×
Ad

ರಾಷ್ಟ್ರೀಯ ಹೆದ್ದಾರಿಗಳ ಡಿನೋಟಿಫೈ ಮಾಡುವ ಅರ್ಜಿ ತಿರಸ್ಕರಿಸಿದ ಕೇಂದ್ರ

Update: 2017-08-19 19:25 IST

ಬೆಂಗಳೂರು, ಆ.19: ನಗರ ಪ್ರದೇಶಗಳಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡುವ ಸಂಬಂಧ ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ, ಈ ಕುರಿತು ಕಾನೂನಿನಲ್ಲಿ ಲಭ್ಯವಿರುವ ಮುಂದಿನ ಅವಕಾಶಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.

  ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಒಳಪಟ್ಟಿದೆ ಎಂಬ ಕಾರಣಕ್ಕೆ ನಗರದ ಎಂಜಿ ರಸ್ತೆ, ರೆಸಿಡೆನ್ಸಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳ ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರವಾನಗಿ ನವೀಕರಿಸಲು ನಿರಾಕರಿಸಿರುವ ರಾಜ್ಯ ಅಬಕಾರಿ ಇಲಾಖೆಯ ಕ್ರಮ ಪ್ರಶ್ನಿಸಿ ಬ್ರಿಗೇಡ್ ರಸ್ತೆಯ ಫ್ಯೂಷನ್ ಲಾಂಜ್ ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ 20ಕ್ಕೂ ಹೆಚ್ಚು ಬಾರ್ ಮಾಲಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಪೀಠ ತೀರ್ಪು ಕಾಯ್ದಿರಿಸಿತು.

    ಇದಕ್ಕೂ ಮುನ್ನ ರಾಜ್ಯ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ರಾಜ್ಯ ಸರಕಾರದ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿರುವ ಕಾರಣ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳು ಸೇರಿದಂತೆ ನಗರ ಪ್ರದೇಶಗಳಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳು ಕೇಂದ್ರ ಸರಕಾರದ  ಸುಪರ್ದಿಯಲ್ಲೇ ಉಳಿಯಲಿವೆ. ಹೀಗಾಗಿ ಅರ್ಜಿದಾರರ ಬಾರ್‌ಗಳ ಪರವಾನಗಿಯನ್ನು ನವೀಕರಿಸಲು ಸಾಧ್ಯವಿಲ್ಲ. ಆದರೆ ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡುವ ಸಂಬಂಧ ರಾಜ್ಯ ಸರಕಾರದ ಮುಂದಿರುವ ಲಭ್ಯ ಕಾನೂನು ಅವಕಾಶಗಳ ಕುರಿತು ಪರಿಶೀಲನೆ ನಡೆಸಿ, ಸೂಕ್ತ ರೀತಿಯಲ್ಲಿ ಮುಂದುವರಿಯಲಾಗುತ್ತದೆ ಎಂದು ತಿಳಿಸಿದರು.

  ಕೇಂದ್ರ ಸರಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವಡಗಿ ವಾದ ಮಂಡಿಸಿ, ಹೆದ್ದಾರಿಗಳ ಬದಿಯ 500 ಮೀ. ಅಂತರದಲ್ಲಿ ಯಾವುದೇ ಮದ್ಯದಂಗಡಿಗಳಿಗೆ ಪರವಾನಗಿ ನೀಡದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಆದೇಶ ಎಲ್ಲ ಮಹಾನಗರ ಪಾಲಿಕೆ, ನಗರ, ಪಟ್ಟಣ ಮತ್ತು ಸ್ಥಳೀಯ ಪ್ರಾಧಿಕಾರಗಳ ಅಧೀನದ ರಸ್ತೆಗಳಿಗೂ ಅನ್ವಯ ಆಗುತ್ತದೆ. ಸಂವಿಧಾನದ ಅನುಚ್ಛೇಧ 142ರ ಪ್ರಕಾರ ಸುಪ್ರೀಂ ಕೋರ್ಟ್ ಆದೇಶವನ್ನು ಯಾವುದೇ ಪ್ರಾಧಿಕಾರಗಳು ಉಲ್ಲಂಘನೆ ಮಾಡುವಂತಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಹಾದುಹೋಗುವ ಎನ್‌ಎಚ್ 4 ಮತ್ತು 7ರ 76.63 ಕಿ.ಮೀ. ರಸ್ತೆ ಸೇರಿದಂತೆ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಯ ಒಟ್ಟು 609.65 ಕಿ.ಮೀ ಉದ್ದದ ಆಯ್ದ ಭಾಗಗಳಲ್ಲಿ ರಸ್ತೆಯನ್ನು ಡಿನೋಟಿಫೈ ಮಾಡುವಂತೆ ಕೋರಿ ರಾಜ್ಯ ಸರಕಾರದ ಸಲ್ಲಿಸಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಪೀಠಕ್ಕೆ ಸ್ಪಷ್ಟ ಪಡಿಸಿದರು.

ಅಂತಿಮವಾಗಿ ವಾದ ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ ತೀರ್ಪು ಕಾಯ್ದಿರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News