ಬಿಜೆಪಿ ವಿರೋಧಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ: ರಾಜ್ಯ ಸರಕಾರಕ್ಕೆ ಖರ್ಗೆ ಸಲಹೆ

Update: 2017-08-20 14:38 GMT

ಬೆಂಗಳೂರು, ಆ. 20: ರಾಜ್ಯ ಸರಕಾರದ ಸಾಮಾಜಿಕ ನ್ಯಾಯದ ಪರವಾದ ಯೋಜನೆಗಳ ಜಾರಿಯಿಂದ ಬಿಜೆಪಿಗೆ ಗಾಬರಿಯಾಗಿದೆ. ಹೀಗಾಗಿ ವಿರೋಧ ವ್ಯಕ್ತಪಡಿಸುತ್ತಿದ್ದು, ಜನರು ನಮ್ಮ ಜತೆ ಇದ್ದಾರೆ. ಹೀಗಾಗಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ರವಿವಾರ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ಏರ್ಪಡಿಸಿದ್ದ ದೇವರಾಜ ಅರಸು ಜನ್ಮ ದಿನಾಚರಣೆ ಹಾಗೂ ಅರಸು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅರಸು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಅರಸು ಅವರು ಎಂದಿಗೂ ಪೂರ್ವಾಗ್ರಹ ಪೀಡಿತರಾಗಿ ಜನಸೇವೆ ಮಾಡಲಿಲ್ಲ ಮತ್ತು ದ್ವೇಷದ ರಾಜಕಾರಣ ಮಾಡಲಿಲ್ಲ ಎಂದು ಸ್ಮರಿಸಿದರು.

1968ರ ಅವಧಿಯಲ್ಲಿ ನನ್ನನ್ನು ಭೇಟಿ ಮಾಡಿದ ಅರಸುರವರು ಅತ್ಯಂತ ಗೌರವದಿಂದಲೇ ನಿನಗೆ ರಾಜಕೀಯದಲ್ಲಿ ಭವಿಷ್ಯವಿದೆ ಎಂದು ನನ್ನನ್ನು ರಾಜಕಾರಣಕ್ಕೆ ಎಳೆದು ತಂದರು ಎಂದು ಅರಸು ಅವರೊಂದಿಗಿನ ಅವರ ಒಡನಾಟವನ್ನು ಖರ್ಗೆ ಮೆಲುಕು ಹಾಕಿದರು. ಕಾಂಗ್ರೆಸ್ ಪಕ್ಷ ಇಬ್ಬಾಗ ಆದಾಗ ಅರಸು ಅವರ ಬಳಿ ಇರುವುದೋ ಅಥವಾ ಇಂದಿರಾಗಾಂಧಿ ಅವರ ಕಡೆಗೆ ಹೋಗುವುದೋ ಎಂಬ ಗೊಂದಲದಲ್ಲಿದ್ದಾಗ ಖುದ್ದು ಅರಸು ಅವರೇ ನಿಮಗೆ ತೋಚಿದಂತೆ ಮಾಡಿ ಎಂದು ಹರಸಿದರು ಎಂದು ನೆನಪು ಮಾಡಿಕೊಂಡರು.

ಭೂಸುಧಾರಣಾ ಕಾಯ್ದೆ, ಹಾಲನೂರ ವರದಿಯನ್ನು ಅನುಷ್ಠಾನಕ್ಕೆ ತರುವ ಮೂಲಕ ದುರ್ಬಲ ವರ್ಗದವರಿಗೆ ಶಕ್ತಿ ತುಂಬಿದ್ದು, ದೇವರಾಜ ಅರಸು ಎಂದ ಅವರು, ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದರೆ ಅದು ಅರಸು ಹಾಕಿಕೊಟ್ಟ ಭದ್ರ ಬುನಾದಿಯೇ ಮೂಲ ಕಾರಣ ಎಂದು ಸ್ಮರಿಸಿದರು.

ಕಂದಾಯ ನಿವೇಶನಗಳಲ್ಲಿ ಅಕ್ರಮ ಮನೆ ನಿರ್ಮಾಣ ಸಂಬಂಧ ತಾನು ಕಂದಾಯ ಸಚಿವನಾಗಿದ್ದ ವೇಳೆ ಅರಸು ನನ್ನ ಕೊಠಡಿಗೆ ಬಂದು ಕಾಫಿ ಸೇವಿಸಿ, ನಿವೇಶನಗಳಿಗೆ ನೀರು, ವಿದ್ಯುತ್ ಸಮಸ್ಯೆ ಬಗೆಹರಿಸಬೇಕೆಂದು ಹೇಳಿದಾಗ, ಒಬ್ಬ ಮುಖ್ಯಮಂತ್ರಿ ಆಗಿದ್ದವರು ನನ್ನ ಬಳಿ ಬಂದು ಈ ವಿಷಯ ಪ್ರಸ್ತಾಪಿಸಿದಾಗ ನನ್ನ ಕಣ್ಣಲ್ಲಿ ನೀರು ಬಂದಿತ್ತು ಎಂದು ನೆನಪು ಮಾಡಿಕೊಂಡರು.
ದೇಶದಲ್ಲಿ ತುರ್ತು ಪರಿಸ್ಥಿತಿ ದುರ್ಬಳಕೆಯಾದರೂ ರಾಜ್ಯದಲ್ಲಿ ಅದನ್ನು ಅರಸು ದುರ್ಬಳಕೆ ಮಾಡಿಕೊಳ್ಳಲಿಲ್ಲ, ಬದಲಿಗೆ ಅದನ್ನು ಜನ ಕಲ್ಯಾಣಕ್ಕೆ ಅರಸು ಬಳಸಿದರು ಎಂದ ಅವರು, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ಬಲ ನೀಡುವುದೇ ಕಾಂಗ್ರೆಸ್ ಪಕ್ಷದ ಮೂಲ ತತ್ವ ಎಂದರು.


ಪ್ರಶಸ್ತಿ ಮುಜುಗರ
‘ತನ್ನನ್ನು ಅರಸು ಪ್ರಶಸ್ತಿ ಆಯ್ಕೆ ಮಾಡಿದ್ದನ್ನು ಒಪ್ಪಿಕೊಳ್ಳಲು ಮುಜುಗರವಾಯಿತು. ನನಗಿಂತಲೂ ಹಿರಿಯರು, ಸಾಹಿತಿಗಳು ಸೇರಿದಂತೆ ವಿವಿಧ ವಲಯಗಳ ಗಣ್ಯರಿದ್ದರು. ತಾನು ಇನ್ನೂ ಸಕ್ರಿಯ ರಾಜಕೀಯದಲ್ಲಿದ್ದೇನೆ. ಹೀಗಿರುವಾಗ ತನ್ನನ್ನು ಆಯ್ಕೆ ಮಾಡಿದ್ದೇಕೆ ಎಂದು ಪ್ರಶ್ನಿಸಿದೆ. ಆದರೆ, ಅರಸು ಅವರಂಥ ಮೇರು ವ್ಯಕ್ತಿತ್ವದ ವ್ಯಕ್ತಿ ಹೆಸರಿನ ಪ್ರತಿಷ್ಠಿತ ಪ್ರಶಸ್ತಿ ತಿರಸ್ಕರಿಸಬಾರದು ಎಂದು ಕೊನೆಗೆ ಒಪ್ಪಿಕೊಂಡೆ’
-ಮಲ್ಲಿಕಾರ್ಜುನ ಖರ್ಗೆ, ಅರಸು ಪ್ರಶಸ್ತಿ ಪುರಸ್ಕೃತರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News