ಆಲೋಚನಾ ವಿಧಾನ

Update: 2017-08-19 17:45 GMT

ಭಾಗ-2

ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಮನೆಯವರ ಜೀವನಶೈಲಿ ಮತ್ತು ಶಾಲೆಯಲ್ಲಿ ಕಲಿಕೆಯ ಪರಿಸರ ಜೀವನಕೌಶಲ್ಯದ ಮೇಲೆ ನೇರಾನೇರ ಪ್ರಭಾವವನ್ನು ಬೀರುತ್ತದೆ.


ಏನು ಮಾಡಬೇಕು ಮತ್ತು ಹೇಗೆ ಯೋಚಿಸಬೇಕು
ಈಗ ಮಕ್ಕಳು ಸ್ವತಂತ್ರವಾಗಿ ಮತ್ತು ಸೃಜನಾತ್ಮಕವಾಗಿ ಚಿಂತಿಸುವ ವಿಷಯದ ಬಗ್ಗೆ ಸ್ಪಷ್ಟವಾಗಿ ಆಲೋಚಿಸೋಣ. ಅದೇನೆಂದರೆ, ಯಾವುದೇ ವಿಷಯದ ಬಗ್ಗೆ ಆಲೋಚಿಸುವಾಗ ಆ ವಿಷಯದ ಬಗ್ಗೆ ನಾನಾ ರೀತಿಗಳಿಂದ ‘ಹೇಗೆ’ ಆಲೋಚಿಸಬೇಕೆಂದು ಹೇಳಿಕೊಡುವ ಹಾಗೆಯೇ, ಯಾವುದಾದರೂ ಕೆಲಸ ಮಾಡುವಾಗ ‘ಏನು’ ಮಾಡಬೇಕೆಂದು ಮಾತ್ರವೇ ಹೇಳುವುದು. ಯಾವುದೋ ಕೆಲಸವನ್ನು ಮಾಡಿ ಎಂದು ಹೇಳಿದಾಗ ಹೇಗೆ ಮಾಡುವುದು ಎಂದು ಹೇಳಿಕೊಡಬಾರದು. ಕೆಲಸವನ್ನು ಸೂಚಿಸಿ, ತಮಗೆ ಬೇಕಾಗಿರುವ ಅಂತಿಮ ಸ್ವರೂಪವನ್ನು ಮಾತ್ರ ಹೇಳಿ ಸುಮ್ಮನಾಗಬೇಕು. ಏಕೆಂದರೆ, ಅವರು ಹೇಗೆ ಮಾಡುವುದೆಂದು ನಿರ್ದಿಷ್ಟ ನಿರ್ದೇಶನನವಿಲ್ಲದೇ ಮಾಡುವಾಗ ಸ್ವತಂತ್ರವಾಗಿ ಪ್ರಯತ್ನವನ್ನು ಮಾಡುತ್ತಾರೆ. ಈ ರೀತಿಯಾಗಿ ಅವರ ಸೃಜನಶೀಲತೆಗೆ ಕೆಲಸ ಸಿಗುತ್ತದೆ. ಅವರು ವಿಧವಿಧವಾದ ಪ್ರಯತ್ನಗಳನ್ನು ಮಾಡಿ ಕೆಲಸದ ಅಂತಿಮ ಸ್ವರೂಪಕ್ಕೆ ಬರುವುದರಿಂದ ಅವರಿಗೆ ಬೌದ್ಧಿಕ ಕಸರತ್ತು ಆಗುವುದರ ಜೊತೆಗೆ, ಹಿರಿಯರು ಕಂಡುಕೊಂಡಿರುವುದಕ್ಕಿಂತ ಸುಲಭ ಹಾಗೂ ಕೌಶಲ್ಯದ ಪ್ರಯೋಗ ಅದಾಗಿರಬಹುದು. ಅವರು ಸತತವಾಗಿ ವಿಫಲರಾಗುತ್ತಿದ್ದರೂ ಇನ್ನು ಹೇಗೆ ಮಾಡಬಹುದು ಚಿಸು ಎಂದು ಹುರಿದುಂಬಿಸಬೇಕು.
ಮಕ್ಕಳು ಕೆಲಸ ಮಾಡುವುದರಲ್ಲಿ ಸಣ್ಣ ಎಡವಟ್ಟು ಮಾಡಿಕೊಂಡರೂ ಕೆಲವು ಹಿರಿಯರು ಇಷ್ಟು ಸಣ್ಣ ಕೆಲಸ ಮಾಡಕ್ಕೆ ಬರಲ್ವಾ? ಹೀಗೆ ಮಾಡಿದರೆ ಆಯಿತು ಎಂದು ತಮ್ಮ ವಿಧಾನವನ್ನು ತೋರಿಸಿ ಅಷ್ಟೇ ಎಂದುಬಿಡುತ್ತಾರೆ. ಆದರೆ ಆ ಅಷ್ಟೇ ಎನ್ನುವಂತಹ ವಿಧಾನದ ಆಚೆಗೆ ಅವರು ಶ್ರಮಿಸುವುದನ್ನು ಗೌರವಿಸಿದರೆ ಅಥವಾ ಪ್ರೋತ್ಸಾಹಿಸಿದರೆ ಅವರು ಇನ್ನಷ್ಟು ಚೆನ್ನಾಗಿ ಕೆಲಸ ಮಾಡಬಹುದು.

