ್ನೇ ಅಕ್ರಮಣ ಮಾಡುವುದು, ಅಂಗಾಂಗದ ದಗ್ಧಕೋಶ ಮತ್ತು ರಕ್ತ ಕ್ಯಾಪಿಲರಿಯನ್ನು ಕ್ಯಾನ್ಸರ್ ಜೀವ ಕೋಶಗಳು ಹೊಕ್ಕು ಮೂಲ ಅಂಗಾಂಗದಿಂದ ಬೇರೆ ಅಂಗಾಂಗ ಸೇರಿ ಅಲ್ಲಿ ಗೂಡು ಕಟ್ಟಿ ಮತ್ತೆ ತನ್ನ ವಿಭಜಕ ಹಾಗೂ ಗಣಿಕ ಕಾರ್ಯವನ್ನು ಮುಂದುವರಿಸಿ ಆ ಅಂಗಾಂಗಗಳ ಮೇಲೂ ಮೂಲ ಅಂಗಾಂಗಗಳ ಮೇಲೆ ಬೀರಿದ ಪರಿಣಾಮವನ್ನೇ ಬೀರುವುದೆ ಕ್ಯಾನ್ಸರ್.

ಈ ಗಡ್ಡೆಯಲ್ಲಿ 109 ಜೀವಕೋಶವಾಗುವವರೆಗೂ ಯಾವುದೇ ವೈದ್ಯಕೀಯ ತಪಾಸಣೆಯಿಂದಲೂ ಪತ್ತೆಯಾಗುವುದಿಲ್ಲ. ಮೂತ್ರ ಅಥವಾ ಮಲದ ಅಭ್ಯಾಸದಲ್ಲಿ ಏರುಪೇರುಗಳು, ಒಣಗದ ಗಾಯ, ಗಡ್ಡೆ ಕಾಣಿಸಿಕೊಳ್ಳುವುದು, ರಕ್ತಸ್ರಾವ ಅಥವಾ ನಿಲ್ಲದ ಬಿಳಿಬಟ್ಟೆ, ನಿರಂತರ ಕೆಮ್ಮು, ದೇಹದ ತೂಕ ಕಡಿಮೆಯಾಗುವುದು, ದೇಹದ ಯಾವುದೇ ಭಾಗದಲ್ಲಿ ನಿರಂತರವಾಗಿ ನೋವಾಗುವುದು, ಅಂಗಾಂಗಗಳ ಸಹಜ ಕ್ರಿಯೆಯಲ್ಲಿ ಅಡ್ಡಿಯುಂಟಾಗುವುದು, ಸುಸ್ತಾಗುವುದು, ನಿರಂತರವಾಗಿ ಜ್ವರ ಕಾಣಿಸಿಕೊಳ್ಳುವುದು ಇವೆಲ್ಲ ಕ್ಯಾನ್ಸರ್‌ನ ಮೊದಲ ಕೆಲ ಗುಣಲಕ್ಷಣಗಳು.

ಆಧುನಿಕ ವೈದ್ಯಕೀಯ ಪಿತಾಮಹರೆಂದೇ ಪ್ರಸಿದ್ಧರಾದ ಗ್ರೀಸ್‌ನ ಹಿಪ್ಪೊಕ್ರೇಟಸ್ (ಕಿ.ಪೂ. 460 370) ಕ್ಯಾನ್ಸರ್ ಎಂಬ ಪದವನ್ನು ಗ್ರೀಸ್‌ನ ಕಾರ್ಸಿನೋಸ್ (ಬೃಹತ್ ಏಡಿ ಎಂದರ್ಥ) ವೈದ್ಯಕೀಯ ಶಬ್ದಕೋಶಕ್ಕೆ ಅಳವಡಿಸಿದರು. 1600 ಕಿ.ಪೂ. ಹಾಗೂ 1,500 ಕಿ.ಪೂ.ದ ಪ್ರಾಚೀನ ಈಜಿಪ್ಟ್‌ನ ಹಸ್ತಪ್ರತಿಯಲ್ಲಿ ಪಿರಮಿಡ್ ಮಮ್ಮಿಯ ಮೂಳೆ ಕ್ಯಾನ್ಸರ್ ಮತ್ತು ಮಾನವನ ಸ್ತನ ಕ್ಯಾನ್ಸರ್ ರೋಗಿಯ ಬಗ್ಗೆ ಪ್ರಸ್ತಾವನೆ ಮಾಡಲಾಗಿದೆ. ಈ ಹಸ್ತಪ್ರತಿಗಳು ಕ್ಯಾನ್ಸರ್‌ಗೆ ಯಾವುದೇ ಚಿಕಿತ್ಸೆ ಇಲ್ಲದ್ದನ್ನು, ಶರೀರದ ಮೇಲ್ಮೈ ಕ್ಯಾನ್ಸರ್ ಪ್ರಸ್ತುತವಾಗಿ ಶಸ್ತ್ರಚಿಕಿತ್ಸೆ ಮಾಡಿ ತೆಗೆಯುವಂತೆ ತೆಗೆದರೂ ಕೂಡ ವಾಪಸಾಗುವುದನ್ನು ದಾಖಲಿಸಿದೆ. ಆದರೆ, ಆಧುನಿಕ ವೈದ್ಯಕೀಯ ವಿಜ್ಞಾನದ ಶಸ್ತ್ರಚಿಕಿತ್ಸೆ, ಕಿಮೋಥೆರೆಪಿ, ರೇಡಿಯೋಥೆರೆಪಿಯಿಂದ ವಯಸ್ಕರಲ್ಲಿ ಶೇ.40-50ರಷ್ಟು ಹಾಗೂ ಮಕ್ಕಳಲ್ಲಿ ಶೇ.80ರಷ್ಟು ಕ್ಯಾನ್ಸರ್ ರೋಗಿಗಳನ್ನು ಗುಣಪಡಿಸಬಹುದು.

ಗ್ರೀಸ್‌ನ ಪೌರಾಣಿಕ ಕಥೆಯಲ್ಲಿ ಹೇರ ದೇವತೆಯು ಹೆರಕ್ಲೇಸ್‌ನ ಜೀವನದಲ್ಲಿ ತೊಂದರೆಯನ್ನು ಉಂಟುಮಾಡಲು ಹೆರಕ್ಲೇಸ್‌ಗೆ ಸನ್ನಿ ಬರುವಂತೆ ಮಾಡಿ ಅವನ ಮಕ್ಕಳು ಮತ್ತು ಅವನ ಹೆಂಡತಿಯನ್ನು ಸ್ವತಃ ಕೊಲ್ಲುವಂತೆ ಮಾಡುತ್ತಾಳೆ. ಸನ್ನಿಯಿಂದ ಹೊರ ಬರುತ್ತಿದ್ದಂತೆಯೇ ಹೆರಕ್ಲೇಸ್ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಪಟ್ಟು ಅಪೋಲೊ ದೇವರಿಗೆ ಪ್ರಾರ್ಥಿಸುತ್ತಾನೆ. ಅಪೋಲೊ ದೇವರು ಟಿರ್ಯನ್ಸ್ ಮತ್ತು ಮೈಸಿನ್ಯೆ ರಾಜನಾದ ಯುರಿಸ್ತಿಯುಸ್ ಬಳಿ ಹನ್ನೆರೆಡು ವರ್ಷಗಳ ಕಾಲ ಶಿಕ್ಷೆ ತೀರಿಸಲು ಅಜ್ಞೆ ಮಾಡುತ್ತಾನೆ. ಆ ಶಿಕ್ಷೆಯ ಭಾಗವಾಗಿಯೇ ಹೆರಕ್ಲೇಸ್ ಸಾಮಾನ್ಯ ಮನುಷ್ಯರಿಗೆ ಅಸಾಧ್ಯವಾದ ಹನ್ನೆರಡು ಮಹಾ ಕೆಲಸ ಮಾಡಬೇಕಾಗುತ್ತದೆ.

