‘ಮನಸ್ಸು ಓದುವ’ ಕಲೆಯ ಅಣುಕು ಪ್ರದರ್ಶನ!

Update: 2017-08-19 14:38 GMT

ಕೆಲ ವರ್ಷಗಳ ಹಿಂದೆ ನನಗೆ ಮೈಸೂರು ವಿಶ್ವವಿದ್ಯಾನಿಲಯದ ಕೆಲ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಿಂದ ಕರೆ ಬಂದಿತ್ತು. ಪ್ರಸ್ತುತ, ಈ ವಿಶ್ವವಿದ್ಯಾನಿಲಯವು ಮಂಗಳೂರು ವಿಶ್ವವಿದ್ಯಾನಿಲಯವಾಗಿ ಅಭಿವೃದ್ಧಿಹೊಂದಿದೆ. ಆ ವಿಶ್ವವಿದ್ಯಾನಿಲಯ ದವರು, 1976ರಲ್ಲಿ ವಿಚಾರವಾದಿ ಡಾ. ಅಬ್ರಹಾಂ ಕೋವೂರ್‌ರವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭ ನಾವು ರೆಕಾರ್ಡ್ ಮಾಡಿದ್ದ  ಭಾಷಣವನ್ನು ಕೇಳಲು ಬಯಸಿದ್ದರು. ಮಾತ್ರವಲ್ಲದೆ, ಪವಾಡಗಳ ರಹಸ್ಯಗಳನ್ನು ಬಯಲು ಮಾಡುವುದರ ಪ್ರದರ್ಶನವನ್ನು ನೀಡಬೇಕೆಂಬುದೂ ಅವರ ಬೇಡಿಕೆಯಾಗಿತ್ತು.

ಆ ಬೇಡಿಕೆಯನ್ನು ಮನ್ನಿಸಿ ನಮ್ಮ ತಂಡ ವಿಶ್ವವಿದ್ಯಾನಿಲಯದಲ್ಲಿ ಭಾಷಣ, ರೆಕಾರ್ಡ್‌ನ ಆಲಿಕೆ, ಪವಾಡ ಬಯಲಿಗೆಳೆಯುವ ಕೆಲವೊಂದು ಘಟನೆಗಳ ಅಣಕನ್ನೂ ಪ್ರದರ್ಶಿಸಿತು. ಇದಾದ ಬಳಿಕ ಪ್ರಶ್ನೋತ್ತರ ಸಮಯ. ಹಲವಾರು ರೀತಿಯ ಪ್ರಶ್ನೆಗಳು, ಬಿರುಸು ಮಾತಿನ ಸುರಿಮಳೆ ಅಂದು ನಾವು ಎದುರಿಸಬೇಕಾಗಿತ್ತು. ಮೂಢನಂಬಿಕೆ, ಅತಿಮಾನುಷ ಶಕ್ತಿಗಳ ಹಿಂದಿನ ವೈಜ್ಞಾನಿಕ ಕೌತುಕಗಳನ್ನು ತಿಳಿಸುವುದು, ಜನರಲ್ಲಿ ವಿಜ್ಞಾನದ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಕೆಲಸವಾದ್ದರಿಂದ ನಾವು ನಮ್ಮ ಪ್ರದರ್ಶನ, ಕಾರ್ಯಕ್ರಮಗಳ ಸಂದರ್ಭ ಯಾರೇನೇ, ಯಾವುದೇ ರೀತಿಯ ಅಸಹನೆ ವ್ಯಕ್ತಪಡಿಸಿದರೂ ನಾವು ತಾಳ್ಮೆಯಿಂದ ಉತ್ತರಿಸುವುದು, ಸಮಸ್ಯೆ ಬಗೆಹರಿಸುವುದಕ್ಕೆ ಸಿದ್ಧರಾಗಿರುತ್ತಿದ್ದೆವು. ಅದು ನಮ್ಮ ಧ್ಯೇಯ ಕೂಡಾ ಆಗಿತ್ತು.

ಅಂದು ಕೂಡಾ ಕಾರ್ಯಕ್ರಮದಲ್ಲಿ ಅಂತಹದೊಂದು ಸನ್ನಿವೇಶ ನಮಗೆ ಎದುರಾಗಿತ್ತು. ನಿವೃತ್ತಿಯ ಅಂಚಿನಲ್ಲಿದ್ದ ಸುಮಾರು 60ರ ಹರೆಯದ ಪ್ರೊಫೆಸರೊಬ್ಬರು ನಮ್ಮ ತಂಡದ ವಿರುದ್ಧವೇ ಮಾತಿನ ಪ್ರಹಾರಕ್ಕೆ ಮುಂದಾಗಿದ್ದರು. ನಮ್ಮ ತಂಡವೇ ಮೋಸಗಾರರ ತಂಡ ಎಂದು ಹೇಳುತ್ತಾ ಆಕ್ರೋಶಭರಿತರಾಗಿಯೇ ಮಾತು ಆರಂಭಿಸಿದ ಅವರು, ಸತ್ಯ ಸಾಯಿ ಬಾಬಾ ಈ ಪ್ರಪಂಚದ ಅತ್ಯಂತ ಶ್ರೇಷ್ಠ ವ್ಯಕ್ತಿ ಎಂಬುದಾಗಿಯೂ ಅವರು ಬಣ್ಣಿಸಿದ್ದರು. ತಾವೆಲ್ಲಾ ವೈಜ್ಞಾನಿಕವಾಗಿ ತರಬೇತು ಪಡೆದಿರುವುದರಿಂದ ತಮ್ಮನ್ಯಾರೂ ಪವಾಡ ರಹಸ್ಯ ಬಯಲಿನ ಹೆಸರಿನಲ್ಲಿ ಮೋಸ ಮಾಡಲು ಸಾಧ್ಯವಿಲ್ಲ ಎಂಬುದು ಅವರ ವಾದವಾಗಿತ್ತು. ಅದಕ್ಕೆ ಪ್ರತಿಯಾಗಿ ನಾವು ನಮ್ಮ ವೈಜ್ಞಾನಿಕ ಜಗತ್ತಿನ ಪವಾಡಗಳ ಸಾಮರ್ಥ್ಯವನ್ನು ಅವರಿಗೆ ಪ್ರದರ್ಶಿಸಬೇಕಾಗಿತ್ತು. ಆ ಕಾರ್ಯಕ್ಕೆ ನಾನು ಮುಂದಾದೆ.

ನಾನು ಅವರನ್ನುದ್ದೇಶಿಸಿ ಮಾತನಾಡುತ್ತಾ, ನಾನು ಮನಸ್ಸನ್ನು ಓದುವ ಕಲೆಯನ್ನು ಬಲ್ಲೆ. ಅದನ್ನು ನಾನು ಈ ಸ್ಥಳದಲ್ಲೇ ಪ್ರದರ್ಶಿಸಬಲ್ಲೆ ಎಂದು ಅವರಿಗೆ ಸವಾಲೆಸೆದೆ. ಮಾತ್ರವಲ್ಲದೆ, ಕೆಲವರನ್ನು ವೇದಿಕೆಗೆೆ ಬರುವಂತೆ ಕೋರಿಕೊಂಡೆ. ಭಾರೀ ಅಂಜಿಕೆಯ ಬಳಿಕ ಒಬ್ಬರು ವೇದಿಕೆಗೆ ಬಂದರು. ಯಾವುದಾದರೂ ಸಂಖ್ಯೆಯೊಂದನ್ನು ಮನಸ್ಸಿನಲ್ಲಿ ನೆನಪಿಡುವಂತೆ ಆ ವ್ಯಕ್ತಿಗೆ ನಾನು ತಿಳಿಸಿದೆ. ಆತ ಸಂಖ್ಯೆಯೊಂದನ್ನು ಮನನ ಮಾಡಿಕೊಳ್ಳುತ್ತಿದ್ದ.

