ಡಿ-ನೋಟಿಫಿಕೇಷನ್ ಪ್ರಕರಣ: ವಿಚಾರಣೆಗೆ ಹಾಜರಾಗಲು 10 ದಿನಗಳ ಕಾಲಾವಕಾಶ ಕೋರಿದ ಬಿಎಸ್‌ವೈ
ಬೆಂಗಳೂರು, ಆ. 19: ಶಿವರಾಮಕಾರಂತ ಬಡಾವಣೆ ಡಿ-ನೋಟಿಫೈ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ಅಧಿಕಾರಿಗಳು ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸಮನ್ಸ್ ನೀಡಿದ್ದು, ವಿಚಾರಣೆಗೆ ಖುದ್ದು ಹಾಜರಾಗಲು ಹತ್ತು ದಿನಗಳ ಕಾಲಾವಕಾಶ ಕೋರಿದ್ದಾರೆ. ಶಿವರಾಮಕಾರಂತ ಬಡಾವಣೆಯಲ್ಲಿ 257 ಎಕರೆ ಡಿ-ನೋಟಿಫಿಕೇಷನ್ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಖಾಸಗಿ ವ್ಯಕ್ತಿಯೊಬ್ಬರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ಎಸಿಬಿ ಅಧಿಕಾರಿಗಳು ಆ.18ರಂದು ಸಮನ್ಸ್ ನೀಡಿದ್ದರು.
ಐಟಿ ದಾಳಿಗೆ ಒಳಗಾಗಿದ್ದ ಸಚಿವರ ರಾಜೀನಾಮಗೆ ಆಗ್ರಹಿಸಿ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಎಸ್‌ವೈ ವಿಚಾರಣೆಗೆ ಹಾಜರಾಗಿರಲಿಲ್ಲ. ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಪರ ವಕೀಲರು ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೋರಿದ್ದಾರೆ.
ಸಮನ್ಸ್‌ನಲ್ಲಿ ಹಲವು ದಾಖಲೆಗಳ ಉಲ್ಲೇಖವಿದೆ. ಆದರೆ, ಪ್ರಕರಣ ಸಂಬಂಧ ನನಗೆ ನೀವು ಯಾವ ದಾಖಲಾತಿ ನೀಡಿಲ್ಲ. ಹೀಗಾಗಿ ದಾಖಲಾತಿಗಳ ಸಂಗ್ರಹಕ್ಕೆ ಕನಿಷ್ಠ 10 ದಿನಗಳ ಸಮಯಾವಕಾಶ ಬೇಕಾಗಿದೆ. ಆರ್‌ಟಿಐ ಮೂಲಕ ಸಂಬಂಧಿಸಿದ ಇಲಾಖೆಗಳಿಂದ ದಾಖಲೆ ಸಂಗ್ರಹಿಸಬೇಕಾಗಿದೆ. ದಾಖಲಾತಿಗಳ ಸಂಗ್ರಹದ ಬಳಿಕ ನಿಮ್ಮ ಮುಂದೆ ಹಾಜರಾಗಿ ಪ್ರಕರಣದ ಸತ್ಯಾಸತ್ಯತೆಯನ್ನು ತಮ್ಮ ಮುಂದಿಡುತ್ತೇನೆ ಎಂದು ಕೋರಿದ್ದಾರೆ.
ಕೋರ್ಟ್ ಮೊರೆ: ಈ ಮಧ್ಯೆ ಶಿವರಾಮಕಾರಂತ ಬಡಾವಣೆ ಡಿ-ನೋಟಿಫೈ ಪ್ರಕರಣದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಪ್ರಕರಣ ರದ್ದುಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅದು ಆ.21ರ ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆಗಳಿವೆ.