ಗುಜರಾತ್ ಚುನಾವಣೆಯಲ್ಲಿ ಸ್ಪರ್ಧೆ: ಜಿಗ್ನೇಶ್ ಮೆವಾನಿ

Update: 2017-08-20 14:46 GMT

ಬೆಂಗಳೂರು, ಆ.20: ಬಿಜೆಪಿ, ಸಂಘಪರಿವಾರದ ವಿರುದ್ಧ ರಾಜಕೀಯ ಹೋರಾಟ ಶುರು ಮಾಡಲಿದ್ದು, ಪ್ರಸ್ತುತ ಸಾಲಿನ ಗುಜರಾತ್ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಗುಜರಾತ್‌ನ ಉನಾ ದಲಿತ ಚಳವಳಿಯ ನಾಯಕ ಜಿಗ್ನೇಶ್ ಮೆವಾನಿ ಹೇಳಿದ್ದಾರೆ.

ರವಿವಾರ ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯ ಫೈರೋಝ್ ಎಸ್ಟೇಟ್‌ನಲ್ಲಿ ಕೋಮು ಸೌಹಾರ್ದ ವೇದಿಕೆ ಸೇರಿದಂತೆ ಪ್ರಗತಿಪರರು ಏರ್ಪಡಿಸಿದ್ದ, ಗುಜರಾತ್ ರಾಜ್ಯದ ರಾಜಕಾರಣ ಮತ್ತು ಸಾಮಾಜಿಕ ಚಳವಳಿಗಳ ಸ್ಥಿತಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಲಿತರ ಹಕ್ಕುಗಳ ಉಳಿಸುವ ಜೊತೆಗೆ ಅವರ ಶ್ವಾಶತ ಸಮಸ್ಯೆಗಳನ್ನು ಬಗೆಹರಿಸಲು ಹೋರಾಟ ಒಂದೇ ಸಾಲದು, ಇದರ ಜೊತೆಗೆ ರಾಜಕೀಯ ಶಕ್ತಿಯೂ ಅಗತ್ಯ. ಹೀಗಾಗಿಯೇ, ಗುಜರಾತ್‌ನಿಂದಲೇ ರಾಜಕೀಯ ಹೋರಾಟ ಶುರು ಮಾಡಲಾಗುವುದು. ಈ ಹೋರಾಟ ಕೇವಲ ರಾಜಕೀಯಕ್ಕೆ ಸೀಮಿತವಾಗುವುದಿಲ್ಲ್ಲ, ಬದಲಾಗಿ ದೇಶದಕ್ಕೆ ಹೊಸ ಬದಲಾವಣೆ ನೀಡಲಿದೆ ಎಂದು ನುಡಿದರು.

ಗುಜರಾತ್ ಅಭಿವೃದ್ಧಿ ದೇಶಕ್ಕೆ ಮಾದರಿ ಎಂದು ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಹೇಳುತ್ತಾರೆ. ಆದರೆ, ಅಲ್ಲಿನ ಸತ್ಯಾಂಶ ಯಾರಿಗೂ ಗೊತ್ತಿಲ್ಲ. ಅಲ್ಲದೆ, ಉನಾದಲ್ಲಿ ನಡೆದ ದುರ್ಘಟನೆ ಬಗ್ಗೆ ಎಲ್ಲಿಯೂ ಪ್ರಧಾನಿ ಖಂಡಿಸಿಲ್ಲ ಎಂದ ಅವರು, ದಲಿತ ಮತ್ತು ಅಲ್ಪಸಂಖ್ಯಾತರನ್ನು ಗುರುತಿಸಿಕೊಂಡು ಹಲ್ಲೆ ನಡೆಸುವ ಹಿಂದೆ ಸಂಘಪರಿವಾರ, ಬಿಜೆಪಿಯ ಕೈವಾಡ ಇದೆ ಎಂದು ದೂರಿದರು.

ಭೂಮಿಗಾಗಿ ಹೋರಾಟ: ಕರ್ನಾಟಕದಲ್ಲಿ ದಲಿತರು, ಆದಿವಾಸಿಗಳಿಗೆ ಗ್ರಾಮ ಮಟ್ಟದಲ್ಲಿ ಭೂಮಿ ಮೀಸಲಿರಿಸಬೇಕು ಎಂಬ ಕಾಯಿದೆ ಇದ್ದರೂ ಕೂಡ ಅದು ಅವರಿಗೆ ಸಿಗುತ್ತಿಲ್ಲ. ಅದನ್ನು ಪಡೆಯುಲು ಸೂಕ್ತ ಹೋರಾಟ ರೂಪಿಸಬೇಕಾದ ಅಗತ್ಯ ಇದೆ ಎಂದರು.

 ದಲಿತರು, ಆದಿವಾಸಿಗಳಿಗೆ ಭೂಮಿ ನೀಡಬೇಕೆಂದು ಆಗ್ರಹಿಸಿ ಶೀಘ್ರದಲ್ಲಿಯೇ ರಾಷ್ಟ್ರ ಮಟ್ಟದ ಅಂದೋಲವನ್ನು ನಡೆಸಲಾಗುವುದು ಎಂದ ಅವರು, ಗುಜರಾತ್, ಕರ್ನಾಟಕ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಗೋರಕ್ಷಕರ ಹಾವಳಿ ಹೆಚ್ಚಾಗಿದ್ದು, ಇದರ ವಿರುದ್ದ ಪ್ರತಿಯೊಬ್ಬರು ಎಚ್ಚೆತ್ತುಕೊಂಡು ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಸಂವಾದಲ್ಲಿ ಹಿರಿಯ ಪತ್ರಕರ್ತೆ ಗೌರಿಲಂಕೇಶ್, ಹೋರಾಟರಾದ ನೂರ್‌ಶ್ರೀಧರ್, ಸಿರಿಮನೆ ನಾಗರಾಜ್, ಕೋಮುಸೌಹಾರ್ದ ವೇದಿಕೆಯ ಅಮ್ಜದ್ ಪಾಶಾ, ವೆಂಕಟೇಶ್, ತ್ರಿಮೂರ್ತಿ ಸೇರಿ ಪ್ರಮುಖರಿದ್ದರು.

‘ಎಲ್ಲ ದಮನಿತರ ದನಿಯಾಗಬೇಕು’

ಇದೇ ವರ್ಷದಲ್ಲಿ ಗುಜರಾತ್‌ನಲ್ಲಿ ನಡೆಯುವ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ದಲಿತರ ಹಿತಕ್ಕೆ ದುಡಿಯುವ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ದೇಶದಲ್ಲಿರುವ ಪ್ರಗತಿಪರರು ದಮನಿತರ ದನಿಯಾಗಬೇಕು.

-ಜಿಗ್ನೇಶ್ ಮೆವಾನಿ ಉನಾ ದಲಿತ ಚಳವಳಿಯ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News