ಹಳೆ ಪ್ರಕರಣಕ್ಕೆ ಮರುಜೀವ: ಡಿ.ವಿ.ಸದಾನಂದಗೌಡ
ಬೆಂಗಳೂರು, ಆ.19: ಶಿವರಾಮಕಾರಂತ ಬಡಾವಣೆಯ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಷ್ಟು ದಿನ ಕುಂಭಕರ್ಣ ನಿದ್ದೆಯಲ್ಲಿದ್ದರು. ಈಗ ಹಳೆಯ ಪ್ರಕರಣಕ್ಕೆ ಜೀವ ಕೊಟ್ಟಿದ್ದಾರೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಕೆ.ಆರ್.ಪುರದ ಕಸ್ತೂರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಆದಾಯ ತೆರಿಗೆ ಇಲಾಖೆ ನಡೆದ ದಾಳಿ ಕಾಂಗ್ರೆಸಿಗರನ್ನು ಕಂಗಡಿಸಿದೆ ಎಂದರು.
ರಾಜಕೀಯ ದ್ವೇಷ ರಾಜ್ಯದ ಏಳಿಗೆಗೆ ಪೂರಕವಲ್ಲ. ಶಿವರಾಮಕಾರಂತ ಬಡಾವಣೆಯ ಯೋಜನೆ ಕೈ ಬಿಟ್ಟ ನಂತರ, ಡಿನೋಟಿಫಿಕೇಷನ್ ಮಾಡಿ ಏನು ಮಾಡುವುದು. ಸಿದ್ದರಾಮಯ್ಯ ವಿರುದ್ಧ ಎಸಿಬಿಯಲ್ಲಿ ಎಷ್ಟು ದೂರುಗಳು ದಾಖಲಾಗಿವೆ ಎಂಬುದನ್ನು ಮೊದಲು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ದೂರುಗಳ ಕುರಿತು ಎಫ್‌ಐಆರ್ ಯಾಕೆ ಹಾಕಲಿಲ್ಲ. ಅವರ ವಿರುದ್ಧ ಯಾಕೆ ತನಿಖೆಯಾಗುತ್ತಿಲ್ಲ. ಡಿನೋಟಿಫಿಕೇಷನ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು.