ಹಸಿರು ರಾಯಭಾರಿ ಅಭಿಯಾನಕ್ಕೆ ಚಾಲನೆ
ಬೆಂಗಳೂರು, ಆ.19: ನಗರದ ಶಾಲೆಗಳನ್ನು ಶೂನ್ಯ ತ್ಯಾಜ್ಯ ಮೂಲವಾಗಿ ಮಾಡಲು ಬಿ ಪ್ಯಾಕ್ ಸಂಸ್ಥೆಯು ಎಂಆರ್‌ಪಿ ಏಷಿಯನ್ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಹಸಿರು ರಾಯಭಾರಿ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದೆ.
ಶನಿವಾರ ನಗರದ ಭಾರತೀಯ ವಿದ್ಯಾಭವನದಲ್ಲಿ ಆಯೋಜಸಿದ್ದ ಕಾರ್ಯಕ್ರಮದಲ್ಲಿ ಘನ ತ್ಯಾಜ್ಯ ನಿರ್ವಹಣೆಯ ತಜ್ಞ ಎನ್.ಎಸ್.ರಮಾಕಾಂತ್ ಚಾಲನೆ ನೀಡಿ ಮಾತನಾಡಿದ ಅವರು, ಘನ ತ್ಯಾಜ್ಯ ನಿರ್ವಹಣೆಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದರಿಂದ ಕಸದ ಸಮಸ್ಯೆಯನ್ನು ನಿವಾರಿಸಬಹುದು ಎಂದರು.
ಅಭಿಯಾನದ ಅಂಗವಾಗಿ ನಗರದ 15ಕ್ಕೂ ಹೆಚ್ಚು ಕಾಲೇಜುಗಳಲ್ಲಿನ ಸಾವಿರ ವಿದ್ಯಾರ್ಥಿಗಳಿಗೆ ಎರಡು ವರ್ಷಗಳಿಂದ ತರಬೇತಿ ನೀಡಲಾಗಿದೆ. ಈ ಅಭಿಯಾನದಲ್ಲಿ ನಗರದ ಶಾಲೆಗಳ ಆವರಣದಲ್ಲಿ ತ್ಯಾಜ್ಯ ಸಮರ್ಪಕ ನಿರ್ವಹಣೆಯ ಜೊತೆಗೆ ಪರಿಸರ ಸಂರಕ್ಷಣೆ, ನೀರಿನ ಮಿತ ಬಳಕೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಪ್ರತಿ ಹಸಿರು ರಾಯಭಾರಿಗಳು ಒಂದೊಂದು ಶಾಲೆಗಳಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸಿ ಶಾಲೆಯ ಆವರಣವನ್ನು ಶೂನ್ಯ ತ್ಯಾಜ್ಯದ ಮೂಲವನ್ನಾಗಿ ರೂಪಿಸಲು ಪ್ರಯತ್ನಿಸಲಾಗುವುದು ಎಂದು ರಮಾಕಾಂತ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಅಧಿಕಾರಿ ಡಾ.ಸಂಧ್ಯಾ, ಎಂಆರ್‌ಪಿ ಏಷಿಯನ್ ಸಲ್ಯೂಷನ್ಸ್ ಸಿಇಓ ಲಕ್ಷ್ಮೀ ನಾರಾಯಣ, ಬಿಪಿಎಸಿ ಸಿಇಓ ರೇವತಿ ಆಶೋಕ್ ಸೇರಿದಂತೆ ಇತರರು ಇದ್ದರು.