ಅಂಬೇಡ್ಕರ್‌ ರೂಪಕಗಳು

Update: 2017-08-20 06:02 GMT

ಅಂಬೇಡ್ಕರ್ ಗುಣಗಳನ್ನು ಕೆಲವರು ಪುರಾಣಪ್ರತಿಮೆಗಳ ಮೂಲಕ ನೋಡಲು ಯತ್ನಿಸಿರುವುದುಂಟು. ‘ಹತ್ತು ತಲೆಯ ಜ್ಞಾನವಿದ್ದ ರಾವಣ’ನಿಗೂ ‘ತಾಯಿ ಹೃದಯದ ಒರಟ ಮಹಿಷಾಸುರ’ನಿಗೂ ಸಮೀಕರಿಸುವ ರೂಪಕಗಳಿವೆ. ಈ ಪೌರಾಣಿಕ ರೂಪಕಗಳು ಬ್ರಾಹ್ಮಣವಾದಿ ಪುರಾಣ ಪರಂಪರೆ ಯಾರನ್ನು ರಕ್ಕಸರೆಂದು ಕರೆಯಿತೊ ಅವರನ್ನು ದಮನಕ್ಕೊಳಗಾದ ಆದಿಮ ದಲಿತರೆಂದು ಪರಿಭಾವಿಸುತ್ತವೆ. ಈ ಮೂಲಕ ಮೇಲ್ವರ್ಗದ ಹಿತಾಸಕ್ತಿಯು ದುಷ್ಟೀಕರಿಸಿ ಕೊಂದ ಪುರಾಣವನ್ನೇ ಪ್ರಶ್ನಿಸುತ್ತವೆ ಮತ್ತು ಉಲ್ಟಾ ಮಾಡುತ್ತವೆ. ಇದು ತಿರಸ್ಕೃತಗೊಂಡ ಸಂಕೇತಗಳನ್ನು ಘನತೀಕರಿಸುವ ಪ್ರತಿಸಾಂಸ್ಕೃತಿಕ ಕಾರ್ಯ ಕೂಡ.

 ಕನ್ನಡದಲ್ಲಿ ಅಂಬೇಡ್ಕರ್ ಚಿಂತನೆ ಕರಗಿಕೊಂಡು ಬಂದಿರುವ ಬೇಕಾದಷ್ಟು ಸಾಹಿತ್ಯವಿದೆ. ಆದರೆ ಅವರನ್ನು ನೇರವಾಗಿ ಉಲ್ಲೇಖಿಸುವ ಕಾವ್ಯ ಕಥನ ಸಾಹಿತ್ಯವೂ ಅವರನ್ನು ಕಂಡರಿಸಿದೆ. ವಿವಿಧ ರೂಪಕಗಳಲ್ಲಿ. ಈ ರೂಪಕಗಳ ಅರ್ಥ ಧ್ವನಿ ಮತ್ತು ನಿಲುವನ್ನು ವಿಶ್ಲೇಷಿಸುವುದು ಈ ಟಿಪ್ಪಣಿಯ ಉದ್ದೇಶ. ಈ ರೂಪಕಗಳು ಮುಖ್ಯವಾಗಿ ಆರು ಮಾದರಿಗಳಲ್ಲಿವೆ.

1. ಜೀವನಚರಿತ್ರೆ ಕಟ್ಟುವ ಮಾದರಿ:

ಇಲ್ಲಿ ಅಂಬೇಡ್ಕರ್ ಚಿಂತನೆಗಳ ಅನುಸಂಧಾನವಿಲ್ಲ. ಬದಲಿಗೆ ಅವರ ಬದುಕಿನ ಘಟನೆಗಳನ್ನು ಜೀವನಚರಿತ್ರೆಯಾಗಿ ಕಟ್ಟಿಕೊಡುವ ಯತ್ನವಿದೆ. ಈ ಮಾದರಿಯಲ್ಲಿ ಸಾಮಾನ್ಯವಾಗಿ ಯಾಂತ್ರಿಕವಾಗಿ ಚರಿತ್ರೆ ಕಟ್ಟುವಿಕೆಯಿದೆ. ವೈಭವೀಕರಣವಿದೆ. ಕೆಲವರು ಮಾತ್ರ ಚರಿತ್ರೆಯನ್ನು ವಿಶಿಷ್ಟವಾಗಿ ಕಟ್ಟಿಕೊಡಲು ಯತ್ನಿಸಿರುವರು. ನಿದರ್ಶನಕ್ಕೆ ಬೊಳುವಾರು ಮಹಮ್ಮದ್ ಕುಂಞಿ ‘ಮುಟ್ಟಿರಿ’ ಎಂಬ ಹೆಸರಲ್ಲಿ ರಚಿಸಿರುವ ದ್ವಿಪದಿಗಳು. ಅಲ್ಲೊಂದು ಕಡೆ ಅಂಬೇಡ್ಕರ್‌ಗೆ ಪ್ರೀತಿ ಮತ್ತು ಆತ್ಮವಿಶ್ವಾಸಕೊಟ್ಟ ಬ್ರಾಹ್ಮಣ ಹಿನ್ನೆಲೆಯಿಂದ ಬಂದ ಅಂಬೇವಾಡೇಕರ್ ಎಂಬ ಶಿಕ್ಷಕರು, ತಂಬಾಕು ಮಂಡಿಯಲ್ಲಿ ಗುಮಾಸ್ತರಾಗಿದ್ದರು ಎಂಬ ಅಂಶವಿದೆ.

