ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಇರಬೇಕೆಂದು ಬಿಜೆಪಿ ಘೋಷಿಸಲಿ: ಸಿಎಂ ಸಿದ್ದರಾಮಯ್ಯ ಸವಾಲು
ಬೆಂಗಳೂರು, ಆ. 20: ‘ದೇಶದಲ್ಲಿ ಜಾತಿ ವ್ಯವಸ್ಥೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು’ ಎಂದು ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಘೋಷಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಸವಾಲು ಹಾಕಿದ್ದಾರೆ.
ರವಿವಾರ ಮಾಜಿ ಸಿಎಂ ದೇವರಾಜ ಅರಸು ಅವರ 102ನೆ ಜನ್ಮ ದಿನಾಚರಣೆ ಹಾಗೂ ಅರಸು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ರಾಜ್ಯ ಶಾಶ್ವತ ಹಿಂದುಳಿದ ವರ್ಗದ ಆಯೋಗಕ್ಕೆ ಮೀಸಲಾತಿ ಪಟ್ಟಿಗೆ ಯಾವ ಜಾತಿ ಸೇರಿಸಬೇಕು, ಕೈಬಿಡಬೇಕೆಂಬ ಪರಮಾಧಿಕಾರ ಇತ್ತು. ಆದರೆ, ಸಂವಿಧಾನ ತಿದ್ದುಪಡಿ ಮೂಲಕ ಆ ಅಧಿಕಾರ ಮೊಟಕುಗೊಳಿಸಿ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲು ಕೇಂದ್ರ ಸರಕಾರ ಹೊರಟಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮಂಡಲ್ ವರದಿ ಜಾರಿಗೆ ಬಂದಾಗಲೂ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಅಡ್ವಾಣಿ ರಥಯಾತ್ರೆ ಮಾಡಿ, ಮುಗ್ದ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪ್ರಚೋದಿಸಿದ್ದರು ಎಂದು ದೂರಿದ ಸಿದ್ದರಾಮಯ್ಯ, ರಾಜೀವ್ ಗಾಂಧಿ ಮೀಸಲು ಸೌಲಭ್ಯ ಜಾರಿಗೆ ತಂದಾಗಲೂ ವಿರೋಧಿಸಿದರು. ಸಾಮಾಜಿಕ ನ್ಯಾಯಕ್ಕೆ ಬಿಜೆಪಿ ವಿರುದ್ಧ. ಹೀಗಿರುವಾಗ ಅಮಿತ್ ಶಾ ಬಂದು ನಮಗೆ ಪಾಠ ಹೇಳುತ್ತಾರೆಂದು ಟೀಕಿಸಿದರು.
ಶಾಶ್ವತ ಹಿಂದುಳಿದ ವರ್ಗಗಳ ಕೇಂದ್ರ ಆಯೋಗಕ್ಕೆ ಸಂವಿಧಾನಬದ್ಧ ಸ್ಥಾನಮಾನ ನೀಡಲು ತಮ್ಮ ವಿರೋಧ ಇಲ್ಲ ಎಂದ ಅವರು, ಸಾಮಾಜಿಕ ನ್ಯಾಯದಲ್ಲಿ ಕಾಂಗ್ರೆಸ್ ಎಂದಿಗೂ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಅರಸು ಹಿಂ.ವರ್ಗದವರಿಗೆ ರಾಜಕೀಯ ಸ್ವಾತಂತ್ರ್ಯ ಇದ್ದರೆ ಸಾಲದು ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯವು ಸಿಕ್ಕಾಗ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂಬ ನಂಬಿಕೆ ಇಟ್ಟಿದ್ದರು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆ ನೀಡಿದ ಅಧಿಕಾರವನ್ನು ಮಜಾ ಮಾಡುವುದಕ್ಕೆ ಬಳಸುವುದಲ್ಲ. ಅಧಿಕಾರ ಅಧಿಕಾರ ಯಾವತ್ತೂ ಶಾಶ್ವತವಲ್ಲ. ಜನತೆ ಕೊಟ್ಟ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಶೋಷಿತ ಸಮುದಾಯಗಳಿಗೆ ಸವಲತ್ತುಗಳನ್ನು ನೀಡಬೇಕು ಎಂದು ಹೇಳಿದರು.