ಅಷ್ಟರರಲ್ಲಿ ಸಭೆಯಲ್ಲಿದ್ದ ವಿದ್ಯಾರ್ಥಿಯೊಬ್ಬ ಎದ್ದು ಬೊಬ್ಬಿಡತೊ ಡಗಿದ. ಇದೆಲ್ಲಾ ಮೋಸ, ಸುಳ್ಳು ಎಂದು ಅರಚತೊಡಗಿದ. ವೇದಿಕೆಗೆ ಹೋದ ವ್ಯಕ್ತಿ ಕಾರ್ಯಕ್ರಮ ಆರಂಭಕ್ಕೆ ಮೊದಲು ನನ್ನ ಜತೆ ಮಾತನಾಡುತ್ತಿರುವುದನ್ನು ಆ ವಿದ್ಯಾರ್ಥಿ ಗಮನಿಸಿದ್ದನಂತೆ. ಹಾಗಾಗಿ ನಾನು ಅವನಿಗೆ ತರಬೇತಿ ನೀಡಿದ್ದೇನೆಂಬುದು ಆತನ ಆರೋಪವಾಗಿತ್ತು. ಆದ್ದರಿಂತ ತನ್ನ ಮನಸ್ಸನ್ನೇ ಓದಬೇಕೆಂದು ಆ ವಿದ್ಯಾರ್ಥಿ ಸವಾಲೆಸೆದ. ಆಗ ವೇದಿಕೆಯಲ್ಲಿದ್ದ ವ್ಯಕ್ತಿ ಅದನ್ನು ವಿರೋಧಿಸಿದ. ಆದರೆ ವಿದ್ಯಾರ್ಥಿ ಮಾತ್ರ ತನ್ನ ಹಠ ಬಿಡಲಿಲ್ಲ. ‘ಮನಸ್ಸನ್ನು ಓದುವುದಿದ್ದರೆ ನನ್ನ ಮನಸ್ಸನ್ನು ಓದಿ ಹೇಳಿ. ಇಲ್ಲವಾದರೆ, ಈ ಮೋಸದ ಕಾರ್ಯಕ್ರಮವನ್ನು ನಡೆಸಲು ನಾನು ಬಿಡುವುದಿಲ್ಲ’ ಎಂದು ವಿದ್ಯಾರ್ಥಿ ಪಟ್ಟುಹಿಡಿದ. ಕೊನೆಗೂ, ವೇದಿಕೆಗೆ ಬಂದಿದ್ದ ವ್ಯಕ್ತಿಯನ್ನು ಕೆಳಗೆ ಕಳುಹಿಸಲಾಯಿತು. ಬೇರೊಬ್ಬ ವ್ಯಕ್ತಿಯನ್ನು ಕರೆದು ನಾನು ನನ್ನ ಕಾರ್ಯವನ್ನು ಮುಂದುವರಿಸಿದೆ.

ಈ ವ್ಯಕ್ತಿಯೂ ನಮ್ಮ ತಂಡದ ಮೇಲೆ ಅನುಮಾನ ಹೊಂದಿದ್ದವನೇ ಆಗಿದ್ದ. ನನ್ನನ್ನು ಕೆಕ್ಕರಿಸಿ ನೋಡುವುದು, ನಮ್ಮ ವಿರುದ್ಧ ಆರೋಪ ಮಾಡುವ ಕಾರ್ಯವನ್ನು ಮಾಡುತ್ತಿದ್ದವನೇ ಆಗಿದ್ದ. ನಾನು ಆತನಿಗೆ ಸಂಖ್ಯೆಯೊಂದನ್ನು ಮನನ ಮಾಡಿಕೊಳ್ಳಲು ಹೇಳಿದೆ. ಅದನ್ನಾತ ಮಾಡಿಕೊಂಡ.