(ಬೊಳುವಾರು ಮಹಮ್ಮದ್ ಕುಂಞಿ)

ಈ ‘ಅಮುಖ್ಯ’ವೆನಿಸುವ ವಿವರದ ಮೂಲಕ ದ್ವಿಪದಿ ಏನು ಹೇಳುತ್ತಿದೆ? ದಲಿತರಿಗೆ ಬೇಕಾಗಿರುವುದು ಕೇವಲ ಸವರ್ಣೀಯರ ತುಟಿಮರುಕವಲ್ಲ, ಸಹಮಾನವರಾಗಿ ತೋರುವ ಕ್ರಿಯಾಶೀಲ ಪ್ರೀತಿಯೆಂದೇ? ಬಡತನದ ನೋವುಂಡವರು ಜಾತಿಯಾಚೆ ಬಂದು ದಲಿತರ ಅವಮಾನಕ್ಕೆ ಸ್ಪಂದಿಸಬಲ್ಲರು ಎಂಬುದನ್ನೇ? ದಲಿತರ ಬಿಡುಗಡೆ ಕೇವಲ ಅವರ ಪ್ರತಿರೋಧದಲ್ಲಿಲ್ಲ. ಸವರ್ಣೀಯರ ಆತ್ಮಾವಲೋಕನಭರಿತ ಭಾಗವಹಿಸುವಿಕೆಯಲ್ಲಿದೆ ಎನ್ನುವುದನ್ನೇ? ಬೊಳುವಾರು ‘ಬಾಪು’ವಿನ ಮೇಲೆ ಕೃತಿ ರಚಿಸಿದವರು ಎಂಬ ಹಿನ್ನೆಲೆಯಲ್ಲಿ ಇದನ್ನು ನೋಡಬೇಕು. ಇಲ್ಲಿ ಪರಸ್ಪರ ಸೈದ್ಧಾಂತಿಕ ವಿರೋಧಿಗಳು ಎಂದು ಗ್ರಹಿಸಲಾಗಿರುವ ಗಾಂಧಿ-ಅಂಬೇಡ್ಕರ್ ಅವರನ್ನು ಪರಸ್ಪರರ ದೃಷ್ಟಿಕೋನಗಳ ಮೂಲಕ ನೋಡುವ ಯತ್ನವಿದ್ದಂತಿದೆ.

2. ಆದರ್ಶ ನಾಯಕನನ್ನು ಕಟ್ಟಿಕೊಳ್ಳುವ ಮಾದರಿ:

ಇದು ಚಿಂತಕ ಹೋರಾಟಗಾರ ಹಾಗೂ ಸುಧಾರಣವಾದಿ ಅಂಬೇಡ್ಕರರನ್ನು ವರ್ತಮಾನಕ್ಕೆ ಚೈತನ್ಯವಾಗಿ ಆವಾಹಿಸಲು ಯತ್ನಿಸುತ್ತದೆ. ಇಲ್ಲಿ ಮುಖ್ಯವಾಗಿ ದಲಿತರಿಗೆ ಅರಿವು ಎಚ್ಚರ ಕೊಟ್ಟಿದ್ದಕ್ಕೆ ಕೃತಜ್ಞತೆ ಮತ್ತು ಅಭಿಮಾನ ಸಲ್ಲಿಸುವಿಕೆಯಿದೆ. ಜತೆಗೆ ಅವರನ್ನು ದೈವೀಕರಿಸುವ ಆರಾಧನ ಭಾವದ ಹೆಚ್ಚಳವೂ ಇದೆ. ಅಂಬೇಡ್ಕರರನ್ನು ಸನಾತನ ಹಿಂದೂ ಧರ್ಮ ಅಮಾನವೀಯ ಕಟ್ಟಡಕ್ಕೆ ಬಡಿದ ಸಿಡಿಲೆಂದೂ ‘ಕಪ್ಪುಕ್ಕಿನ ಕೊಳಗಳನು ಕಡಿದು ಎಸೆದ ವಜ್ರ’ವೆಂದೂ ಇಲ್ಲಿ ಮೆಚ್ಚಲಾಗುತ್ತದೆ. ವಜ್ರ ಅರ್ಥಾತ್ ಸಿಡಿಲು ಆಗಸದಿಂದ ಇಳಿದು ಬರುವ ಪ್ರಚಂಡ ಶಕ್ತಿಯ ಸಂಕೇತ; ಪುರಾಣದಲ್ಲಿ ಒಂದು ಆಯುಧ ಕೂಡ. ಈ ಯುದ್ಧ ಪರಿಭಾಷೆಯು ಸಾಮಾಜಿಕ ಯುದ್ಧದಲ್ಲಿ ಅಂಬೇಡ್ಕರರನ್ನು ಯೋಧನಾಗಿ ಕಾಣಿಸುವುದು. ಆದರೆ ಅಂಬೇಡ್ಕರ್‌ಗೆ ಎದುರಾಳಿಯಾದ ಜಾತಿವ್ಯವಸ್ಥೆಗೆ ಪ್ರಹಾರ ಕೊಡುವ ಶಕ್ತಿಯ ಜತೆ, ತನ್ನವರನ್ನು ರಕ್ಷಿಸುವ ಕರುಣಾಳು ಬಾಹುವಿನ ಇನ್ನೊಂದು ಮುಖವೂ ಇದೆ. ಈ ತಬ್ಬಲಿ ರಕ್ಷಕ ಕಾರ್ಯವನ್ನು ಸೂರ್ಯನ, ಹಣತೆಯ, ದಾರಿದೀಪದ ರೂಪಕಗಳಲ್ಲಿ ಕವಿತೆಗಳು ಕಾಣಿಸುತ್ತವೆ. ದಲಿತ ಸಂಘಟನೆಗಳ ಅಕ್ಷರ ಮತ್ತು ಅರಿವಿನ ಹಿನ್ನೆಲೆಯಲ್ಲಿ ಈ ರೂಪಕಗಳು ಮಾರ್ಮಿಕವಾದ ಅರ್ಥವನ್ನು ಗಳಿಸಿವೆ.

