ಶೀಘ್ರ ‘ಸಾರ್ವಜನಿಕ ಆರೋಗ್ಯ ರಕ್ಷಣಾ ಕಾಯ್ದೆ’ ಜಾರಿ: ಆರೋಗ್ಯ ಸಚಿವ ರಮೇಶ್ ಕುಮಾರ್
ಬೆಂಗಳೂರು, ಆ.20: ಎಲ್ಲರಿಗೂ ಸಮಾನವಾದ ಆರೋಗ್ಯ ಸೇವೆ ಕಲ್ಪಿಸುವ ಸಲುವಾಗಿ ‘ಸಾರ್ವಜನಿಕ ಆರೋಗ್ಯ ರಕ್ಷಣಾ ಕಾಯ್ದೆ’ಯನ್ನು ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ತಿಳಿಸಿದ್ದಾರೆ.
ರವಿವಾರ ನಗರದ ನಿಮಾನ್ಸ್ ಕನ್ವೆಷನ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಡಾ.ಜಿ.ಎನ್.ನಾರಾಯಣರೆಡ್ಡಿ ಅವರ ಜೀವನ ಚರಿತ್ರೆ ‘ತುಂಬೆ ಹೂ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ದುರಾಸೆ, ಸ್ವಾರ್ಥಕ್ಕಾಗಿ ಸಾಮಾನ್ಯ ಜನರ ಬದುಕನ್ನು ಆತಂಕಕ್ಕೆ ತಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳಲ್ಲಿ ಅಮಾನುಷ ವರ್ತನೆಯ ಪ್ರಕರಣಗಳು ವರದಿಯಾಗುತ್ತಿವೆ. ಈ ಸಂದರ್ಭದಲ್ಲಿ ಆರೋಗ್ಯ ಪ್ರತಿಯೊಂದು ಕುಟುಂಬಕ್ಕೆ ಸೇರಿದ್ದಾಗಿದೆ. ಹೀಗಾಗಿ ಈ ಕಾಯ್ದೆ ಜಾರಿಗೆ ಮುಂದಾಗಿದ್ದೇವೆ ಎಂದರು.
ರಾಜ್ಯಾದ್ಯಂತ 1 ಸಾವಿರಕ್ಕೂ ಅಧಿಕ ತಜ್ಞ ವೈದ್ಯರ ಅಗತ್ಯವಿದೆ ಎಂದು ಕೆಪಿಎಸ್‌ಸಿ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದೆವು, ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವ ವೈದ್ಯರು ಬೇಕು ಎಂದು ಕರೆದಿದ್ದೆವು, ಸೆಲ್ ಆಧಾರಿತ ವೈದ್ಯರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ತಜ್ಞ ವೈದ್ಯರು ಸರಿಯಾದ ರೀತಿಯಲ್ಲಿ ಸ್ಪಂಧಿಸಲಿಲ್ಲ. ಕೊನೆಯದಾಗಿ ಬಿಡ್ಡಿಂಗ್ ಆಧಾರದ ಮೇಲೆ 500 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಂದರೆ, 7 ದಶಕಗಳ ಸ್ವತಂತ್ರ ಭಾರತದಲ್ಲಿ ವಿದ್ಯಾವಂತರು ಯಾವ ಕಡೆ ಯೋಚಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ವೈದ್ಯಕೀಯ ತಿದ್ಧುಪಡಿ ಕಾಯ್ದೆಯಿಂದ ಹಿಂದೆ ಸರಿಯಲ್ಲ: ಬಡವರ ಬಳಿ ಸುಲಿಗೆ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ರಾಜ್ಯ ಖಾಸಗಿ ವೈದ್ಯಕೀಯ ತಿದ್ಧುಪಡಿ ಕಾಯ್ದೆ ಜಾರಿ ಮಾಡಲು ಮುಂದಾಗಿತ್ತು. ಸದನದಲ್ಲಿ ಒಂದೂವರೆ ಗಂಟೆ ಇದನ್ನು ಮಂಡಿಸಿದೆ. ಯಾರೂ ವಿರೋಧ ಮಾಡಲಿಲ್ಲ. ಆದರೆ, ಅನುಮತಿ ಸಿಗಲಿಲ್ಲ. ಈಗ ಅದನ್ನು ಜಂಟಿ ಆಯ್ಕೆ ಸಮಿತಿಗೆ ಒಪ್ಪಿಸಲಾಗಿತ್ತು. ಸಮಿತಿಯಲ್ಲಿ ಅಂತಿಮ ಅನುಮೋದನೆ ಸಿಕ್ಕಿದೆ. ಮುಂದಿನ ಅಧಿವೇಶನದಲ್ಲಿ ಅದನ್ನು ಜಾರಿ ಮಾಡಲಾಗುತ್ತದೆ ಎಂದು ರಮೇಶ್ ಕುಮಾರ್ ಹೇಳಿದರು.