ಕೌಟುಂಬಿಕ ಮತ್ತು ಪರಿಸರ ಕಾರಣಗಳು
ಶಾಲೆಗೆ ಬರುವ ಮಕ್ಕಳಲ್ಲಿ ವಂಶವಾಹಿನಿಯಾಗಿಯೋ ಅಥವಾ ಪರಿಸರದ ಪರಿಣಾಮವಾಗಿಯೋ ಕೆಲವು ಧೋರಣೆಗಳನ್ನು, ಹಾಗೆಯೇ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಕಾಣುತ್ತೇವೆ. ಹಾಗಾಗಿ ಅವರೆಲ್ಲರ ಚಿಂತನಾ ಕ್ರಮವನ್ನು ಮತ್ತು ಚಟುವಟಿಕೆಗಳ ತರಬೇತಿಯನ್ನು ಕೊಡುವಾಗ ಅವರ ಗುಣವಿಶೇಷಗಳ ದಾಖಲೆಗಳನ್ನು ಹೊಂದುವುದು ಅತ್ಯಂತ ಅಗತ್ಯ. ಅದನ್ನು ಬಹಿರಂಗವಾಗಿ ಪ್ರದರ್ಶಿಸುವ ಅಗತ್ಯವಿಲ್ಲದಿದ್ದರೂ ತರಬೇತುದಾರರಿಗೆ ಅದು ಬೇಕಾಗಿರುತ್ತದೆ. ಆ ಸಾಮರ್ಥ್ಯಗಳು ಮಕ್ಕಳ ಚಟುವಟಿಕೆಗಳ ಉದ್ದೇಶ ಮತ್ತು ಆಶಯಗಳಿಗೆ ಪೂರಕವಾಗಿದ್ದಂತೆಯೇ ಕೆಲವು ದೌರ್ಬಲ್ಯಗಳು ಮಕ್ಕಳಲ್ಲಿ ಹಿನ್ನಡೆಯನ್ನು ತರುತ್ತವೆ. ಕೌಟುಂಬಿಕ ಪರಿಸರದ ಕಾರಣದಿಂದ ಅಥವಾ ಕುಟುಂಬದ ಸದಸ್ಯರ ವರ್ತನೆಗಳ ಕಾರಣದಿಂದ ನಕಾರಾತ್ಮಕವಾದ ಪರಿಣಾಮವನ್ನು ಮಗುವು ಎದುರಿಸುತ್ತಿದ್ದಾಗ ಅದನ್ನು ಶಿಕ್ಷಕರು ಅಥವಾ ತರಬೇತುದಾರರು ಕುಟುಂಬದ ಸದಸ್ಯರೊಂದಿಗೆ ಚರ್ಚಿಸಲಾಗದು ಅಥವಾ ಗುರಿಯಿಟ್ಟು ಹೇಳಲಾಗದು. ಅದನ್ನು ಕುಟುಂಬದ ಸದಸ್ಯರು ಸ್ವೀಕರಿಸುವ ಮನಸ್ಥಿತಿಯನ್ನು ನಾವು ನಿರೀಕ್ಷಿಸಲಾಗುವುದಿಲ್ಲ. ಆದ್ದರಿಂದ ನಮ್ಮ ಗುರಿ ಮಗುವೇ ಆಗಿರಬೇಕು. ಒಂದು ಮಗುವಿನ ಮೂಲಕ ಪೋಷಕರಿೂ ಶಿಕ್ಷಣ ದೊರೆತರೆ, ಅದು ಸುಗ್ಗಿ.
ಮನೆಯವರ ಸಕಾರಾತ್ಮಕವಾದ ಪ್ರಭಾವಗಳನ್ನು ಹೇಳಿದರೆ ಕುಟುಂಬದ ಸದಸ್ಯರು ಸಂತೋಷಪಡುತ್ತಾರೆ. ಹಾಗಾಗಿ, ಅಂತಹ ಧನಾತ್ಮಕವಾದ ಅಂಶಗಳನ್ನು ಹೇಳಿ ಅವರನ್ನು ಮಾನಸಿಕವಾಗಿ ಸಿದ್ಧಪಡಿಸಿ, ಮಗುವಿನ ದೌರ್ಬಲ್ಯಕ್ಕೆ ಕಾರಣವಾಗಿರುವಂತಹ ವಿಷಯವನ್ನು ಪ್ರಸ್ತಾಪ ಮಾಡಬೇಕು. ಕಾರಣ ಗೊತ್ತಿದ್ದರೂ ಕಾರಣವನ್ನು ಹುಡುಕಲು ಪೋಷಕರಿಗೆ ಸಕಾರಾತ್ಮಕವಾಗಿಯೇ ಪ್ರೋತ್ಸಾಹಿಸಿದರೆ, ಬಹುಶಃ ಅವರು ತಾವೇ ಕಾರಣ ಎಂದು ತಿಳಿದು ಆತ್ಮವಿಮರ್ಶೆ ಮಾಡಿಕೊಳ್ಳಬಹುದು. ವಿಶ್ಲೇಷಣೆ ಮಾಡಿಕೊಳ್ಳಲು ಸಾಧ್ಯವಾಗುವಂತೆ ಅವರನ್ನು ಪ್ರೋತ್ಸಾಹಿಸಬೇಕೇ ಹೊರತು ನಾವೇ ವಿಶ್ಲೇಷಣೆ ಮಾಡಿ ಅವರನ್ನು ನೇರವಾಗಿ ಗುರಿ ಮಾಡಿದರೆ ಅವರಿಗೆ ಅಪಮಾನ ಮಾಡಿದಂತಾಗಿ ಅವರು ನಕಾರಾತ್ಮಕವಾಗಿ ಸ್ಪಂದಿಸಬಹುದು. ಕೆಲವೊಮ್ಮೆ ಬೇರೆ ಯಾರೋ ಅನಾಮಧೇಯರ ಉದಾಹರಣೆಗಳಿಂದ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವಂತೆ ಮಾಡಬಹುದು. ನನ್ನ ವೃತ್ತಿ ಜೀವನದಲ್ಲಿ ಇಂತಹ ಸಮಾಲೋಚನೆಯ ಸಮಯದಲ್ಲಿ ನಾನು ಅವರದ್ದನ್ನೇ ಬೇರೆಯವರದು ಎಂದು ಸುಳ್ಳು ಉದಾಹರಣೆಗಳನ್ನು ಕೂಡ ನೀಡಿ, ಅವರು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದ್ದೇನೆ. ಆಗ ಅವರು ಮನೆಯ ಇತರ ಯಾರೋ ಸದಸ್ಯರ ನಕಾರಾತ್ಮಕ ಪ್ರಭಾವ, ನಡವಳಿಕೆ ಇತ್ಯಾದಿಗಳ ಕಾರಣಗಳನ್ನು ಹೇಳಿಕೊಂಡು ಬರುತ್ತಾರೆಯೇ ಹೊರತು ತಾವು ಮಗುವಿನ ದೌರ್ಬಲ್ಯಕ್ಕೆ ಕಾರಣವೆಂದು ಒಪ್ಪಿಕೊಂಡ ಪೋಷಕರನ್ನು ಇದುವರೆಗೂ ನಾನು ಕಂಡಿಲ್ಲ. ಅಪ್ಪ ಅಮ್ಮನ ಮೇಲೆ, ಅಮ್ಮ ಅಪ್ಪನ ಮೇಲೆ, ಮಗುವಿನ ಸೋದರ ಅಥವಾ ಸೋದರಿಯ ಮೇಲೆ ಅಥವಾ ಇತರ ಸದಸ್ಯರ ಮೇಲೆ ಕಾರಣವನ್ನು ಎಸೆದುಬಿಡುತ್ತಾರೆಯೇ ಹೊರತು ತಮ್ಮದೆಂದು ಹೇಳಿಕೊಳ್ಳುವುದಿಲ್ಲ. ಕನಿಷ್ಠ ಪಕ್ಷ ಬಹಿರಂಗವಾಗಿ ಹೇಳದಿದ್ದರೂ, ಆಂತರಿಕವಾಗಿ ಅರಿತುಕೊಂಡಿದ್ದರೂ ಸಾಕು. ಆದರೆ ಅದೂ ೂಡ ನನ್ನ ಅನುಭವದಲ್ಲಿ ಕಂಡಿಲ್ಲ.