(ದೇವನೂರ ಮಹದೇವ)

ಅಂಬೇಡ್ಕರರನ್ನು ಗಾಯಗೊಂಡ ಅಥವಾ ರೋಗಗ್ರಸ್ತ ವೈದ್ಯ ಸಮಾಜಕ್ಕೆ ಮದ್ದನ್ನು ಅರೆದ ವೈದ್ಯನೆಂದು ಪರಿಭಾವಿಸುವ ಕವನಗಳೂ ಇವೆ. ‘ಕೇರಿಯಿಂದ ಊರಿಗೆ ಮದ್ದು ಬರೆದ ಡಾಕ್ಟರಾ, ಭಾರತ ಮಾತೆಗೆ ಹೊಸ ಬಟ್ಟೆ ಹೊಲಿದ ಟೈಲರಾ?’ ಎಂದು ಒಂದು ಕವಿತೆ ಬಣ್ಣಿಸುತ್ತದೆ. ಇಲ್ಲಿ ಅಸ್ಪಶ್ಯತೆ ಆಚರಿಸುವ ಊರಿನ ಕಾಯಿಲೆಗೆ ದಲಿತ ಕೇರಿ ಮದ್ದು ಬರೆಯುವ ಕ್ರಿಯೆಯಿದೆ. ಜಾತಿವ್ಯವಸ್ಥೆಯ ಬಲಿಪಶುಗಳನ್ನು ರೋಗನಿವಾರಕ ವೈದ್ಯರಾಗಿ ಕಲ್ಪಿಸಿಕೊಳ್ಳುವ ಈ ವಿಧಾನವು, ಆಕ್ರೋಶ ಮತ್ತು ವಿರೋಧದ ಮಾದರಿಯನ್ನು ಬಿಟ್ಟುಕೊಟ್ಟು, ದಲಿತರಮೇಲೆ ಮಾನವೀಯತೆ ಕಲಿಸುವ ಚಾರಿತ್ರಿಕ ಭಾರ ಹೊರಿಸುತ್ತದೆ.

ಅಂಬೇಡ್ಕರ್ ಅವರನ್ನು ಕೃಷಿರೂಪಕಗಳಲ್ಲಿ ಕಾಣಿಸುವ ಕವನಗಳೂ ಇವೆ. ಬರಗೆಟ್ಟ ನೆಲಕ್ಕೆ ಹೊಯ್ದ ಅಥವಾ ಬೀಜವನ್ನು ಮೊಳಕೆಯೊಡೆಸಿದ ಮಳೆಯಾಗಿ ಇವು ಅವರನ್ನು ಕಾಣಿಸುತ್ತವೆ. ಮಳೆ ಮತ್ತು ಬೀಜದ ರೂಪಕಗಳು ಅಂಬೇಡ್ಕರ್ ಮತ್ತು ದಮನಿತರ ನಡುವಿನ ವೈಚಾರಿಕ ಸಂಬಂಧವನ್ನೂ ಸೂಚಿಸುತ್ತವೆ. ಬೀಜಕ್ಕೆ ಗಿಡವಾಗುವ ಕಸುವಿರಬಹುದು. ಮೊಳಕೆಯೊಡೆಸಬಲ್ಲ ಜಲದ ಸ್ಪರ್ಶವಿಲ್ಲದೆ ಅದಕ್ಕೆ ಹೊಸ ಬದುಕು ಸಾಧ್ಯವಿಲ್ಲ. ಸಿದ್ದಲಿಂಗಯ್ಯನವರ ಕವನ ಇದೇ ಆಗಸ ಮತ್ತು ಮಳೆಯ ರೂಪಕದಲ್ಲಿ ಹಿಡಿದಿಟ್ಟರೂ, ಅಂಬೇಡ್ಕರ್ ಮಳೆಯಿಲ್ಲದೆ ಬರುವ ಕೇವಲ ಮಿಂಚೇ ಮತ್ತು ಬಿತ್ತಿದ ಬೆಳೆಯನ್ನು ಕೊಯಿಲು ಮಾಡದೆ ಹೋದ ರೈತನೇ ಎಂದು ಶಂಕಿಸುತ್ತದೆ. ದಲಿತ ಸಮುದಾಯವು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಸಂಸ್ಕೃತಿಯ ಭಾಗವಾಗಿದೆ. ಹೀಗಾಗಿ ಈ ಕೃಷಿಕ ಪ್ರತಿಮೆಗಳು ಅವರ ಬಾಳಿನ ಜತೆ ಸಾವಯವ ಸಂಬಂಧವನ್ನು ಪಡೆಯುತ್ತವೆ.

ಕೆಲವು ಕವನಗಳು ವೃಕ್ಷರೂಪಿಯಾಗಿ ಅಂಬೇಡ್ಕರ್‌ರನ್ನು ಕಲ್ಪಿಸಿಕೊಳ್ಳುವುದುಂಟು. ಅದರಲ್ಲೂ ಹಲವು ಕೊಂಬೆಗಳನ್ನೂ ಬಿಳಿಲುಗಳನ್ನೂ ಹರಡಿ ವಿಶಾಲವಾಗಿ ಬೆಳೆಯುವ ಆಲದ ರೂಪಕವು ಅಂಬೇಡ್ಕರ್ ಚಿಂತನೆ ಬಹುರೂಪಿ ವಿಸ್ತರಣೆಯನ್ನು ಸಂಕೇತಿಸುತ್ತದೆ. ಆದರೆ ಆಲವನ್ನು ಸನಾತನ ಸಂಪ್ರದಾಯದ ಸಂಕೇತವೆಂದು ಭಾವಿಸುವ ಇನ್ನೊಂದು ಕವನ, ಅಂಬೇಡ್ಕರ್ ಆಲದ ಬೇರುಕೊಯ್ದು ಬೋಧಿಮರವನ್ನು ಚಿಗುರಿಸಿದರು ಎಂದು ಸೂಚಿಸುತ್ತದೆ. ಕವಿಗಳು ಬೇರೆಬೇರೆ ರೂಪಕಗಳನ್ನು ಸೃಷ್ಟಿಸುವುದು ಮಾತ್ರವಲ್ಲ, ಒಂದೇ ರೂಪಕವನ್ನು ಬೇರೆಬೇರೆ ತಾತ್ವಿಕ ಅರ್ಥದಲ್ಲಿಯೂ ಬಳಸುವರು.

