ಬಿಎಸ್‌ವೈ ವಿರುದ್ಧ ಡಿನೋಟಿಫಿಕೆಷನ್ ಆರೋಪ: ಬಿಜೆಪಿ ಮುಖಂಡರ ಆಕ್ರೋಶ
ಬೆಂಗಳೂರು, ಆ.19: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕೇಳಿ ಬಂದಿರುವ ಶಿವರಾಮಕಾರಂತ ಬಡಾವಣೆಯ ಡಿನೋಟಿಫಿಕೆಷನ್ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಮುಂದಾಗಿರುವ ರಾಜ್ಯ ಸರಕಾರದ ಕ್ರಮ ರಾಜಕೀಯ ಸೇಡಿನಿಂದ ಕೂಡಿದೆ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ಅಧಿಕಾರವಧಿಯಲ್ಲಿ ಶಿವರಾಮ ಕಾರಂತ ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡ 257 ಎಕರೆ 20 ಗುಂಟೆ ಜಮೀನಿನ ಭೂ ಸ್ವಾಧೀನ ರದ್ಧತಿಯಿಂದಾಗಿ ಇಡೀ ಬಡಾವಣೆಯ ಯೋಜನೆಯೇ ರದ್ದಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದರು.
ಈ ಉದ್ದೇಶಿತ ಬಡಾವಣೆಗೆ ಗುರುತಿಸಲ್ಪಟ್ಟಿದ್ದ ಜಮೀನಿನ ಸ್ವಾಧೀನಕ್ಕೆ ಅಂತಿಮ ಆದೇಶ ಹೊರಡಿಸುವ ಮುನ್ನವೇ ಭೂ ಸ್ವಾಧೀನದಿಂದ ಕೈ ಬಿಟ್ಟರೆ ಅದನ್ನು ಭೂ ಸ್ವಾಧೀನ ರದ್ದತಿ(ಡಿನೋಟಿಫಿಕೆಷನ್) ಎಂದು ಹೇಳಲಾಗುವುದಿಲ್ಲ. ಹೈಕೋರ್ಟ್ 2014ರ ನವೆಂಬರ್ 26ರಂದು ಶಿವರಾಮಕಾರಂತ ಬಡಾವಣೆಯ ಯೋಜನೆಯನ್ನು ರದ್ದುಗೊಳಿಸಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಅಲ್ಲದೆ, ನ್ಯಾಯಾಲಯ ತನ್ನ ಆದೇಶದಲ್ಲಿ 4 ವರ್ಷಗಳಷ್ಟು ದೀರ್ಘಕಾಲ ಬಾಕಿ ಇದ್ದ ಆರಂಭಿಕ ಅಧಿಸೂಚನೆಯನ್ನು ಅಂತಿಮಗೊಳಿಸದೆ ಇರುವ ಸರಕಾರದ ಕ್ರಮವನ್ನು ಪ್ರಸ್ತಾಪಿಸಿದೆ. ಬಡಾವಣೆ ನಿರ್ಮಾಣಕ್ಕೆ ಉಳಿದ ಜಮೀನು ಸ್ವಾಧೀನಕ್ಕೆ ಯಾವುದೇ ತಡೆ ಇಲ್ಲದಿದ್ದರೂ ಇದಕ್ಕೆ ಕ್ರಮ ಕೈಗೊಳ್ಳದೆ 257 ಎಕರೆ 20 ಗುಂಟೆ ಜಮೀನಿನ ಭೂ ಸ್ವಾಧೀನ ರದ್ದತಿ ಪ್ರಸ್ತಾಪಿಸಿರುವುದು ಅಪ್ರಸ್ತುತವಾಗುತ್ತದೆ ಎಂದು ಉಲ್ಲೇಖಿಸಿದೆ ಎಂದು ಅವರು ಹೇಳಿದರು.
2016ರಲ್ಲಿ ರಾಜ್ಯ ಸರಕಾರವೆ ಈ ಬಡಾವಣೆಯ ಯೋಜನೆಯನ್ನು ರದ್ದುಗೊಳಿಸಿದೆ. ಈ ಯೋಜನೆಗೆ ಸಂಬಂಧಪಟ್ಟಂತೆ 2012ರಲ್ಲಿ ಅಂದಿನ ರಾಜ್ಯ ಸರಕಾರ ಸಿಐಡಿ ತನಿಖೆಗೆ ಆದೇಶ ನೀಡಿದ್ದು, ಅದಿನ್ನೂ ಇತ್ಯರ್ಥಗೊಂಡಿಲ್ಲ. ಇಷ್ಟೆಲ್ಲ ಇದ್ದರೂ ಈಗ ಎಸಿಬಿ ಮೂಲಕ ರಾಜಕೀಯ ದುರುದ್ದೇಶದಿಂದ ಮಾಡಲಾದ ಆರೋಪದ ಆಧಾರದ ಮೇಲೆ ಯಡಿಯೂರಪ್ಪ ವಿರುದ್ಧ ತನಿಖೆಗೆ ಸರಕಾರ ಮುಂದಾಗಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಎಸಿಬಿ ಮುಂದೆ ಇನ್ನೂ ಹಲವಾರು ಪ್ರಕರಣಗಳು ತನಿಖೆಗೆ ಬಾಕಿಯಿವೆ. ಎಸಿಬಿ ಅಸ್ತಿತ್ವದ ಬಗ್ಗೆಯೆ ಪ್ರಶ್ನೆಯೂ ಹೈಕೋರ್ಟಿನ ದ್ವಿಸದಸ್ಯ ಪೀಠದ ಮುಂದಿದೆ. ಮುಖ್ಯಮಂತ್ರಿ ಹಾಗೂ ಅನೇಕ ಮಂತ್ರಿಗಳ ವಿರುದ್ಧ ದೂರುಗಳು ಎಸಿಬಿ ಮುಂದಿದೆ. ಆದರೆ, ಯಾವುದೆ ಪ್ರಕರಣದಲ್ಲಿ ನೋಟಿಸ್ ನೀಡಿಲ್ಲ, ಅಥವಾ ಆರಂಭಿಕ ತನಿಖೆಯೂ ನಡೆದಿಲ್ಲ ಎಂದು ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.
ಯಡಿಯೂರಪ್ಪ ಪ್ರಕರಣದಲ್ಲಿ ತರಾತುರಿಯಿಂದ ಎಫ್‌ಐಆರ್ ದಾಖಲಿಸಿರುವುದು ರಾಜಕೀಯ ದುರುದ್ದೇಶದ ಕ್ರಮವಾಗಿದೆ. ಎಸಿಬಿ ರಚನೆಯ ಸಂದರ್ಭದಲ್ಲೆ ರಾಜಕೀಯ ಎದುರಾಳಿಗಳ ವಿರುದ್ಧ ಅದರ ದುರುಪಯೋಗದ ಸಾಧ್ಯತೆ ಬಗ್ಗೆ ನಾವು ಶಂಕೆ ವ್ಯಕ್ತಪಡಿಸಿದ್ದೆವು. ಅದೀಗ ನಿಜವಾಗಿದೆ ಎಂದು ಅವರು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸಿ.ಎಂ.ಉದಾಸಿ, ಬಿ.ಜೆ. ಪುಟ್ಟಸ್ವಾಮಿ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಎನ್.ರವಿಕುಮಾರ್ ಹಾಗೂ ಡಾ.ವಾಮನ್ ಆಚಾರ್ಯ ಉಪಸ್ಥಿತರಿದ್ದರು.