ನಾನು ನನ್ನ ಮನಸ್ಸನ್ನು ಕೇಂದ್ರೀಕರಿಸುತ್ತಾ, ನನ್ನ ಅತೀಂದ್ರಿಯ ಶಕ್ತಿಯನ್ನು ಪರೀಕ್ಷಿಸಲು ಮುಂದಾದೆ. ಆತ ಮನನ ಮಾಡಿಕೊಂಡ ಸಂಖ್ಯೆ 9 ಎಂಬುದಾಗಿ ನಾನು ಹೇಳಿದಾಗ, ಆ ವ್ಯಕ್ತಿ ದಂಗಾಗಿ ಹೋಗಿದ್ದ. ನಂತರ ನಾನಾತನಿಗೆ ಯಾವುದಾದರೂ ಹಣ್ಣಿನ ಹೆಸರನ್ನು ಮನನ ಮಾಡಿಕೊಳ್ಳುವಂತೆ ಹೇಳಿದೆ. ಅದರಂತೆ ಮಾಡಿಕೊಂಡ. ನಾನು ಮತ್ತೆ ಆತ ಮನಮಾಡಿಕೊಂಡ ಹಣ್ಣಿನ ಹೆಸರನ್ನು ಹೇಳಿದೆ. ಈಗ ಆತ ಸಂಪೂರ್ಣವಾಗಿ ದಂಗಾಗಿದ್ದ. ಬಳಿಕ ಮತ್ತೆ ಹೂವೊಂದರ ಹೆಸರನ್ನು ಮನನ ಮಾಡಿಕೊಳ್ಳುವಂತೆ ಹೇಳಿ ನನ್ನ ಅತೀಂದ್ರಿಯ ಶಕ್ತಿಯ ಪ್ರದರ್ಶನವನ್ನು ಮುಂದುವರಿಸಲು ಸಜ್ಜಾಗಿದ್ದೆ. ಆತ ಈ ಸಂದರ್ಭ ನನ್ನನ್ನು ಕೊಂಚ ವಿಚಲಿತನನ್ನಾಗಿಸಲು ನಾನು ಹೇಳಿದಂತೆ ಹೂವಿನ ಹೆಸರನ್ನು ಮನನ ಮಾಡಿಕೊಳ್ಳದೆ ಸಿನೆಮಾ ನಟನ ಹೆಸರನ್ನು ಮನನಮಾಡಿಕೊಂಡಿರುವುದಾಗಿ ನಾನು ಆತನಿಗೆ ತಿಳಿಸಿದೆ. ಈಗಂತೂ ಆತ ನನ್ನ ಕಾಲಿಗೆ ಬೀಳುವಷ್ಟರು ಮಟ್ಟಿಗೆ ಹತಾಶನಾಗಿದ್ದ.

ಇದಾದ ನಂತರ ಕಾರ್ಯಕ್ರಮದಲ್ಲಿ ಸಾಕಷ್ಟು ಮಂದಿ ತಮ್ಮ ಮನವನ್ನು ಓದುವಂತೆ ನನ್ನಲ್ಲಿ ಕೋರಿಕೊಂಡು ಅವರ ಅನುಮಾನವನ್ನು ಪರಿಹರಿಸಿಕೊಳ್ಳಲೆತ್ನಿಸಿದರು. ಈ ಸಂದರ್ಭ ನಾನು ಅಂತಹ ಅತೀಂದ್ರಿಯ ಶಕ್ತಿಯನ್ನು ಹೊಂದಿರುವುದನ್ನು ನಂಬುತ್ತೀರಾ ಎಂದು ಅವರೆಲ್ಲರಲ್ಲಿ ಪ್ರಶ್ನಿಸಿದಾಗ, ಅವರ ಉತ್ತರ ಹೌದಾಗಿತ್ತು. ಈಗ ನಾನು ಮಾಡುತ್ತಿರುವುದು ಮೋಸ ಎಂಬುದಾಗಿ ಯಾರಿಗಾದರೂ ಅನಿಸುತ್ತಿದೆಯೇ ಎಂದು ಕೇಳಿದಾಗ, ‘ಇಲ್ಲ’ ಎಂಬ ಒಕ್ಕೊರಳಿನ ಧ್ವನಿಯೊಂದು ಕೇಳಿಸಿತ್ತು. ಮತ್ತೆ ಮತ್ತೆ ನಾನು ಕಾರ್ಯಕ್ರಮದಲ್ಲಿ ಸೇರಿದ್ದ ವೀಕ್ಷಕರಿಂದ ನನ್ನ ಮೇಲಿನ ಅನುಮಾನವನ್ನು ಪರಿಹರಿಸಿಕೊಳ್ಳಲು ಪ್ರಶ್ನಿಸುತ್ತಾ ಸಾಗಿದೆ. ಅವರೆಲ್ಲರಿಗೂ ನನ್ನ ಮನಸ್ಸು ಓದುವ ಸಾಮರ್ಥ್ಯವು ಅರ್ಥವಾಗಿದ್ದು ನನಗೆ ಅರಿವಾಯಿತು. ಕಾರ್ಯಕ್ರಮದಲ್ಲಿದ್ದ ಸತ್ಯಸಾಯಿ ಬಾಬಾನ ಭಕ್ತ ಕೂಡಾ ನನ್ನ ಸಾಮರ್ಥ್ಯವನ್ನು ಒಪ್ಪಿಕೊಂಡಿದ್ದ.