(ಪೂರ್ಣಿಮಾ ಸುರೇಶ್)

ಅಂಬೇಡ್ಕರ್ ಗುಣಗಳನ್ನು ಕೆಲವರು ಪುರಾಣಪ್ರತಿಮೆಗಳ ಮೂಲಕ ನೋಡಲು ಯತ್ನಿಸಿರುವುದುಂಟು. ‘ಹತ್ತು ತಲೆಯ ಜ್ಞಾನವಿದ್ದ ರಾವಣ’ನಿಗೂ ‘ತಾಯಿ ಹೃದಯದ ಒರಟ ಮಹಿಷಾಸುರ’ನಿಗೂ ಸಮೀಕರಿಸುವ ರೂಪಕಗಳಿವೆ. ಈ ಪೌರಾಣಿಕ ರೂಪಕಗಳು ಬ್ರಾಹ್ಮಣವಾದಿ ಪುರಾಣ ಪರಂಪರೆ ಯಾರನ್ನು ರಕ್ಕಸರೆಂದು ಕರೆಯಿತೊ ಅವರನ್ನು ದಮನಕ್ಕೊಳಗಾದ ಆದಿಮ ದಲಿತರೆಂದು ಪರಿಭಾವಿಸುತ್ತವೆ. ಈ ಮೂಲಕ ಮೇಲ್ವರ್ಗದ ಹಿತಾಸಕ್ತಿಯು ದುಷ್ಟೀಕರಿಸಿ ಕೊಂದ ಪುರಾಣವನ್ನೇ ಪ್ರಶ್ನಿಸುತ್ತವೆ ಮತ್ತು ಉಲ್ಟಾ ಮಾಡುತ್ತವೆ. ಇದು ತಿರಸ್ಕೃತಗೊಂಡ ಸಂಕೇತಗಳನ್ನು ಘನತೀಕರಿಸುವ ಪ್ರತಿಸಾಂಸ್ಕೃತಿಕ ಕಾರ್ಯ ಕೂಡ. ಕೆಲವು ಕವಿಗಳು ಅಂಬೇಡ್ಕರ್‌ರನ್ನು ನೆಹರೂ ವ್ಯೆಹದಲ್ಲಿ ಬಲಿಯಾದ ಅಭಿಮನ್ಯುವಿಗೂ ಪರ್ವತ ಶಿಖರಕ್ಕೆ ಬಂಡೆ ದಬ್ಬಿಕೊಂಡು ಹೋಗುವ ಶಿಕ್ಷೆಗೆ ಗುರಿಯಾದ ಗ್ರೀಕ್ ಪುರಾಣದ ಸಿಸಿಫಸನಿಗೂ ಹೋಲಿಸುತ್ತವೆ. ಮೊದಲ ರೂಪಕವು ಅಂಬೇಡ್ಕರರನ್ನು ಬಲಿಪಶುವೆಂದು ಕಲ್ಪಿಸಿಕೊಂಡರೆ, ಎರಡನೆಯದು ಜಾತಿ ವ್ಯವಸ್ಥೆಯನ್ನು ಬದಲಾಯಿಸುವಲ್ಲಿ ಸೋತವರು ಎಂದು ಸೂಚಿಸುತ್ತಿದೆ. ಪುರಾಣಗಳನ್ನು ಭಗ್ನಗೊಳಿಸಿದ ಅಂಬೇಡ್ಕರ್ ಅವರನ್ನು ಪುರಾಣ ಪ್ರತಿಮೆಗಳ ಮೂಲಕವೇ ಹಿಡಿಯುವ ಈ ಯತ್ನವು ಒಂದು ವೈರುಧ್ಯಕರ ವಿಶಿಷ್ಟತೆ.

3. ಸಾಮಾಜಿಕ ವಿಷಮತೆ ಕಾಣಿಸಲು ಮತ್ತು ವಿಮರ್ಶಿಸಲು ಉಪಕರಣವಾಗಿ ನೋಡುವ ಮಾದರಿ:

