ಶಿಕ್ಷಕರ ಖಾಲಿ ಹುದ್ದೆ ಭರ್ತಿಗೆ ರಮೇಶ್‌ಬಾಬು ಆಗ್ರಹ
ಬೆಂಗಳೂರು, ಆ.19: ರಾಜ್ಯದಲ್ಲಿ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬುವುದಾಗಿ ಭರವಸೆ ನೀಡಿರುವ ಕಾಂಗ್ರೆಸ್ ಸರಕಾರವು, ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದರೂ ಇಲ್ಲಿಯವರೆಗೆ ಪೂರ್ಣ ಹುದ್ದೆಗಳನ್ನು ಭರ್ತಿ ಮಾಡುವ ಪ್ರಯತ್ನ ಮಾಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ರಮೇಶ್‌ಬಾಬು ಆರೋಪಿಸಿದ್ದಾರೆ.
ರಾಜ್ಯ ಸರಕಾರವು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸುಮಾರು 10 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕಳೆದ ವಿಧಾನಮಂಡಲದ ಅಧಿವೇಶನದಲ್ಲಿ ಹೇಳಿಕೆ ನೀಡಿದ್ದರೂ, ಇಲ್ಲಿಯವರೆಗೆ ಇದಕ್ಕೆ ಸಂಬಂಧಪಟ್ಟ ಅಧಿಸೂಚನೆ ಹೊರಡಿಸಿಲ್ಲ ಎಂದು ಅವರು ದೂರಿದ್ದಾರೆ.
ಕಲಂ 371 ಜೆ ಅನ್ವಯ ಹೈದರಾಬಾದ್-ಕರ್ನಾಟಕದಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು ಆರು ಸಾವಿರ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ಉಳಿದಂತೆ ರಾಜ್ಯದ ಇತರೆ ಭಾಗಗಳಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಹಿರಿಯ ಪ್ರಾಥಮಿಕ ಶಾಲೆಯ ಹುದ್ದೆಗಳು ಖಾಲಿಯಿವೆ ಎಂದು ರಮೇಶ್‌ಬಾಬು ತಿಳಿಸಿದ್ದಾರೆ.
10 ಸಾವಿರ ಹುದ್ದೆ ಭರ್ತಿ ಮಾಡುವುದರಿಂದ ಇನ್ನೂ ಶೇ.50ರಷ್ಟು ಹುದ್ದೆ ಖಾಲಿ ಇರುತ್ತದೆ. ರಾಜ್ಯ ಸರಕಾರವು ರಾಜ್ಯದಲ್ಲಿ ಖಾಲಿ ಇರುವ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ಹುದ್ದೆಗಳನ್ನು ಪದವೀಧರ ಶಾಲಾ ಶಿಕ್ಷಕರ ನೇಮಕಾತಿಯ ಮೂಲಕ ತುಂಬಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈಗಾಗಲೆ, ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪದವೀಧರ ಶಿಕ್ಷಕರನ್ನು ನೇಮಕ ಮಾಡಿದ್ದು, ಅವರಿಗೆ ವಿಶೇಷ ಭಡ್ತಿ ವೇತನ ಹಾಗೂ ಪದೋನ್ನತಿಯನ್ನು ನೀಡಿಲ್ಲ. ರಾಜ್ಯ ಸರಕಾರವು ಪದವೀಧರ ಶಿಕ್ಷಕರಿಗೆ ಬಾಕಿ ಇರುವ ವಿಶೇಷ ಭಡ್ತಿ ವೇತನ ಮತ್ತು ಪದೋನ್ನತಿಯನ್ನು ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರಮೇಶ್‌ಬಾಬು ಒತ್ತಾಯಿಸಿದ್ದಾರೆ.
ಹಿರಿಯ ಪ್ರಾಥಮಿಕ ಶಾಲೆಗಳ ಖಾಲಿ ಹುದ್ದೆಗಳ ತುಂಬುವ ಸಮಯದಲ್ಲಿ ರಾಜ್ಯದ ಸರಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಸಹ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಭಡ್ತಿ ಬಾಕಿಯಿರುವ ಪ್ರೌಢ ಶಾಲೆಗಳ ಸಹ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರಾಗಿ ಭಡ್ತಿ ನೀಡಲು ರಾಜ್ಯ ಸರಕಾರವು ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.