ಪರಮಾಣು ಒಪ್ಪಂದದ ರಕ್ಷಣೆ ನೂತನ ಸರಕಾರದ ಮೊದಲ ಆದ್ಯತೆ: ಇರಾನ್ ಅಧ್ಯಕ್ಷ ಹಸನ್ ರೂಹಾನಿ

Update: 2017-08-20 13:52 GMT

ಟೆಹರಾನ್, ಆ. 20: ಪರಮಾಣು ಒಪ್ಪಂದವನ್ನು ಅಮೆರಿಕದಿಂದ ರಕ್ಷಿಸುವುದು ತನ್ನ ನೂತನ ಸರಕಾರದ ಮೊದಲ ಆದ್ಯತೆಯ ವಿದೇಶ ನೀತಿಯಾಗಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ರವಿವಾರ ಹೇಳಿದ್ದಾರೆ.

‘‘ನಮ್ಮ ವಿದೇಶ ಸಚಿವರ ಅತ್ಯಂತ ಮಹತ್ವದ ಕೆಲಸವೆಂದರೆ, ಪರಮಾಣು ಒಪ್ಪಂದವನ್ನು ರಕ್ಷಿಸುವುದು ಹಾಗೂ ಅಮೆರಿಕ ಮತ್ತು ಇತರ ವೈರಿ ದೇಶಗಳು ತಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾಗದಂತೆ ನೋಡಿಕೊಳ್ಳುವುದು’’ ಎಂದು ರೂಹಾನಿ ಸಂಸತ್ತಿಗೆ ಹೇಳಿದರು.

2015ರಲ್ಲಿ ಸಹಿ ಹಾಕಲಾದ ಪರಮಾಣು ಒಪ್ಪಂದವು ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ನಿರ್ಬಂಧ ಒಡ್ಡುತ್ತದೆ ಹಾಗೂ ಅದಕ್ಕೆ ಪ್ರತಿಯಾಗಿ ಅದರ ಮೇಲೆ ವಿಧಿಸಲಾಗಿದ್ದ ಆರ್ಥಿಕ ದಿಗ್ಬಂಧನಗಳನ್ನು ತೆರವುಗೊಳಿಸುತ್ತದೆ.

ಟೆಹರಾನ್ ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿದ ಬಳಿಕ ವಾಶಿಂಗ್ಟನ್ ಆ ದೇಶದ ಮೇಲೆ ಹೊಸದಾಗಿ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಪರಮಾಣು ಒಪ್ಪಂದ ತೀವ್ರ ಒತ್ತಡಕ್ಕೆ ಸಿಲುಕಿದೆ.

ಅಮೆರಿಕ ಹೊಸ ದಿಗ್ಬಂಧನಗಳನ್ನು ಹೇರುವುದನ್ನು ಮುಂದುವರಿಸಿದರೆ, ಒಪ್ಪಂದದಿಂದ ಹೊರ ಹೋಗಲು ಇರಾನ್ ಸಿದ್ಧವಾಗಿದೆ ಎಂಬ ಸೂಚನೆಯನ್ನು ಕಳೆದ ವಾರ ರೂಹಾನಿ ನೀಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News