ಅಸಹ್ಯ ತರಿಸುತ್ತಿರುವ ರಾಜಕಾರಣಿಗಳ ನಡೆ: ಎಚ್.ಎಸ್.ದೊರೆಸ್ವಾಮಿ ಅಸಮಾಧಾನ

Update: 2017-08-20 14:47 GMT

ಬೆಂಗಳೂರು, ಆ.20: ಇತ್ತೀಚಿನ ದಿನಗಳಲ್ಲಿ ಶಾಸನಸಭೆಗಳಲ್ಲಿ ನಡೆಯುತ್ತಿರುವ ಗದ್ದಲ, ಗಲಾಟೆಗಳು ಅಸಹ್ಯ ತರಿಸುತ್ತಿವೆ. ಅಲ್ಲಿಯೇ ಹೆಂಡ, ಮಾಂಸ ಸೇವನೆ ಕೂಡ ಮಾಡಲಾಗುತ್ತಿದೆ ಎಂದು ಹಿರಿಯ ಸ್ವಾತಂತ್ಯ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರವಿವಾರ ನಾಡಪ್ರಭು ಕೆಂಪೇಗೌಡ ನಾಗರಿಕ ಹಿತರಕ್ಷಣಾ ವೇದಿಕೆಯ ನಗರದ ಬನಶಂಕರಿ 2ನೆ ಹಂತದಲ್ಲಿನ ಅವರ್ಸ್‌ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 100ನೆ ವರ್ಷದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಮಾಜ ಕಟ್ಟಕಡೆಯ ವ್ಯಕ್ತಿ ಸಹ ಈ ದೇಶದ ಪ್ರಭು. ಆತನಿಗೆ ಸಿಗಬೇಕಾದ ಎಲ್ಲ ಸವಲತ್ತುಗಳನ್ನು ಜನಪ್ರತಿನಿಧಿಗಳಾದವರು ದೊರಕಿಸಿಕೊಡಬೇಕಾಗಿದೆ. ಆದರೆ, ಬರೀ ರಾಜಕೀಯ ಕೆಸರೆರಚಾಟಗಳಷ್ಟೇ ನಡೆಯುತ್ತಿವೆ. ಪ್ರತಿಪಕ್ಷಗಳು ದಾಯಾದಿ ಮತ್ಸರದ ರೀತಿಯಲ್ಲಿ ಕೆಲಸ ಮಾಡಬಾರದು ಎಂದರು.

ವಿಧಾನಸಭೆ, ಸಂಸತ್ತಿನ ಕಲಾಪಗಳಲ್ಲಿ ತಲೆತಗ್ಗಿಸುವ ಘಟನೆಗಳು ನಡೆಯುತ್ತಿವೆ. ಶಾಸನಸಭೆಗಳಲ್ಲಿ ಯಾವುದೇ ಚರ್ಚೆಗಳಾಗದೆ ವಿಧೇಯಕಗಳಿಗೆ ಅನುಮೋದನೆ ಪಡೆದುಕೊಳ್ಳಲಾಗುತ್ತಿದೆ. ಗದ್ದಲ, ಗಲಾಟೆಗಳಿಂದ ಕಲಾಪಗಳು ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ, ಬಡತನ ನಿವಾರಣೆಗೆ ಯಾರೂ ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಹೇಳಿದರು.

ನಾನು ಯಾರಿಗೂ ಶತ್ರು ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ನನ್ನು ಸ್ನೇಹಭಾವದಿಂದ ಕಾಣುತ್ತಾರೆ. ಆದರೆ, ಅವರ ವಿರುದ್ಧವೂ ಹೋರಾಟ ನಡೆಸಿದ್ದೇನೆ. ಆರೆಸ್ಸೆಸ್, ಬಿಜೆಪಿಯಲ್ಲೂ ಮಿತ್ರರಿದ್ದಾರೆ. ಆದರೆ, ಆ ಪಕ್ಷಗಳ ತತ್ವಗಳನ್ನು ಒಪ್ಪುವುದಿಲ್ಲ. ಗೂಂಡಾಗಳು, ಶ್ರೀಮಂತ ರಾಜಕಾರಣಿಗಳಿಂದ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕಾಣಲಾಗುವುದಿಲ್ಲ. ಜನರು ಅಯೋಗ್ಯರ ಬದಲಿಗೆ ಯೋಗ್ಯರನ್ನು ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.

ಡಿಕೆಶಿ ಸತ್ಯ ಹರಿಶ್ಚಂದ್ರರಲ್ಲ: ಡಿ.ಕೆ.ಶಿವಕುಮಾರ್, ಸಂತೋಷ್ ಲಾಡ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಾರದೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೆ. ಕೆಲ ದಿನಗಳ ಬಳಿಕ ಸಂತೋಷ್ ಲಾಡ್ ಅವರನ್ನು ಕೈಬಿಡಲಾಯಿತು. ಡಿ.ಕೆ.ಶಿವಕುಮಾರ್ ಮನೆ ಮನೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶೋಧಿಸಿದ್ದರು. ಈ ಬಗ್ಗೆ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ, ಅವರೇನೂ ಸತ್ಯ ಹರಿಶ್ಚಂದ್ರರಲ್ಲವೆಂದು ಹೇಳಿದ್ದೆ ಎಂದು ಸ್ಮರಿಸಿದರು.

ಮಾಜಿ ಉಪಸಭಾಪತಿ ಡಾ. ಬಿ.ಎಲ್.ಶಂಕರ್ ಮಾತನಾಡಿ, ದೊರೆಸ್ವಾಮಿ ಅವರು ಅಧಿಕಾರ ರಾಜಕಾರಣದಿಂದ ದೂರ ಉಳಿದು ಸಮಾಜ ಸೇವೆಯಲ್ಲಿ ತೊಡಗಿರುವ ನಿಜವಾದ ಜನ ನಾಯಕ. ಇವರು ಈವರೆಗಿನ ಎಲ್ಲ ಮುಖ್ಯಮಂತ್ರಿಗಳಿಗೆ ಚಿರಪರಿಚತರು. ಆದರೆ, ಅವರನ್ನು ಮೇಲ್ಮನೆ ಸದಸ್ಯರನ್ನಾಗಿ ಮಾಡಲಿಲ್ಲ. ಏಕೆಂದರೆ, ದೊರೆಸ್ವಾಮಿ ಅವರು ಬೆಂಕಿ ಇದ್ದಂತೆ. ಹತ್ತಿರ ಹೋದ್ರೆ ಸುಡುತ್ತದೆ ಎಂಬ ಕಾರಣಕ್ಕೆ ಹಿಂಜರಿದರು, ಎಂದು ತಿಳಿಸಿದರು.

ರೈತರ ಬೆನ್ನೆಲುಬು ಮುರಿದಿದೆ. ಇವರ ಪರವಾಗಿ ನಡೆಯುತ್ತಿರುವ ಹೋರಾಟಗಳೆಲ್ಲವೂ ಕೃತಕವಾಗಿವೆ. ಹಸಿರು ಶಾಲು ಹಾಕಿಕೊಂಡು ಬಂದವರೆಲ್ಲರನ್ನೂ ರೈತರೆಂದು ನಂಬಲಾಗುತ್ತಿಲ್ಲ. ಮಂಡ್ಯದ ಸುತ್ತಲೂ ಕ್ಲಬ್‌ಗಳೇ ಜಾಸ್ತಿಯಾಗಿವೆ ಎಂದು ಹೇಳಿದರು.

 ಈ ವೇಳೆ  ದಣಿವಿಲ್ಲದ ಹೋರಾಟಗಾರ' ಎಂಬ ಕೃತಿಯನ್ನು ಬಿಡುಗಡೆ ಮಾಡಲಾಯಿತು.

 ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ವೇದಿಕೆ ಅಧ್ಯಕ್ಷ ಎ.ಎಚ್.ಬಸವರಾಜು, ಲೇಖಕ ಕೆ.ಎಸ್.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News