ರಾಜ್ಯ ಸರಕಾರ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಮುಂದಾದರೆ, ಖಾಸಗಿ ಆಸ್ಪತ್ರೆಗಳ ವೈದ್ಯರು ಪ್ರತಿಭಟನೆ ಮಾಡುತ್ತಾರೆ. ಆದರೆ, ಯಾವ ಉದ್ದೇಶಕ್ಕಾಗಿ ಅವರು ಪ್ರತಿಭಟನೆ ಮಾಡಬೇಕು ಎಂದು ಪ್ರಶ್ನಿಸಿದ ಸಚಿವರು, ಬಹುತೇಕ ರಾಜಕಾರಣಗಳೇ ಒಂದು ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜು ನಡೆಸುತ್ತಿದ್ದಾರೆ. ಹೀಗಾಗಿ, ನಾವಿದನ್ನು ಮಂಡಿಸಿದ ಕೂಡಲೇ ಅಧಿಕಾರದಲ್ಲಿರುವ ಹಾಗೂ ವಿಪಕ್ಷ ನಾಯಕರು ಸೇರಿ ಸಂಘ ಕಟ್ಟುತ್ತಿದ್ದಾರೆ. ಹೀಗಿರುವಾಗ ಹೇಗೆ ಯೋಜನೆಗಳು ಅನುಷ್ಟಾನವಾಗಲು ಸಾಧ್ಯ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕವಿ ಡಾ.ಕೆ.ವೈ.ನಾರಾಯಣಸ್ವಾಮಿ ಮಾತನಾಡಿ, ಆಧುನೀಕತೆಯ ಮರೆಯಲ್ಲಿ ಮಾನವೀಯತೆಯನ್ನು ಮರೆತು ಹೋಗುತ್ತಿದ್ದೇವೆ. ಅಹಂಕಾರ, ದ್ವೇಷ, ಸ್ವಾರ್ಥಗಳೇ ತುಂಬಿ ತುಳುಕುತ್ತಿವೆ. ಇಂತಹ ಸಂದರ್ಭದಲ್ಲಿ ಸಮಾಜಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡವರು ಮರೆಯಾಗುತ್ತಿದ್ದಾರೆ ಎಂದು ಹೇಳಿದರು.
ಇಂದಿನ ಯುವ ಪೀಳಿಗೆಗೆ ಮಾದರಿಯಾದ ರಾಜಕಾರಣಿಗಳು, ಸಾಮಾಜಿಕ ಜೀವನದಲ್ಲಿ, ಉದ್ಯೋಗದಲ್ಲಿ ನಶಿಸಿ ಹೋಗುತ್ತಿದ್ದಾರೆ. ಗಾಂಧಿ ಮತ್ತು ಅಂಬೇಡ್ಕರ್‌ರನ್ನು ದೈವೀಕರಿಸಲಾಗುತ್ತಿದೆ. ಕಣ್ಣು ಮುಂದೆ ಕಾಣುವ ಮಾದರಿಗಳನ್ನು ಹುಡುಕುತ್ತಿದ್ದೇವೆ ಎಂದ ಅವರು, ಇಂತಹ ಸಂದರ್ಭದಲ್ಲಿ ಎಂದೂ ಸ್ವಾರ್ಥಕ್ಕಾಗಿ, ಹಣದ ಆಸೆಗಾಗಿ, ದುರಾಸೆಯಿಂದ ಜೀವನ ನಡೆಸಿದ ಹಾಗೂ ಸೇವೆ ಸಲ್ಲಿಸಿದ ನಾರಾಯಣರೆಡ್ಡಿ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬರಹಗಾರ್ತಿ ಡಾ.ಕೆ.ಆರ್.ಸಂಧ್ಯಾರೆಡ್ಡಿ, ನಿವೃತ್ತ ಮನೋವೈದ್ಯ ಅಧ್ಯಾಪಕ ಪ್ರೊ.ಆರ್.ಶ್ರೀನಿವಾಸಮೂರ್ತಿ, ಮಹಾತ್ಮ ವಿದ್ಯಾಲಯದ ಸ್ಥಾಪಕ ಕಾರ್ಯದರ್ಶಿ ಡಾ.ಬಿ.ಮುನಿರೆಡ್ಡಿ, ಡಾ.ಜಿ.ಎನ್.ನಾರಾಯಣರೆಡ್ಡಿ ಉಪಸ್ಥಿತರಿದ್ದರು.
‘ವೇದಿಕೆ ಕಾರ್ಯಕ್ರಮಗಳಲ್ಲಿ ಮಂತ್ರಿಗಳ ಪತ್ನಿಯರು ಆಸೀರಾಗಿದ್ದರೆ ನಮಗೇನು ಕೊಡುತ್ತಾರೆ ಎಂದು ಅಪೇಕ್ಷೆ ಪಡುತ್ತಾರೆ. ಆದರೆ, ನಾರಾಯಣರೆಡ್ಡಿ ಅವರ ಪತ್ನಿ ವೇದಿಕೆ ಮೇಲೆಯೂ ಬಂದಿಲ್ಲ. ಇದು ನಾರಾಯಣರೆಡ್ಡಿ ಅವರ ಸರಳತೆ ಹಿಡಿದ ಕನ್ನಡಿಯಾಗಿದೆ’
-ರಮೇಶ್ ಕುಮಾರ್ ಆರೋಗ್ಯ ಸಚಿವ