ಇಲ್ಲಿ ರೂಪಕಗಳು ಸಂಪ್ರದಾಯವಾದಿ ಸಮಾಜ ವಿಮರ್ಶೆಗೆ ಅಂಬೇಡ್ಕರ್ ಅವರನ್ನು ಉಪಕರಣದಂತೆ ಬಳಸುತ್ತ, ಪರೋಕ್ಷವಾಗಿ ಗಾಯಗೊಂಡ ಭಾರತದ ಸಾಮಾಜಿಕ ಚರಿತ್ರೆಯನ್ನು ಮರುಕಟ್ಟಿಕೊಡುತ್ತವೆ. ‘ಹೊಲಗೇರಿ ರಾಜಕುಮಾರ’ ಕಾದಂಬರಿಯಲ್ಲಿ, ರ್ಯಾಂಕ್ ಬಂದ ದಲಿತ ವಿದ್ಯಾರ್ಥಿಯನ್ನು ಸನ್ಮಾನಿಸಬೇಕೊ ಬೇಡವೊ ಎಂದು ಕಾಲೇಜಿನ ಆಡಳಿತ ಮಂಡಳಿ ಚರ್ಚಿಸುವ ಸನ್ನಿವೇಶವಿದೆ. ಸನ್ಮಾನ ನಡೆದರೆ ಹೆಚ್ಚಿನ ದಲಿತ ವಿದ್ಯಾರ್ಥಿಗಳು ಕಾಲೇಜಿಗೆ ಓದಲು ಬಂದು ಸವರ್ಣೀಯ ಹುಡುಗಿಯರನ್ನು ಹಾರಿಸಿಕೊಂಡು ಹೋಗಬಹುದು ಎಂದು ಮಂಡಳಿಯ ಅಧ್ಯಕ್ಷ ಆತಂಕಿಸುವನು. ಅಂಬೇಡ್ಕರ್ ಬ್ರಾಹ್ಮಣ ಹಿನ್ನೆಲೆಯಿಂದ ಬಂದ ಸವಿತಾ ಅವರನ್ನು ಮದುವೆಯಾಗಿದ್ದನ್ನು ಇದಕ್ಕೆ ಆತ ಉಲ್ಲೇಖಿಸುತ್ತಾನೆ. ಮೇಲ್ಜಾತಿ ಸಮಾಜದಲ್ಲಿ ದಲಿತರ ಮತ್ತು ಅಂಬೇಡ್ಕರ್ ಬಗ್ಗೆ ಉಳಿದಿರುವ ಅಸಹನೆ-ಆತಂಕವನ್ನು ಇದು ಕಾಣಿಸುತ್ತದೆ. ಅಂಬೇಡ್ಕರ್ ಅವರ ಪ್ರತಿಭೆಗಿಂತ ಅವರ ವೈಯಕ್ತಿಕ ಬದುಕಿನ ಘಟನೆಯನ್ನೇ ಉಲ್ಲೇಖಿಸುವ ಈ ಪ್ರಕರಣವು, ‘ವರ್ಶಿಪಿಂಗ್ ದಿ ಫಾಲ್ಸ್ ಗಾಡ್’ ಧೋರಣೆ ಸವರ್ಣೀಯ ಸಮಾಜದಲ್ಲಿ ಉಳಿದಿರುವುದನ್ನು ಸಹ ಸೂಚಿಸುತ್ತದೆ. ಅಂಬೇಡ್ಕರ್ ಸ್ಮರಣೆಯು ದಲಿತರ ಬದುಕಿಗೆ ನೆರವಾಗದೆ ಅವರ ಭಾವ ನಾತ್ಮಕ ತೃಪ್ತಿಗಾಗಿ ಪ್ರತಿಮೆ ನಿಲ್ಲಿಸುವ ಇಲ್ಲವೇ ದಲಿತರ ಮತ ಬ್ಯಾಂಕನ್ನು ಸೃಷ್ಟಿಸಿಕೊಳ್ಳುವ ಶಕ್ತಿರಾಜಕಾರಣದ ಇಲ್ಲವೇ ಅವಕಾಶವಾದಿ ದಲಿತ ನಾಯಕತ್ವದ ವಿಮರ್ಶೆಗೂ ಬಳಕೆಯಾಗುತ್ತದೆ. ಅಂಬೇಡ್ಕರ್ ಪ್ರತಿಮೀಕರಣ ಮತ್ತು ದೈವೀಕರಣಗಳು ಅವರ ಚಿಂತನೆಯನ್ನು ಹಿಂತಳ್ಳುತ್ತವೆ ಮತ್ತು ಅವರನ್ನು ಸ್ಥಾವರಗೊಳಿಸುತ್ತವೆ ಎಂದು ಈ ಮಾದರಿಯ ಕವನಗಳು ಆತಂಕಿಸುತ್ತವೆ.

(ಅಮರೇಶ ನುಗದೋನಿ)

ವಿಶೇಷವೆಂದರೆ, ಅಂಬೇಡ್ಕರ್ ನೆಹರೂವಿನ, ಕಾಂಗ್ರೆಸ್ಸಿನ ಹಾಗೂ ಕಮ್ಯುನಿಸ್ಟರ ವಿರೋಧಕ್ಕೆ ಹತ್ಯಾರವಾಗಿ ಬಳಕೆಯಾಗುವುದು. ಚರಿತ್ರೆಯ ನೆನಪೊಂದು ಸೈದ್ಧಾಂತಿಕ ಎದುರಾಳಿಗಳನ್ನು ನಿರಾಕರಿಸಲು ಬಳಕೆಯಾಗುವ ಈ ರಾಜಕಾರಣವು ವಿಶಿಷ್ಟವಾಗಿದೆ. ಈ ಮಾದರಿಯಲ್ಲಿ ಇನ್ನೊಂದು ಮಜಲೆಂದರೆ, ದಲಿತ ಸಮುದಾಯ ಮತ್ತು ಚಳವಳಿಗಳ ವಿಮರ್ಶೆಗೂ ಅಂಬೇಡ್ಕರ್ ಸ್ಮತಿ ಚಾಚಿಕೊಳ್ಳುವುದು. ಅಕ್ಷರ ಅರಿವುಗಳು ಸಮುದಾಯದ ಜತೆ ಬೆಸುಗೆಯಾಗದೆ ಬಿರುಕಾಗಿರುವ ಸನ್ನಿವೇಶವನ್ನು ‘ಕುಸುಮಬಾಲೆ’ ತರುತ್ತದೆ. ದಲಿತರ ಜಾಥಾ ಹೊರಡುವ ಮುನ್ನ, ಗ್ರಾಮೀಣ ಪ್ರಜ್ಞೆಯ ಗಾರಸಿದ್ಮಾವನು ಅಂಬೇಡ್ಕರ್ ಫೋಟೊ ಮುಂದೆ ಏಳುಮಲೆ ಎಪ್ಪತ್ತೇಳು ಮಲೆ ಮಲೆಮಾದಪ್ಪನಿಗೆ ಉಘೇ ಎಂದು ತೆಂಗಿನಕಾಯಿ ಒಡೆದಾಗ, ದಲಿತ ಸಂಘದ ಮುಖಂಡರ ಮುಖ ಬಿಗಿದುಕೊಳ್ಳುತ್ತವೆ. ದಲಿತರ ಬಗ್ಗೆ ಕಾಳಜಿಯಿದ್ದರೂ, ಅವರ ಸಂಸ್ಕೃತಿಯ ಭಾವನೆಗಳ ಭಾಗವಾಗದೆ ವೈಚಾರಿಕ ಪ್ರಧಾನ ಚಳವಳಿಯು ಹೊರಗೆ ಉಳಿದಿರುವುದನ್ನು ಕಾದಂಬರಿ ವ್ಯಂಗ್ಯವಾಗಿ ಕಾಣಿಸುತ್ತದೆ.