ಜೀವನ ಕೌಶಲ್ಯಗಳು ಮತ್ತು ಜೀವನ ಶೈಲಿ
ನನ್ನ ಕೆಲವು ಗೆಳೆಯರು ಶಾಲೆಗಳಲ್ಲಿ ಮಕ್ಕಳಿಗೆ ಜೀವನ ಕೌಶಲ್ಯವನ್ನು ಕಲಿಸಲೆಂದು ಹೋಗುತ್ತಾರೆ. ಅವರು ಕಲಿಸಿಕೊಡುವ ಜೀವನ ಕೌಶಲ್ಯವೇನೆಂದು ಕೇಳಿದರೆ, ಮುಖೇಡಿಗಳಾಗದೇ ಸಾರ್ವಜನಿಕವಾಗಿ ನಿಂತು ಮಾತಾಡುವುದು, ಬೇಕಾದುದನ್ನು ಬಾಯ್ಬಿಟ್ಟು ಕೇಳುವುದು, ಹುಡುಗ ಹುಡುಗಿ ಅಥವಾ ಹಿರಿಯ ತರಗತಿಯ ಮಕ್ಕಳು, ಕಿರಿಯ ಮಕ್ಕಳು ಎಂಬ ಭೇದಗಳಿಲ್ಲದೇ ಒಂದಾಗಿ ಕೆಲಸ ಮಾಡುವುದು; ಹೀಗೆ ಒಂದು ಸಣ್ಣ ಪಟ್ಟಿ ಇದೆ. ಆದರೆ, ಇಂಥವೆಲ್ಲಾ ಮುಂದುವರಿದ ಶಾಲೆಗಳಲ್ಲಿ ಸಹಜವಾಗಿಯೇ ಕಲಿತುಕೊಳ್ಳುತ್ತಾರೆ. ಇನ್ನು ಸರಕಾರಿ ಮತ್ತು ಹಿಂದುಳಿದ ಶಾಲೆಗಳಲ್ಲಿ ಈ ಬಗೆಯ ಸಣ್ಣ ವಿಷಯಗಳನ್ನು ಕೂಡ ಒಂದು ಜೀವನ ಕೌಶಲ್ಯವೆಂದು ಕಲಿಸುವಂತಹ ಸಂದರ್ಭವೊದಗಿದೆ.
ಒಟ್ಟಾರೆ ಆರ್ಥಿಕ ಸಾಮರ್ಥ್ಯದ ಆಧಾರದ ಮೇಲಿನ ಉತ್ತಮ ಮತ್ತು ಉತ್ತಮವಲ್ಲದ ಶಾಲೆಗಳಲ್ಲಿ ಕಲಿಯುವ ಮಕ್ಕಳು ಮುಂದೆ ಸಮಾಜದಲ್ಲಿ ಮುಖಾಮುಖಿಗಳಾದಾಗ ಜೀವನ ಶೈಲಿಯ ಸಂಘರ್ಷವನ್ನು ಎದುರಿಸುತ್ತಾರೆ.
