ಗ್ರಾಮೀಣ ಭಾಗದ ಅಲ್ಪಸಂಖ್ಯಾತರಿಗೆ ಟ್ರ್ಯಾಕ್ಟರ್ ವಿತರಣೆ: ತನ್ವೀರ್ ಸೇಠ್
ಬೆಂಗಳೂರು, ಆ.19: ಕೆಎಂಡಿಸಿ ವತಿಯಿಂದ ಪ್ರಸ್ತುತ ಸಾಲಿನಲ್ಲಿ ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಸಮುದಾಯದ ರೈತರಿಗೆ ಟ್ರ್ಯಾಕ್ಟರ್, ಟ್ರೇಲರ್ ವಿತರಣೆ ಮಾಡಲಾಗುವುದೆಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.
ಶನಿವಾರ ವಸಂತನಗರದ ದೇವರಾಜ ಅರಸು ಭವನದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಮ್ಮಿಕೊಂಡಿದ್ದ, ಸ್ವಯಂ ಸೇವಾ ಸಂಸ್ಥೆ ಹಾಗೂ ತರಬೇತಿದಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಗರ ಪ್ರದೇಶದಲ್ಲಿರುವ ಮುಸ್ಲಿಮರು ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಮುಂದಾಗಿದ್ದಾರೆ. ಆದರೆ, ಗ್ರಾಮೀಣ ಭಾಗದಲ್ಲಿರುವ ಅಲ್ಪಸಂಖ್ಯಾತರ ಸಮುದಾಯಗಳ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಶೇಕಡ 50 ರಷ್ಟು ಸಹಾಯಧನ ಸೇರಿ ಟ್ರ್ಯಾಕ್ಟರ್, ಟ್ರೇಲರ್ ನೀಡಲಾಗುವುದು. ಇದರಿಂದ ಸ್ವಯಂ ಉದ್ಯೋಗ ದೊರೆಯುತ್ತದೆ ಎಂದು ತನ್ವೀರ್ ಸೇಠ್ ಮಾಹಿತಿ ನೀಡಿದರು.
ಅಧ್ಯಯನ ಮುಖ್ಯ: ರಾಜ್ಯ ಸರಕಾರ ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿರುವುದಲ್ಲದೆ, ಅದನ್ನು ಜನಸಾಮಾನ್ಯರಿಗೆ ಮುಟ್ಟಿಸಿದೆ. ಆದರೆ, ಈ ಯೋಜನೆಗಳಿಂದ ಕುಟುಂಬಗಳು ಪ್ರಗತಿ ಸಾಧಿಸಿವೆಯೆ ಎಂಬುವುದರ ಬಗ್ಗೆ ಅಧ್ಯಯನ ನಡೆಸಬೇಕು. ಇಲ್ಲದಿದ್ದರೆ, ಯೋಜನೆಗಳು ಉಪಯೋಗ ಆಗುವುದಿಲ್ಲ ಎಂದು ನುಡಿದರು.
ದೇಶದಲ್ಲಿಯೇ ಅಲ್ಪಸಂಖ್ಯಾತರಿಗೆ ಸಾಕಷ್ಟು ಯೋಜನೆಗಳನ್ನು ನೀಡುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಮುಂಚೂಣಿಯಲ್ಲಿದೆ ಎಂದ ಅವರು, ಸಾಕಷ್ಟು ಮುಸ್ಲಿಮರ ಬಳಿ ಈಗಲೂ ಆಧಾರ್ ಕಾರ್ಡ್, ಮತ ಚೀಟಿ ಸೇರಿದಂತೆ ಯಾವುದೇ ದಾಖಲೆಗಳಿಲ್ಲ. ಹೀಗಾಗಿ, ಖಾಸಗಿ ಸಂಘಸಂಸ್ಥೆಗಳು ಈ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಮಾತನಾಡಿ, ದಲಿತ ಮತ್ತು ಅಲ್ಪಸಂಖ್ಯಾತರು ಆರ್ಥಿಕವಾಗಿ ಮುಂದಾಗಲು ನಿಗಮ ಮಂಡಳಿಗಳು ಸಹಕಾರಿ ಆಗಿವೆ. ರಾಜ್ಯ ಸರಕಾರ ಹಲವು ಕಾರ್ಯಕ್ರಮಗಳನ್ನು ಬಡವರಿಗೆ ಜಾರಿಗೆ ತಂದಿದೆ. ಇದರ ಸದುಪಯೋಗ ಪಡೆಯುವಲ್ಲಿ ಬಹುಜನರು ಮುಂದಾಗಬೇಕೆಂದು ಹೇಳಿದರು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, 1986ರಲ್ಲಿ ಸ್ಥಾಪನೆಯಾದ ನಿಗಮವು ಅಲ್ಪಸಂಖ್ಯಾತರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ದುಡಿಯುತ್ತಿದೆ. ಅಲ್ಲದೆ, ಪ್ರಸ್ತುತ ಸಾಲಿನಲ್ಲಿ ರಾಜ್ಯ ಸರಕಾರವು 2145.13 ಕೋಟಿ ರೂ. ಒದಗಿಸಿದೆ ಎಂದು ಮಾಹಿತಿ ನೀಡಿದರು.
ಕೇರಳ ಮಾದರಿಯಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಹಿಂತಿರುಗಿರುವ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ , ಟ್ಯಾಕ್ಸಿ ಖರೀದಿಗೆ ಅನುದಾನ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಸೇರಿದಂತೆ ಇನ್ನಿತರೆ ಹೊಸ ಯೋಜನೆಗಳು ಜಾರಿಗೆ ಬಂದಿದ್ದು, ಅತಿ ಕಡಿಮೆ ಬಡ್ಡಿ ದರದಲ್ಲಿ ಮತ್ತು ಸುಲಭ ಕಂತುಗಳ ಮೂಲಕ ಮರುಪಾವತಿಸುವ ಸಾಲ ನೀಡಲಾಗುವುದೆಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ರೋಶನ್‌ಬೇಗ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್, ವೃತ್ತ ಐಎಎಸ್ ಅಧಿಕಾರಿ ಝಮೀರ್ ಪಾಶಾ, ಕೆಎಂಡಿಸಿ ವ್ಯವಸ್ಥಾಪಕ ನಿರ್ದೇಶಕಿ ಎನ್.ಟಿ.ಅಬ್ರೂ, ನಿರ್ದೇಶಕ ಅಕ್ರಂಪಾಶಾ ಸೇರಿ ಪ್ರಮುಖರು ಹಾಜರಿದ್ದರು.