4. ಅಂಬೇಡ್ಕರ್‌ರನ್ನು ಬೌದ್ಧಭಿಕ್ಷುವಾಗಿ ಬುದ್ಧನ ಆಧುನಿಕ ಅವತಾರವಾಗಿ ಕಾಣುವ ಚಿತ್ರಗಳು:

ಇವು ಅವರನ್ನು ಬೋಧಿವೃಕ್ಷ, ಸಂತ ಎಂದು ಕರೆಯುತ್ತವೆ. ಸಿದ್ದಲಿಂಗಯ್ಯನವರ ಕವಿತೆಗೆ ಅವರು ಬೌದ್ಧಬಿಕ್ಕು ಆಗಿದ್ದರ ಬಗ್ಗೆ ಸಂಭ್ರಮವಿಲ್ಲ. ಅಲ್ಲಿ ಅವರು ‘‘ಬಂಗಾರದ ಕೋಳವೊಕ್ಕ ಮಹಾಬೌದ್ಧ ಭಿಕ್ಕು’’. ಈ ರೂಪಕವು ಯಾವುದನ್ನು ಅಂಬೇಡ್ಕರ್ ಬಿಡುಗಡೆಯ ಹಾದಿಯೆಂದು ಪರಿಭಾವಿಸಿದರೊ ಅದು ನಿಜವಾಗಿಯೂ ದಲಿತರ ಪಾಲಿಗೆ ಬಿಡುಗಡೆಯೇ ಎಂಬ ಪ್ರಶ್ನೆಯನ್ನು ಎತ್ತುತ್ತದೆ. ಅಡಿಗರ ಕವನವು ಅವರ ಭಿಕ್ಕುತನವನ್ನು ಕಾಣುವ ಇನ್ನೂ ವಿಶಿಷ್ಟವಾಗಿದೆ. ‘‘ಅಪಸ್ವರ ಕೊಡುವ ಕೆಸರು ತುಂಬಿದ ಕೊಳಲ ಶ್ರುತಿಶುದ್ಧ ಮಾಡಿ ಹಿಂದುತ್ವದೊಳಗಿರುವ ಸಿಂಧುತ್ವ ಬಂಧುತ್ವ ಸಮತ್ವಗಳ ರಾಗ ಮಾಲಿಕೆಯನೆಬ್ಬಿಸಲು ದುಡಿದು ದಣಿದು ಬೌದ್ಧಕ್ಕೆ ಸೋತದ್ದು ಸೋಜಿಗವಲ್ಲ, ಬುದ್ಧಿಯೋಗಿಯೇ’’; ಇಲ್ಲಿ ಅಂಬೇಡ್ಕರ್ ದಮ್ಮಕ್ಕೆ ಹೋಗಿದ್ದು ಅದನ್ನು ಬಯಸಿ ಅಲ್ಲ, ಸಮಾಜ ಸುಧಾರಣೆಯಲ್ಲಿ ಸೋತು ಎಂಬ ದನಿಯಿದೆ. ಕನ್ನಡದ ಇಬ್ಬರು ಕವಿಗಳು ಅವರ ದಮ್ಮದೀಕ್ಷೆಯ ಬಗ್ಗೆ ತಾಳುತ್ತಿರುವ ತಾತ್ವಿಕ ನಿಲುವಿನ ವ್ಯತ್ಯಾಸಗಳು ಗಮನಾರ್ಹವಾಗಿವೆ. ಒಂದು ಧರ್ಮಾಂತರವು ಪರ್ಯಾಯವಲ್ಲ ಎಂದು ಸೂಚಿಸಿದರೆ, ಮತ್ತೊಂದು ಧರ್ಮದ ಪರಿಷ್ಕಾರದ ಕೆಲಸ ಪೂರ್ಣಗೊಳ್ಳಲಿಲ್ಲ ಎಂದು ವಿಷಾದಿಸುತ್ತದೆ.

5. ಅಂಬೇಡ್ಕರ್‌ರನ್ನು ಸಂಗಾತಿಯೆಂದು ಭಾವಿಸಿ, ಅವರೊಡನೆ ಸೈದ್ಧಾಂತಿಕ ಭಿನ್ನಮತಗಳ ಮೂಲಕ ಮುಖಾಮುಖಿಯಾಗುವ ಮಾದರಿ:

ಈ ಮಾದರಿಯಲ್ಲಿ ಪ್ರಶ್ನೆಗಳಿವೆ. ಉದಾಹರಣೆಗೆ ‘ಮಲಗಿರುವವರನು ಕೂರಿಸಿದೆ ನಿಲ್ಲಿಸುವವರು ಯಾರೊ?’ ಎಂಬ ಪ್ರಶ್ನೆ. ಅಂಬೇಡ್ಕರ್ ಬಗ್ಗೆ ಪ್ರೀತಿ ಗೌರವ ಇಟ್ಟುಕೊಂಡೇ ಪ್ರಶ್ನೆ ಎತ್ತುವ, ಅವರ ನಡೆಯಲ್ಲಿದ್ದ ವೈರುಧ್ಯ ಅಥವಾ ಮಿತಿಯನ್ನು ಗುರುತಿಸುವ ಮಾದರಿಯಿದು. ವೈಚಾರಿಕ ವಾಗ್ವಾದ ಮಾಡುವ ಈ ಮಾದರಿ ಅಂಬೇಡ್ಕರ್ ಚಿಂತನೆಯನ್ನು ಬೆಳೆಸುವ ಮತ್ತು ಜೀವಂತವಾಗಿಡುವ ಯತ್ನ ಮಾಡುತ್ತದೆ. ದುಷ್ಟಶಿಕ್ಷಕ ಶಿಷ್ಟರಕ್ಷಕನಾಗಿ ಯಾರೊ ಅವತಾರ ತಾಳಿ ಬರುವ ನಂಬಿಕೆ ಇಲ್ಲಿಲ್ಲ. ಬದಲಿಗೆ ಹಿರೀಕರು ನಡೆದಿರುವ ಅರ್ಧಹಾದಿಯನ್ನು ಪ್ರಶ್ನೆ ಮತ್ತು ಸಂವಾದದ ಮೂಲಕ ವಿಸ್ತರಿಸಿಕೊಂಡು ಉಳಿದರ್ಧ ವರ್ತಮಾನದ ನಾವು ನಡೆಯಬೇಕಿದೆ ಎಂಬ ಪ್ರಕ್ರಿಯಾತ್ಮಕ ಅರಿವಿದೆ. ಈ ಬಗೆಯ ವಾಗ್ವಾದರೂಪಿ ಮಾದರಿಯಲ್ಲಿ ಅಂಬೇಡ್ಕರ್‌ರನ್ನು ಕಾಣಿಸುವುದಕ್ಕೆ ಸಿದ್ದಲಿಂಗಯ್ಯ ಮಾರ್ಕ್ಸ್‌ವಾದದ ಹಿನ್ನೆಲೆಯಿಂದ ಬಂದಿರುವುದೂ ಒಂದು ಕಾರಣವಿರಬೇಕು.