ನಿಜ ಹೇಳಬೇಕೆಂದರೆ, ಅವರವರ ಜೀವನಶೈಲಿಗಳು ಅದರದೇ ಆದಂತಹ ಜೀವನ ಕೌಶಲ್ಯವನ್ನು ಕಲಿಸಿಕೊಡುತ್ತವೆ. ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಮನೆಯವರ ಜೀವನಶೈಲಿ ಮತ್ತು ಶಾಲೆಯಲ್ಲಿ ಕಲಿಕೆಯ ಪರಿಸರ ಜೀವನಕೌಶಲ್ಯದ ಮೇಲೆ ನೇರಾನೇರ ಪ್ರಭಾವವನ್ನು ಬೀರುತ್ತದೆ.
ಹಾಗಾಗಿಯೇ ಮಕ್ಕಳು ತಮ್ಮ ಪರಿಸರದಲ್ಲಿ ಲಭ್ಯವಿರುವ ಪರಿಕರಗಳನ್ನು, ಸ್ವಾಭಾವಿಕ ಅಥವಾ ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ಹೇಗೆ ಕೆಲಸ ಮಾಡುವುದು ಮತ್ತು ಎಲ್ಲಾ ನೆಲೆಗಟ್ಟುಗಳಿಂದ ಆಲೋಚಿಸುವುದು ಹೇಗೆ ಎಂಬುದನ್ನು ಸಣ್ಣವಯಸ್ಸಿನಲ್ಲಿಯೇ ಕಲಿಸಬೇಕಾದಂತಹ ಅನಿವಾರ್ಯತೆ ಪೋಷಕರಿಗೂ ಮತ್ತು ಶಿಕ್ಷಕರಿಗೂ ಇದೆ. ಆದರೆ ಮಕ್ಕಳ ಶಿಕ್ಷಣದ ಸಂದರ್ಭದಲ್ಲಿ ನಮಗೆ ಕಾಡುವ ಬಹುದೊಡ್ಡ ಸಮಸ್ಯೆಗಳು ಎದುರಾಗುವುದು ಮಕ್ಕಳಿಂದಲ್ಲ. ಬದಲಿಗೆ ಪೋಷಕರು ಮತ್ತು ಶಿಕ್ಷಕರಿಂದ. ಇವರದೇ ಸಮಸ್ಯೆ. ಮಕ್ಕಳು ಎಂದಿಗೂ ಸಮಸ್ಯೆಯಾಗುವುದೇ ಇಲ್ಲ. ಅವರೇ ಕೇಂದ್ರವಾಗಿರುವುದರಿಂದ ಅವರಿಗೆ ಪೂರಕವಾಗಿರುವ ಪರಿಸರವನ್ನು ಒದಗಿಸುವ ದಿಸೆಯಲ್ಲಿ ಪೋಷಕರು ಅಥವಾ ಶಿಕ್ಷಕರು ಎಷ್ಟು ಕೆಲಸ ಮಾಡುತ್ತಿದ್ದಾರೆ ಎಂಬುದಷ್ಟೇ ಪ್ರಸ್ತುತವಾಗುತ್ತದೆ.