(stem cells) ಎರಡನೆಯ ಮಹಾ ಕೆಲಸವೇ ಹೇರ ದೇವತೆಯ ಲೆರ್ಲಿಯೆನ್ ಹೈಡ್ರ (ಒಂಬತ್ತುತಲೆಯ ಹಾವನ್ನು) ಕೊಲ್ಲುವುದು. ಹೈಡ್ರದ ಒಂದು ತಲೆಯನ್ನು ತನ್ನ ದಂಡದಿಂದ ಕತ್ತರಿಸಿದರೆ ಎರಡು ಮತ್ತೆ ಅದಕ್ಕೆ ಎರಡು ತಲೆ ಉದ್ಭವವಾಗುತ್ತದೆ. ಹೆರಕ್ಲೇಸ್ ಬೆಂಕಿಯ ಬಾಣ ಬಿಟ್ಟು ಹೈಡ್ರವನ್ನು ತನ್ನ ಗುಹೆಯಿಂದ ಹೊರಗೆಳೆಯುತ್ತಲೇ, ಹೈಡ್ರ ಅವನ ಎಡಗಾಲನ್ನು ಸುತ್ತಿಹಿಡಿಯುತ್ತದೆ. ಹೆರಕ್ಲೇಸ್ ಹೈಡ್ರದ ತಲೆಗಳನ್ನು ತನ್ನ ದಂಡದಿಂದ ಕತ್ತರಿಸುತ್ತಿದ್ದಂತೆ, ಹೈಡ್ರದ ಗೆಳೆಯ ಕಾರ್ಸಿನೋಸ್ (ಬೃಹತ್ ಏಡಿ) ಹೈಡ್ರ ಹಿಡಿದ ಎಡಗಾಲನ್ನು ಕಚ್ಚಲು ಶುರುಮಾಡುತ್ತಲೆ ಹೆರಕ್ಲೇಸ್‌ಗೆ ಸಾಕಷ್ಟು ನೋವಾಗುತ್ತದೆ. ಇದನ್ನೆಲ್ಲ ಸಹಿಸಿಕೊಂಡು ಹೈಡ್ರದ ತಲೆಯನ್ನು ತನ್ನ ದಂಡದಿಂದ ಕತ್ತರಿಸುತ್ತ ಕಾರ್ಸಿನೋಸ್ ಅನ್ನು ತನ್ನ ಕಾಲಿನಡಿಯಲ್ಲಿ ಹೊಸಕಿ ಹಾಕುತ್ತಾನೆ. ಈ ತ್ಯಾಗವನ್ನು ದೇವತೆ ಹೇರ ಮೆಚ್ಚಿ ಕಾರ್ಸಿನೋಸನ್ನು ಆಕಾಶದ ನಕ್ಷತ್ರಪುಂಜವನ್ನಾಗಿ ಪರಿವರ್ತಿಸುತ್ತಾಳೆ. ಹೆರಕ್ಲೇಸ್ ತನ್ನ ಸಹೋದರಳಿಯನಾದ ಹಿಯಲೋಸ್‌ನ ಸಹಾಯದಿಂದ ಹೈಡ್ರದ ತಲೆ ಕತ್ತರಿಸುತ್ತಲೇ ಅದರ ಕುತ್ತಿಗೆಯನ್ನು ಬೆಂಕಿಯಿಂದ ಸುಡುತ್ತ ಹೈಡ್ರವನ್ನು ಕೊಲ್ಲುತ್ತಾನೆ. ಹೈಡ್ರದ ಒಂಬತ್ತನೆಯ ತಲೆ ಅವಿನಾಶಿಯಾಗಿದ್ದರಿಂದ ಅದನ್ನು ಕತ್ತರಿಸಿ ರಸ್ತೆಯ ಬದಿಯಲ್ಲಿ ಹೂತಿಟ್ಟು ಅದರ ಮೇಲೆ ಬಂಡೆಯನ್ನೇರಿ ಮುಂದಿನ ಶಿಕ್ಷೆಯನ್ನು ಅನುಭವಿಸಲು ತನ್ನ ಸಹೋದರಳಿಯನ್ನು ಕರೆದುಕೊಂಡು ಯುರಿಸ್ತಿಯುಸ್ ಬಳಿಗೆ ತೆರಳುತ್ತಾನೆ. ಅದೇ ರೀತಿ ಕ್ಯಾನ್ಸರ್ ಕಾಯಿಲೆಯು ಮೂಲ ಅಂಗಾಂಗವನ್ನು ಏಡಿಯಂತೆ ಹಿಡಿದು, ಹೈಡ್ರದಂತೆ ದೇಹವನ್ನು ಅವರಿಸಿ, ಸಂಪೂರ್ಣ ಚಿಕಿತ್ಸೆ ಪಡೆಯದೆ ಹೋದಲ್ಲಿ (ಶಸ್ತ್ರಚಿಕಿತ್ಸೆ, ಕಿಮೋಥೆರೆಪಿ, ರೇಡಿಯೋಥೆರೆಪಿಯ ವಿಭಿನ್ನ ಸಂಯೋಜನೆಯ ಚಿಕಿತ್ಸೆ) ಹೈಡ್ರದ ತಲೆಯಂತೆ ದ್ವಿಗುಣವಾಗಿ ವಾಪಸು ಬರುವ ಸಾಧ್ಯತೆ ಇರುತ್ತದೆ. ಅಲ್ಲದೇ ಸಂಪೂರ್ಣ ಚಿಕಿತ್ಸೆ ಪಡೆದ ನಂತರವು ಬಂಡೆಯ ಕೆಳಗಡೆ ಹೂತಿಟ್ಟ ಹೈಡ್ರದ ಅವಿನಾಶಕ ತಲೆಯಂತೆ ಕಾಂಡ ಕೋಶಗಳು ಜಡಸ್ಥಿತಿಯಲ್ಲಿ ಇರುತ್ತದೆ. ಆದುದರಿಂದ ವೈದ್ಯರ ಬಳಿ ಕಾಲಬದ್ಧವಾಗಿ ತಪಾಸಣೆಗೆ ಹೋಗುವುದು ಅವಶ್ಯಕವಾಗಿರುತ್ತದೆ.