(ಸಿದ್ದಲಿಂಗಯ್ಯ)

6. ಅಂಬೇಡ್ಕರ್ ಚಿಂತನೆ ವರ್ತಮಾನದ ವಿಭಿನ್ನ ಜನಪರ ತಾತ್ವಿಕತೆ ಅಥವಾ ಸಂವೇದನೆಗಳ ಜತೆ ಕೂಡಿ, ಹೊಸಹಾದಿಯಲ್ಲಿ ಚಲಿಸುವ ಮಾದರಿ:

ಇಲ್ಲಿ ಗಾಂಧಿ-ಅಂಬೇಡ್ಕರ್‌ರನ್ನು ಸಾಂಪ್ರದಾಯಿಕ ವಿರೋಧಿಗಳಾಗಿ ನೋಡುವುದಕ್ಕಿಂತ ಭಿನ್ನವಾಗಿ, ಅವರಲ್ಲಿದ್ದ ಸಮಾನ ಗುಣಗಳನ್ನು ಕೂಡಿಸಿ ನೋಡುವ ಯತ್ನವಿದೆ. ವಿಶೇಷವೆಂದರೆ ಇವರಿಬ್ಬರ ಜತೆ ಮೂರನೆಯ ತತ್ವವಾಗಿ ಬಸವಣ್ಣನೂ ಕೂಡುವುದು. ಈ ತಾತ್ವಿಕ ಸಂಗಮದ ನಿದರ್ಶನವೆಂದರೆ, ಅಮರೇಶ ನುಗಡೋಣಿಯವರ ‘ನೀರು ತಂದವರು’ ಕತೆ. ಇಲ್ಲಿ ತಮ್ಮ ಕೇರಿಗೆ ನೀರಿಲ್ಲದಾಗ ನೀರು ಕೊಡಲು ನಿರಾಕರಿಸಿದ ಸವರ್ಣೀರಿಗೆ, ಅವರ ಬಾವಿ ಕೆಟ್ಟಾಗ ದಲಿತರು ನೀರನ್ನು ಹೊತ್ತೊಯ್ದು ಕೊಡುವ ಸನ್ನಿವೇಶವಿದೆ. ಈ ಘಟನೆ ಅಂಬೇಡ್ಕರ್‌ರ ಮಹಾಡ್ ಕೆರೆಯ ನೀರನ್ನು ನೆನಪಿಸುತ್ತದೆ. ಜತೆಗೆ ಅದಕ್ಕಿದ್ದ ಹಕ್ಕುಸ್ಥಾಪನೆಯ ಆಯಾಮಕ್ಕೆ ಹಂಚಿಕೊಂಡು ಬದುಕುವ ಇನ್ನೊಂದು ಮಜಲನ್ನು ಸೇರಿಸುತ್ತದೆ. ಈ ನೀರು ಚಳವಳಿಗೆ ಪ್ರೇರಕನಾಗುವವನು ಒಬ್ಬ ಸವರ್ಣೀಯ ತರುಣ. ದಲಿತ ಕೇರಿಯಲ್ಲೇ ಹೆಚ್ಚಿನ ಹೊತ್ತು ಕಳೆಯುತ್ತ ಅಂಬೇಡ್ಕರ್ ಗಾಂಧಿ ಬಸವಣ್ಣನವರ ಚರ್ಚೆ ಮಾಡುತ್ತ ಬೆಳೆದವನೀತ. ನೀರುಕೊಡದ ಊರಿನ ಸಣ್ಣತನಕ್ಕೆ ಪ್ರತಿಯಾಗಿ ಕೇರಿಯು ನೀರು ಕೊಡುವ ಔದಾರ್ಯದ ಮೂಲಕವೇ ಉತ್ತರಿಸಬೇಕೆಂದು ಅವನು ದಲಿತ ಸಂಗಾತಿಗಳನ್ನು ಒಪ್ಪಿಸುವನು. ಹಾಗೆ ಕಂಡರೆ ಇದು ಬಸವ ಮಾದರಿಯೂ ಅಲ್ಲ. ಗಾಂಧಿ ಮಾದರಿ. ಅಂಬೇಡ್ಕರ್ ದಲಿತರಿಗೆ ಸೀಮಿತವಲ್ಲ ಎಲ್ಲ ದಮನಿತ ಸಮುದಾಯಗಳ ವಿಮೋಚನೆಗೂ ಅವರ ಚಿಂತನೆಯ ಅಗತ್ಯವಿದೆ ಎಂದು ಈ ರೂಪಕಗಳು ಸೂಚಿಸುತ್ತಿವೆಯೇ? ಹೊಸಚಳವಳಿಗಳ ಹುಟ್ಟಿಗೆ ಚರಿತ್ರೆ ಪಾಠವಾಗುವ ಬದಲು ತಡೆಯೊಡ್ಡುವ ಭಾರವಾಗಿರುವ ಸದ್ಯದ ರಾಜಕೀಯ ಹಿನ್ನೆಲೆಯಲ್ಲಿ, ನೀಲಿ ಕೆಂಪು ಒಟ್ಟಿಗೆ ಹೋಗುವ ಮಾತು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ನೀರುಕೊಡುವ ರೂಪಕವನ್ನು ಗಮನಿಸಬೇಕು.