ಪ್ರತ್ಯಕ್ಷ ಮತ್ತು ಪರೋಕ್ಷ ಮಾರ್ಗದರ್ಶನಗಳು

    ಮಕ್ಕಳ ಆಲೋಚನಾ ವಿಧಾನ ರೂಪುಗೊಳ್ಳುವಲ್ಲಿ ಶಾಲೆಯಲ್ಲಿ ಮತ್ತು ಮನೆಯಲ್ಲಿ ಕೆಲವು ಅಂಶಗಳು ಪ್ರಧಾನವಾದ ಪಾತ್ರವನ್ನು ವಹಿಸುತ್ತವೆ. ಅವು ಪ್ರತ್ಯಕ್ಷವಾಗಿಯೂ ಮತ್ತು ಪರೋಕ್ಷವಾಗಿಯೂ ಇರುತ್ತದೆ. 1.ಪೋಷಕರು ಮತ್ತು ಶಿಕ್ಷಕರು ಪ್ರಾಮಾಣಿಕವಾಗಿ ತೋರುವ ಆಸಕ್ತಿಯನ್ನು ಅವರು ಗ್ರಹಿಸುತ್ತಾರೆ. ಅವರ ಬೋಧನೆ ಬರೀ ತಮಗಾಗಿ ಮಾತ್ರವೋ ಅಥವಾ ತಾವೂ ಅಳವಡಿಕೊಂಡಿದ್ದಾರೋ ಎಂಬುದನ್ನು ಮಕ್ಕಳು ಗ್ರಹಿಸುವುದರಿಂದ ಆಲೋಚನಾ ವಿಧಾನಕ್ಕೆ ಒಂದು ಬಲ ಸಿಗುತ್ತದೆ.

    2.ಚಿಂತನೆಗೆ ಮತ್ತು ಚಟುವಟಿಕೆಗಳಿಗೆ ಅವಕಾಶ ಕೊಡುತ್ತಾರೋ ಅಥವಾ ನಿರ್ದೇಶಿತ ದಿಕ್ಕಿನಲ್ಲಿ ಮಾತ್ರ ಪ್ರೋತ್ಸಾಹಿಸುತ್ತಾರೋ ಎಂಬುದು ಮುಖ್ಯ.

    3.ಮಕ್ಕಳ ಜ್ಞಾನ ಮತ್ತು ಪ್ರಯೋಗಗಳು ಬೆಳೆಯುವುದು ಅವರ ಹಿಂದಿನ ಅರ್ಥವಂತಿಕೆಗಳಿಂದ. ಹಾಗಾಗಿ ಮಕ್ಕಳಿಗೆ ಅರ್ಥವಾಗುವಂತೆ ದೊಡ್ಡವರು ಸರಳತನದಲ್ಲಿ ತಮ್ಮ ಆಲೋಚನೆಗಳನ್ನು ಮತ್ತು ಚಟುವಟಿಕೆಗಳನ್ನು ಪ್ರದರ್ಶಿಸಬೇಕು.

    4.ಮಕ್ಕಳು ಚಟುವಟಿಕೆಗಳಲ್ಲಿ ಮತ್ತು ಆಲೋಚನೆಗಳಲ್ಲಿ ಏನೇ ಮಾಡಿದರೂ ದೊಡ್ಡವರ ಮಾನ್ಯತೆಗಾಗಿ ಎದುರು ನೋಡುವರು. ಅವುಗಳಿಗೆ ಸಮ್ಮತಿ ಸೂಚಿಸುವ ಅಥವಾ ಅಸಮ್ಮತಿ ಸೂಚಿಸುವ ಹಿರಿಯರು ಅದಕ್ಕೆ ಸಕಾರಣವಾಗಿಯೇ ತಮ್ಮ ಅಭಿಪ್ರಾಯವನ್ನು ಹೇಳಬೇಕು. ಏಕೆಂದರೆ ಆಗ ಕೊಡುವಂತಹ ಕಾರಣಗಳು ಅವರ ಮೇಲೆ ಗಾಢ ಪ್ರಭಾವವನ್ನು ಬೀರುತ್ತದೆ.

