ಅಸ್ಪಶ್ಯರ ಮೊದಲ ಸ್ವಾತಂತ್ರ ಸಂಗ್ರಾಮ

Update: 2017-08-19 18:48 GMT

‘ಕೋರೆಗಾಂವ್ ವಿಜಯೋತ್ಸವ-ಅಸ್ಪಶ್ಯರ ಮೊದಲ ಸ್ವಾತಂತ್ರ ಸಂಗ್ರಾಮ’ ಮಹದೇವಕುಮಾರ್ ಅವರ ಈ ಕಿರು ಪುಸ್ತಕ ಬಾಬಾ ಸಾಹೇಬ್ ಅಂಬೇಡ್ಕರ್‌ರ ಸಂಶೋಧನೆ ಆಧಾರಿತ ಕೋರೆಗಾಂವ್ ವಿಜಯೋತ್ಸವದ ಕುರಿತಾದುದು. ಕೋರೆಗಾಂವ್ ಯುದ್ಧ ಈ ದೇಶದ ಇತಿಹಾಸ ಮತ್ತು ಸ್ವಾತಂತ್ರದ ವ್ಯಾಖ್ಯಾನಗಳಿಗೆ ಹೊಸ ನೋಟವನ್ನು ನೀಡುತ್ತದೆ. ಈ ಯುದ್ಧ ಭಾರತದ ಸ್ವಾತಂತ್ರ ಹೋರಾಟದ ಹಲವು ವಿರೋಧಾಭಾಸಗಳನ್ನು ಹೊರಹಾಕುತ್ತದೆ. ದಲಿತರ ಪಾಲಿನ ಸ್ವಾತಂತ್ರ ಹೇಗೆ ಉಳಿದವರ ಪಾಲಿನ ಸ್ವಾತಂತ್ರಕ್ಕಿಂತ ಭಿನ್ನವಾದುದು ಎನ್ನುವುದನ್ನು ಹೇಳುತ್ತದೆ.

ಹಾಗೆಯೇ ಶಿವಾಜಿಯ ನಂತರದ ಮರಾಠ ಇತಿಹಾಸದ ಕುರಿತಂತೆ ಹೇಗೆ ಭಾರತೀಯರೊಳಗೇ ಭಿನ್ನಾಭಿಪ್ರಾಯಗಳನ್ನು ಹೊಂದಿವೆ ಎನ್ನುವ ಅಂಶವನ್ನು ಹೇಳುತ್ತದೆ. ದಲಿತರು, ಬುಡಕಟ್ಟು ಜನರು, ಮುಸ್ಲಿಮರನ್ನು ಸಂಘಟಿಸಿ ಶಿವಾಜಿ ಸಾಮ್ರಾಜ್ಯವನ್ನು ಕಟ್ಟಿದರೆ, ತದನಂತರ ಪೇಶ್ವೆಗಳು ಅದನ್ನು ಕೈವಶ ಮಾಡಿಕೊಂಡು ತಮ್ಮ ಜಾತೀಯತೆಯ ಮೂಲಕ ಅದರ ಪತನಕ್ಕೆ ಕಾರಣವಾದರು. ಪೇಶ್ವೆಗಳ ವಿರುದ್ಧ ಬಂಡೆದ್ದ 500 ಮಂದಿ ಮಹಾರರು ಬ್ರಿಟಿಷರ ಜೊತೆಗೆ ಕೈ ಜೋಡಿಸಿ, ಪೇಶ್ವೆಗಳ ಅಪಾರ ಸಂಖ್ಯೆಯ ಸೇನೆಯನ್ನು ನಾಶ ಮಾಡುವಲ್ಲಿ ಮಹತ್ತರ ಪಾತ್ರವಹಿಸಿದರು.

ಈ ಯುದ್ಧದಲ್ಲಿ ಗೆದ್ದಿರುವುದು ಬ್ರಿಟಿಷರು ಮಾತ್ರವಲ್ಲ, ದಲಿತರು ಕೂಡ. ಸೋತದ್ದು ಪೇಶ್ವೆಗಳ ಜಾತೀಯತೆ, ವರ್ಗಭೇದ. ಮಹಾರ್ ಸಮುದಾಯ ಈ ಮೂಲಕ ಬ್ರಿಟಿಷರ ಆಡಳಿತದಲ್ಲಿ ಮಹತ್ವದ ಸ್ಥಾನವನ್ನು ಪಡೆಯಲು ಕಾರಣವಾಯಿತು. ಅಸ್ಪಶ್ಯರ ಪಾಲಿಗೆ ಕೋರೆಗಾವ್ ಯುದ್ಧ ಮೊದಲ ಸ್ವಾತಂತ್ರ ಸಂಗ್ರಾಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಬ್ರಿಟಿಷರು ಬರುವ ಮೊದಲೇ ದಲಿತರು ಈ ದೇಶದಲ್ಲಿ ಪಾರತಂತ್ರವನ್ನು ಅನುಭವಿಸುತ್ತಿದ್ದರು. ತಮ್ಮ ಜನರಿಂದಲೇ ಅತ್ಯಂತ ಕೀಳುಮಟ್ಟದ ಬದುಕನ್ನು ಬದುಕುತ್ತಿದ್ದರು. ಬ್ರಿಟಿಷರ ಆಗಮನ ಅವರ ಬದುಕನ್ನು ಒಂದಿಷ್ಟಾದರೂ ಸಹನೀಯವಾಗಿತ್ತು.

ಆದುದರಿಂದ, ಸಾಮಾಜಿಕ ಬದಲಾವಣೆಯಾಗದೆ ಬರೀ ರಾಜಕೀಯ ಹಸ್ತಾಂತರ ಭಾರತಕ್ಕೆ ಸ್ವಾತಂತ್ರ ನೀಡಿದರೂ ದಲಿತರಿಗೆ ಸ್ವಾತಂತ್ರ ನೀಡಲಾರದು ಎನ್ನುವುದನ್ನು ಅಂಬೇಡ್ಕರ್ ಅರ್ಥ ಮಾಡಿಕೊಂಡಿದ್ದರು. ಕೋರೆಗಾವ್ ಯುದ್ಧವನ್ನು ನೆಪವಾಗಿಟ್ಟುಕೊಂಡು ಭಾರತ ಸ್ವಾತಂತ್ರಹೋರಾಟದ ಮಿತಿಗಳನ್ನೂ ನಾವು ಚರ್ಚಿಸಬಹುದಾಗಿದೆ. ಹಿಂದುತ್ವ ಪ್ರತಿಪಾದಿಸುವ ಮರಾಠರ ರೋಚಕ ಇತಿಹಾಸದೊಳಗಿರುವ ಟೊಳ್ಳುತನವನ್ನೂ ಈ ಕೃತಿ ಬಯಲಿಗೆಳೆಯುತ್ತದೆ.

ಲಿಪಿಗ್ರಾಫ್ ಪ್ರಕಾಶ ಹೊರತಂದಿರುವ ಕೃತಿಯ ಮುಖಬೆಲೆ 60 ರೂಪಾಯಿ. ಆಸಕ್ತರು 80502 33270 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News