ವ್ಯವಸ್ಥೆ ವಿರುದ್ಧ ಹೋಗುವುದು ಬಹಳ ಕಷ್ಟ. ಪಟ್ಟಭದ್ರ ಹಿತಾಸಕ್ತಿಗಳು ಅದಕ್ಕೆ ಅವಕಾಶ ನೀಡುವುದಿಲ್ಲ. ಹೀಗಾಗಿ ಬಡವರ ಪರ ಕಾರ್ಯಕ್ರಮಗಳಿಗೆ ಅಡ್ಡಿ ಉಂಟು ಮಾಡುತ್ತಾರೆ. ಅನ್ನಭಾಗ್ಯ ಯೋಜನೆಗೂ ಅಡ್ಡಗಾಲು ಹಾಕಿದ್ದರು. ಬಡವರಿಗೆ ಅಕ್ಕಿ ಕೊಟ್ಟರೆ ಕೂಲಿಗೆ ಬರುವುದಿಲ್ಲ ಎನ್ನುವುದು ಉಳಿಗಮಾನ್ಯ ಮನಸ್ಥಿತಿ ಎಂದು ಟೀಕಿಸಿದರು.
ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ 2ಲಕ್ಷ ರೂ.ನಗದು, ಪ್ರಶಸ್ತಿ ಫಲಕ ಒಳಗೊಂಡ ಅರಸು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಇದೇ ವೇಳೆ ಯುಪಿಎಸ್ಸಿ, ಕೆಪಿಎಸ್ಸಿ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಹಿಂ.ವರ್ಗಗಳ ಅಭ್ಯರ್ಥಿಗಳನ್ನು ಪುರಸ್ಕರಿಸಲಾಯಿತು. ಅಲ್ಲದೆ, ದೇವರಾಜ ಅರಸು ವಿದ್ಯಾರ್ಥಿ ನಿಲಯಗಳಲ್ಲಿದ್ದು ಎಸೆಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಆಂಜನೇಯ, ರೋಷನ್‌ಬೇಗ್, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಹಂ.ಪ.ನಾಗರಾಜಯ್ಯ, ಎಚ್.ಎಂ.ರೇವಣ್ಣ, ರಮೇಶ್, ಆರ್.ಬಿ.ತಿಮ್ಮಾಪುರ್, ಪ್ರೊ.ನರಸಿಂಹಯ್ಯ, ನರಸಿಂಹಪ್ಪ, ಹುಚ್ಚಪ್ಪ, ಇಲಾಖೆ ಕಾರ್ಯದರ್ಶಿ ಮೊಹಮದ್ ಮೊಹ್ಸಿನ್ ಸೇರಿದಂತೆ ಇನ್ನಿತರರು ಹಾಜರಿದ್ದರು.
‘ಇಂದಿರಾ ಕ್ಯಾಂಟಿನ್‌ಗೂ ಬಿಜೆಪಿ ಭಾರಿ ವಿರೋಧ ವ್ಯಕ್ತಪಡಿಸಿದೆ. ಉದ್ಯಾನವನ, ಆಟದ ಮೈದಾನಗಳಲ್ಲಿ ಕ್ಯಾಂಟಿನ್ ಸ್ಥಾಪಿಸಲಾಗುತ್ತಿದೆ ಎಂದು ಗುಲ್ಲೆಬ್ಬಿಸಿದರು. ಆದರೆ, ಘೋಷಿತ ಆಟದ ಮೈದಾನ, ಉದ್ಯಾನವನಗಳಲ್ಲಿ ಕ್ಯಾಂಟಿನ್ ಸ್ಥಾಪಿಸಿಲ್ಲ. ಒಂದು ವೇಳೆ ಆಟದ ಮೈದಾನದಲ್ಲೆ ಕ್ಯಾಂಟಿನ್ ಸ್ಥಾಪಿಸಿದರೆ ತಪ್ಪೇನು? ನಮಗೆ ಆಟದ ಮೈದಾನ ಮುಖ್ಯವೋ ಬಡವರಿಗೆ ಅನ್ನ ನೀಡುವ ಕ್ಯಾಂಟಿನ್ ಮುಖ್ಯವೋ. ಕಬ್ಬನ್‌ಪಾರ್ಕ್‌ನಲ್ಲಿ ಶ್ರೀಮಂತರಿಗೆ ಕ್ಲಬ್ ಸ್ಥಾಪಿಸಬಹುದು. ಬಡವರಿಗೆ ಕ್ಯಾಂಟಿನ್ ಏಕೆ ಮಾಡಬಾರದು’.
-ಸಿದ್ದರಾಮಯ್ಯ, ರಾಜ್ಯ ಮುಖ್ಯಮಂತ್ರಿ