    5.ಮಕ್ಕಳಿಗೆ ಹಳೆಯ ಅನುಭವಗಳಿಂದ ಹೊಸ ಚಟುವಟಿಕೆಗಳನ್ನು ಮಾಡುವಾಗ ಪ್ರೋತ್ಸಾಹಿಸಬೇಕು. ಹಾಗಾಗಿಯೇ ದೊಡ್ಡವರು ದಾಖಲೆಗಳನ್ನು ತಮ್ಮ ಗಮನದಲ್ಲಿ ಇಟ್ಟುಕೊಂಡಿರಬೇಕು.

    6.ಮಕ್ಕಳಿಗೂ ಕೂಡಾ ಅವರವರ ಆಲೋಚನಾ ಮಟ್ಟಗಳಿಗೆ ಅನುಸಾರವಾಗಿ ಕಲಿಯುವ ಕೌಶಲ್ಯಗಳು, ಭಾಷೆ, ಯೋಜನೆಗಳನ್ನು ಮಾಡುವುದು, ಆ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಎದುರಾಗುವ ಹಂತಗಳು, ಅನಿರೀಕ್ಷಿತವಾಗಿ ಎದುರಾಗುವ ತೊಡಕುಗಳನ್ನು ನಿವಾರಿಸಿಕೊಳ್ಳಲು ಮಾರ್ಗೋಪಾಯ, ಅವುಗಳನ್ನು ಸ್ಮರಣೆಯಲ್ಲಿಟ್ಟುಕೊಳ್ಳುವುದು; ಹೀಗೆ ಎಲ್ಲವನ್ನೂ ಗುರುತಿಸಲು ಮತ್ತು ನೇರವಾಗಿ ಲಿಖಿತದ ರೂಪದಲ್ಲಿ ಗುರುತು ಹಾಕಲು ಹೇಳಿಕೊಡಬೇಕು. ಇದನ್ನು ನಾವೂ ನಮ್ಮ ಕೆಲಸದಲ್ಲಿ ಮಾಡುತ್ತಾ ಅವರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿದರೆ, ಅವರೂ ಸ್ವತಂತ್ರವಾಗಿ ಚಟುವಟಿಕೆಗಳನ್ನು ಮಾಡುವಾಗ ಆ ಮಾದರಿಗಳನ್ನು ಅನ್ವಯ ಮಾಡಿಕೊಳ್ಳುತ್ತಾರೆ. ಹಾಗೂ ವಿಸ್ತರಿಸಿಕೊಳ್ಳುವುದು ಕೂಡ ಆಗಬಹುದು.

       7.ನಮ್ಮಲ್ಲಿ ಬಹುದೊಡ್ಡ ತಪ್ಪು ಗ್ರಹಿಕೆ ಎಂದರೆ ಮಕ್ಕಳಿಗೆ ದೊಡ್ಡವರಾದ ಮೇಲೆ ಬುದ್ಧಿ ಬರುತ್ತದೆ ಎಂಬುದು. ಅದು ಶುದ್ಧಾಂಗ ಸುಳ್ಳು. ಮೂರರ ಬುದ್ಧಿ ನೂರರ ತನಕ ಎನ್ನುವುದು ನೂರಕ್ಕೆ ನೂರು ನಿಜವಲ್ಲದಿದ್ದರೂ ಬಹುಪಾಲು ಸತ್ಯ. ಹಾಗಾಗಿ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳು ಆಲೋಚಿಸುವ ವಿಧಾನವನ್ನು ವಿಸ್ತರಿಸಬೇಕು. ಚಟುವಟಿಕೆಗಳಲ್ಲಿ ಸೃಜನಾತ್ಮಕವಾಗಿ ತೊಡಗುವುದನ್ನು ಕಲಿಯಬೇಕು.