ಕ್ಯಾನ್ಸರ್ ಕಾಯಿಲೆಯು ಮೂಲ ಅಂಗಾಂಗವನ್ನು ಏಡಿಯಂತೆ ಹಿಡಿದು, ಹೈಡ್ರದಂತೆ ದೇಹವನ್ನು ಅವರಿಸಿ, ಸಂಪೂರ್ಣ ಚಿಕಿತ್ಸೆ ಪಡೆಯದೆ ಹೋದಲ್ಲಿ (ಶಸ್ತ್ರಚಿಕಿತ್ಸೆ, ಕಿಮೋಥೆರೆಪಿ, ರೇಡಿಯೋಥೆರೆಪಿಯ ವಿಭಿನ್ನ ಸಂಯೋಜನೆಯ ಚಿಕಿತ್ಸೆ) ಹೈಡ್ರದ ತಲೆಯಂತೆ ದ್ವಿಗುಣವಾಗಿ ವಾಪಸು ಬರುವ ಸಾಧ್ಯತೆ ಇರುತ್ತದೆ. ಅಲ್ಲದೇ ಸಂಪೂರ್ಣ ಚಿಕಿತ್ಸೆ ಪಡೆದ ನಂತರವು ಬಂಡೆಯ ಕೆಳಗಡೆ ಹೂತಿಟ್ಟ ಹೈಡ್ರದ ಅವಿನಾಶಕ ತಲೆಯಂತೆ ಕಾಂಡ ಕೋಶಗಳು ಜಡಸ್ಥಿತಿಯಲ್ಲಿ ಇರುತ್ತದೆ.

Writer - ಡಾ. ಆರ್. ವಿನಯಕುಮಾರ್

contributor

Editor - ಡಾ. ಆರ್. ವಿನಯಕುಮಾರ್

contributor

Similar News