ಆದರೆ ನಾನು ಮಾಡಿದ್ದೆಲ್ಲವೂ ನಾಟಕ ಎಂದು ಆ ಸಭೆಯಲ್ಲಿ ಹೇಳಿದಾಗ, ಕಣ್ಣರಳಿಸುವ ಸಮಯ ವೀಕ್ಷರದ್ದಾಗಿತ್ತು. ‘‘ಇಲ್ಲಿರುವವರೆಲ್ಲರೂ, ಸ್ನಾತಕೋತ್ತರ ಪದವೀಧರರು, ಡಾಕ್ಟರೇಟ್ ಪದವೀದರರು ಮತ್ತು ಸಂಶೋಧನಾ ಕಾರ್ಯಕರ್ತರು. ಆರಂಭದಲ್ಲಿ ವೇದಿಕೆಗೆ ಬಂದ ನನಗೆ ಪರಿಚಯವೇ ಇಲ್ಲದ ವ್ಯಕ್ತಿಯಾಗಿದ್ದ. ಸಭೆಯಿಂದ ಆಕ್ಷೇಪಿಸಿದ್ದಾತ ನಾನೇ ಸೃಷ್ಟಿಸಿದ್ದ ವ್ಯಕ್ತಿ. ಮತ್ತೆ ವೇದಿಕೆಗೆ ಬಂದಾತನಿಗೆ ನಾನು ಮೊದಲೇ ಹೇಳಿದಂತೆ ನಾನು ಹೇಳಿದಕ್ಕೆಲ್ಲಾ ಹೌದೆನ್ನುವಂತೆ ಮೊದಲೇ ತಿಳಿಸಿದ್ದರಿಂದ ಆತ ಆ ಕಾರ್ಯವನ್ನು ಮಾಡಿದ್ದ. ಇದು ಕೆಲವೊಂದು ಅತಿಮಾನುಷ ವ್ಯಕ್ತಿಗಳೆಂದು ಹೇಳಿಕೊಳ್ಳುವವರು ಮಾಡುವ ನಾಟಕ. ಅದನ್ನು ನಾನು ಬುದ್ಧಿವಂತರಾದ ನಿಮ್ಮ ಎದುರು ಬಿಚ್ಚಿಡುವ ಪ್ರಯತ್ನ ಮಾಡಿದ್ದೇನೆ ಎಂದಾಗ ಅಲ್ಲಿ ಸೇರಿದ್ದವರು ಬಹುತೇಕರು ತಲೆತಗ್ಗಿಸಿದ್ದರು. ಮತ್ತೆ ಕೆಲವರು ಗಾಂಭೀರ್ಯದ ನಗೆ ಬೀರಿದ್ದರು.