ಆಲೋಚನಾ ವಿಧಾನವನ್ನು ವಿಸ್ತರಿಸಲು ಕೆಲವು ಚಟುವಟಿಕೆಗಳು.

1.ಚಿತ್ರಗಳನ್ನು ತೋರಿಸಿ ಕಥೆ ಹೆಣೆಯಲು ಹೇಳುವುದು.
2.ಹೊಸ ಕಥೆಯನ್ನು ಅರ್ಧ ಹೇಳಿ ಅದನ್ನು ಮುಂದುವರಿಸಲು ಅವಾ ಪೂರ್ತಿ ಮಾಡಲು ಹೇಳುವುದು.
3.ಸನ್ನಿವೇಶವನ್ನು ಮಾತ್ರ ಹೇಳಿ ಕಾರಣ ಮತ್ತು ಪರಿಣಾಮಗಳನ್ನು ಆಲೋಚಿಸುವಂತೆ ಹೇಳುವುದು. ಉದಾಹರಣೆಗೆ, ಪೀಟರ್ ಮನೆಗೆ ಸಾಮಾನು ತರಲು ಅಂಗಡಿಗೆ ಹೋಗುತ್ತಾನೆ. ಅವನು ವಾಪಸ್ ಬಂದಾಗ ಸಾಮಾನನ್ನು ತಂದಿರುವುದಿಲ್ಲ. ಅವನ ಕೈಯಲ್ಲಿ ಬರಿಯ ಚೀಲವಿರುತ್ತದೆ. ಆದರೆ ಹಣವಿರುವುದಿಲ್ಲ. ಏಕೆ? ಏನಾಗಿರಬಹುದು? ಇತ್ಯಾದಿ.
4.ಭಾಷೆಯ ಸರಿಯಾದ ಕಲಿಯುವಿಕೆಯಿಂದ ಮಕ್ಕಳಲ್ಲಿ ಆಲೋಚನಾ ವಿಧಾನವನ್ನು ಅಭಿವೃದ್ಧಿಗೊಳಿಸುವುದರ ಜೊತೆಗೆ ಅವರು ಅದನ್ನು ಸರಿಯಾದ ರೀತಿಯಲ್ಲಿ ಅಭಿವ್ಯಕ್ತಗೊಳಿಸಲು ಕೂಡ ಸಹಕಾರಿ ಯಾಗುತ್ತದೆ.
5.ಭಾಷೆ, ತರ್ಕ, ವಿಚಾರ, ವಿಮರ್ಶೆ ಮತ್ತು ಇವುಗಳ ಸುತ್ತಲೂ ನಡೆಯುವ ಚಟುವಟಿಕೆಗಳು ಆಲೋಚನಾ ವಿಧಾನದ ಹಲವು ಆಯಾಮಗಳನ್ನು ಹುಟ್ಟುಹಾಕುತ್ತವೆ. 6.ರಂಗಭೂಮಿ ಚಟುವಟಿಕೆಗಳ ಮೂಲಕವೂ ಕೂಡ ಆಲೋಚನಾ ವಿಧಾನವನ್ನು ಉತ್ತಮಪಡಿಸಬಹುದು ಮತ್ತು ಸೃಜನಾತ್ಮಕವಾಗಿ ಚಿಂತನೆಗಳನ್ನು ಮಾಡಬಹುದಾಗಿರುತ್ತದೆ. ಇನ್ನು ಹಲವು ರೀತಿಯ ಪ್ರಯೋಗ-ತಂತ್ರಗಳನ್ನು ಮುಂದೆ ತಿಳಿಯೋಣ.


Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News