ಅಂಬೇಡ್ಕರ್ ಚಿಂತನೆಗೆ ಈಗ ಸ್ತ್ರೀಸಂವೇದನೆಯ ಧಾರೆಯೂ ಸೇರುತ್ತಿದೆ. ಪೂರ್ಣಿಮ ಸುರೇಶ್‌ರವರ ಹೆಣ್ ಸಂವೇದನೆಯ ಕವನಗಳಲ್ಲಿ, ಅಂಬೇಡ್ಕರ್ ಅನುಭವಿಸಿರಬಹುದಾದ ಅಸ್ಪಶ್ಯತೆಯ ವೇದನೆಯನ್ನು, ಮುಟ್ಟಾದ ದಿನಗಳಲ್ಲಿ ತಾವೂ ಅನುಭವಿಸುವುದನ್ನು ಹಂಚಿಕೊಳ್ಳುವ ವಿನ್ಯಾಸವಿದೆ. ಇಲ್ಲಿ ಅಂಬೇಡ್ಕರ್‌ರ ಸ್ತ್ರೀಕರಣ ಅಥವಾ ಸ್ತ್ರೀಸಂವೇದನೆ ದಲಿತೀಕರಣ ಸಂಭವಿಸುತ್ತದೆ.

(ಗೋಪಾಲಕೃಷ್ಣ ಅಡಿಗ)

ಅಂಬೇಡ್ಕರ್‌ರನ್ನು ಜಾತಿಸಮಾಜದಲ್ಲಿ ಸಮಾನತೆಗಾಗಿ ಯುದ್ಧಮಾಡಿದ ಯೋಧನೆಂದೂ ಅಂಧಕಾರದಲ್ಲಿ ಬಂದ ಸೂರ್ಯನೆಂದೂ ಕಾಣಿಸುವ ಗಂಡುತನ ರೂಪಕಗಳಿಗೆ ಹೋಲಿಸಿದರೆ, ಇವು ವಿಭಿನ್ನವಾದವು. ಇವು ಅಂಬೇಡ್ಕರ್ ಭಾರತದ ಮಹಿಳೆಯರಿಗಾಗಿ ಕಾನೂನು ರಚಿಸಲು ಹೋಗಿ ಸೋತು ರಾಜೀನಾಮೆ ನೀಡಿದ ಚಾರಿತ್ರಿಕ ಘಟನೆಯನ್ನು ಪರೋಕ್ಷವಾಗಿ ನೆನಪಿಸುತ್ತವೆ.

ಕನ್ನಡ ಸಾಹಿತ್ಯವು ಗಾಂಧಿಯವರಿಗೆ ಹೋಲಿಸಿದರೆ ಅಂಬೇಡ್ಕರ್ ಅವರನ್ನು ಅನುಸಂಧಾನಗೈದ ಪ್ರಮಾಣ ಕಡಿಮೆ. ಅವರ ವ್ಯಕ್ತಿತ್ವ ಮತ್ತು ಚಿಂತನೆಯ ಅನುಸಂಧಾನವು ಅವರು ತೀರಿಕೊಂಡ ಮೂರು ದಶಕಗಳ ಬಳಿಕ ಶುರುವಾಯಿತು. ಇದಕ್ಕೆ ಕಾರಣ ತನಗೆ ತಾನೇ ಸ್ಪಷ್ಟವಾಗಿದೆ. ಈ ಅನುಸಂಧಾನವು ಅಂಬೇಡ್ಕರ್ ಹೇಗಿದ್ದರು ಎಂದು ಕಾಣಿಸುವ ಚಾರಿತ್ರಿಕ ಉದ್ದೇಶಕ್ಕಿಂತ, ವರ್ತಮಾನವನ್ನು ಅರಿಯುವ ಅದಕ್ಕೆ ಮಿಡಿಯುವ ಮತ್ತು ಅದನ್ನು ಬದಲಿಸುವ ಆಶಯ ಹೊಂದಿದೆ. ಎಷ್ಟೊ ಸಲ, ನಮ್ಮ ರಾಜಕೀಯ ಪಕ್ಷಗಳು, ಚಳವಳಿಗಳು ತೋರಲಾರದ ರಾಜಕೀಯ ಪ್ರಜ್ಞೆ ಮತ್ತು ಚಲನಶೀಲತೆಯನ್ನು ಈ ರೂಪಕಗಳು ತೋರಿಸಿವೆ. ಈ ಕಾರಣಕ್ಕೆ ಕನ್ನಡ ಪಠ್ಯಗಳು ರಾಜಕೀಯ ಪ್ರಜ್ಞೆಯ ಪಠ್ಯಗಳಾಗಿಯೂ ಕಾಣುತ್ತವೆ. ಅಂಬೇಡ್ಕರ್‌ರನ್ನು ಹುಸಿದೈವವೆಂದು ಹೀಯಾಳಿಸಿದವರ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪ್ರಕಟಿಸಿರುವ ಈ ರಾಜಕೀಯ ಪ್ರಜ್ಞೆ ಮತ್ತು ವಿವೇಕವು ಅಪರೂಪದ್ದಾಗಿದೆ.

Writer - ರಹಮತ್ ತರೀಕೆರೆ

contributor

Editor - ರಹಮತ್ ತರೀಕೆರೆ

contributor

Similar News