ಮನಸ್ಸಿನಲ್ಲಿರುವುದನ್ನು ಹೇಳುವುದು, ಸಂಕಷ್ಟಗಳನ್ನು ಪರಿಹರಿಸುವುದಾಗಿ ಹೇಳಿ ಮುಗ್ಧರನ್ನು ಮೋಸಗೊಳಿಸುವ ದೇವಮಾನವರೆಂದು ಹೇಳಿಕೊಳ್ಳುವವವರು ಮೋಸ ಮಾಡುವುದು ಇಂತಹ ತಂತ್ರಗಳ ಮೂಲಕವೇ. ಗುಂಪಿನಲ್ಲಿ ತಾವೇ ಸೃಷ್ಟಿಸಿದ ಪರ, ವಿರೋಧದ ವ್ಯಕ್ತಿಗಳ ಮೂಲಕ, ಅವರ ವಾಗ್ವಾದ ಮಾಡಿಸಿ, ಮುಗ್ಧ ಮನಸ್ಸುಗಳನ್ನು ಬೇರೊಂದು ವಿಷಯದತ್ತ ವಾಲಿಸಿ, ಸುಪ್ತ ಮನಸ್ಸುಗಳಲ್ಲಿ ಅತಿಮಾನುಷ ಶಕ್ತಿಯೆಂಬ ಪೊಳ್ಳು ನಂಬಿಕೆಯನ್ನು ಸೃಷ್ಟಿಸಿ, ಮೋಸ ಮಾಡುವ ತಂತ್ರ ಇಂದು ನಿನ್ನೆಯದಲ್ಲ. ತಲೆತಲಾಂತರದಿಂದ ನಡೆಯುತ್ತಾ ಬಂದಿದೆ. ಕಂಪ್ಯೂಟರ್ ಯುಗ ಎಂದು ಕರೆಯುತ್ತಿರುವ ಇಂದಿನ ದಿನಗಳಲ್ಲೂ ಅದು ಮುಂದುವರಿದಿದೆ. ಮನಸ್ಸುಗಳ ಚಂಚಲತೆಯ ಲಾಭ ಪಡೆದು, ನಡೆಸುವ ಕ್ರಿಯೆ ಇದಷ್ಟೆ. ವೈಜ್ಞಾನಿಕ ಸತ್ಯವನ್ನು ಅರಿತಾಗ ಇಂತಹ ಮೋಸಗೊಳಿಸುವವರಿಂದ ಮೋಸ ಹೋಗುವವರು ದೂರವಿರಲು ಸಾಧ್ಯವಾಗುತ್ತದೆ. ಇಲ್ಲವೆಂದಾದರೆ, ಮೋಸ ಮಾಡುವ ದೇವ ಮಾನವರು, ಒಂದಿಲ್ಲೊಂದು ರೂಪದಲ್ಲಿ, ಒಂದಿಲ್ಲೊಂದು ತಂತ್ರದಲ್ಲಿ ಮೋಸ ಮಾಡುತ್ತಾ ಸಾಗುತ್ತಾರೆ. ಮುಗ್ಧರು ಬಲಿಯಾಗುತ್ತಾ ಸಾಗುತ್ತಾರೆ, ತಮ್ಮದೆಲ್ಲವನ್ನೂ ಕಳೆದುಕೊಳ್ಳುತ್ತಾರೆ. ಆರ್ಥಿಕವಾಗಿ ಮಾತ್ರವಲ್ಲ, ಕೊನೆಗೆ ಮಾನಸಿಕವಾಗಿಯೂ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುವ ಪರಿಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ.

ಪವಾಡ ಎಂಬುದು ಕೇವಲ ಮನಸ್ಸುಗಳ ನಡುವಿನ ತೊಳಲಾಟ. ಅತಿಮಾನುಷ ಶಕ್ತಿ ಹಿಂದಿನ ಸತ್ಯವನ್ನು ಅರಿತಾಗ ಮಾತ್ರವೇ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯ. ಮನೆಯಲ್ಲಿ, ಕುಟುಂಬದಲ್ಲಿ ಯಾರಿಗಾದರೂ ಅನಾರೋಗ್ಯದ ಸಂದರ್ಭ ವೈದ್ಯರ ಬಳಿ ಹೋಗುವ ಬದಲು, ಇಂತಹ ದೇವ ಮಾನವರ ಬಳಿ ಹೋಗಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವವರನ್ನು ನಮ್ಮ ಸುತ್ತಮುತ್ತ ನಾವು ಕಾಣುತ್ತೇವೆ. ಇಂತಹವರ ವಿರುದ್ಧ ನಾವು ಜಾಗೃತರಾಗಬೇಕು. ನಮ್ಮಿಂದಾಗುವಷ್ಟರ ಮಟ್ಟಿಗೆ ವಿಜ್ಞಾನದ ಬೆಳಕಿನ ಮೂಲಕ ಈ ಅಂಧಶ್ರದ್ಧೆಯ ಕತ್ತಲೆಯನ್ನು ತೊಲಗಿಸಲು ಪ್ರಯತ್ನಿಸಬೇಕು. ವಿಜ್ಞಾನದ ಬಗ್ಗೆ ತಿಳಿ ಹೇಳುವ, ಅರಿವು ಮೂಡಿಸುವ ಕಾರ್ಯವನ್ನು ಶಾಲಾ ಹಂತದಲ್ಲಿಯೇ ನಡೆಸಬೇಕು.

ಮುಂದುವರಿಯುವುದು

ನಿರೂಪಣೆ: ಸತ್ಯಾ ಕೆ.

Writer - ನರೇಂದ್ರ ನಾಯಕ್

contributor

Editor - ನರೇಂದ್ರ ನಾಯಕ್

contributor

Similar News